ಸೋಮವಾರ, ಅಕ್ಟೋಬರ್ 21, 2019
23 °C

ಪಶ್ಚಿಮ ಘಟ್ಟಕ್ಕೆ ಕುತ್ತು?

Published:
Updated:

ನವದೆಹಲಿ: ಜೀವ ವೈವಿಧ್ಯದ ತಾಣ ಪಶ್ಚಿಮ ಘಟ್ಟದ ನೆತ್ತಿಯ ಮೇಲೆ ಮತ್ತೊಮ್ಮೆ ತೂಗು ಕತ್ತಿ ನೇತಾಡುತ್ತಿದೆ. ಅವನತಿಯ ಅಂಚಿನಲ್ಲಿರುವ ಅಪರೂಪದ ಪ್ರಾಣಿ- ಪಕ್ಷಿ ಸಸ್ಯ ಸಂಕುಲಕ್ಕೆ `ಆಶ್ರಯ~  ನೀಡಿರುವ ಜೀವವೈವಿಧ್ಯ ಸ್ವರ್ಗದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಉಕ್ಕು ಸಚಿವಾಲಯದ ಕಾರ್ಯದರ್ಶಿ ಪಿ.ಕೆ.ಮಿಶ್ರ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಇತ್ತೀಚೆಗೆ ಯೋಜನಾ ಆಯೋಗಕ್ಕೆ ವರದಿ ಸಲ್ಲಿಕೆ ಆಗಿದೆ.ಹನ್ನೇರಡನೆ ಪಂಚವಾರ್ಷಿಕ ಯೋಜನೆಗೆ ಗಣಿಗಾರಿಕೆ ಸಂಬಂಧದ ಶಿಫಾರಸುಗಳನ್ನು ಮಾಡಲು ಮಿಶ್ರ ನೇತೃತ್ವದ ಸಮಿತಿ ನೇಮಿಸಲಾಗಿತ್ತು. ವರದಿ ಪರಿಶೀಲಿಸಿ ಸರ್ಕಾರ ಅಗತ್ಯ ನಿರ್ಧಾರ  ಕೈಗೊಳ್ಳಬೇಕಿದೆ. ದೇಶದಲ್ಲಿ 28.5 ಶತಕೋಟಿ ಟನ್ ಖನಿಜ ಸಂಪತ್ತಿದೆ. ಇದರಲ್ಲಿ ಪಶ್ಚಿಮ ಘಟ್ಟದಲ್ಲಿ ಹತ್ತು ಶತಕೋಟಿ ಟನ್ ಅದಿರು ಇದ್ದು, ಕರ್ನಾಟಕದ ವ್ಯಾಪ್ತಿಯಲ್ಲೇ ಎಂಟು ಶತಕೋಟಿ ಟನ್‌ನಷ್ಟು ಲಭ್ಯವಿದೆ ಎಂದು ಮಿಶ್ರ ವರದಿ ತಿಳಿಸಿದೆ.ಉತ್ತಮ ಗುಣಮಟ್ಟದ ಕಬ್ಬಿಣದ ಅದಿರು ಪಶ್ಚಿಮ ಘಟ್ಟದಲ್ಲಿ ಲಭ್ಯವಿದ್ದು, ಇದರಲ್ಲಿ ಶೇ.60ರಷ್ಟು ಉಕ್ಕಿನ ಅಂಶವಿದೆ. ಇವೆಲ್ಲ ಕಾರಣದಿಂದ ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಸಮಿತಿ ಶಿಫಾರಸು ಮಾಡಿದೆ.ಪಶ್ಚಿಮಘಟ್ಟದ ಕುದುರೆಮುಖ ಗಣಿಗಾರಿಕೆಯನ್ನು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 2005ರಲ್ಲಿ ನಿಲ್ಲಿಸಲಾಗಿದೆ. ಪರಿಸರವಾದಿಗಳು ಅತ್ಯುನ್ನತ ನ್ಯಾಯಾಲಯದವರೆಗೂ ವಿವಾದ ಎಳೆತಂದು ಸಫಲರಾಗಿದ್ದಾರೆ. ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ `ಕೆಐಒಸಿಎಲ್~ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿದ್ದ ಎಲ್ಲ ಗಣಿಗಾರಿಕೆಗಳು ಬಂದ್ ಆಗಿವೆ. ಕುದುರೆಮುಖ ಗಣಿ ಸ್ಥಳದ ಪಕ್ಕದಲ್ಲೇ ರಾಷ್ಟ್ರೀಯ ಉದ್ಯಾನವೂ ಇರುವುದು ಉಲ್ಲೇಖನೀಯ.ಬಳ್ಳಾರಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದ ಬಳಿಕ ರಾಜ್ಯದ ಉಕ್ಕು ಉದ್ಯಮ ಅದಿರು ಕೊರತೆ ಎದುರಿಸುತ್ತಿದೆ. ಕೊರತೆ ನೀಗಿಸಲು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಡೆಸುವ ಅಗತ್ಯವಿದೆ. ವರ್ಷದಿಂದ ವರ್ಷಕ್ಕೆ ಉಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. 2010- 11ರ ಆರ್ಥಿಕ ವರ್ಷದಲ್ಲಿ 208 ದಶಲಕ್ಷ ಟನ್ ಅದಿರು ಉತ್ಪಾದಿಸಲಾಗಿತ್ತು. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣ ಚೀನಾಕ್ಕೆ ರಫ್ತಾಗಿತ್ತು. 2011- 12ರಲ್ಲಿ 115 ದಶಲಕ್ಷ ಟನ್ ಅದಿರು ಬೇಕಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ಬೇಡಿಕೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಮುಂದಿನ ಐದು ವರ್ಷದಲ್ಲಿ ವರ್ಷಕ್ಕೆ 206ದಶಲಕ್ಷ ಟನ್ ಅದಿರು ಬೇಕಾಗಲಿದೆ. ಇದರಿಂದ 125ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬಹುದಾಗಿದೆ ಎಂದು ವರದಿ ವಿವರಿಸಿದೆ.`ಭಾರತೀಯ ಅರಣ್ಯ ಶಿಕ್ಷಣ ಮತ್ತು ಸಂಶೋಧನಾ ಮಂಡಳಿ~ ಯಾವುದೇ ಪ್ರದೇಶದಲ್ಲಿ ಏಕಾಏಕಿ ಗಣಿಗಾರಿಕೆ ನಿಷೇಧಿಸುವುದಕ್ಕಿಂತ ಅಗತ್ಯಕ್ಕೆ ಅನುಗುಣವಾಗಿ ಅದಿರು ತೆಗೆಯಲು ಅನುಮತಿ ಕೊಡಬೇಕು.ದೇಶದ ಮುಂದಿನ ಐವತ್ತು ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥಿತ ಹಾಗೂ ಹಂತ, ಹಂತವಾಗಿ ಗಣಿಗಾರಿಕೆ ಅವಕಾಶ ಕೊಡಬೇಕು ಎಂದು ಸಲಹೆ ಮಾಡಿದೆ.ಕಬ್ಬಿಣ ಅದಿರು ಒಳಗೊಂಡಂತೆ ದೇಶದಲ್ಲಿ ಲಭ್ಯವಿರುವ ಖನಿಜ ಸಂಪತ್ತು ಕುರಿತು ನಕ್ಷೆ ತಯಾರಿಸಲು ಇಂಡಿಯನ್ ಬ್ಯರೋ ಆಫ್ ಮೈನ್ಸ್, ಭೂ ಸರ್ವೇಕ್ಷಣಾ ಇಲಾಖೆಗೆ ಸೂಚಿಸಬೇಕು.  ನಕ್ಷೆ ಆಧಾರದಲ್ಲಿ ಕ್ರಮಬದ್ಧ ಗಣಿಗಾರಿಕೆಗೆ ಆಸ್ಪದ ಕೊಡಬೇಕು. ಪಶ್ಚಿಮ ಘಟ್ಟದಲ್ಲೂ ಪರಿಸರದ ಮೇಲ್ಮೈಗೆ ಹಾನಿ ಆಗದಂತೆ ನೆಲದಾಳದಲ್ಲಿ ಗಣಿಗಾರಿಕೆ ನಡೆಸುವ ಕುರಿತು ಪರಿಶೀಲಿಸಬಹುದು ಎಂದು ಸಂಶೋಧನಾ ಮಂಡಳಿ ಹೇಳಿದೆ.`ಪಶ್ಚಿಮ ಘಟ್ಟದ ಸೂಕ್ಷ್ಮತೆಗೆ ಹಾನಿ ಆಗಲಿದೆ~ ಎಂಬ ಕಾರಣಕ್ಕೆ ಪರಿಸರ ಮತ್ತು ಅರಣ್ಯ ಸಚಿವಾಲಯ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ `ರೆಡ್ ಸಿಗ್ನಲ್~ ಬಿದ್ದಿದೆ. ಯೋಜನೆ ಬಗ್ಗೆ ಅಧ್ಯಯನ ನಡೆಸಿದ ಡಾ. ಪಿ. ಬಿ. ಗಂಗೋಪಾಧ್ಯಾಯ ಸಮಿತಿ ಉತ್ತರ ಕರ್ನಾಟಕದ ಈ ಮಹತ್ವದ ಯೋಜನೆಗೆ ಒಲವು ತೋರಲಿಲ್ಲ.  ಸದ್ಯ ಯೋಜನಾ ಆಯೋಗದ ಮುಂದಿರುವ ಮಿಶ್ರ ಸಮಿತಿ ವರದಿ ಸಂಬಂಧಪಟ್ಟ ಸಚಿವಾಲಯಗಳಿಗೆ ಹೋಗಬೇಕು. ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬೇಕೆಂಬ ಶಿಫಾರಸಿಗೆ ಅರಣ್ಯ ಮತ್ತು ಪರಿಸರ ಸಚಿವಾಲಯ ಯಾವ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕು.ಈ ಮಧ್ಯೆ, ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟದ ಸೂಕ್ಷ್ಮತೆ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಈಚೆಗೆ ವರದಿ ಸಲ್ಲಿಸಿದೆ. ಮಿಶ್ರ ಸಮಿತಿ ವರದಿ ಅಂಗೀಕಾರ ಸುಲಭವಲ್ಲ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

Post Comments (+)