ಪಾಂಡೆ ರಸಕವಳ!

7
ನೆಹರೂರಿಂದ ಒಬಾಮವರೆಗೆ

ಪಾಂಡೆ ರಸಕವಳ!

Published:
Updated:

`ಇಂಡಿಯಾ ಗೇಟ್ ಬಳಿ ಐಸ್‌ಕ್ರೀಮ್ ತಿನ್ನೋಣ. ಆಮೇಲೆ ನಿಮಗೊಂದು ಸ್ಪೆಶಲ್ ಟ್ರೀಟ್ ಕೊಡಿಸುವೆ' ಎಂದಿದ್ದ ಬಿಹಾರ್ ಮಿತ್ರ ಪಂಕಜ್ ಭೂಷಣ್; ಅದೂ ದೆಹಲಿಯ ಗದಗುಟ್ಟಿಸುವ ಚಳಿಯಲ್ಲಿ! ಒಲ್ಲೆಂದರೂ ಬಿಡದೇ ಕರೆದೊಯ್ದು ಐಸ್‌ಕ್ರೀಮ್ ತಿನ್ನಿಸಿದ. ಅಲ್ಲಿಂದ ಹೊರಟಿದ್ದು ನೇರ ಕನಾಟ್ ಪ್ಲೇಸ್‌ಗೆ.“ನಿಮಗ್ಗೊತ್ತಾ... ಇಲ್ಲೊಂದು ಪಾನ್ ಅಂಗಡಿಯಿದೆ. ಪ್ರಧಾನಿ, ರಾಷ್ಟ್ರಪತಿಯಿಂದ ಹಿಡಿದು ಬಾಲಿವುಡ್ ಸ್ಟಾರ್‌ಗಳು ಇಲ್ಲಿಗೆ ಬಂದು ಪಾನ್ ಹಾಕಿಕೊಂಡು ಹೋಗ್ತಾರೆ” ಎಂದು ಆತ ಹೇಳುತ್ತಿರುವಾಗಲೇ, ಮಿನುಗುವ ಬೆಳಕಲ್ಲಿ `ಪಾಂಡೆ ಪಾನ್ ಭಂಡಾರ' ಕಾಣಿಸಿತು.ಉಣ್ಣೆ ಟೋಪಿ ಧರಿಸಿ ಶಿವನಾರಾಯಣ ಪಾಂಡೆ ಕುಳಿತಿದ್ದರು. ಪಟ್ನಾದಿಂದ ಪದೇ ಪದೇ ದೆಹಲಿಗೆ ಬಂದು ಹೋಗುವ ಪಂಕಜ್ ಭೂಷಣ್, ಶಿವನಾರಾಯಣ ಹಾಗೂ ಅಲ್ಲಿನ ಸಿಬ್ಬಂದಿಗವರು ಪರಿಚಿತರಾದಂತಿತ್ತು. ಎಂಥದೋ ಹೆಸರು ಹೇಳಿ ಹತ್ತು ಪಾನ್‌ಗೆ ಆರ್ಡರ್ ಮಾಡಿದರು. `ನನಗೊಂದು; ಉಳಿದಿದ್ದೆಲ್ಲ ನಿಮಗೇ' ಅಂದರು. ಕೆಲ ನಿಮಿಷಗಳಲ್ಲಿ ಅಚ್ಚುಕಟ್ಟಾದ ಪ್ಯಾಕ್‌ನೊಂದಿಗೆ ಪರಿಮಳಯುಕ್ತ ಪಾನ್ ನಮ್ಮ ಕೈಯಲ್ಲಿದ್ದವು.ಅದು ಅಂತಿಂಥ ಪಾನ್ ಶಾಪ್ ಅಲ್ಲ ಎಂಬುದು ಅಲ್ಲಿದ್ದ ಫೋಟೋಗಳಿಂದಲೇ ಗೊತ್ತಾಗುತ್ತಿತ್ತು. ಡಾ. ರಾಜೇಂದ್ರ ಪ್ರಸಾದ್‌ರಿಂದ ಹಿಡಿದು ಇತ್ತೀಚಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂವರೆಗೆ ಎಷ್ಟೋ ರಾಷ್ಟ್ರಪತಿಗಳು, ನೆಹರೂ, ಇಂದಿರಾಗಾಂಧಿ, ಇತರ ಪ್ರಧಾನಿಗಳು; ಮಾಧುರಿ ದೀಕ್ಷಿತ್, ವೈಜಯಂತಿಮಾಲಾ, ಸೈಯದ್ ಜಾಫ್ರಿ ಇತರ ಖ್ಯಾತ ಬಾಲಿವುಡ್ ನಟ-ನಟಿಯರು `ಪಾಂಡೆ ಪಾನ್ ಶಾಪ್'ಗೆ ಭೇಟಿ ನೀಡ್ದ್ದಿದಾರೆಂದರೆ ಅದೇನು ಕಡಿಮೆ ಅಗ್ಗಳಿಕೆಯೇ?ಜೇನು, ಬಾದಾಮಿಯುಕ್ತ ಪಾನ್ ಸವಿಯುತ್ತ ಶಿವನಾರಾಯಣ ಪಾಂಡೆ ಅವರನ್ನು ಕೇಳಿದೆ: “ಇಷ್ಟೊಂದು ವೈಶಿಷ್ಟ್ಯಗಳುಳ್ಳ ಪಾನ್ ಶಾಪ್ ಪ್ರಾಯಶಃ ಬೇರೊಂದು ಇರಲಿಕ್ಕಿಲ್ಲ. ಹೇಗೆ ಕಳೆದವು ಇಷ್ಟೆಲ್ಲ ದಿನಗಳು?”.ಕನ್ನಡಕ ತೆಗೆದು ಒರೆಸಿ, ಮತ್ತೆ ಹಾಕಿಕೊಂಡ ಪಾಂಡೆ ಹಳೆಯ ಕಪ್ಪುಬಿಳುಪು ಚಿತ್ರಗಳತ್ತ ನೋಡಿ ನೆನಪಿನಂಗಳಕ್ಕೆ ಜಾರಿದರು.ಅಯೋಧ್ಯೆ ಮೂಲದ ಶಿವನಾರಾಯಣ ಪಾಂಡೆ 1941ರ ಸುಮಾರಿಗೆ ಕೆಲಸ ಹುಡುಕಿಕೊಂಡು ದೆಹಲಿಗೆ ಬಂದಿಳಿದರು. ಎರಡು ವರ್ಷ ಅಲ್ಲಿ-ಇಲ್ಲಿ ಏನೇನೋ ಕೆಲಸ ಮಾಡಿದರು. ಒಮ್ಮೆ ಚಾವ್ಡಿ ಬಜಾರ್‌ನಲ್ಲಿ ಪೈಸೆಗೊಂದರಂತೆ ಐದು ಪಾನ್ ಖರೀದಿಸಿ, ಬೇರೆ ಕಡೆ ಎರಡು ಪೈಸೆಗೆ ಮಾರಿದರು. ದುಪ್ಪಟ್ಟು ಹಣ! ಅದನ್ನೇ ಒಯ್ದು ಮತ್ತೊಂದಷ್ಟು ಪಾನ್ ತಂದು ಮಾರಿದರು. ಲಾಭದಲ್ಲಿ ಒಂದು ಭಾಗವನ್ನು ತೆಗೆದಿಟ್ಟರು. ಕೊನೆಗೊಮ್ಮೆ ಆ ಮೊತ್ತ ಐದು ರೂಪಾಯಿ ಆದಾಗ ಕನಾಟ್ ಪ್ಲೇಸ್‌ನಲ್ಲಿ ಚಿಕ್ಕ ಪಾನ್ ಶಾಪ್ ಶುರು ಮಾಡಿಯೇ ಬಿಟ್ಟರು.ಅಷ್ಟೊತ್ತಿಗಾಗಲೇ ರುಚಿಯಾದ ಪಾನ್ ಹೇಗಿರಬೇಕು ಎಂಬ ಸುಳಿವು ಅವರಿಗೆ ಸಿಕ್ಕಿತ್ತು. ಇದನ್ನೇ ಗಟ್ಟಿಯಾಗಿ ಹಿಡಿದರು. ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೇ ಗ್ರಾಹಕರಿಗೆ ಶುದ್ಧ ಪಾನ್ ಕೊಡುವುದೊಂದು ವ್ರತ ಎಂಬಂತೆ ಪಾಲಿಸಿದರು. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿತು.ಆ ದಿನಗಳಲ್ಲಿ ಕನಾಟ್ ಪ್ಲೇಸ್ ಸುತ್ತಮುತ್ತ ತಿರುಗಾಡುತ್ತಿದ್ದ ಸಣ್ಣಪುಟ್ಟ ರಾಜಕೀಯ ನಾಯಕರು ಒಮ್ಮೆ `ಪಾಂಡೆ ಪಾನ್ ಶಾಪ್'ಗೆ ಬಂದವರು ಬೇರೆಡೆ ನೋಡಲಿಲ್ಲ. ಬಾಯಿಗೆ ಬಿದ್ದ ಪಾನ್ ರುಚಿ, ಇನ್ನೊಂದು ಬಾಯಿಗೆ ರುಚಿ ಬಣ್ಣಿಸಿತು. ಸಂಸದರು, ಶಾಸಕರು ಕ್ರಮೇಣ ಪಾನ್ ಶಾಪ್‌ನ ಕಾಯಂ ಗ್ರಾಹಕರಾದರು. ಇನ್ನು ಸಚಿವರು, ಪ್ರಧಾನಿ, ರಾಷ್ಟ್ರಪತಿ ಬರಲಿಕ್ಕೆಷ್ಟು ಹೊತ್ತು?

ನೆಹರೂ ಬಂದ್ರು!

ಒಂದು ರಾತ್ರಿ ಶಿವನಾರಾಯಣ ಗ್ರಾಹಕರಿಗೆ ಪಾನ್ ಹಚ್ಚುತ್ತಿದ್ದಾಗ, ದಿಢೀರ್ ಗಡಿಬಿಡಿ ಉಂಟಾಯಿತು. ನೋಡಿದರೆ ಪ್ರಧಾನಿ ಜವಾಹರಲಾಲ್ ನೆಹರೂ! ತುಸು ಆತಂಕದಿಂದ ತಮ್ಮೆಡೆಗೆ ಧಾವಿಸಿದ ಪಾಂಡೆ ಹೆಗಲ ಮೇಲೆ ಕೈ ಹಾಕಿದ ನೆಹರೂ, ಪಾನ್ ಕೊಡುವಂತೆ ಕೇಳಿದರು. ಖುಷಿಯಿಂದ ಪಾಂಡೆ ಕೊಟ್ಟ ಪಾನ್ ಸೇವಿಸಿದರು. ಅಲ್ಲಿಂದ ಶುರುವಾಯ್ತು ನೆಹರೂ- ಪಾಂಡೆ ದೋಸ್ತಿ.ಸಮಯ ಸಿಕ್ಕಾಗಲೆಲ್ಲ ನೆಹರೂ ಪಾನ್ ಶಾಪ್‌ಗೆ ಬರುತ್ತಿದ್ದರು. ಆಗದಿದ್ದರೆ ಇದ್ದಲ್ಲಿಗೇ ಪಾನ್ ತರಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ; ಪಾಕಿಸ್ತಾನದ ಮೊದಲ ರಾಷ್ಟ್ರಪತಿ ಲಿಯಾಕತ್ ಅಲಿಖಾನ್‌ಗೆ ನೀಡಿದ ಕೊಡುಗೆಗಳ ಜತೆಗೆ ಪಾಂಡೆ ತಯಾರಿಸಿ ಕೊಟ್ಟಿದ್ದ ಪಾನ್‌ಗಳೂ ಇದ್ದವು!ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ `ಪಾಂಡೆ ಪಾನ್' ಗ್ರಾಹಕರೂ ಆಗಿದ್ದರು. ಡಾ. ಝಕೀರ್ ಹುಸೇನ್ ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ ಜಗತ್ತಿನ ವಿವಿಧ ದೇಶಗಳ ನಾಯಕರನ್ನು ಹೋಳಿ ಹಬ್ಬದ ರಂಗಿನಾಟಕ್ಕೆ ಆಹ್ವಾನಿಸಿದ್ದರು. “ನಿಮಗೆ ಗೊತ್ತೇ? ಅಂದು ಅವರು ನನಗೂ ಆಮಂತ್ರಣ ಕಳಿಸಿದ್ದರು. ಬಣ್ಣದಾಟ ಆಡಿದ ಬಳಿಕ ಊಟ ಮಾಡಿದ ಎಲ್ಲರಿಗೂ ನನ್ನ ಪಾನ್ ಕೊಟ್ಟೆ.ಎಷ್ಟೊಂದು ಮೆಚ್ಚುಗೆ ಸಿಕ್ಕಿತ್ತು!”- ಹೆಮ್ಮೆಯಿಂದ ನುಡಿಯುತ್ತಾರೆ ಶಿವನಾರಾಯಣ ಪಾಂಡೆ. ಮಾಜಿ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹಮದ್, ಗ್ಯಾನಿ ಜೈಲಸಿಂಗ್, ಝಕೀರ್ ಹುಸೇನ್, ವಿ.ವಿ.ಗಿರಿ, ಎಸ್.ರಾಧಾಕೃಷ್ಣನ್, ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಎಲ್ಲರೂ ಪಾಂಡೆ ಪಾನ್ ಸವಿದು, ಮೆಚ್ಚಿದವರೇ.

ಪಾನ್ ಫ್ಯಾನ್

ಆಡಳಿತ ನಡೆಸುವರಷ್ಟೇ ಅಲ್ಲ; ಅಭಿನಯಿಸುವವರೂ ಪಾಂಡೆ ಪಾನ್ ಅಂದರೆ ಬಾಯಿ ಬಾಯಿ ಬಿಡುತ್ತಾರೆ! ಹಳೆಯ ತಲೆಮಾರಿನ ಅನೇಕ ಚಿತ್ರನಟರು ಕಾಯಂ ಗ್ರಾಹಕರಾಗಿದ್ದಾರೆ. “ವೈಜಯಂತಿಮಾಲಾ ಮದುವೆಯಲ್ಲಿ ಎಲ್ಲ ಬೀಗರಿಗೆ ಪಾನ್ ವಿತರಿಸಿದ್ದು ನಾನೇ.`ಚಸ್ಮೇ ಬದ್ದೂರ್' ಚಿತ್ರದಲ್ಲಿ ಪಾನ್‌ವಾಲಾ ಪಾತ್ರದಲ್ಲಿ ಅಭಿನಯಿಸಿದ್ದ ಸಯೀದ್ ಜಾಫ್ರಿಗೆ ಪಾನ್ ಕಟ್ಟುವುದು ಹೇಗೆ ಎಂದು ತರಬೇತಿಯನ್ನು ನೀಡಿದ್ದೆ” ಎಂದು ಪಾಂಡೆ ನೆನಪಿಸಿಕೊಳ್ಳುತ್ತಾರೆ.

ಮಾತಾಡುತ್ತಿದ್ದಾಗ ಯುವಕನೊಬ್ಬ ಬಂದು `ನನಗೆ ಮಾಧುರಿ ದೀಕ್ಷಿತ್ ಬೇಕು' ಎಂದಾಗ ದಂಗಾಗುವ ಪರಿ ನಮ್ಮದು!“ಗಾಬರಿಯಾಗಬೇಡಿ... ಅದು ಹೀಗೆ” ಎಂದು ನಗುತ್ತ ಪಾಂಡೆ ವಿವರಿಸಲು ಶುರು ಮಾಡಿದರು. “ಮಾಧುರಿ ದೀಕ್ಷಿತ್ ಒಮ್ಮೆ ಕುತೂಹಲಕ್ಕೆಂದು ನನ್ನ ಪಾನ್ ಶಾಪ್‌ಗೆ ಬಂದರು. ಅವರಿಗೆ ಯಾವ ಪದಾರ್ಥ ಇಷ್ಟ, ಎಂಥ ರುಚಿ ಇಷ್ಟ ಎಂಬುದನ್ನು ಕೇಳಿಕೊಂಡು ಪ್ರತ್ಯೇಕವಾದ ಒಂದು ಬಗೆಯ ಪಾನ್ ಮಾಡಿಕೊಟ್ಟೆ. ಅಲ್ಲೇ ಅದನ್ನು ಬಾಯಿಗೆ ಹಾಕಿ, ಮೆಲ್ಲುತ್ತ ಆ ರುಚಿಗೆ ಮನಸೋತರು. ಅವತ್ತಿನಿಂದ ಮಾಧುರಿ ದೀಕ್ಷಿತ್ ನನ್ನ ಪಾನ್ ಫ್ಯಾನ್. ಅದಕ್ಕಾಗಿಯೇ ಆ ಪಾನ್‌ಗೆ ಮಾಧುರಿ ದೀಕ್ಷಿತ್ ಪಾನ್ ಎಂಬ ಹೆಸರಿಟ್ಟೆ”.ಮಾಧುರಿ ಒಮ್ಮೆ ಅಂಗಡಿಗೆ ಬಂದಾಗ ಆಕೆಯ ಜೊತೆಗಿದ್ದುದು ಖ್ಯಾತ ಕಲಾವಿದ ಎಂ.ಎಫ್.ಹುಸೇನ್! ಅವರಿಗೂ ವಿಶೇಷ ಪಾನ್ ಕೊಟ್ಟರು. ಅವರು ಪಾನ್ ಫ್ಯಾನ್ ಆಗಲು ಅಷ್ಟು ಸಾಕಾಯ್ತು. ದೆಹಲಿಗೆ ಬಂದಾಗಲೆಲ್ಲ ಹುಸೇನ್ ಬರುತ್ತಿದ್ದರು. ಹೀಗೆ ಒಮ್ಮೆ ಬಂದಾಗ ಪಾಂಡೆ ಸಹಜವಾಗಿ ಕೇಳಿದರು: `ನಿಮ್ಮ ಒಂದು ಪೇಂಟಿಂಗ್ ಕೊಡ್ತೀರಾ?'.ಸ್ವಲ್ಪ ದಿನಗಳ ಬಳಿಕ ಹುಸೇನ್ ಬಂದರು; ಸುಂದರ ಪೇಂಟಿಂಗ್‌ನೊಂದಿಗೆ. ಅದರಲ್ಲಿ ಹನುಮಂತ ಬೆಟ್ಟ ಹೊತ್ತು ಆಗಸದಲ್ಲಿ ಹಾರುತ್ತಿದ್ದ. ಅಚ್ಚರಿಯೆಂದರೆ ಆತನ ಕೈಯಲ್ಲಿದ್ದ ಪರ್ವತದಲ್ಲಿ ಸಂಜೀವಿನಿ ಬದಲು ವೀಳ್ಯದೆಲೆ ಇದ್ದವು!

ಅಡಿಕೆಯಷ್ಟೂ ರಾಜಿ ಇಲ್ಲ!

ಒಮ್ಮೆ ಪಾನ್ ತಿಂದವರು ಮತ್ತೆ ಮತ್ತೆ ತಮ್ಮೆಡೆಗೆ ಬರುವಂತೆ ಮಾಡುವುದು ಗುಣಮಟ್ಟದ ಖಾತ್ರಿ ಮಾತ್ರ ಎನ್ನುವ ಪಾಂಡೆ, ಈ ವಿಷಯದಲ್ಲಂತೂ ಬಲು ಕಟ್ಟುನಿಟ್ಟು. ಕಡಿಮೆ ಸುಣ್ಣ, ಹದವಾದ ಮಸಾಲೆ, ತುಸು ಒಗರು ಜಾಸ್ತಿ- ಈ ಮೂರು ಅಂಶಗಳೇ ಅವರ ಪಾನ್‌ನಲ್ಲಿ ಪ್ರಧಾನ. ಐದು ರೂಪಾಯಿಗಳಿಂದ ಆರಂಭವಾಗಿ ನೂರು ರೂಪಾಯಿವರೆಗೂ ದರ ಇದೆ.“ಬರೀ ಸೆಲೆಬ್ರಿಟಿ ಮಾತ್ರವಲ್ಲ; ಸಾಮಾನ್ಯ ವ್ಯಕ್ತಿಯೂ ಪಾನ್ ಸವಿಯಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಎಲ್ಲ ಬಗೆಯ ಪಾನ್‌ಗಳನ್ನೂ ಮಾಡುತ್ತೇನೆ” ಎನ್ನುವ ಪಾಂಡೆ ಒಟ್ಟು 35 ಬಗೆಯ ಪಾನ್‌ಗಳಲ್ಲಿ ಪರಿಣಿತರು.ರಾಸಾಯನಿಕವಾಗಲೀ, ಗುಟಕಾ, ತಂಬಾಕು ಉತ್ಪನ್ನವಾಗಲೀ ಅವರು ಬಳಸುವುದಿಲ್ಲ. ವೀಳ್ಯದೆಲೆ ಸೇರಿದಂತೆ ಪಾನ್‌ಗೆ ಬಳಕೆಯಾಗುವ ಎಲ್ಲ ಪದಾರ್ಥಗಳ ಗುಣಮಟ್ಟದಲ್ಲಿ ರಾಜಿ ಇಲ್ಲ. ಅಂದಹಾಗೆ, ಪಾನ್‌ಗಳಿಗೆ ಬಳಸುವ ಇತರ ಪದಾರ್ಥಗಳೆಂದರೆ ಬಾದಾಮಿ, ಜೇನುತುಪ್ಪ, ಚಾಕೊಲೆಟ್, ಕೇಸರಿ, ಡ್ರೈಫ್ರೂಟ್ಸ್, ಕರಬೂಜ ಬೀಜ, ಅಕ್ರೋಟ, ಬಟರ್‌ಸ್ಕಾಚ್, ಸೀತಾಫಲ, ಬ್ಲ್ಯೂಬೆರಿ, ಕಿವಿ ಹಣ್ಣುಗಳು, ಗುಲ್ಕಂದ... ಇತ್ಯಾದಿ.ಪಾನ್‌ಗೆ ಹೆಚ್ಚಿದ ಬೇಡಿಕೆ ಹಾಗೂ ಗ್ರಾಹಕರ ದಟ್ಟಣೆಯನ್ನು ಗಮನಿಸಿ ಶಿವನಾರಾಯಣ ಪಾಂಡೆ, 1970ರಲ್ಲಿ ದೆಹಲಿಯ ನಾರ್ತ್ ಅವೆನ್ಯೂದಲ್ಲಿ ಇನ್ನೊಂದು ಅಂಗಡಿ ಆರಂಭಿಸಿದರು. ನಾಲ್ವರು ಪುತ್ರರಾದ ದೇವಿಪ್ರಸಾದ್, ದುರ್ಗೇಶ ಪವನಕುಮಾರ ಹಾಗೂ ಹನುಮಂತ ಈ ಅಂಗಡಿಗಳನ್ನು ನಿರ್ವಹಿಸುತ್ತಾರೆ. ಹನುಮಂತ ಪವರ್ ಲಿಫ್ಟರ್ ರಾಷ್ಟ್ರೀಯ ಪಟುವಾಗಿದ್ದರೆ, ದುರ್ಗೇಶ ರಾಷ್ಟೀಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡವರು.ದೇವಿಪ್ರಸಾದ್ ಮಗ ಹರಿಶಂಕರ ಈ ಮೊದಲು ವಕೀಲಿ ವೃತ್ತಿ ಮಾಡುತ್ತಿದ್ದವರು. “ಅದೇಕೋ ನನ್ನಪ್ಪ, ಅಜ್ಜನ ಅಂಗಡಿ ಕಡೆಗೆ ಹೆಚ್ಚು ಒಲವು ಮೂಡಿತು, ವಕೀಲಿ ಬಿಟ್ಟು ಅಂಗಡಿಗೆ ಬಂದೆ. ನಾನೂ ಈಗ ಪಾನ್ ಕಟ್ಟುತ್ತೇನೆ” ಎನ್ನುತ್ತಾರೆ ಹರಿಶಂಕರ.ಮಕ್ಕಳು ಮೊಮ್ಮಕ್ಕಳು ಅಂಗಡಿಯನ್ನು ನೋಡಿಕೊಂಡು ಹೋಗುತ್ತಿದ್ದರೂ ಶಿವನಾರಾಯಣ ಪಾಂಡೆಗೆ ಪಾನ್ ಶಾಪ್‌ನೆಡೆಗಿನ ಮೋಹ ಬಿಟ್ಟಿಲ್ಲ. ದಿನಾಲು ರಾತ್ರಿ 8ರ ಹೊತ್ತಿಗೆ ಕನಾಟ್ ಪ್ಲೇಸ್‌ನ ಅಂಗಡಿಗೆ ಬಂದು ಗುಣಮಟ್ಟದ ಬಗ್ಗೆ ಖಚಿತಪಡಿಸಿಕೊಂಡು, ಮಧ್ಯರಾತ್ರಿ 12ಕ್ಕೆ ಮನೆಗೆ ತೆರಳುತ್ತಾರೆ.ತಾರುಣ್ಯದಲ್ಲಿ ದೆಹಲಿಗೆ ಬಂದು, ಅಲ್ಲಿಂದ ಆರು ದಶಕಗಳ ಕಾಲ ಎಲ್ಲ ಬಗೆಯ ಗ್ರಾಹಕರಿಗೂ ಪಾನ್ ಸವಿ ಉಣಬಡಿಸಿದ ಶಿವನಾರಾಯಣ ಪಾಂಡೆ ಈಗ 90ರ ವೃದ್ಧ. ಆದರೆ ಎಲ್ಲ ನೆನಪುಗಳೂ ಸ್ಪಷ್ಟವಾಗಿವೆ. ಸುದೀರ್ಘ ಅವಧಿಯವರೆಗೆ ನಮ್ಮ ಜತೆ ಮಾತಾಡುತ್ತಿದ್ದ ಪಾಂಡೆ, ಮಧ್ಯರಾತ್ರಿಯಾಗುತ್ತಿದ್ದಂತೆ ಮನೆಗೆ ತೆರಳಲು ಎದ್ದುನಿಂತರು. ನಾವೂ ಹೊರಡಲು ಎದ್ದು ನಿಂತೆವು.“ಹಾಂ, ಎರಡು ವರ್ಷಗಳ ಹಿಂದೆ ಅಮೆರಿಕದ ಅಧ್ಯಕ್ಷ ಒಬಾಮಾ ಬಂದಿದ್ದರಲ್ಲ? ಅವರಿಗೆ ನಮ್ಮ ರಾಷ್ಟ್ರಪತಿ- ಪ್ರಧಾನಿ ಔತಣಕೂಟ ಏರ್ಪಡಿಸಿದಾಗ, ಒಬಾಮಾ ಸೇರಿದಂತೆ ಅಮೆರಿಕದ ಎಲ್ಲ ಅಧಿಕಾರಿ- ಪತ್ರಕರ್ತರಿಗೆ ಪಾನ್ ಸಪ್ಲೈ ಮಾಡಿದ್ದು ನಾವೇ” ಎಂದು ಪಾಂಡೆ ಹೇಳಿದರು.“ನಮ್ಮ ಅಧ್ಯಕ್ಷರಷ್ಟೇ ಅಲ್ಲ; ದೊಡ್ಡ ದೇಶದ ಅಧ್ಯಕ್ಷರಿಗೂ ತಿನಿಸಿದಿರಲ್ಲ ನಿಮ್ಮ ಪಾನ್‌” ಎಂಬ ನಮ್ಮ ಮಾತಿಗೆ ಶಿವನಾರಾಯಣರು ಬೊಚ್ಚುಬಾಯಿಯಲ್ಲಿ ನಕ್ಕಿದ್ದೇ ನಕ್ಕಿದ್ದು...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry