ಬುಧವಾರ, ಜನವರಿ 22, 2020
20 °C
ಇಂದಿನಿಂದ ವಿಚಾರ ಸಂಕಿರಣ ಆರಂಭ

ಪಶುವೈದ್ಯರ ಹುದ್ದೆ ಭರ್ತಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ರಾಜ್ಯದ ಪಶು ವೈದ್ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಶು ಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ನಗರದಲ್ಲಿ ಡಿ.14 ಮತ್ತು 15ರಂದು ನಡೆಯಲಿ­ರುವ ‘ರಾಜ್ಯಮಟ್ಟದ ಪಶುವೈದ್ಯಕೀಯ ತಾಂತ್ರಿಕ ವಿಚಾರಸಂಕಿರಣ’ ದಲ್ಲಿ ಮನವಿ ಮಾಡಲಾಗುವುದು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಟಿ.ಶ್ರೀನಿವಾಸ ರೆಡ್ಡಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ತಜ್ಞರ ವರದಿ ಪ್ರಕಾರ ಪ್ರತಿ 5 ಸಾವಿರ ರಾಸುಗಳಿಗೆ ಒಬ್ಬರು ಪಶು ವೈದ್ಯಾಧಿಕಾರಿ ಇರಬೇಕು. ರಾಜ್ಯದಲ್ಲಿ 1.5 ಕೋಟಿ ರಾಸುಗಳು ಹಾಗೂ 3 ಕೋಟಿಗೂ ಅಧಿಕ ಇತರ ಪಶುಗಳಿವೆ. ಆದರೆ ಅದಕ್ಕೆ ಅನುಗುಣವಾಗಿ ಹುದ್ದೆ­ಗಳಿಲ್ಲ. ಅಲ್ಲದೇ ರಾಜ್ಯದಲ್ಲಿನ ಒಟ್ಟು 2,393 ಪಶುವೈದ್ಯಾಧಿಕಾರಿ ಹುದ್ದೆ­ಗಳಲ್ಲಿ 718 ಹಾಗೂ 488 ಸಹಾಯಕ ನಿರ್ದೇಶಕರ ಹುದ್ದೆಗಳಲ್ಲಿ 110 ಖಾಲಿ  ಇವೆ. ಇವುಗಳನ್ನು ಭರ್ತಿ ಮಾಡಲು ಒತ್ತಾಯಿಸಲಾಗುವುದು’ ಎಂದರು.‘ಈ ಪೈಕಿ ಗುಲ್ಬರ್ಗ ಜಿಲ್ಲೆಯಲ್ಲಿ 60 ಪಶುವೈದ್ಯಾಧಿಕಾರಿ ಹಾಗೂ 8 ಸಹಾಯಕ ನಿರ್ದೇಶಕರ ಹುದ್ದೆಗಳು, ಯಾದಗಿರಿಯಲ್ಲಿ 45 ಪಶುವೈದ್ಯಾಧಿ­ಕಾರಿ ಪೈಕಿ 15 ಹಾಗೂ 7 ಸಹಾಯ ನಿರ್ದೇಶಕ(ಎಲ್ಲಾ) ಹುದ್ದೆಗಳು ಖಾಲಿ ಇವೆ. ಸಂವಿಧಾನದ 371ನೇ ಜೆ ತಿದ್ದುಪಡಿ ಅನುಷ್ಠಾನ ಪ್ರಕ್ರಿಯೆಗಳು ಅಂತಿಮಗೊಳ್ಳುತ್ತಿರುವ ಕಾರಣ ಸರ್ಕಾರವು ಕೂಡಲೇ ಎಲ್ಲಾ ನೇಮಕಾತಿಯನ್ನು ಮಾಡಬೇಕು’ ಎಂದು ಆಗ್ರಹಿಸಿದರು.ಬೇಡಿಕೆಗಳು: ‘ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಪದವೀಧರರಿಗೆ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿ ನೀಡಬೇಕು. ಪಶುವೈದ್ಯಾಧಿಕಾರಿಗಳನ್ನು ಇಲಾಖೇತರ ಕಾರ್ಯಕ್ರಮಗಳಿಗೆ ಬಳಸಬಾರದು. ₨ 8,000 ವಿಶೇಷ ಭತ್ಯೆ ನೀಡಬೇಕು ಹಾಗೂ 20ನೇ ವರ್ಷದ ಕಾಲ ಮಿತಿ ವೇತನ ಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಲಾಗು­ವುದು’ ಎಂದರು.ಗ್ರಾಮೀಣ ಸೇವೆ: ಸಂಘವು 1928ರಲ್ಲಿ ಸಂಘ ಸ್ಥಾಪನೆಯಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ವಿಚಾರ ಸಂಕಿರಣ ಆಯೋಜಿಸುತ್ತಿದ್ದೇವೆ. ಹರಿಯಾಣದಲ್ಲಿ ಅನುಷ್ಠಾನ ಮಾಡಿರುವ ‘ಕಾಲು ಮತ್ತು ಬಾಯಿ’ ರೋಗ ನಿಯಂತ್ರಣ ಕ್ರಮದ ಯಶಸ್ಸಿನ ಬಗ್ಗೆ ಗ್ರಾಮೀಣ ಪ್ರದೇಶದ ಪರಿವರ್ತನೆಯಲ್ಲಿ ಪಶುವೈದ್ಯರ ಪಾತ್ರ ಮತ್ತಿತರ ವಿಚಾರಗಳ ಬಗ್ಗೆ ಪ್ರಬಂಧ ಮಂಡನೆ, ಚರ್ಚೆಗಳು ಈ ಬಾರಿ ನಡೆಯಲಿವೆ.

ದೇಶದ ಪ್ರಸಿದ್ಧ ವೈದ್ಯರು, ಔಷಧ ವಿಜ್ಞಾನಿಗಳು, ತಜ್ಞರು ವಿಚಾರ ಮಂಡಿಸುವರು. ಸುಮಾರು 1,300 ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಡಾ.ನಟರಾಜ ಟಿ.ಎಚ್‌.­ಡಾ.ಶಿವ­ಶರಣಪ್ಪ ಜಿ.ಯಲಗೋಡ್‌, ಡಾ.ಶಿವ­ಲಿಂ­ಗಯ್ಯ, ಡಾ.ನೀಲಕಂಠ ಶಿ. ಕಪ್ಪಲಗುದ್ದಿ, ಡಾ.ಚನ್ನಪ್ಪ ಎಸ್‌. ನಿಂಬಾಳ, ಡಾ.ನಾನಾಗೌಡ ಎಂ. ಹಳ್ಳಿ, ಡಾ.ಬಿ.ಎಸ್‌. ಸಂಗಮೆ, ಡಾ.ಡಿ.ಎಸ್‌. ಕರಲಗೀಕರ್‌, ಡಾ.ಅಲ್ತಾಫ್‌ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)