ಮಂಗಳವಾರ, ಜನವರಿ 21, 2020
18 °C

ಪಶ್ಚಿಮ ವಾಹಿನಿ: ನದಿಯಲ್ಲಿ ಕಸದ ರಾಶಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ತೀರ್ಥ ಕ್ಷೇತ್ರ ಪಶ್ಚಿಮ ವಾಹಿನಿ ಬಳಿ, ಕಾವೇರಿ ನದಿಯಲ್ಲಿ ಕಸದ ರಾಶಿ ಬಿದ್ದಿದ್ದು ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ನದಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಹರಿದ ಬಟ್ಟೆಗಳು ರಾಶಿ ರಾಶಿ ಬಿದ್ದಿವೆ. ಕಾವೇರಿ ನದಿ ಇಲ್ಲಿ ಪಶ್ಚಿಮ ದಿಕ್ಕಿಗೆ ಹರಿಯುವುದರಿಂದ ಪುಣ್ಯ ಕ್ಷೇತ್ರವೆಂಬ ಪ್ರತೀತಿ ಇದ್ದು, ದಿನನಿತ್ಯ ನೂರಾರು ಮಂದಿ ಇಲ್ಲಿ ಪಿಂಡ ಪ್ರದಾನ ಮಾಡಲು ಆಗಮಿಸುತ್ತಾರೆ. ಹಾಗೆ ಬಂದವರು ಬಿಸಾಡಿದ ಕುಡಿಕೆ, ಅನ್ನದ ಉಂಡೆ, ಬಾಳೆಹಣ್ಣು ನೀರಿನಲ್ಲಿ ಕೊಳೆತು ವಾಸನೆ ಬೀರುತ್ತಿವೆ.ನದಿಯ ದಡದಲ್ಲಿ ಎಳನೀರು ಬುರುಡೆ, ಊಟದ ಮಾಡಿ ಬಿಸಾಡಿದ ಪ್ಲಾಸ್ಟಿಕ್ ಮತ್ತು ಇಸ್ತ್ರಿ ಎಲೆಗಳು ಎಲ್ಲೆಂರಲ್ಲಿ ಎರಚಾಡುತ್ತಿವೆ. ಪಶ್ಚಿಮ ವಾಹಿನಿ ಒಂದರಲ್ಲೇ 15ಕ್ಕೂ ಹೆಚ್ಚು ದೇವಾಲಯಗಳಿವೆ. ಈ ಪೈಕಿ ರಾಮೇಶ್ವರ, ಈಶ್ವರ, ಸಾರಂಗ ಪಾಣಿ, ಹನುಮಂತ ದೇಗುಲಗಳು ನಿರ್ವಹಣೆ ಇಲ್ಲದೆ ಹಾಳು ಸುರಿಯುತ್ತಿವೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಸೋಪಾನ ಕಟ್ಟೆ ಅಲ್ಲಲ್ಲಿ ಶಿಥಿಲವಾಗಿದ್ದು, ದುರಸ್ತಿ ಮರೀಚಿಕೆಯಾಗಿದೆ.ಪಶ್ಚಿಮ ವಾಹಿನಿಗೆ ಬರುವ ಜನರ ಅನುಕೂಲಕ್ಕೆ ಶೌಚಾಲಯ ಇಲ್ಲವೇ ಇಲ್ಲ. ಮಹಿಳೆಯರು ಬಟ್ಟೆ ಬದಲಿಸಲು ಸ್ಥಳಾವಕಾಶ ಕೂಡ ಇಲ್ಲ. ಹಾಗಾಗಿ ನದಿಯ ದಂಡೆಯಲ್ಲಿ ದೇಹಬಾಧೆ ತೀರಿಸಿಕೊಳ್ಳುವುದು, ಮುಜುಗರದಿಂದ ಬಟ್ಟೆ ಬದಲಿಸುವ ಪರಿಸ್ಥಿತಿ ಬಂದಿದೆ. ಕಳೆದ 4 ವರ್ಷಗಳ ಹಿಂದೆ ಸ್ಥಳೀಯ ಪುರಸಭೆ `ರಾಷ್ಟ್ರೀಯ ನದಿ ನೀರು ಸಂರಕ್ಷಣಾ ಯೋಜನೆ~ಯಡಿ ನಿರ್ಮಿಸಿರುವ ಸ್ನಾನ ಮತ್ತು ಬಟ್ಟೆ ಬದಲಿಸುವ ಮನೆ ಪಾಳು ಬಿದ್ದಿದೆ. ಕಾಮಗಾರಿ ಪೂರ್ಣಗೊಂಡರೂ ಅದಕ್ಕೆ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ.`ರಾಷ್ಟ್ರೀಯ ನದಿ ನೀರು ಸಂರಕ್ಷಣಾ ಯೋಜನೆಯಡಿ ಪಶ್ಚಿಮ ವಾಹಿನಿಯಲ್ಲಿ ನಿರ್ಮಿಸಿರುವ ಸ್ನಾನಗೃಹ ಸುಸಜ್ಜಿತವಾಗಿದೆ. ನೀರಿನ ವ್ಯವಸ್ಥೆಯೂ ಇದೆ. ಪುರುಷರು ಮತ್ತು ಮಹಿಳೆಯರಿಗೆ ತಲಾ 6 ಸ್ನಾನದ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಆ ವಾರ್ಡ್‌ನ ಪುರಸಭೆ ಸದಸ್ಯರು ಶೌಚಾಲಯ ನಿರ್ಮಿಸಿದ ನಂತರ ಸ್ನಾನಗೃಹ ತೆರೆಯಿರಿ ಎಂದು ಹೇಳಿದ್ದರಿಂದ ಉದ್ಘಾಟನೆ ಮಾಡಿಲ್ಲ~ ಎಂದು ಪುರಸಭೆ ಮುಖ್ಯಾಧಿಕಾರಿ ರಾಜಣ್ಣ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)