ಪಶ್ಚಿಮಘಟ್ಟದ ಗಣಿಗಾರಿಕೆ: ರಾಜ್ಯದ ಪ್ರಬಲ ವಿರೋಧ

7

ಪಶ್ಚಿಮಘಟ್ಟದ ಗಣಿಗಾರಿಕೆ: ರಾಜ್ಯದ ಪ್ರಬಲ ವಿರೋಧ

Published:
Updated:

ನವದೆಹಲಿ: ಪಶ್ಚಿಮ ಘಟ್ಟದ `ಒಡಲು ಬಗೆದು~ ಕಬ್ಬಿಣದ ಅದಿರು ಹೊರತೆಗೆಯಬೇಕೆಂಬ `ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ~ (ಐಸಿಎಫ್‌ಆರ್‌ಇ) ಸಲಹೆಯನ್ನು ರಾಜ್ಯ ಸರ್ಕಾರ ಪ್ರಬಲವಾಗಿ ವಿರೋಧಿಸಿದೆ.ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗಿರುವ ಪರಿಸರ ಹಾನಿ ಕುರಿತು ಅಧ್ಯಯನ ನಡೆಸಿದ `ಐಸಿಎಫ್‌ಆರ್‌ಇ~ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ವರದಿಯಲ್ಲಿ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ `ಒಡಲಾಳದಲ್ಲಿ ಗಣಿಗಾರಿಕೆ~ ನಡೆಸಬೇಕೆಂಬ ಸಲಹೆ ಮುಂದಿಟ್ಟಿತ್ತು.ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ, `ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಶ್ಚಿಮ ಘಟ್ಟದ ನೆಲದಾಳದಲ್ಲಿ ಗಣಿಗಾರಿಕೆ ನಡೆಸಬೇಕೆಂಬ ಐಸಿಎಫ್‌ಆರ್‌ಇ ಸಲಹೆ ಕಾರ್ಯಸಾಧುವಲ್ಲ. ಜಗತ್ತಿನ ಯಾವುದೇ ಭಾಗದಲ್ಲೂ ಕಂಡುಬರದಂಥ ಅಪರೂಪದ ಪ್ರಾಣಿ-ಪಕ್ಷಿ ಹಾಗೂ ಸಸ್ಯ ಸಂಕುಲ ಪಶ್ಚಿಮಘಟ್ಟದಲ್ಲಿವೆ. ಇದರಲ್ಲಿ ಹಲವು ಅವನತಿ ಅಂಚಿನಲ್ಲಿವೆ~ ಎಂದು ವಿವರಿಸಿದೆ.`ಪಶ್ಚಿಮ ಘಟ್ಟದ ಒಡಲು ಬಗೆಯುವುದರಿಂದ ಹಸಿರು ಹೊದಿಕೆ, ಸಸ್ಯ, ಪ್ರಾಣಿ- ಪಕ್ಷಿಗಳ ಸಂಕುಲದ ಅಸ್ತಿತ್ವಕ್ಕೇ ಭಂಗ ಬರಲಿದೆ. ಸೂಕ್ಷ್ಮ ಜೀವ ವೈವಿಧ್ಯತೆಯಿಂದ ತುಂಬಿ ತುಳುಕುತ್ತಿರುವ ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾಪ ಯುನೆಸ್ಕೊ ಮುಂದಿದೆ. ಅಲ್ಲದೆ, ಮುಂದಿನ ತಲೆಮಾರಿನ ಭವಿಷ್ಯದ ದೃಷ್ಟಿಯಿಂದ ಖನಿಜ ಸಂಪತ್ತನ್ನು ಸಂರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಈ ಕಾರಣದಿಂದ ಗಣಿಗಾರಿಕೆಗೆ ಅವಕಾಶ ನೀಡಬಾರದು~ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಸಲ್ಲಿಸಿರುವ ಪ್ರಮಾಣ ಪತ್ರ ಮನವಿ ಮಾಡಿದೆ.ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಜ್ಯ ಅರಣ್ಯ ಇಲಾಖೆ ಈಚೆಗೆ ಪತ್ರ ಬರೆದು ಇದೇ ಆತಂಕ ವ್ಯಕ್ತಪಡಿಸಿದೆ. `ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಡೆಸಲು ರಾಜ್ಯದ ಒಪ್ಪಿಗೆ ಇಲ್ಲ. ಜಲ ವಿದ್ಯುತ್ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳನ್ನು ಕಾರ್ಯಗತಗೊಳಿಸಲು ಈ ಸೂಕ್ಷ್ಮ ತಾಣದಲ್ಲಿ ಅವಕಾಶ ಕೊಡುವುದಿಲ್ಲ~ ಎಂಬ ಖಚಿತ ನಿಲುವನ್ನು ವ್ಯಕ್ತಪಡಿಸಿದೆ.`ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಮತ್ತಿತರ ಯೋಜನೆ ಕೈಗೊತ್ತಿಕೊಳ್ಳಲು ವಿರೋಧ ವ್ಯಕ್ತಪಡಿಸಿದೆ. ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಡೆಸುವ ಕುರಿತು ಕೇಂದ್ರ ಸಂಬಂಧಪಟ್ಟ ರಾಜ್ಯಗಳ ಅಭಿಪ್ರಾಯ ಕೇಳಿದ್ದು, ಸದ್ಯದಲ್ಲೇ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಲಿದೆ~ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಇದೇ ವರ್ಷದಿಂದ ಆರಂಭವಾಗುವ 12ನೇ ಪಂಚವಾರ್ಷಿಕ ಯೋಜನೆಗೆ ಉಕ್ಕು ಉದ್ಯಮಗಳ ಅಗತ್ಯ ಕುರಿತು ಶಿಫಾರಸು ಮಾಡಲು ಕೇಂದ್ರ ಸರ್ಕಾರ ನೇಮಿಸಿದ್ದ ಉಕ್ಕು ಕಾರ್ಯದರ್ಶಿ ಪಿ.ಕೆ. ಮಿಶ್ರ ನೇತೃತ್ವದ ಸಮಿತಿ, `ಉಕ್ಕು ಉದ್ಯಮಗಳ ಅದಿರು ಬೇಡಿಕೆ ಪೂರೈಸಲು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಡೆಸುವ ಕುರಿತು ಪರಿಶೀಲಿಸಬೇಕು. ಪಶ್ಚಿಮ ಘಟ್ಟದಲ್ಲಿ 1,000 ಕೋಟಿ ಟನ್ ಅದಿರು ಲಭ್ಯವಿದ್ದು, ಇದರಲ್ಲಿ ಶೇ.80ರಷ್ಟು ಅಂದರೆ 800 ಕೋಟಿ ಟನ್ ರಾಜ್ಯದಲ್ಲೇ ಇದೆ~ ಎಂದು ಸಮಿತಿ ವಿವರಿಸಿದ್ದಾರೆ.ಆದರೆ, ಅಕ್ರಮ ಗಣಿಗಾರಿಕೆ ಪರಿಣಾಮ ಕುರಿತು ಪರಿಶೀಲನೆ ನಡೆಸಿದ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಈಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಅಂತಿಮ ವರದಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದೆಂದು ಖಚಿತವಾಗಿ ಹೇಳಿದೆ. ಐಸಿಎಫ್‌ಆರ್‌ಐ ಕಾರ್ಯವ್ಯಾಪ್ತಿ ಮೀರಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಐಸಿಎಫ್‌ಆರ್‌ಇ ವರದಿಯಿಂದ ಕಿತ್ತು ಹಾಕಬೇಕೆಂದು ಹೇಳಿದೆ.ಅಕ್ರಮ ಗಣಿಗಾರಿಕೆ ಪರಿಣಾಮವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬೇಕೆಂದು ಉಕ್ಕು ಉದ್ಯಮಗಳು ತೀವ್ರ `ಲಾ ಬಿ~ ಮಾಡುತ್ತಿವೆ. ಆದರೆ, ಇದಕ್ಕೆ ಪರಿಸರವಾದಿಗಳಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಪರಿಸರಕ್ಕೆ ಧಕ್ಕೆ ಆಗುತ್ತಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ 2005ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಸರ್ಕಾರಿ ಸ್ವಾಮ್ಯದ `ಕುದುರೆಮುಖ ಕಬ್ಬಿಣ ಅದಿರು ಕಂಪೆನಿ~  ಗಣಿಗಾರಿಕೆ ನಡೆಸುವುದನ್ನು ನಿಷೇಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry