ಪಶ್ಚಿಮವಾಹಿನಿ ಯೋಜನೆಗೆ ಅನುಮತಿ ಶೀಘ್ರ

7

ಪಶ್ಚಿಮವಾಹಿನಿ ಯೋಜನೆಗೆ ಅನುಮತಿ ಶೀಘ್ರ

Published:
Updated:

ಬಜಗೋಳಿ: ‘ರಾಜ್ಯದ ಕರಾವಳಿಯ ನದಿಗಳ ನೀರು ಸಮುದ್ರಕ್ಕೆ ಹರಿದು ಪೋಲಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೂಪಿಸಲಾದ ಪಶ್ಚಿಮ ವಾಹಿನಿ ಯೋಜನೆಗೆ ಶೀಘ್ರವೇ ಮಂಜೂರಾತಿ ನೀಡಲಾಗುವುದು’ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಭರವಸೆ ನೀಡಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ ಹಮ್ಮಿಕೊಳ್ಳಲಾಗಿರುವ 3 ದಿನಗಳ ರಾಜ್ಯಮಟ್ಟದ 31ನೇ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ‘ಪಶ್ಚಿಮ ಮುಖಿಯಾಗಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಅದನ್ನು ಕೃಷಿಗೆ ಬಳಸಿಕೊಳ್ಳುವ ಉದ್ದೇಶದಿಂದ ರೂಪಿಸಲಾದ ಪಶ್ಚಿಮ ವಾಹಿನಿ ಯೋಜನೆಗೆ ರೂ. 712 ಕೋಟಿ ವೆಚ್ಚದ ಕರಡು ಸಿದ್ಧವಾಗಿದ್ದು, ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಬಂದಿದೆ. ಕರಾವಳಿಯನ್ನು ಪಂಜಾಬ್ ಮಾದರಿ ಹಸಿರು ವಲಯವನ್ನಾಗಿ ಮಾಡಲಿರುವ ಈ ಯೋಜನೆ ರೈತರ ಪಾಲಿಗೆ ವರದಾನವಾಗಲಿದೆ’ ಎಂದರು.ಪ್ರಧಾನಿ ಮನಮೋಹನ್ ಸಿಂಗ್ 2011-20ರ ಅವಧಿಯನ್ನು ‘ಸಂಶೋಧನೆ ದಶಕ’ ಎಂದು ಘೋಷಿಸಿದ್ದಾರೆ. ಜನಸಂಖ್ಯೆ ಪ್ರಜಾಪ್ರಭುತ್ವಕ್ಕೆ ಪ್ರಯೋಜನಕಾರಿ. ಆದರೆ ಸಮರ್ಪಕವಾಗಿ ಮಾನವ ಸಂಪನ್ಮೂಲ ಬಳಸಿಕೊಳ್ಳದಿದ್ದರೆ ಅದೇ ವಿನಾಶಕಾರಿಯಾಗಲಿದೆ. ಯುವ ಸಮುದಾಯಕ್ಕೆ ತಿಳಿವಳಿಕೆ ಕೊಟ್ಟು, ಅಭಿವೃದ್ಧಿಯ ಎಲ್ಲ ಅವಕಾಶಗಳ ಬಾಗಿಲು ತೆರೆಯಬೇಕು. ಇದಕ್ಕಾಗಿಯೇ ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ರೂ. 60 ಸಾವಿರ ಕೋಟಿ ಮೀಸಲಿಟ್ಟಿದೆ. ಭಾರತವನ್ನು ಪ್ರಪಂಚದಲ್ಲೇ ಅತ್ಯಂತ ಕೌಶಲ ಭರಿತ ರಾಷ್ಟ್ರವನ್ನಾಗಿ ರೂಪಿಸುವ ಸಲುವಾಗಿ ಧರ್ಮಸ್ಥಳದ ರುಡ್‌ಸೆಟ್ ಮಾದರಿಯಲ್ಲೇ ‘ರಾಷ್ಟ್ರೀಯ ಕೌಶಲ ಕೇಂದ್ರ’ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರೂ. 80ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ಜನತೆ ಇದನ್ನು ಆಂದೋಲನವನ್ನಾಗಿ ಸ್ವೀಕರಿಸಬೇಕು’ ಎಂದರು. ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಮೂಡುಬಿದಿರೆಯ ಡಾ. ಎಲ್.ಸಿ.ಸೋನ್ಸ್ ಅವರಿಗೆ ರೂ 25ಸಾವಿರ ನಗದು ಸಹಿತ ‘ಕೃಷಿ ಜೀವಮಾನ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry