ಗುರುವಾರ , ನವೆಂಬರ್ 21, 2019
20 °C
ಅಯೋಧ್ಯೆ ಘಟನೆ: ಕಾರ್ಯಕರ್ತರಿಗೆ ಅಡ್ವಾಣಿ ಕರೆ

`ಪಶ್ಚಾತ್ತಾಪ' ಬದಲು `ಹೆಮ್ಮೆ' ಇರಲಿ

Published:
Updated:

ನವದೆಹಲಿ (ಪಿಟಿಐ): `ಅಯೋಧ್ಯೆ ಆಂದೋಲನದ ಕುರಿತು `ಪಶ್ಚಾತ್ತಾಪ'ದ ಮನೋಭಾವ ಬೇಡ ಬದಲಿಗೆ `ಹೆಮ್ಮೆ' ಇರಲಿ' ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಕರೆ ನೀಡಿದ್ದಾರೆ.ಶನಿವಾರ ಇಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅಡ್ವಾಣಿ, `ಅಯೋಧ್ಯೆ ರಾಮಮಂದಿರ ಸಂಘರ್ಷದ ಕುರಿತು ಜನ ನಮ್ಮಂದಿಗೆ ಇರುವಾಗ ನೀವು ಇದಕ್ಕಾಗಿ ಪಶ್ಚಾತ್ತಾಪಪಟ್ಟುಕೊಳ್ಳುವ ಅಗತ್ಯವೇ ಇಲ್ಲ. ಬದಲಿಗೆ ಇದನ್ನು ಅಭಿಮಾನದ ವಿಷಯವಾಗಿ ಪರಿಗಣಿಸಿ' ಎಂದರು.ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಈಚೆಗೆ ತಮ್ಮನ್ನು ಹೊಗಳಿದ ವಿಷಯ ಪ್ರಸ್ತಾಪಿಸಿದ ಅಡ್ವಾಣಿ, `ಸತ್ಯ ಸಂಗತಿಗಳನ್ನು ಮಾತನಾಡಲು ಜನ ಹಿಂದೇಟು ಹಾಕಬಾರದು' ಎಂದರು.ತಮ್ಮ ಪಕ್ಷ  ಕೈಗೆತ್ತಿಕೊಂಡಿರುವ ಅಯೋಧ್ಯೆ ಸಂಘರ್ಷ ಬರಿ ರಾಜಕೀಯ ಸ್ವರೂಪದ್ದಲ್ಲ. ಬದಲಿಗೆ ಇದೊಂದು ಸಾಂಸ್ಕೃತಿಕ ಆಂದೋಲನ ಎಂದು ಅಡ್ವಾಣಿ ಹೇಳಿದರು.ಮೋದಿ ಹೊಗಳಿದ ರಾಜನಾಥ್ ಸಿಂಗ್

ನವದೆಹಲಿ (ಪಿಟಿಐ):
`ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಾಷ್ಟ್ರದ ಜನಪ್ರಿಯ ನಾಯಕ. ಅವರು ಬಿಜೆಪಿಯ ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ. ಈ ವಿಷಯಗಳಲ್ಲಿ ಎರಡನೇ ಅಭಿಪ್ರಾಯವೇ ಇಲ್ಲ' ಎಂದು  ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಮೋದಿಯವರನ್ನು ಹೊಗಳಿದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ  `ಮೋದಿಯ ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ' ಎಂದು ಅಭಿಪ್ರಾಯಪಟ್ಟಿರುವ ರಾಜನಾಥ ಸಿಂಗ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನು ಕೇಂದ್ರ ಸಂಸದೀಯ ಮಂಡಳಿ ಆಯ್ಕೆ ಮಾಡುತ್ತದೆ. ಇದೇನಿದ್ದರೂ ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಹೇಳಿದ್ದಾರೆ.  `ಗುಜರಾತ್ ವಿಧಾನಸಭೆಯಲ್ಲಿ ಭರ್ಜರಿ ಯಶಸ್ಸು ಪಡೆದ ಮೋದಿ ಅವರು, ವಿಶ್ವಕ್ಕೆ ಮಾದರಿಯಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ' ಎಂದು ಸಿಂಗ್ ಹೇಳಿದ್ದಾರೆ.ಅಡ್ವಾಣಿ ನೇತೃತ್ವದಲ್ಲಿ ಸರ್ಕಾರ

ನವದೆಹಲಿ (ಪಿಟಿಐ):
ರಾಷ್ಟ್ರೀಯ ಅಧ್ಯಕ್ಷರು ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿ ಅವರನ್ನು ಬಿಂಬಿಸುವ ಯತ್ನದಲ್ಲಿದ್ದರೆ, ಮತ್ತೊಂದೆಡೆ, ದೆಹಲಿಯ ಬಿಜೆಪಿ ಮುಖ್ಯಸ್ಥ ವಿಜಯ್ ಗೋಯೆಲ್, `ಕೇಂದ್ರದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ' ಎಂದು ವ್ಯತಿರಿಕ್ತ ಹೇಳಿಕೆಯೊಂದನ್ನು ನೀಡಿ ಪಕ್ಷದಲ್ಲಿ ಕ್ಷಣಕಾಲ ಕೋಲಾಹಲ ಸೃಷ್ಟಿಯಾಗಲು ಕಾರಣರಾಗಿದ್ದಾರೆ.ಇಲ್ಲಿನ ನಡೆದ 33ನೇ ಬಿಜೆಪಿ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ನೀಡಿದ್ದಾರೆ. ವಿಜಯ್ ಅವರ ಈ ಹೇಳಿಕೆಯನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ ಕೂಡಲೇ, ಪಕ್ಷದೊಳಗೆ ಭಾರಿ ಕೋಲಾಹಲ ಉಂಟಾಯಿತು. ತಕ್ಷಣ ತಮ್ಮ ಮಾತನ್ನು ಸರಿಪಡಿಸಿಕೊಂಡ ವಿಜಯ್ ಗೋಯೆಲ್, `ನಾನು ಅಡ್ವಾಣಿಯವರ ಮಾರ್ಗದರ್ಶನದಲ್ಲಿ ಮುಂದಿನ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದ್ದಾಗಿ' ಸ್ಪಷ್ಟನೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)