ಪಶ್ಚಿಮ ಘಟ್ಟಗಳಿಗೇಕೆ ಈ ವಂಚನೆ?

ಗುರುವಾರ , ಜೂಲೈ 18, 2019
24 °C

ಪಶ್ಚಿಮ ಘಟ್ಟಗಳಿಗೇಕೆ ಈ ವಂಚನೆ?

Published:
Updated:

ವಿಶ್ವ ಪರಂಪರೆ ತಾಣಗಳ ಉದ್ದನೆಯ ಪಟ್ಟಿಯನ್ನು ನೋಡಿದಾಗಲೆಲ್ಲ ನಮ್ಮ ಗೋಲ್‌ಗುಂಬಜ್, ಶ್ರವಣಬೆಳಗೊಳದ ಬಾಹುಬಲಿ ಹಾಗೆಯೇ ವಿರಳಾತಿವಿರಳ ಜೋಗ ಜಲಪಾತ ಏಕೆ ಈ ಪಟ್ಟಿಯಲ್ಲಿಲ್ಲ ಎಂದು ದಶಕಗಳಿಂದ ಕಾಯುತ್ತಿರುವ ಕರ್ನಾಟಕದ ಜನತೆಗೆ ಇದೀಗ ರಾಜ್ಯ ಸರ್ಕಾರ `ಶಾಕ್ ಟ್ರೀಟ್‌ಮೆಂಟ್~ ಕೊಟ್ಟಿದೆ. ಸದ್ಯ 911 ವಿಶ್ವ ಪರಂಪರಾತಾಣಗಳ ಪೈಕಿ 704 ಸಂಸ್ಕೃತಿಗೆ ಸೇರಿದವು, 180 ನೈಸರ್ಗಿಕ ಲಕ್ಷಣಗಳಿಗೆ, 27 ಮಿಶ್ರ ವಿಭಾಗದಲ್ಲಿ ಸೇರ್ಪಡೆಯಾಗಿವೆ. ಇಲ್ಲಿಯೂ ಯುರೋಪು, ಅಮೆರಿಕದ್ದೇ ಮೇಲುಗೈ. 500ಕ್ಕೂ ಮಿಕ್ಕು ಅವುಗಳ ತಾಣಗಳನ್ನು ವಿಶ್ವ ಪರಂಪರೆಯಲ್ಲಿ ಸೇರಿಸಿಬಿಟ್ಟಿವೆ. ಈವರೆಗೆ ಕರ್ನಾಟಕ ಭಾಗದ ಪಶ್ಚಿಮ ಘಟ್ಟದ ಹತ್ತು ತಾಣಗಳು - ಪುಷ್ಪಗಿರಿಯಿಂದ ಬಲಹಳ್ಳಿ ಮೀಸಲು ಅರಣ್ಯದವರೆಗೆ ವಿಶ್ವ ಪರಂಪರಾ ಪಟ್ಟಿಯಲ್ಲಿ ಪರಿಗಣಿಸಬಹುದಾದ ವರ್ಗದಲ್ಲಿದ್ದವು. ಇತ್ತೀಚೆಗಷ್ಟೇ ಕೊಡಗಿನಲ್ಲಿ ಯುನೆಸ್ಕೊ ತಂಡ ಸ್ಥಳ ಪರೀಕ್ಷೆಗೆ ಬಂದಾಗ, ಆ ತಂಡಕ್ಕೆ ಕೊಟ್ಟ ಆತಿಥ್ಯ ಕರ್ನಾಟಕದ ಅರಣ್ಯ ಇಲಾಖೆಗಾಗಲಿ ಅಥವಾ ಸರ್ಕಾರಕ್ಕಾಗಲಿ ಶೋಭೆ ತರುವಂಥದ್ದಾಗಿರಲಿಲ್ಲ.ಪ್ರತಿ ವರ್ಷವೂ ಕನಿಷ್ಠ 30 ದೇಶಗಳು ತಮ್ಮ ಕೆಲವು ತಾಣಗಳನ್ನಾದರೂ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿ ಎಂದು ಯುನೆಸ್ಕೊವನ್ನು ಗೋಗರೆಯುವುದುಂಟು. ಹಾಗೆ ಪರಿಗಣಿಸಿದಾಗ ಅಂಥ ತಾಣಗಳಿಗೆ ವಿಶ್ವ ಮಾನ್ಯತೆ ಗ್ಯಾರಂಟಿ. ಹಾಗೆಯೇ ಸ್ಥಳೀಯ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೂ ಬೊಗಸೆಗಟ್ಟಲೆ ಹಣ ಬರುವುದುಂಟು.ನಮ್ಮ ಸರ್ಕಾರ ತನ್ನ ನಿಲವನ್ನು ಹೇಗೆ ಸಮರ್ಥಿಸಿಕೊಂಡಿದೆ? `ನಮ್ಮ ಜುಟ್ಟನ್ನು ಅವರಿಗೆ ಕೊಡೆವು~ ಇದರರ್ಥ ಮೂಲತಃ ವಿಶ್ವ ಪರಂಪರಾ ತಾಣವಾಗಿ ಗುರುತಿಸಿದರೆ ನಮಗಾಗುವ ಲಾಭದ ಎಳ್ಳಷ್ಟೂ ಮಂತ್ರಿ ಮಾನ್ಯರಿಗೆ ತಿಳಿದಿಲ್ಲ. ನೆನಪಿಡಬೇಕು, 911 ವಿಶ್ವ ಪರಂಪರಾ ತಾಣಗಳಲ್ಲಿ ನಮ್ಮ ದೇಶಕ್ಕೆ ಸ್ಥಾನ ಸಿಕ್ಕಿರುವುದು 28ಕ್ಕೆ ಮಾತ್ರ.ಆದರೆ ಜಗತ್ತಿನ ಏಳನೇ ಒಂದು ಭಾಗ ಜನಸಂಖ್ಯೆ ಇದೆ, ನೂರಕ್ಕೂ ಮಿಕ್ಕು ತಾಣಗಳಿಗೆ ವಿಶ್ವ ಪರಂಪರೆಯ ದರ್ಜೆ ಏರುವ ಎಲ್ಲ ಅರ್ಹತೆಯೂ ಇದೆ. ಅದೇ ಸ್ಪೇನ್, 40ಕ್ಕೂ ಹೆಚ್ಚು ವಿಶ್ವ ಪರಂಪರಾ ತಾಣಗಳನ್ನು ಹೊಂದಿದೆ. ಅಲ್ಲಿ ಚಿಕ್ಕ ಪಾಳೆಯಗಾರ ಆಳಿ ಉಳಿದ ಕೋಟೆಗೂ ವಿಶ್ವ ಮಾನ್ಯತೆ. ಕೋಟಿ ಕೋಟಿ ಡಾಲರ್ ನೆರವು.ಪಶ್ಚಿಮ ಘಟ್ಟದಲ್ಲಿ ಈಗಾಗಲೇ `ಮನುಷ್ಯ ಮತ್ತು ಜೀವಿಗೋಳ~ ಎಂಬ ವರ್ಗೀಕರಣದಲ್ಲಿ ಅದೇ ಯುನೆಸ್ಕೊ `ನೀಲಗಿರಿ ರಕ್ಷಿತ~ ಪ್ರದೇಶವೆಂದು 5,520 ಚದರ ಕಿಲೋ ಮೀಟರ್ ಅರಣ್ಯವನ್ನು ಗುರುತಿಸಿದೆ. ಅಷ್ಟೇ ಅಲ್ಲ, ಅದನ್ನು ಮಾನ್ಯತೆ ಮಾಡಿದೆ. ಇದರಲ್ಲಿ ನಾಗರಹೊಳೆ, ಬಂಡೀಪುರ ಅರಣ್ಯಗಳೂ ಸೇರಿವೆ. ಕೇರಳದ ವೈನಾಡೂ ಇದೆ. 1986ರಲ್ಲೇ ಯುನೆಸ್ಕೊ ಇದನ್ನು ಮಾನ್ಯ ಮಾಡಿತು. ಈಗ ಇಂಥ 17 ಜೀವಿಗೋಳ ತಾಣಗಳು ಭಾರತದಲ್ಲಿವೆ. ಭಾರತ ಸರ್ಕಾರ ರಾಜಸ್ತಾನದ ಥಾರ್ ಮರುಭೂಮಿಯನ್ನು ಇದರಲ್ಲಿ ಸೇರಿಸಿ ಎಂದು ಮತ್ತೆ ಮತ್ತೆ ಯುನೆಸ್ಕೊವನ್ನು ಕೇಳುತ್ತಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ವಾದ ವಾದವೇ ಅಲ್ಲ. ಅದು ಅಲಕ್ಷ್ಯ ಮತ್ತು ಅಜ್ಞಾನದ ಪ್ರತೀಕ. ವಿಶ್ವ ಪರಂಪರಾತಾಣವಾಗಿ ಈ ಹತ್ತೂ ತಾಣಗಳನ್ನು ಪರಿಗಣಿಸಿದರೆ ನಮ್ಮ ಅಭಿವೃದ್ಧಿಗೆ ಏನು ಮಾರಕ? ಅಭಿವೃದ್ಧಿ ಎಂದರೇನು? ನೇತ್ರಾವತಿಯ ದಿಕ್ಕು ಬದಲಿಸಿ, ಜನರ ಮತ್ತು ನದಿಯ ಸಹಜ ದಿಕ್ಕು ತಪ್ಪಿಸುವುದೆ? ಅಥವಾ ಪಶ್ಚಿಮ ಘಟ್ಟದ ಸೆರಗಿನಲ್ಲಿ ಉಷ್ಣಸ್ಥಾವರ ನಿರ್ಮಿಸಿ ಬೂದಿ ತೂರುವುದೆ? ಅದಕ್ಕೆ ಬೇಕಾದ ಕಲ್ಲಿದ್ದಿಲಿಗಾಗಿ ಕೋಟಿ ಕೋಟಿ ರೂಪಾಯಿಯನ್ನು ನೆರೆ ರಾಜ್ಯಗಳ ಬೊಕ್ಕಸಕ್ಕೆ ಕಕ್ಕುವುದೆ? ಒಂದು ವೇಳೆ ಪಶ್ಚಿಮ ಘಟ್ಟದ ಈ ಹತ್ತೂ ತಾಣಗಳನ್ನು ಯುನೆಸ್ಕೊ ಪರಂಪರಾ ತಾಣವಾಗಿ ಪರಿಗಣಿಸಿದರೆ ಇಂಥ ಅವಘಡಗಳಾಗಲು ಖಂಡಿತ ಬಿಡುವುದಿಲ್ಲ. ಅಲ್ಲಿನ ಒಂದು ಹಾರುವ ಓತಿಯನ್ನೂ ಕೊಲ್ಲಲು ಬಿಡುವುದಿಲ್ಲ. ಇಲ್ಲಿ ಸರ್ಕಾರ ಇನ್ನೊಂದು ಎಡವಟ್ಟು ಮಾಡುತ್ತಿದೆ. ಪಶ್ಚಿಮ ಘಟ್ಟವೆಂದರೆ ಅದು ಬರೀ ಕರ್ನಾಟಕದ ಸೊತ್ತಲ್ಲ. ಉತ್ತರದಲ್ಲಿ ಮಹಾರಾಷ್ಟ್ರದಿಂದ ತೊಡಗಿ ಗೋವಾ, ಕರ್ನಾಟಕ, ಕೇರಳ, ತಮಿಳುನಾಡಿನವರೆಗೂ ಹಬ್ಬಿರುವ 1,600 ಕಿಲೋ ಮೀಟರ್ ಉದ್ದದ ಸಹ್ಯಾದ್ರಿ ಶ್ರೇಣಿ. ಹಾಗೆಯೇ ಇದರ ವ್ಯಾಪ್ತಿ 16,000 ಚದರ ಕಿಲೋ ಮೀಟರ್. ನಮ್ಮ ಈ ಅವಜ್ಞೆ ನೆರೆ ರಾಜ್ಯಗಳಿಗೂ ಗೊತ್ತು. ಎಂದೇ ತಮ್ಮ ರಾಜ್ಯಗಳಲ್ಲಿ ಪಶ್ಚಿಮ ಘಟ್ಟದ ಆ ಭಾಗಗಳಲ್ಲಿ ವಿಶ್ವ ಪರಂಪರಾ ತಾಣಗಳನ್ನು ಗುರುತಿಸಲು ಮುಂದಾಗುತ್ತವೆ, ಸಫಲವೂ ಆಗುತ್ತವೆ.`ಪಶ್ಚಿಮ ಘಟ್ಟ ಉಳಿಸಿ~ ಎಂದರೆ ಅದು ಸರ್ಕಾರಕ್ಕೆ ಜನ ಮಾಡುವ ಹಕ್ಕೊತ್ತಾಯ. ಒಂದರ್ಥದಲ್ಲಿ `ನಿಮ್ಮ ಕಾನೂನು ಬಿಗಿಪಡಿಸಿ~ ಎಂಬ ಸಂದೇಶವೇ ಹೊರತು `ಬಂದಿರುವ ಅವಕಾಶವನ್ನು ಒದೆಯಿರಿ~ ಎಂದಲ್ಲ. ಸರ್ಕಾರಕ್ಕೆ ಯಾವ ಭಯ ಕಾಡುತ್ತಿದೆ ಎಂಬುದೇ ನಿಗೂಢ. ಪ್ರವಾಸೋದ್ಯಮ ಇಲಾಖೆಗೆ ಹೊಡೆತ ಬೀಳುತ್ತದೆ ಎಂದರೆ ಯಾರೂ ನಂಬುವ ಮಾತಲ್ಲ. ಪ್ರವಾಸಿಗರು ನೇರವಾಗಿ ಆ ತಾಣಗಳಲ್ಲಿ ಬಂದು ಇಳಿಯುವುದಿಲ್ಲ. ನಮ್ಮ ಪ್ರವಾಸೋದ್ಯಮವನ್ನೇ ಅವರು ಅವಲಂಬಿಸಬೇಕು.

 

ಅಸ್ಸಾಂನ ಕಾಜಿರಂಗದ `ಘೇಂಡಾವನ~ ವಿಶ್ವ ಪರಂಪರಾತಾಣದಲ್ಲಿ ಸೇರಿದೆಯಾದರೂ ಅದು ಜೀವಿಗೋಳದ ಒಂದು ಭಾಗ ಎಂದು ಯುನೆಸ್ಕೊ ಪರಿಗಣಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಅಸ್ಸಾಂನ ರಾಜಕಾರಣಿಗಳು ಪ್ರತಿವರ್ಷವೂ ಒತ್ತಾಯಿಸುತ್ತಲೇ ಬಂದಿದ್ದಾರೆ. ನಾವು ಬಂದ ಅವಕಾಶವನ್ನು ಅಜ್ಞಾನದಿಂದ ಕಳೆದುಕೊಳ್ಳುತ್ತಿದ್ದೆೀವೆ.ಪಶ್ಚಿಮ ಘಟ್ಟವನ್ನು ಯಾರಿಂದ ಉಳಿಸಬೇಕು ಎಂಬುದೇ ಯಕ್ಷಪ್ರಶ್ನೆ. ಪಶ್ಚಿಮ ಘಟ್ಟದ ಕಾರ್ಯಪಡೆಯ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ತಮ್ಮ ಎಂದಿನ ಹೋರಾಟ ಬಿಟ್ಟು ಏಕೆ ಧ್ವನಿ ಬದಲಾಯಿಸಿದ್ದಾರೆ ಎಂದು ಪರಿಸರವಾದಿಗಳಂತಿರಲಿ, ಜನಸಾಮಾನ್ಯರೂ ಕೇಳುತ್ತಿದ್ದಾರೆ. ಮಾಧ್ಯಮಗಳು `ನನ್ನ ಮಾತನ್ನು ತಿರುಚಿವೆ~ ಎನ್ನುವುದು ಅವರ ಸಮರ್ಥನೆ. ಮತ್ತೊಬ್ಬ ಪರಿಸರವಾದಿ, ಕೈಗಾದ ಪರಮಾಣು ಸ್ಥಾವರದ ವಿರುದ್ಧ ಹೋರಾಡಿದ ನಾಗೇಶ ಹೆಗಡೆ `ಕೆಲವು ಸ್ವಾರ್ಥಿಗಳ ಹಿತಾಸಕ್ತಿಯಿಂದಾಗಿ ಇಡೀ ಜೀವಿಮಂಡಲವೇ ಬಲಿಯಾಗುತ್ತಿದೆ~ ಎಂದು ಮರುಗುತ್ತಾರೆ.ಭಾರತದ 17 ತಾಣಗಳನ್ನು ಜೀವಿಗೋಳದ ಒಂದು ಭಾಗ ಎಂದು ಯುನೆಸ್ಕೊ ಪರಿಗಣಿಸಿದಾಗ ಅದು ಒಪ್ಪಿದ್ದು ಕೇಂದ್ರ ಸರ್ಕಾರದ ಶಿಫಾರಸನ್ನು ಮಾತ್ರ. ವಿಶ್ವ ಪರಂಪರಾ ತಾಣದ ವಿಚಾರದಲ್ಲೂ ಅದು ಸ್ವತಂತ್ರ ನಿಲವನ್ನು ತಳೆಯುವ ಹಕ್ಕನ್ನು ಹೊಂದಿದೆ. ನಾವು ಈ ಧೃತರಾಷ್ಟ್ರ ದೃಷ್ಟಿಯಿಂದ ಹೊರಬರಬೇಕು. ಪಶ್ಚಿಮ ಘಟ್ಟಗಳಿಗೆ ವಿಶ್ವ ಪರಂಪರಾ ತಾಣವಾಗುವ ಎಲ್ಲ ಅರ್ಹತೆಗಳೂ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry