ಪಾಂಡೆ ಏಕಾಂಗಿ ಹೋರಾಟ

7
ರಣಜಿ: ತೂಗುಯ್ಯಾಲೆಯಲ್ಲಿ ಕರ್ನಾಟಕದ ಸೆಮಿಫೈನಲ್ ಕನಸು, ಸೌರಾಷ್ಟ್ರಕ್ಕೆ ಇನಿಂಗ್ಸ್ ಮುನ್ನಡೆ

ಪಾಂಡೆ ಏಕಾಂಗಿ ಹೋರಾಟ

Published:
Updated:
ಪಾಂಡೆ ಏಕಾಂಗಿ ಹೋರಾಟ

ರಾಜ್‌ಕೋಟ್: ಸಮುದ್ರದ ದೊಡ್ಡ ಅಲೆಗಳ ಎದುರು ಹಡಗು ಕೊಚ್ಚಿಕೊಂಡು ಹೋಗಲಿದೆ ಎನ್ನುವ ಸತ್ಯ ಗೊತ್ತಾದ ಮೇಲೂ ದಿಟ್ಟತನದಿಂದ ಹೋರಾಡುವ ನಾವಿಕನಂತೆ ಕರ್ನಾಟಕದ ಮನೀಷ್ ಪಾಂಡೆ ಹೋರಾಡಿದರು. ಆದರೆ, ಸೌರಾಷ್ಟ್ರ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಪಾಂಡೆ ಹೋರಾಟಕ್ಕೆ ಫಲ ದೊರೆಯದೆ ನಿರಾಸೆ ಅನುಭವಿಸಬೇಕಾಯಿತು.ಕರ್ನಾಟಕ ತಂಡಕ್ಕೆ ಇನಿಂಗ್ಸ್ ಹಿನ್ನಡೆಯ ಸಂಕಷ್ಟ ಎದುರಾದರೂ, ಪಾಂಡೆ ತೋರಿದ ಬ್ಯಾಟಿಂಗ್ ಮಾತ್ರ ಅಮೋಘ. ಈ ಆಟ ನೆನಪಿನ ಪುಟದಿಂದ ಸುಲಭವಾಗಿ ಅಳಿಸಿ ಹೋಗಲು ಸಾಧ್ಯವಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ಪೆವಿಲಿಯನ್ ಹಾದಿ ಹಿಡಿದಾಗ ಏಕಾಂಗಿ `ನಾಯಕ'ರಾಗಿ ರಚಿಸಿದ ಸುಂದರ ರನ್ ಕಾವ್ಯವಿದು. ಆದರೂ, ಸೌರಾಷ್ಟ್ರ ವಿರುದ್ಧ 73 ರನ್‌ಗಳು  ಹಿನ್ನಡೆ ತಪ್ಪಿಸಿಕೊಳ್ಳಲು ಆಗಲಿಲ್ಲ.ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಂಗಳವಾರ ಕರ್ನಾಟಕಕ್ಕೆ ನಿರಾಸೆಯ ದಿನ. ಆದರೆ, ಪಾಂಡೆಗೆ ಶತಕ ಗಳಿಸಿಯೂ ಸಂಭ್ರಮಿಸಲಾಗದ ಸಂಕಷ್ಟದ ದಿನವೂ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಗಟ್ಟಿ ಬುನಾದಿ ನಿರ್ಮಿಸಿಕೊಟ್ಟರೂ ಮುಂದಿನ ಆಟಗಾರರು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಪಾಂಡೆ ಮಾತ್ರ ಈ ಋತುವಿನಲ್ಲಿ ಚೊಚ್ಚಲ ಶತಕ ಗಳಿಸಿದ ಸಾಧನೆ ಮಾಡಿದರು. ಈ ಪರಿಣಾಮ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 102.2 ಓವರ್‌ಗಳಲ್ಲಿ 396 ರನ್ ಗಳಿಸಿತು. ಸೌರಾಷ್ಟ್ರ ಪ್ರಥಮ ಇನಿಂಗ್ಸ್‌ನಲ್ಲಿ 469 ರನ್ ಗಳಿಸಿತ್ತು.ಶತಕದಾಟ: ಈ ರಣಜಿ ಋತುವಿನಲ್ಲಿ ತಮ್ಮ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದ ಬಲಗೈ ಬ್ಯಾಟ್ಸ್‌ಮನ್ ಪಾಂಡೆ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆರ್ಭಟಿಸಿದರು. ಐದು ಗಂಟೆಗೂ ಹೆಚ್ಚು ಕಾಲ ಕ್ರೀಸ್‌ಗೆ ಅಂಟಿಕೊಂಡು ನಿಂತು 228 ಎಸೆತಗಳಲ್ಲಿ 177 ರನ್ ಗಳಿಸಿದರು. ಇದರಲ್ಲಿ 15 ಬೌಂಡರಿ ಹಾಗೂ ಲಾಂಗ್‌ಆನ್‌ನಲ್ಲಿ ಸಿಡಿಸಿದ ಒಂದು ಸಿಕ್ಸರ್ ಒಳಗೊಂಡಂತೆ ಒಟ್ಟು ಮೂರು ಸಿಕ್ಸರ್‌ಗಳು ಸೇರಿವೆ. 44ನೇ ಓವರ್‌ನಲ್ಲಿ ಕಮಲೇಶ್ ಮಕ್ವಾನ ಎಸೆತದಲ್ಲಿ ಬಾರಿಸಿದ ಚೆಂಡು ಕ್ರೀಡಾಂಗಣದ ಆಚೆ ಹೋಗಿ ಬಿದ್ದ್ದ್ದಿದು ಪಾಂಡೆ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿ.ಸೌರಾಷ್ಟ್ರ ವಿರುದ್ಧ ವೈಯಕ್ತಿಕ ಹೆಚ್ಚು ರನ್ ಗಳಿಸಿದ ಕರ್ನಾಟಕದ ಬ್ಯಾಟ್ಸ್‌ಮನ್ ಎನ್ನುವ ಗೌರವ ಸಹ ಪಾಂಡೆಗೆ ಲಭಿಸಿತು. 68ನೇ ಓವರ್‌ನಲ್ಲಿ ಒಂಟಿ ರನ್ ಗಳಿಸುವ ಮೂಲಕ ಪ್ರಥಮ  ದರ್ಜೆ ಕ್ರಿಕೆಟ್‌ನಲ್ಲಿ ಒಂಬತ್ತನೇ ಶತಕ ದಾಖಲಿಸಿದರು. ಆದರೆ, ಈ ವೇಳೆ ಅವರು ಬ್ಯಾಟ್ ಎತ್ತಿ ಮಾತ್ರ ತೋರಿಸಿದರು. ತಂಡ ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದ್ದ ಕಾರಣ ಸಂಭ್ರಮಿಸುವ ಸಂದರ್ಭವೂ ಅದಾಗಿರಲಿಲ್ಲ. 2006-07ರ ರಣಜಿ ಋತುವಿನಲ್ಲಿ ಕೆ.ಟಿ. ಯರೇಗೌಡ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 171 ರನ್ ಗಳಿಸಿದ್ದರು. ಈ ದಾಖಲೆಯನ್ನು ಪಾಂಡೆ ಅಳಿಸಿ ಹಾಕಿದರು.ಬಲ ತುಂಬಿದ ಜೊತೆಯಾಟ: ಎರಡು ಮಹತ್ವದ ಜೊತೆಯಾಟಗಳು ಕರ್ನಾಟಕಕ್ಕೆ ಬಲ ತುಂಬಿದವು. ಆರನೇ ವಿಕೆಟ್‌ನಲ್ಲಿ ಪಾಂಡೆ ಹಾಗೂ ಸ್ಟುವರ್ಟ್ ಬಿನ್ನಿ 80 ರನ್ ಕಲೆ ಹಾಕಿದರೆ, ಇಷ್ಟೇ ರನ್‌ಗಳ ಜೊತೆಯಾಟ ಎಂಟನೇ ವಿಕೆಟ್‌ಗೆ ಅಭಿಮನ್ಯು ಮಿಥುನ್ ಮತ್ತು ಪಾಂಡೆ ನಡುವೆ ಮೂಡಿ ಬಂತು. ಈ ಜೋಡಿ ಕೇವಲ 57 ಎಸೆತಗಳಲ್ಲಿ 80 ರನ್ ಗಳಿಸಿತು.ಏಕಾಂಗಿ ಹೋರಾಟ: ಪಾಂಡೆಗೆ ಉಳಿದ ಬ್ಯಾಟ್ಸ್‌ಮನ್‌ಗಳು ಕೊಂಚ ಹೊತ್ತು ನೆರವಾಗಿ ನಿಂತಿದ್ದರೆ ಕರ್ನಾಟಕ ಇನಿಂಗ್ಸ್ ಮುನ್ನಡೆ ಸಾಧಿಸುವ ಸಾಧ್ಯತೆ ಅಧಿಕವಾಗಿತ್ತು. ಆದರೆ, ಸೂಕ್ತ ಜೊತೆಗಾರರಿಲ್ಲದೇ ಏಕಾಂಗಿ ನಾಯಕರಾಗಿ ಉಳಿದು ಹೋದರು. ತಾವು ಅಷ್ಟೊಂದು ಹೋರಾಟ ನಡೆಸಿದರೂ ಫಲ ದೊರೆಯಲಿಲ್ಲ ಎನ್ನುವ ಬೇಸರ ಅವರನ್ನು ಕಾಡುತ್ತಿತ್ತು.ಪಾಂಡೆ 102.2ನೇ ಓವರ್‌ನಲ್ಲಿ ವಿಶಾಲ್ ಜೋಷಿ ಬೌಲಿಂಗ್‌ನಲ್ಲಿ ಜಯದೇವ್ ಉನದ್ಕತ್‌ಗೆ ಕ್ಯಾಚ್ ನೀಡುತ್ತಿದ್ದಂತೆ ಕರ್ನಾಟಕದ ಮೊದಲ ಇನಿಂಗ್ಸ್ ಹೋರಾಟಕ್ಕೆ ತೆರೆ ಬಿತ್ತು. ಈ ವೇಳೆ ಬಿನ್ನಿ ಸೇರಿದಂತೆ ಉಳಿದ ಆಟಗಾರರು ಪಾಂಡೆಗೆ ಚಪ್ಪಾಳೆಯ ಸ್ವಾಗತ ನೀಡಿದರು. ಆದರೆ, ತಮ್ಮ ಗುರಿ ಈಡೇರದ ಬೇಸರದಲ್ಲಿ ಪಾಂಡೆ ಅದ್ಯಾವುದನ್ನೂ ಲೆಕ್ಕಿಸದೇ ಡ್ರೆಸ್ಸಿಂಗ್ ಕೊಠಡಿ ಸೇರಿಕೊಂಡು ಬಿಟ್ಟರು. ಕೊಂಚ ಹೊತ್ತು ವಿಶ್ರಾಂತಿ ಪಡೆದು ಬ್ಯಾಟ್‌ಗೆ ಚುಂಬಿಸಿ ಸಮಾಧಾನ ಮಾಡಿಕೊಂಡರು. ಆದರೆ, ಮೊಗದಲ್ಲಿ ಮಾತ್ರ ನಿರಾಸೆ ಎದ್ದು ಕಾಣುತ್ತಿತ್ತು.ಉತ್ತಮ ಆರಂಭ: ಆರಂಭಿಕ ಜೋಡಿ ರಾಬಿನ್ ಉತ್ತಪ್ಪ (60, 66ಎಸೆತ, 11ಬೌಂಡರಿ) ಹಾಗೂ ಕೆ.ಎಲ್. ರಾಹುಲ್ (55, 111ಎಸೆತ, 6 ಬೌಂಡರಿ) ಉತ್ತಮ ಬುನಾದಿ ನಿರ್ಮಿಸಿಕೊಟ್ಟಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 95 ರನ್ ಕಲೆ ಹಾಕಿತ್ತು. ಹಿಂದಿನ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದ ಸಿ.ಎಂ. ಗೌತಮ್ (5), ಕುನಾಲ್ ಕಪೂರ್ (2) ಎರಡಂಕಿಯ ಮೊತ್ತ ಮುಟ್ಟದೆ ಹೋಗಿದ್ದು ಕರ್ನಾಟಕದ ನಿರಾಸೆಗೆ ಕಾರಣವಾಯಿತು.ತೂಗುಯ್ಯಾಲೆಯಲ್ಲಿ ಕನಸು: ಸೌರಾಷ್ಟ್ರ ಇನಿಂಗ್ಸ್ ಮುನ್ನಡೆ ಸಾಧಿಸಿರುವ ಕಾರಣ ಸೆಮಿಫೈನಲ್ ಪ್ರವೇಶಿಸಬೇಕೆನ್ನುವ ಬಿನ್ನಿ ಬಳಗದ ಕನಸು ತೂಗುಯ್ಯಾಲೆಯಲ್ಲಿ ತೂಗುತ್ತಿದೆ. ಇದಕ್ಕೆ ಕಾರಣವಾಗಿದ್ದು ವಿಶಾಲ್ ಜೋಷಿ (103ಕ್ಕೆ3), ಧರ್ಮೇಂದ್ರ ಜಡೇಜ (122ಕ್ಕೆ3) ಮತ್ತು ಕಮಲೇಶ್ ಮಕ್ವಾನ (91ಕ್ಕೆ3).ಕಳೆದ ಋತುವಿನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿಯೇ ಕರ್ನಾಟಕ ತಂಡ ಹರಿಯಾಣ ಎದುರು ಸೋಲು ಕಂಡಿತ್ತು. ಆದರೆ, ಈ ಪಂದ್ಯದಲ್ಲಿ ಇನ್ನು ಎರಡು ದಿನಗಳ ಆಟ ಬಾಕಿಯಿದೆ. ಬಿನ್ನಿ ಬಳಗದ ಬೌಲರ್‌ಗಳ ಚಮತ್ಕಾರ ನಡೆದರೆ ಮಾತ್ರ ಎಂಟರ ಘಟ್ಟದ `ಗುಮ್ಮ'ದಿಂದ ಪಾರಾಗಲು ಅವಕಾಶವಿದೆ.ಸ್ಕೋರ್ ವಿವರ:

ಸೌರಾಷ್ಟ್ರ 165.3 ಓವರ್‌ಗಳಲ್ಲಿ 469

ಕರ್ನಾಟಕ 102.2 ಓವರ್‌ಗಳಲ್ಲಿ 396

(ಸೋಮವಾರದ ಅಂತ್ಯಕ್ಕೆ 14 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 45)

ಕೆ.ಎಲ್. ರಾಹುಲ್ ಸಿ ಕಮಲೇಶ್ ಮಕ್ವಾನಿ ಬಿ ವಿಶಾಲ್ ಜೋಷಿ  55

ರಾಬಿನ್ ಉತ್ತಪ್ಪ ಬ್ಯಾಟಿಂಗ್ ಸಿ ಸಾಗರ್ ಜೋಗಿಯಾನಿ ಬಿ  ಜಯದೇವ್ ಉನದ್ಕತ್  60

ಕುನಾಲ್ ಕಪೂರ್ ಸಿ ಸಾಗರ್ ಜೋಗಿಯಾನಿ ಬಿ ಕಮಲೇಶ್ ಮಕ್ವಾನ  02

ಸಿ.ಎಂ. ಗೌತಮ್ ಎಲ್‌ಬಿಡಬ್ಲ್ಯು ಬಿ ಕಮಲೇಶ್ ಮಕ್ವಾನ  05

ಮನೀಷ್ ಪಾಂಡೆ ಸಿ ಜಯದೇವ್ ಉನದ್ಕತ್ ಬಿ ವಿಶಾಲ್ ಜೋಷಿ  177

ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲ್ಯು ಬಿ ಕಮಲೇಶ್ ಮಕ್ವಾನ  16

ಅಮಿತ್ ವರ್ಮಾ ಸಿ ಸಾಗರ್ ಜೋಗಿಯಾನಿ ಬಿ ಧರ್ಮೇಂದ್ರ ಜಡೇಜ  30

ಕೆ. ಗೌತಮ್ ಸಿ ಜಯದೇವ್ ಉನದ್ಕತ್ ಬಿ ವಿಶಾಲ್ ಜೋಷಿ  06

ಅಭಿಮನ್ಯು ಮಿಥುನ್ ಎಲ್‌ಬಿಡಬ್ಲ್ಯು ಬಿ ಧರ್ಮೇಂದ್ರ ಜಡೇಜ  31

ಕೆ.ಪಿ. ಅಪ್ಪಣ್ಣ ಬಿ ಧರ್ಮೇಂದ್ರ ಜಡೇಜ  04

ಎಚ್.ಎಸ್. ಶರತ್ ಔಟಾಗದೆ  00

ಇತರೆ: (ಬೈ-8, ಲೆಗ್ ಬೈ-1, ನೋ ಬಾಲ್-1)  10

ವಿಕೆಟ್ ಪತನ: 1-95 (ಉತ್ತಪ್ಪ; 21.2), 2-106 (ಕುನಾಲ್; 24.1), 3-112 (ಸಿ.ಎಂ. ಗೌತಮ್; 28.1), 4-154 (ರಾಹುಲ್; 37.3), 5-206 (ಬಿನ್ನಿ; 49.3), 6-286 (ಅಮಿತ್; 71.5), 7-306 (ಕೆ. ಗೌತಮ್; 90.2), 8-386 (ಮಿಥುನ್; 99.5), 9-396 (ಅಪ್ಪಣ್ಣ; 101.3), 10-396 (ಪಾಂಡೆ; 102.2)

ಬೌಲಿಂಗ್: ಜಯದೇವ್ ಉನದ್ಕತ್ 19-4-49-1, ಚಿರಾಗ್ ಜಾನಿ 5-1-22-0, ವಿಶಾಲ್ ಜೋಷಿ 27.2-3-103-3, ಧರ್ಮೇಂದ್ರ ಜಡೇಜ 28-2-122-3, ಕಮಲೇಶ್ ಮಕ್ವಾನ 23-1-91-3.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry