ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಸರ್ವಋತು ರಸ್ತೆ

ಸೋಮವಾರ, ಜೂಲೈ 22, 2019
26 °C
ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ನಿಯಮ ಬದಲು?

ಪಶ್ಚಿಮ ಘಟ್ಟದ ಹಳ್ಳಿಗಳಿಗೆ ಸರ್ವಋತು ರಸ್ತೆ

Published:
Updated:

ನವದೆಹಲಿ (ಪಿಟಿಐ): ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕದ ಹಳ್ಳಿಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಈಗಿರುವ ನಿಯಮಗಳನ್ನು ಬದಲಿಸುವ ಸಾಧ್ಯತೆ ಇದೆ.ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದ ಪತ್ರದ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಗ್ರಾಮೀಣ ಅಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ನಿಯಮಗಳಲ್ಲಿ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಕ್ರಮದಡಿ ಗುರುತಿಸಿರುವ ರಾಜ್ಯದ `ಗುಡ್ಡಗಾಡು' ಪ್ರದೇಶಗಳಿಗೆ, `ಗುಡ್ಡಗಾಡು' ರಾಜ್ಯಗಳಿಗೆ ಅನುಸರಿಸುವ ನೀತಿಯನ್ನೇ ಅನ್ವಯಿಸಬೇಕು. 250ರಿಂದ 499 ಜನಸಂಖ್ಯೆ ಹೊಂದಿರುವ ಜನವಸತಿ ಪ್ರದೇಶಗಳಿಗೆ `ಪಿಎಂಜಿಎಸ್‌ವೈ' ಯೋಜನೆ ಅಡಿ ಸರ್ವಋತು ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಸಿದ್ಧರಾಮಯ್ಯ ಈಚೆಗೆ ಪ್ರಧಾನಿಗೆ ಪತ್ರ ಬರೆದಿದ್ದರು.ಒಂದುವೇಳೆ ಗ್ರಾಮೀಣ ಸಚಿವಾಲಯವು ರಾಜ್ಯದ ಬೇಡಿಕೆ ಮನ್ನಿಸಿದರೆ 250ರಿಂದ 499 ಜನಸಂಖ್ಯೆ ಇರುವ ಸುಮಾರು 3,602 ಜನವಸತಿ ಪ್ರದೇಶಗಳಿಗೆ `ಪಿಎಂಜಿಎಸ್‌ವೈ' ಯೋಜನೆಯಡಿ ರಸ್ತೆ ಸಂಪರ್ಕ ಸಾಧ್ಯವಾಗಲಿದೆ. `ಕರ್ನಾಟಕದ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಗ್ರಾಮೀಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಪಿಎಂಜಿಎಸ್‌ವೈ' ಯೋಜನೆ

ಪ್ರಧಾನ ಮಂತ್ರಿ  ಗ್ರಾಮೀಣ ಸಡಕ್ ಯೋಜನೆ ಅಡಿ ಈವರೆಗೆ ರಸ್ತೆ ಸಂಪರ್ಕ ಇಲ್ಲದ 500ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಬಯಲು ಪ್ರದೇಶದ ಹಳ್ಳಿಗಳು ಹಾಗೂ 250ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗುಡ್ಡಗಾಡು ಪ್ರದೇಶದ ಹಳ್ಳಿಗಳಿಗೆ ಸರ್ವಋತು ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry