ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ

7

ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ

Published:
Updated:

ನವದೆಹಲಿ: ಜಗತ್ತಿನ ಅತೀ ಸೂಕ್ಷ್ಮ ಜೀವವೈವಿಧ್ಯ ತಾಣಗಳ ಪೈಕಿ ಒಂದಾಗಿರುವ ಪಶ್ಚಿಮ ಘಟ್ಟದ `ಒಡಲಾಳ~ದಲ್ಲಿ ಗಣಿಗಾರಿಕೆ (ಅಂಡರ್‌ಗ್ರೌಂಡ್ ಮೈನಿಂಗ್) ಗೆ ಅವಕಾಶ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ `ಕೇಂದ್ರ ಉನ್ನತಾಧಿಕಾರ ಸಮಿತಿ~ (ಸಿಇಸಿ) ಬಲವಾದ ಶಿಫಾರಸು ಮಾಡಿದೆ. ಇದರಿಂದಾಗಿ ಪಶ್ಚಿಮ ಘಟ್ಟ ಮತ್ತೊಮ್ಮೆ ಚರ್ಚೆಯ ಕೇಂದ್ರ ಬಿಂದುವಾಗಿದೆ.ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆದಿರುವ ಅಕ್ರಮ ಗಣಿಗಾರಿಕೆ ಪರಿಣಾಮ ಮತ್ತು ಪರಿಹಾರ ಕುರಿತು ಅಧ್ಯಯನ ನಡೆಸಿರುವ `ಸಿಇಸಿ~ ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿದ ತನ್ನ ಅಂತಿಮ ವರದಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಬಲವಾಗಿ ಪ್ರತಿಪಾದಿಸಿದೆ.ಆದರೆ, ಇದಕ್ಕೂ ಮುನ್ನ ಮೂರು ಜಿಲ್ಲೆಗಳಲ್ಲಿನ ಗಣಿಗಾರಿಕೆಯಿಂದ ಪರಿಸರಕ್ಕೆ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಿದ `ಭಾರತೀಯ ಅರಣ್ಯ ಮತ್ತು ಶಿಕ್ಷಣ ಸಂಶೋಧನಾ ಮಂಡಲಿ~ (ಐಸಿಎಫ್‌ಆರ್‌ಇ) ಪಶ್ಚಿಮ ಘಟ್ಟದಲ್ಲಿ `ಒಡಲಾಳದ ಗಣಿಗಾರಿಕೆ~ಗೆ ಅವಕಾಶ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಇದು ನವೆಂಬರ್‌ನಲ್ಲಿ     ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.ಐಸಿಎಫ್‌ಆರ್‌ಇ ಶಿಫಾರಸಿಗೆ ವಿರೋಧ ವ್ಯಕ್ತಮಾಡಿರುವ ಸಿಇಸಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು. ಈ ಕುರಿತ ಐಸಿಎಫ್‌ಆರ್‌ಇ ಶಿಫಾರಸು ಸಮಯೋಚಿತವಲ್ಲ. ಅಲ್ಲದೆ, ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಸಾಧ್ಯತೆ ಕುರಿತು ಪರಿಶೀಲಿಸುವಂತೆ ಈ ಸಂಸ್ಥೆಗೆ ಹೇಳಿರಲಿಲ್ಲ. ಇದು  ಕಾರ್ಯವ್ಯಾಪ್ತಿ ಮೀರಿ ನಡೆದುಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

 

 ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ ಸೂಕ್ಷ್ಮ ಮತ್ತು ಅಪರೂಪದ ಜೀವವೈವಿಧ್ಯಕ್ಕೆ ಕುತ್ತು ತರಬಹುದಾದ ಸಾಧ್ಯತೆ ಇರುವುದರಿಂದ ಐಸಿಎಫ್‌ಆರ್‌ಇ ವರದಿಯಿಂದ ಈ ಶಿಫಾರಸಿನ ಭಾಗವನ್ನು ಕಿತ್ತು ಹಾಕಬೇಕು ಎಂದು ಪಿ.ವಿ. ಜಯಕೃಷ್ಣ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ ಹೇಳಿದೆ.

ಪಶ್ಚಿಮ ಘಟ್ಟದಲ್ಲಿ 1,000 ಕೋಟಿ ಟನ್ ಕಬ್ಬಿಣದ ಅದಿರು ಲಭ್ಯವಿದ್ದು, ಕರ್ನಾಟಕವೊಂದರಲ್ಲೇ 800 ಕೋಟಿ ಟನ್ ನಿಕ್ಷೇಪವಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರಿಸರಕ್ಕೆ ಧಕ್ಕೆಯಾಗದಂತೆ ಗಣಿಗಾರಿಕೆ ಕಾರ್ಯ     ಸಾಧ್ಯತೆ ಕುರಿತು ಪರಿಶೀಲಿಸ ಬೇಕು ಎಂದು ಐಸಿಎಫ್‌ಆರ್‌ಇ ಶಿಫಾರಸು ಮಾಡಿದೆ. ಮುಂಬರುವ ವರ್ಷಗಳಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚಲಿರುವ ಹಿನ್ನೆಲೆಯಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬೇಕು. ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ನೇಮಿಸಬೇಕು ಎಂದು ಐಸಿಎಫ್‌ಆರ್‌ಇ ಹೇಳಿದೆ.ಐಸಿಎಫ್‌ಆರ್‌ಇಯ ಉಳಿದ ಶಿಫಾರಸುಗಳಿಗೆ ಸಿಇಸಿ ಸಹಮತ ವ್ಯಕ್ತಪಡಿಸಿದೆ. ಸಿಇಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ತನ್ನ ವರದಿಯಲ್ಲಿ ಮಂಡಲಿಯ ಪ್ರಮುಖ ಶಿಫಾರಸುಗಳನ್ನು ಸೇರ್ಪಡೆ ಮಾಡಿದೆ. ಗಣಿಗಾರಿಕೆಯಿಂದ ಮೂರು ಜಿಲ್ಲೆಗಳಲ್ಲಿ ಆಗಿರುವ ಹಾನಿ ಹಾಗೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಕುರಿತು ಮಾಡಿರುವ ಶಿಫಾರಸುಗಳ ಕಡೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಸಿಇಸಿ ಸಲಹೆ ಮಾಡಿದೆ.ರಾಜ್ಯದಲ್ಲಿ ಗಣಿಗಾರಿಕೆ ಮೇಲೆ ಮಿತಿ ಹೇರಬೇಕು. ವಾರ್ಷಿಕ ಮೂರು ಕೋಟಿ ಟನ್ ಅದಿರು ತೆಗೆಯಲು ಅವಕಾಶ ಕೊಡಬೇಕು. ಬಳ್ಳಾರಿಯಲ್ಲಿ ಎರಡೂವರೆ ಕೋಟಿ ಟನ್, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 50 ಲಕ್ಷ ಟನ್ ತೆಗೆಯಲು ಅನುಮತಿ ಕೊಡಬೇಕು ಎಂಬ ಐಸಿಎಫ್‌ಆರ್‌ಇ ಶಿಫಾರಸಿಗೆ ಸಿಇಸಿ ದನಿಗೂಡಿಸಿದೆ.ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಸಿಇಸಿ ಹಾಗೂ ಐಸಿಎಫ್‌ಆರ್‌ಐ ತದ್ವಿರುದ್ಧ ನಿಲುವು ವ್ಯಕ್ತಮಾಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೈಗೊಳ್ಳುವ ತೀರ್ಮಾನ ಅಂತಿಮವಾಗಲಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಬರುವ ಶುಕ್ರವಾರ ಸಿಇಸಿ ವರದಿ ಕುರಿತು ಪರಿಶೀಲಿಸುವ ಸಾಧ್ಯತೆ ಇದೆ.

 

ಇದಲ್ಲದೆ, ಉಕ್ಕು ಕಾರ್ಯದರ್ಶಿ ಪಿ.ಕೆ. ಮಿಶ್ರ ನೇತೃತ್ವದ ಉನ್ನತಾಧಿಕಾರದ ಸಮಿತಿ ಉಕ್ಕು ಉದ್ಯಮಗಳ ಬೇಡಿಕೆ ಪೂರೈಸಲು ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬೇಕೆಂಬ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ. 12ನೇ ಪಂಚವಾರ್ಷಿಕ ಯೋಜನೆ ಹಿನ್ನೆಲೆಯಲ್ಲಿ ಉಕ್ಕು ಉದ್ಯಮಗಳಿಗೆ ಸಂಬಂಧಿಸಿದಂತೆ ಅಗತ್ಯ ಶಿಫಾರಸು ಮಾಡಲು ಸರ್ಕಾರ ಈ ಸಮಿತಿ ನೇಮಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry