ಬುಧವಾರ, ಏಪ್ರಿಲ್ 14, 2021
23 °C

ಪಶು ವೈದ್ಯಕೀಯ ಸಿಬ್ಬಂದಿ ವೇತನ ಹೆಚ್ಚಳ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರೋಗ್ಯ ಇಲಾಖೆಯ ವೇತನ ಶ್ರೇಣಿಯಂತೆ ಪಶು ವೈದ್ಯಕೀಯ ಸಿಬ್ಬಂದಿಯ ವೇತನ ಶ್ರೇಣಿಯನ್ನು ಹೆಚ್ಚಿಸಲು ಚಿಂತನೆ ನಡೆದಿದೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಸಚಿವ ರೇವು ನಾಯಕ ಬೆಳಮಗಿ ತಿಳಿಸಿದರು.

ಕರ್ನಾಟಕ ಪಶುವೈದ್ಯಕೀಯ ಸಂಘ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ತಾಂತ್ರಿಕ ಸಮ್ಮೇಳನ ಮತ್ತು ಪಶು ವೈದ್ಯರ ಮಹಾಧಿವೇಶನ 2011 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲಾಖೆಯ ಪುನರ್ ರಚನೆಗೆ ಕೂಡ ಸರ್ಕಾರ ಚಿಂತಿಸಿದ್ದು ವೈದ್ಯರಿಗೆ ರಿಸ್ಕ್ ಅಲೋಯನ್ಸ್ ಹಾಗೂ ನಾನ್ ಪ್ರಾಕ್ಟೀಸಿಂಗ್ ಅಲೋಯನ್ಸ್‌ಗಳನ್ನು ನೀಡಲು ಚಿಂತಿಸಲಾಗಿದೆ. ಇಲಾಖೆಯ ಯಾವುದೇ ಸಮಸ್ಯೆಗಳನ್ನು ಬಗೆ ಹರಿಸಲು ಸರ್ಕಾರ ಸಿದ್ಧವಾಗಿದೆ’ ಎಂದು ಹೇಳಿದರು.

‘ಕಳೆದ ಬಾರಿ ಬಜೆಟ್‌ನಲ್ಲಿ 600 ಕೋಟಿ ರೂಪಾಯಿ ಇಲಾಖೆಗೆ ಮೀಸಲಿಡಲಾಗಿತ್ತು. ಈ ಬಾರಿ 1040 ಕೋಟಿ ರೂಪಾಯಿ ಮೀಸಲಿಡಲಾಗಿದೆ. 800 ಮಂದಿ ಪಶು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಲಾಖೆಯಲ್ಲಿ ಕಾಯಮಾತಿ, ವೇತನ ಹೆಚ್ಚಳ ಹಾಗೂ ಬಡ್ತಿಗೆ ಆದ್ಯತೆ ನೀಡಲಾಗಿದೆ’ ಎಂದರು.

‘ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ. ಸುರೇಶ್ ಎಸ್ ಹೊನ್ನಪ್ಪಗೋಳ್ ಮಾತನಾಡಿ ‘ಗದಗ ಹಾಗೂ ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಗದಗದಲ್ಲಿ 130 ಎಕರೆ ಹಾಗೂ ಅಥಣಿಯಲ್ಲಿ 211 ಎಕರೆ ಜಮೀನು ಖರೀದಿಸಲಾಗಿದೆ. ಮುಧೋಳ ಶ್ವಾನ ತಳಿ ಅಭಿವೃದ್ಧಿಗಾಗಿ ಮುಧೋಳದಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಹೆಬ್ಬಾಳದಲ್ಲಿ ಪಶು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೂರು ಧನ್ವಂತರಿ ವಾಹನಗಳ ಮೂಲಕ ಸೇವೆ ಒದಗಿಸಲಾಗುತ್ತಿದೆ’ ಎಂದರು.

ರಾಜ್ಯ ಪಶು ವೈದ್ಯರ ಸಂಘದ ಅಧ್ಯಕ್ಷ ಡಾ.ಆರ್.ಕೆ.ಚೆಲುವಯ್ಯ ಮಾತನಾಡಿ ‘ಇಲಾಖೆಯ ಪುನಾರಚನೆಗೆ ಚಾಲನೆ ದೊರೆತಿರುವ ಸಂದರ್ಭದಲ್ಲಿ ಇಲಾಖೆಯನ್ನು ಗುಣಾತ್ಮಕ ಹಾಗೂ ರಚನಾತ್ಮಕವಾಗಿ ರೂಪಿಸಲು ಯತ್ನಿಸುವ ಅಗತ್ಯವಿದೆ. ರೈತರ ಅಭಿವೃದ್ಧಿಗೆ ಪೂರಕವಾಗಿ ಇಲಾಖೆಯನ್ನು ಪುನರ್ ಸಂಘಟಿಸಬೇಕಿದೆ’ ಎಂದರು.

‘ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದು ಪ್ರಪಂಚ ಚಿಕ್ಕದಾಗಿದೆ ಎಂಬ ಭಾವನೆ ಮೂಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ. ಗುಣಮಟ್ಟದ ಉತ್ಪನ್ನಗಳನ್ನು ನೀಡದೇ ಹೋದರೆ ಉತ್ತಮ ಮಾರುಕಟ್ಟೆ ಸಿಗುವುದು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಮನ್‌ವೆಲ್ತ್ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ.ಎಸ್.ಎಂ.ಜಯದೇವಪ್ಪ, ಇಲಾಖೆ ನಿರ್ದೇಶಕ ಡಾ.ಕೆ.ಎಸ್. ಶಿವಕುಮಾರ್, ಸಂಘದ ಅಧ್ಯಕ್ಷ ಡಾ.ವಿ.ರಘುರಾಮೇಗೌಡ, ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸಿ.ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.