ಪಶ್ಚಿಮಘಟ್ಟ: ಕಾರ್ಖಾನೆಗಳ ಮೌಲ್ಯಮಾಪನ

7
ಸಚಿವ ಸಂಪುಟ ಉಪಸಮಿತಿ ನಿರ್ಧಾರ

ಪಶ್ಚಿಮಘಟ್ಟ: ಕಾರ್ಖಾನೆಗಳ ಮೌಲ್ಯಮಾಪನ

Published:
Updated:

ಬೆಂಗಳೂರು: ಡಾ.ಕೆ.ಕಸ್ತೂರಿರಂಗನ್‌ ನೇತೃತ್ವದ ಉನ್ನತಮಟ್ಟದ ಸಮಿತಿಯು ರಾಜ್ಯದ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಗುರುತಿಸಿರುವ ‘ಕೆಂಪುವರ್ಗ’ದ ಕೈಗಾರಿ­ಕೆ­­ಗಳ ಕುರಿತು ಪರಿಶೀಲನೆ ನಡೆಸಿ ತೀರ್ಮಾ­ನಕ್ಕೆ ಬರಲು ಪಶ್ಚಿಮಘಟ್ಟಕ್ಕೆ ಸಂಬಂಧಿ­ಸಿದ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂ­ಧಿಸಿ­ದ ಕಸ್ತೂರಿರಂಗನ್‌ ವರದಿ ಶಿಫಾ­ರಸುಗಳ ಜಾರಿ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರತಿಕ್ರಿಯೆ ಸಿದ್ಧ­ಪಡಿಸಲು ನೇಮಿಸಿರುವ ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯ ಸಮಿತಿ ಗುರು­ವಾರ ವಿಧಾನಸೌಧದಲ್ಲಿ ಸಭೆ ನಡೆ­ಸಿತು. ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ವಲಯದಲ್ಲಿ ಇರುವ ರಾಜ್ಯ ಸರ್ಕಾರದ ಒಡೆತನದ ‘ಕೆಂಪುವರ್ಗ’ದ ಕೈಗಾರಿಕೆಗಳ ಮೌಲ್ಯಮಾಪನ ನಡೆಸಲು ಈ ಸಭೆ­ಯಲ್ಲಿ ತೀರ್ಮಾನಿಸಲಾಗಿದೆ.ಅತಿಹೆಚ್ಚು ಮಾಲಿನ್ಯಕ್ಕೆ ಕಾರಣ­ವಾ­ಗುವ ಹಲವು ಕೈಗಾರಿಕೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಕೆಂಪು­ವರ್ಗ’ಕ್ಕೆ ಸೇರಿಸಿದೆ. ರಾಸಾ­ಯ­ನಿಕ ಕೈಗಾರಿ­ಕೆ­ಗಳು, ಕಾಗದ ಕಾರ್ಖಾನೆ­ಗಳು, ರಸ­ಗೊಬ್ಬರ ಕಾರ್ಖಾನೆಗಳು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು, ತೈಲ ಶುದ್ಧೀ­ಕರಣ ಘಟಕಗಳು, ಕೃಷಿ ಔಷಧಿ ತಯಾ­ರಿಕೆ ಘಟಕಗಳು, ಪೆಟ್ರೋಲಿಯಂ ಸಂಬಂಧಿ ರಾಸಾಯನಿಕ ಕೈಗಾರಿಕೆಗಳು, ಔಷಧಿ ತಯಾರಿಕಾ ಘಟಕಗಳು ಈ ಪಟ್ಟಿಯಲ್ಲಿವೆ. ರಾಜ್ಯ ಸರ್ಕಾರದ ಒಡೆ­ತನದ ಸುಮಾರು 100 ‘ಕೆಂಪು­ವರ್ಗ’ದ ಕಾರ್ಖಾನೆಗಳು ಪಶ್ಚಿಮಘಟ್ಟ­ಗಳ ವ್ಯಾಪ್ತಿಯಲ್ಲಿವೆ.ಕಾಫಿಬೀಜ ಸಂಸ್ಕರಣ (ಪಲ್ಪಿಂಗ್‌) ಘಟಕ­ಗಳನ್ನೂ ಕಸ್ತೂರಿ ರಂಗನ್‌ ಸಮಿತಿ ‘ಕೆಂಪುವರ್ಗ’ಕ್ಕೆ ಸೇರಿಸಿದೆ. ಕೆಂಪು­ವರ್ಗದ ಎಲ್ಲ ಕೈಗಾರಿಕೆಗಳನ್ನು ಸ್ಥಗಿತ­ಗೊಳಿಸ­ಬೇಕು ಎಂಬ ಶಿಫಾರಸು ಈ ವರದಿ­ಯ­ಲ್ಲಿದೆ. ಆದರೆ, ಕಾಫಿ ಬೆಳೆ­ಗಾ­ರರ ಪ್ರತಿ­ರೋಧ ಹೆಚ್ಚುತ್ತಿರುವ ಕಾರಣ­ದಿಂದ, ಆ ಕೈಗಾರಿಕೆಗಳನ್ನು ಮುಚ್ಚುವ ಬದಲಿಗೆ, ಮೌಲ್ಯಮಾಪನ ನಡೆಸಿದ ಬಳಿಕ ನಿರ್ಧಾರಕ್ಕೆ ಬರಲು ತೀರ್ಮಾ­ನಿಸಲಾ­ಗಿದೆ ಎಂದು ಮೂಲಗಳು ತಿಳಿಸಿವೆ.ಕಸ್ತೂರಿರಂಗನ್‌ ವರದಿಯನ್ನು ತಿರಸ್ಕ­ರಿ­ಸಬೇಕು ಎಂಬ ಬೇಡಿಕೆ ಕಾಫಿ ಬೆಳೆ­ಯುವ ಪ್ರದೇಶಗಳಲ್ಲಿ ಕೇಳಿಬರುತ್ತಿದೆ. ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಈ ಒತ್ತಾಯ ಕೇಳಿಬಂದಿದೆ.ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಜನರ ಜೀವನಕ್ಕೆ ತೊಂದರೆ ಆಗದಂತೆ ವರದಿಯನ್ನು ಜಾರಿಗೊಳಿ­ಸುವ ಯೋಚನೆ ಸರ್ಕಾರಕ್ಕೆ ಇದೆ. ಈ ಕಾರಣ­ಕ್ಕಾಗಿಯೇ ದಿಢೀರನೆ ‘ಕೆಂಪು­ವರ್ಗ’ದ ಕೈಗಾರಿಕೆಗಳನ್ನು ಮುಚ್ಚುವ ಬದಲಿಗೆ, ಮೌಲ್ಯಮಾಪನ ನಡೆಸುವ ನಿರ್ಧಾರಕ್ಕೆ ಬಂದಿದೆ.ಕೇಂದ್ರ ಸರ್ಕಾರ ನೇರವಾಗಿ ಅನು­ಮತಿ ನೀಡಿರುವ ಕಾರ್ಖಾ­ನೆಗಳ ವಿಷಯ­­ದಲ್ಲಿ ರಾಜ್ಯಕ್ಕೆ ಯಾವುದೇ ಅಧಿಕಾರ ಇಲ್ಲ. ಅಂತಹ ಕಾರ್ಖಾನೆ­ಗಳನ್ನು ಮುಚ್ಚಲಾಗುತ್ತದೆ ಎಂದು ಮೂಲಗಳು ಹೇಳಿವೆ.ಪರಿಸರಸೂಕ್ಷ್ಮ ಪ್ರದೇಶಗಳ ಸಂರಕ್ಷಣೆ ವಿಷಯದಲ್ಲಿ  ವರದಿ ಜಾರಿಯ ಅಗತ್ಯ ಕುರಿತು ಗ್ರಾಮಗಳ ಹಂತದಲ್ಲಿ ಜಾಗೃತಿ ಮೂಡಿಸಲು ಸಮಿತಿ ನಿರ್ಧರಿಸಿದೆ. ಈ ಕಾರಣಕ್ಕಾಗಿ ವರದಿ­ಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ, ಮುದ್ರಿಸಿ ಹಂಚಲು ತೀರ್ಮಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry