ಮಂಗಳವಾರ, ಜೂಲೈ 7, 2020
22 °C

ಪಶ್ಚಿಮ ಬಂಗಾಳ: ತೃಣಮೂಲ 229, ಕಾಂಗ್ರೆಸ್‌ಗೆ 65 ಸೀಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳ: ತೃಣಮೂಲ 229, ಕಾಂಗ್ರೆಸ್‌ಗೆ 65 ಸೀಟು

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದೆ.  ತನ್ನ ಮೂಲ ಬೇಡಿಕೆಯಾದ 90 ಸೀಟುಗಳಿಗೆ ಬದಲಾಗಿ 65 ಸೀಟುಗಳನ್ನು ಹಂಚಿಕೊಳ್ಳಲು ಕಾಂಗ್ರೆಸ್ ಟಿಎಂಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೊಂದಿಗೆ ಸಮಾಲೋಚನೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಂತರ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಒಪ್ಪಂದ ಮಾಡಿಕೊಂಡರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ವಕ್ತಾರ ಶಕೀಲ್ ಅಹ್ಮದ್ ಈ ಒಪ್ಪಂದವನ್ನು ಬಹಿರಂಗಪಡಿಸಿದರು.‘ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. ಈ ಮೈತ್ರಿ ಬಂಗಾಳದಲ್ಲಿ ನಡೆಯುತ್ತಿರುವ ಎಡಪಕ್ಷದ ದುರಾಡಳಿತವನ್ನು ಅಂತ್ಯಗಾಣಿಸಲು ಜನರಿಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಅವರು ಹೇಳಿದರು.‘ಈ ಒಪ್ಪಂದದಂತೆ 294 ಸ್ಥಾನಗಳಲ್ಲಿ ಕಾಂಗ್ರೆಸ್ 65 ಮತ್ತು ಟಿಎಂಸಿ 229 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ’ ಎಂದು ತಿಳಿಸಿದರು.‘ಎರಡೂ ಪಕ್ಷಗಳು ಒಂದು ಒಪ್ಪಂದಕ್ಕೆ ಬಂದ ನಂತರ ರಾಜಿಯಾಗುವ ಅಥವಾ ಶರಣಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರೂ ಅದನ್ನು ಗೌರವಿಸಬೇಕು. ಪ್ರತಿ ಪಕ್ಷಗಳೂ ಸಾಧ್ಯವಾದಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತದೆ. ಆದರೆ ಸಂಧಾನಕ್ಕೆಂದು ಕುಳಿತಾಗ ಪರಸ್ಪರ ಹೊಂದಾಣಿಕೆಗೆ ತಲೆಬಾಗಬೇಕಾಗುತ್ತದೆ’ಎಂದರು.ಇದಕ್ಕೂ ಮುನ್ನ ಕಾಂಗ್ರೆಸ್ 90 ಸೀಟುಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ ಟಿಎಂಸಿ 45 ಸೀಟುಗಳಿಗಿಂತ ಹೆಚ್ಚಿಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಹಲವಾರು ಸಂಧಾನ ಸಭೆಗಳ ಬಳಿಕ ಕಾಂಗ್ರೆಸ್ 70 ಸೀಟುಗಳಿಗೆ ಬೇಡಿಕೆಯನ್ನು ತಗ್ಗಿಸಿದ್ದರೂ ಟಿಎಂಸಿ 64 ಸೀಟುಗಳನ್ನು ಮಾತ್ರ ಬಿಟ್ಟುಕೊಡುವುದಾಗಿ ಹೇಳಿತ್ತು.ಬಿಕ್ಕಟ್ಟು ಬಗೆಹರಿಯದ ಹಿನ್ನೆಲೆಯಲ್ಲಿ ತೃಣಮೂಲ ತನಗೆ ನಿರಂತರವಾಗಿ ಕಾಯುತ್ತಿರುವುದ ಸಾಧ್ಯವಿಲ್ಲ ಎಂದು ಏಕಪಕ್ಷೀಯವಾಗಿ 228 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿತ್ತು.  ನಂತರ ಕಾಂಗ್ರೆಸ್ ಕೂಡ ಎಲ್ಲಾ 294 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿರುವುದಾಗಿ ಹೇಳಿತ್ತು.ಒಗ್ಗೂಡಿ ಪ್ರಯತ್ನ-ಮಮತಾ

ಕೋಲ್ಕತ್ತ (ಪಿಟಿಐ): ಆಡಳಿತಾರೂಢ ಎಡರಂಗವನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಜೊತೆ ಕೈಜೋಡಿಸಿ ಕಾರ್ಯನಿರ್ವಹಿಸಲು ಬಯಸುವುದಾಗಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಎಡರಂಗದ ದುರಾಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವವನ್ನು ಮರಳಿ ತರುವ ಸಲುವಾಗಿ ಜೊತೆಗೂಡಿ ಶ್ರಮವಹಿಸಲು ನಾವೆಲ್ಲರೂ ನಿರ್ಧರಿಸಿದ್ದೇವೆ ಎಂದು ಮಮತಾ ಕಾಂಗ್ರೆಸ್‌ನೊಂದಿಗಿನ ಸೀಟು ಹಂಚಿಕೆ ಒಪ್ಪಂದ ಘೋಷಣೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ತೃಣಮೂಲ ಕಾಂಗ್ರೆಸ್ 227 ಸೀಟುಗಳಲ್ಲಿ ಸ್ಪರ್ಧಿಸಲಿದ್ದು, ಎರಡು ಸೀಟುಗಳನ್ನು ಮತ್ತೊಂದು ಮಿತ್ರಪಕ್ಷ ಎಸ್‌ಯುಸಿಐಗೆ ಬಿಟ್ಟುಕೊಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.