ಶುಕ್ರವಾರ, ಏಪ್ರಿಲ್ 23, 2021
28 °C

ಪಶ್ಚಿಮ ಘಟ್ಟ ವ್ಯಾಪ್ತಿಗೆ ಕಡಲತಡಿ ಹೋಬಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ಮಂಗಳೂರು:
ಪಶ್ಚಿಮ ಘಟ್ಟ ವ್ಯಾಪ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರದ ಕೆಲವು ಪಟ್ಟಣಗಳನ್ನು ಒಳಗೊಂಡ ಹೋಬಳಿಗಳನ್ನೂ ಸೇರ್ಪಡೆಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.ಪಶ್ಚಿಮ ಘಟ್ಟದ ಜೀವವೈವಿಧ್ಯ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಪತ್ರದ ಆಧಾರದಲ್ಲಿ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಹೋಬಳಿಗಳನ್ನು ಪಟ್ಟಿ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಂ.ಮಲ್ಲಿಕಾರ್ಜುನ ಕಳೆದ ಫೆ. 5ರಂದು ಆದೇಶ ಹೊರಡಿಸಿದ್ದರು.

 

ಸರ್ಕಾರದ ಈ ನಿರ್ಧಾರದಿಂದ, ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರದೇಶಗಳಲ್ಲಿ ಕೃಷಿ ಭೂಪರಿವರ್ತನೆಗೆ ಹಾಗೂ ಸಣ್ಣ ಕೈಗಾರಿಕಾ ಘಟಕ ಸ್ಥಾಪನೆಗೆ ಅವಕಾಶವಿಲ್ಲದಂತಾಗುತ್ತದೆ. ಈಗಾಗಲೇ ಪಟ್ಟಣಗಳಾಗಿ ಬೆಳೆಯುತ್ತಿರುವ ಮೂಲ್ಕಿ, ಗುರುಪುರ ಹೋಬಳಿಗಳನ್ನೂ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಗೆ ತಂದಿರುವುದು ಈ ಹೋಬಳಿ ವ್ಯಾಪ್ತಿಯ ಜನತೆಯ ಆತಂಕಕ್ಕೆ ಕಾರಣವಾಗಿದೆ.ಹೊಸ ಪ್ರಸ್ತಾಪ ಅಲ್ಲ: ‘ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಸ ಹೋಬಳಿಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಅರಣ್ಯ ಇಲಾಖೆ ಹೊಸತಾಗಿ ಯಾವುದೇ ಪ್ರಸ್ತಾಪ ಕಳುಹಿಸಿಲ್ಲ. ಆದರೆ 2005ಕ್ಕಿಂತ ಮುಂಚೆ ಒಮ್ಮೆ ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದೆವು. ಆಗ ನಾವು ಎಲ್ಲೆಲ್ಲಿ ಕಾಡು ಉಳಿದಿದೆಯೋ ಆ ಊರುಗಳನ್ನೆಲ್ಲ ಪಶ್ಚಿಮ ಘಟ್ಟ ವ್ಯಾಪ್ತಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದೆವು. ಸಮುದ್ರತೀರ ಪ್ರದೇಶದಲ್ಲಿ ಕಾಡು ತೀವ್ರವಾಗಿ ಇಳಿಮುಖವಾಗುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿತ್ತು’ ಎಂದು ದ.ಕ. ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಈ ಆದೇಶದ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆದೇಶವನ್ನು ಮರುಪರಿಶೀಲಿಸಲು ಸರ್ಕಾರ ಚಿಂತನೆ ನಡೆಸಿದೆ. ಇದೇ 14ರಂದು ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ.‘ಈ ಕುರಿತು ಸಮಗ್ರವಾಗಿ ಚರ್ಚಿಸುವ ಸಲುವಾಗಿ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಸಚಿವರ ಕಚೇರಿಯಲ್ಲಿ ಇದೇ 14ರಂದು ಸಭೆಯನ್ನು ಕರೆಯಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾರವಾರ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು ಭಾಗವಹಿಸುವ ಈ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಈ ಆದೇಶದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಶಾಸಕರನ್ನೂ ಸಭೆಗೆ ಆಹ್ವಾನಿಸುವ ಚಿಂತನೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.‘ಈ ಆದೇಶದ ಬಗ್ಗೆ ಮೂಲ್ಕಿ ಹಾಗೂ ಗುರುಪುರ ಹೋಬಳಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಯಾವ ಆಧಾರದಲ್ಲಿ ಈ ಹೋಬಳಿಗಳನ್ನು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ತರಲಾಗಿದೆ ಎಂದು ತಿಳಿದಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ವಿವರಣೆ ಪಡೆಯಲಾಗುವುದು’ ಎಂದು ಅವರು ತಿಳಿಸಿದರು.ಗೊಂದಲದ ಗೂಡು: ‘ಸರ್ಕಾರದ ಪರಿಸರ ಕಾಳಜಿ ತೀರಾ ವಿಚಿತ್ರವಾಗಿದೆ. ಒಂದೆಡೆ ಪಶ್ಚಿಮ ಘಟ್ಟಕ್ಕೆ ತೀವ್ರ ಹಾನಿ ಉಂಟುಮಾಡುವ ನೇತ್ರಾವತಿ ಉಪನದಿ ಎತ್ತಿನಹೊಳೆ ತಿರುವಿಗೆ ಬಜೆಟ್‌ನಲ್ಲಿ ರೂ. 200 ಕೋಟಿ ಹಣ ಕಾಯ್ದಿರಿಸುತ್ತದೆ. ಇನ್ನೊಂದೆಡೆ ಪಶ್ಚಿಮಘಟ್ಟದ ಜತೆ ಯಾವುದೇ ಸಂಬಂಧ ಹೊಂದಿರದ ಕಡಲ ತಡಿಯ ಪಟ್ಟಣಗಳನ್ನು ಪಶ್ಚಿಮಘಟ್ಟದ ಭಾಗ ಎಂದು ಆದೇಶ ಹೊರಡಿಸಲಾಗುತ್ತದೆ. ಸರ್ಕಾರದ ಪರಿಸರ ನೀತಿ ಗೊಂದಲದ ಗೂಡಾಗಿದೆ’ ಎಂದು ಸುರತ್ಕಲ್‌ನ ಎನ್‌ಐಟಿಕೆ ಪ್ರಾಧ್ಯಾಪಕ ಪ್ರೊ. ಎಸ್.ಜಿ.ಮಯ್ಯ ಬೇಸರ ವ್ಯಕ್ತಪಡಿಸಿದರು.‘ಸಮುದ್ರ ತೀರ ಪ್ರದೇಶದಲ್ಲಿ ಅಳಿದುಳಿದ ಕಾಡುಗಳನ್ನು ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಗೆ ತರುವುದರಲ್ಲಿ ತಪ್ಪೇನಿಲ್ಲ. ಇದರಿಂದ ಭೂಪರಿವರ್ತನೆಗೆ ತೊಡಕಾಗುವುದು ಬಿಟ್ಟರೆ ಬೇರಾವುದೇ ಅಪಾಯವಿಲ್ಲ. ಈಗಾಗಲೇ ಅವ್ಯಾಹತವಾಗಿ ಕರಾವಳಿ ತೀರ ಕೈಗಾರಿಕೀಕರಣಕ್ಕೆ ತುತ್ತಾಗುವುದಕ್ಕೆ ಈ ಆದೇಶ ಕಡಿವಾಣ ಹಾಕಲಿದೆ’ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.