ಪಾಕಿಸ್ತಾನಕ್ಕೆ, ಪ್ರೀತಿಯಿಂದ...

7

ಪಾಕಿಸ್ತಾನಕ್ಕೆ, ಪ್ರೀತಿಯಿಂದ...

Published:
Updated:
ಪಾಕಿಸ್ತಾನಕ್ಕೆ, ಪ್ರೀತಿಯಿಂದ...

ಪಾಕಿಸ್ತಾನದ ಲಾಹೋರ್‌ನಲ್ಲಿ ನಾನು ಇದ್ದದ್ದು ಎರಡೇ ದಿನ. ಇದೇ ಜನವರಿ 7, 8ರಂದು. ಮಾಧ್ಯಮ ಸಮ್ಮೇಳನಕ್ಕೆಂದು ಅಲ್ಲಿಗೆ ಹೋದಾಗ ನನ್ನ ದೀರ್ಘ ಕಾಲದ ಕನಸು ನನಸಾಯಿತು. ಮೂರು ದಶಕಗಳ ಕಾಲ ಪತ್ರಕರ್ತೆಯಾಗಿ, ಅಮೆರಿಕದ ವಾಷಿಂಗ್ಟನ್ ಡಿಸಿಯ ಮಾಧ್ಯಮ ಪ್ರತಿನಿಧಿಯಾಗಿ ವೃತ್ತಿಯ ವಿವಿಧ ಕೆಲಸಗಳಿಗೆಂದು ವಿಶ್ವದಾದ್ಯಂತ ಸುತ್ತಿದವಳು ನಾನು. ವಿದೇಶಗಳಲ್ಲಿ ಭಾರತೀಯ ಮಹಿಳೆಯಾಗಿ ನನ್ನ ಶ್ರೇಷ್ಠ ಅನುಭವಗಳಲ್ಲಿ ಪಾಕಿಸ್ತಾನೀಯರು ಕೊಟ್ಟ ಬೆಚ್ಚಗಿನ ಕ್ಷಣಗಳು ಬೆರೆತಿವೆ.ಹಾಗಾಗಿ `ದಕ್ಷಿಣ ಏಷ್ಯಾ ಮುಕ್ತ ಮಾಧ್ಯಮ ಸಂಘ'ದ (ಸೌತ್ ಏಷ್ಯಾ ಫ್ರೀ ಮೀಡಿಯಾ ಅಸೋಸಿಯೇಷನ್-ಎಸ್‌ಎಎಫ್‌ಎಂಎ) ಎಂಟನೇ ಸಮ್ಮೇಳನವು ಲಾಹೋರ್‌ನಲ್ಲಿ ನಡೆಯುತ್ತದೆ ಎಂದಾಗ ನಾನು ಎರಡನೇ ಯೋಚನೆಯೇ ಇಲ್ಲದೆ ಹೊರಡಲು ಮುಂದಾದೆ. ನನ್ನ ಕನಸನ್ನು ನನಸು ಮಾಡಿದ ದೇವರಿಗೆ, ಎಸ್‌ಎಎಫ್‌ಎಂಎಗೆ ಧನ್ಯವಾದಗಳು.ನಾನು ಸ್ವಾತಂತ್ರ್ಯಾ ನಂತರದ ಕಾಲಘಟ್ಟದವಳು. ಪಾಕಿಸ್ತಾನದ ಜೊತೆ ರಕ್ತಸಂಬಂಧ ಇದೆ ಎಂದೇ ಭಾವಿಸಿದವಳು. ಭಾರತದ ವಿಭಜನೆಯಿಂದ ಹುಟ್ಟಿದ ಆ ದೇಶದ ಕುರಿತು ನನಗೆ ಕೋಪವಿಲ್ಲ. ಪಾಕ್ ನನಗೆ ಕಹಿ ಅನುಭವವನ್ನೂ ಕೊಟ್ಟಿಲ್ಲ. ಬಹುಶಃ ಭಾರತದ ದಕ್ಷಿಣ ಭಾಗದವಳಾದ ನಾನು ದೇಶ ವಿಭಜನೆಯಿಂದ ಮೂಡುವ ಆತಂಕವನ್ನು ಅನುಭವಿಸಿಲ್ಲದೇ ಇರುವುದೂ ಅದಕ್ಕೆ ಕಾರಣವಿರಬಹುದು.ಇಬ್ಬರು ಸೋದರರು ಆಸ್ತಿಗಾಗಿ ವ್ಯಾಜ್ಯ ಮಾಡಿಕೊಂಡು, ಮತ್ತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಹಳೆ ಗಾಯವನ್ನು ಕೆರೆಯುತ್ತಾ ಕೂರುತ್ತಾರಲ್ಲ; ಭಾರತ, ಪಾಕಿಸ್ತಾನ ಕೂಡ ಅಂಥ ಸಹೋದರರಂತೆ ಎಂಬುದು ನನ್ನ ಭಾವನೆ.ಪಾಕಿಸ್ತಾನ ನನ್ನನ್ನು ಆಕರ್ಷಿಸಿದ ದೇಶ. ಅದಕ್ಕೇ ಆ ದೇಶದ ಬಗೆಗೆ ತಿಳಿಯುವ ಕುತೂಹಲ ಮೊದಲಿನಿಂದಲೂ ಇದೆ. ಸ್ವಾತಂತ್ರ್ಯ ಹೋರಾಟದಂತೆಯೇ ದೇಶ ವಿಭಜನೆಯೂ ಆಸಕ್ತಿಕರ ಓದಿಗೆ ನನ್ನನ್ನು ಪ್ರೇರೇಪಿಸಿದೆ. ಪಾಕಿಸ್ತಾನದ ಕುರಿತು ನನ್ನ ಆಸಕ್ತಿ ಎಷ್ಟಿತ್ತೆಂದರೆ ಆ ದೇಶದ ಸರ್ಗೋಧಾ ಎಂಬಲ್ಲಿನ ಯುವಕರೊಬ್ಬರನ್ನು ಪತ್ರಮಿತ್ರರನ್ನಾಗಿ ಮಾಡಿಕೊಂಡಿದ್ದೆ.1960, 1970ರ ದಶಕದಲ್ಲಿ ಪತ್ರಮಿತ್ರತ್ವದ ಪರಿಕಲ್ಪನೆ ಜೋರಾಗಿತ್ತು. ದೇಶ ವಿದೇಶಗಳ ಸಮಾನಮನಸ್ಕರು ಪತ್ರಗಳನ್ನು ಬರೆಯುವ ಮೂಲಕ ಸಂಪರ್ಕದಲ್ಲಿರುತ್ತಿದ್ದರು. ಸರ್ಗೋಧಾದ ಯುವಕನಿಂದ ಬಂದ `ಪತ್ರಮಿತ್ರರಾಗಿ' ಎಂಬ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಿ, ನಾನೂ ಅವರ ಪತ್ರಮಿತ್ರಳಾದೆ.ಈಗಿನ ಯುವಕರು ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಸಂಪರ್ಕದಲ್ಲಿರುತ್ತಾರೋ, ಆಗ ಪತ್ರಮಿತ್ರರ ನಡುವಿನ ಸಂವಾದ ಹಾಗಿತ್ತು. ಪತ್ರಗಳ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಮಿತ್ರರು ಆಗೀಗ ಮುಖತಃ ಭೇಟಿಯಾಗುತ್ತಿದ್ದರು.`ಪತ್ರಮಿತ್ರರು ಬೇಕಾಗಿದ್ದಾರೆ' ಎಂದು ಅನೇಕರು ಪತ್ರಿಕೆಗಳಲ್ಲಿ ಆಹ್ವಾನಿಸುತ್ತಿದ್ದರು. ಸರ್ಗೋಧಾದ ಯುವಕನ ಅಂಥ ಆಹ್ವಾನಕ್ಕೆ ನಾನು ಓಗೊಟ್ಟೆ (ಶ್ರೀಲಂಕಾದಲ್ಲೂ ನನಗೆ ಪತ್ರಮಿತ್ರರಿದ್ದರು. ಆಗ ಶ್ರೀಲಂಕಾವನ್ನು ಸಿಲೋನ್ ಎಂದು ಕರೆಯುತ್ತಿದ್ದೆವು).ಪಾಕಿಸ್ತಾನದ ಮಿತ್ರ ಹಾಗೂ ನನ್ನ ನಡುವೆ ಪತ್ರಗಳು ವಿನಿಮಯಗೊಂಡವು (ದುರದೃಷ್ಟವಶಾತ್ ಆ ಮಿತ್ರನ ಹೆಸರು ಮರೆತುಹೋಗಿದೆ). ಬಹುಶಃ ಮೂರನೇ ಪತ್ರದಲ್ಲಿ ಆತ ನನ್ನನ್ನು ಯುವಕ ಎಂದು ಭಾವಿಸಿದ್ದಾನೆಂಬುದು ಗೊತ್ತಾಯಿತು. ನನ್ನ ಹೆಸರನ್ನು ನೋಡಿದರೆ ಪಾಕಿಸ್ತಾನದವರಿಗೆ ಗಂಡೋ ಹೆಣ್ಣೋ ಎಂಬುದು ಗೊತ್ತಾಗುವುದಿಲ್ಲ; ಭಾರತದವರಿಗೆ ಗೊತ್ತಾದೀತು. ನಾನು ಯುವತಿ ಎಂಬುದನ್ನು ಆ ಮಿತ್ರನಿಗೆ ಸ್ಪಷ್ಟಪಡಿಸಿದೆ.ಆಮೇಲೆ ಆತ ಮತ್ತೆ ಪತ್ರ ಬರೆಯಲೇ ಇಲ್ಲ. ನಮ್ಮಿಬ್ಬರ ಸಮಾಜಗಳು ಆಗ ಗಂಡು-ಹೆಣ್ಣಿನ ನಡುವೆ ಸಾಮಾಜಿಕ ಸಂವಾದಕ್ಕೆ ಮುಕ್ತ ಅವಕಾಶ ನೀಡಿರಲಿಲ್ಲ (ಕೆಲವು ಸಮುದಾಯಗಳಲ್ಲಿ ಈಗಲೂ ಪರಿಸ್ಥಿತಿ ಹೀಗೆಯೇ ಇದೆ). ಆ ಕಾರಣಕ್ಕೋ ಏನೋ ಯುವತಿಯ ಜೊತೆಗೆ ಪತ್ರದ ಮೂಲಕವೂ ಸ್ನೇಹ ಆತನಿಗೆ ಒಪ್ಪಿತವಾಗಲಿಲ್ಲ. ಹಾಗಾಗಿ ಆ ಸ್ನೇಹ ಗಟ್ಟಿಗೊಳ್ಳುವ ಮೊದಲೇ ಸತ್ತುಹೋಯಿತೆನ್ನಬೇಕು.ವಾಷಿಂಗ್ಟನ್ ಡಿಸಿ ಅಥವಾ ನ್ಯೂಯಾರ್ಕ್‌ನ ಟ್ಯಾಕ್ಸಿಗಳಲ್ಲಿ, ಶಿಕಾಗೋದಲ್ಲಿ ನೆಲೆಸಿದ್ದ ಭಾರತ-ಪಾಕಿಸ್ತಾನದ ದಂಪತಿಗಳಲ್ಲಿ, ಶಿಕಾಗೋದ ಬೀದಿಗಳಲ್ಲಿ, ಮಾಸ್ಕೋ ಅಥವಾ ಪ್ಯಾರಿಸ್‌ನ ರಸ್ತೆಗಳಲ್ಲಿ ಹೀಗೆ ವಿವಿಧೆಡೆ ನಾನು ಪಾಕಿಸ್ತಾನೀಯರನ್ನು ಕಂಡಿದ್ದೇನೆ. ಆಗ ಅವರಿಂದ ನನಗೆ ಮಧುರಾನುಭವವೇ ಆಗಿದೆ. ಅವರೆಲ್ಲಾ ನನ್ನನ್ನು `ಬೆಹೆನ್' (ಸಹೋದರಿ) ಎಂದೇ ಸಂಬೋಧಿಸುತ್ತಿದ್ದರು.ಟ್ಯಾಕ್ಸಿ ಚಾಲಕ ಏನಾದರೂ ಪಾಕಿಸ್ತಾನದವನಾಗಿದ್ದು, ನಾನು ಭಾರತೀಯಳು ಎಂಬುದು ಗೊತ್ತಾದರಂತೂ ಹಣವನ್ನೇ ಪಡೆಯುತ್ತಿರಲಿಲ್ಲ. `ಸ್ನೇಹಿತರ ನಡುವೆ ಹಣದ ವ್ಯವಹಾರ ಇರಬಾರದು' ಎನ್ನುತ್ತಿದ್ದರು. ಅಂಥ ಅನುಭವ ನನ್ನೊಬ್ಬಳಿಗಷ್ಟೇ ಅಲ್ಲ, ಅನೇಕ ಭಾರತೀಯರಿಗೆ ಅಲ್ಲೆಲ್ಲಾ ಆಗಿದೆ.ವಾಷಿಂಗ್ಟನ್ ಡಿಸಿಯ ಒಂದು ಮಾಲ್‌ನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಅಲ್ಲಿಗೆ ಹೋಗಬೇಕೆಂದು ತೀರ್ಮಾನಿಸಿದೆ. ಒಬ್ಬರು ಜೊತೆಗೆ ಇರಲಿ ಎಂದು ಬಯಸಿದೆ. ಯಾರೊಬ್ಬರೂ ಸಲೀಸಾಗಿ ಸಿಗಲಿಲ್ಲ. ಕೊನೆಗೆ ನನ್ನ ಹಳೆಯ ವಿದ್ಯಾರ್ಥಿಯ ಹೆಂಡತಿ (ನಾನು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಂವಹನ ಪಾಠ ಮಾಡುತ್ತಿದ್ದೆ) ಬರಲು ಒಪ್ಪಿದಳು. ಮಾಲ್‌ಗೆ ಹೋದೆವು.ಅಲ್ಲಿನ ಪ್ರತಿ ಮಳಿಗೆಯವರು ಭಾರತೀಯರು ನಾವು ಎಂಬುದು ಗೊತ್ತಾಗುತ್ತಿದ್ದಂತೆ ಅತಿಥಿಗಳನ್ನು ಬರಮಾಡಿಕೊಳ್ಳುವಂತೆ ಸ್ವಾಗತಿಸಿದರು. ನಾನು ಪಾಕಿಸ್ತಾನೀಯರ ಒಗ್ಗಟ್ಟಿನ ಸಂಕೇತವೆಂಬಂತೆ ಹಸಿರು ಬಣ್ಣದ ಸಲ್ವಾರ್ ಕಮೀಜ್ ಧರಿಸಿ, ಕೈಯಲ್ಲಿ ಪಾಕಿಸ್ತಾನದ ಬಾವುಟ ಹಿಡಿದಿದ್ದೆ. ನನ್ನ ಜೊತೆ ಇದ್ದ ಹುಡುಗಿ ನನ್ನ ಆ ಭಂಗಿಯ ಫೋಟೊಗಳನ್ನು ತೆಗೆದಳು.ಶತ್ರುತ್ವ ಭಾವವನ್ನು ನಾನು ಕಂಡದ್ದು ಪಾಕ್ ರಾಜತಾಂತ್ರಿಕ ಕಚೇರಿಯ ಹಾಗೂ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಅಧಿಕಾರಿಗಳಲ್ಲಿ ಮಾತ್ರ. ಕೆಲವೊಮ್ಮೆ ಪಾಕಿಸ್ತಾನದ ಬೆರಳೆಣಿಕೆ ಪತ್ರಕರ್ತರು ತಮ್ಮ ದೇಶದ ನಿಯಮಗಳಿಗೆ ಅತಿಯಾಗಿ ಬದ್ಧರಾಗಿ, ಸ್ನೇಹದ ಹಸ್ತ ಚಾಚದಿರುವುದನ್ನು ಕಂಡಿದ್ದೇನೆ. ಆದರೆ ಬೀದಿಗಳಲ್ಲಿ ಇರುವ ಸಾಮಾನ್ಯ ಜನರು ಇವರಿಗಿಂತ ಭಿನ್ನ. ಅವರು ಸ್ನೇಹಿತರಾಗಲು ಹಾತೊರೆಯುತ್ತಿರುತ್ತಾರೆ.ಲಾಹೋರ್‌ನಲ್ಲಿ ಕೂಡ ನನಗೆ ಕಂಡದ್ದು ಅದೇ ಸ್ನೇಹಶೀಲ ಗುಣ; ಭಾರತೀಯರು ಹಾಗೂ ಪಾಕಿಸ್ತಾನೀಯರ ತಮ್ಮತನ. ಬಾಂಗ್ಲಾದೇಶದವರು, ಸಿಂಹಳೀಯರು ಹಾಗೂ ನೇಪಾಳಿಗಳಲ್ಲಿ ಕೆಲವು ಕಾರಣಗಳಿಂದಾಗಿ ಅಂಥ ಗುಣವನ್ನು ನಾನು ಕಂಡಿಲ್ಲ. ಹಾಗೆ ನೋಡಿದರೆ ಭಾರತ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚು ಹಿಂದೂಗಳಿರುವ ದೇಶ ನೇಪಾಳವಾದರೂ ಅಲ್ಲಿನವರಲ್ಲಿ ಸ್ನೇಹಶೀಲ ಗುಣ ಅಷ್ಟಕ್ಕಷ್ಟೆ.ವಾಘಾ-ಅಟಾರಿ ಗಡಿ ದಾಟಿಕೊಂಡು ನಾವು ಲಾಹೋರ್ ತಲುಪಿದೆವು. ಕೊರೆಯುವ ಚಳಿ. ಭದ್ರತಾ ವಿಭಾಗದವರು, ವಲಸೆ ಬಂದವರನ್ನು ಪರಿಶೀಲಿಸುವ ಅಧಿಕಾರಿಗಳ ಸ್ನೇಹಭಾವ ಕಂಡಮೇಲಂತೂ ಚಳಿಯ ತೀವ್ರತೆ ಇನ್ನೂ ಹೆಚ್ಚಾಯಿತು. ಅಷ್ಟರಲ್ಲಿ ಎಸ್‌ಎಎಫ್‌ಎಂಎ ಸದಸ್ಯರು ಹಾರಗಳನ್ನು ಹಾಕಿ ಸ್ವಾಗತಿಸಿ, ಆಲಂಗಿಸಿದರು. ಪರ್ಲ್ ಕಾಂಟಿನೆಂಟಲ್ ಹೋಟೆಲ್‌ಗೆ ಹೊರಟೆವು. ಹಾದಿಉದ್ದದ ಪರಿಸರ ಕಂಡಾಗ ಭಾರತದಲ್ಲೇ ಇದ್ದೇನೆ ಎನ್ನಿಸಿತು.ಎಲ್ಲದರಲ್ಲೂ ಸಾಮ್ಯ. ಏನೊಂದೂ ವ್ಯತ್ಯಾಸವಿಲ್ಲ. ಚಹರೆಗಳು, ಬೀದಿಗಳು, ಕಿಷ್ಕಿಂಧೆಯಂಥ ರಸ್ತೆಗಳು, ತರಹೇವಾರಿ ಅಂಗಡಿಗಳು ಎಲ್ಲವೂ ಭಾರತದಲ್ಲಿ ಇರುವಂತೆಯೇ ಇವೆ. ಭಾರತದಲ್ಲಿ ಇರುವಂಥವೇ ದೊಡ್ಡ ಮರಗಳು. ಅಲ್ಲಿನ ಕಾಗೆಯ ಬಣ್ಣವೂ ಕಪ್ಪು. ಊಟವೂ ಅಷ್ಟೇ ರುಚಿಕಟ್ಟು.ಸಂಜೆ ಅನಾರ್ಕಲಿಯ ರಸ್ತೆಗಳಿಗೆ ಇಳಿಯೋಣವೆಂದು ನಾವು ನಿರ್ಧರಿಸಿದೆವು. ಲಾಹೋರ್‌ನಲ್ಲಿನ ಯುವಕರು ದೊಡ್ಡವರ ಪಹರೆಯಲ್ಲಿದ್ದರಾದರೂ ನಮ್ಮ ಭಾವಕ್ಕೆ ಪ್ರತಿಕ್ರಿಯೆಯ ಗೆರೆಯನ್ನು ಮುಖದಲ್ಲಿ ಕೊಂಕಿಸದೇ ಇರಲಿಲ್ಲ. ನಮ್ಮನ್ನು ಸ್ವಾಗತಿಸಿದರು. ಶುಭ ಕೋರಿದರು. ಬಸ್‌ನಲ್ಲಿ ಅನಾರ್ಕಲಿಯತ್ತ ಹೋಗುವಾಗ ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ಬೈಕ್‌ಗಳಲ್ಲಿದ್ದವರು ನಾವು ಭಾರತದವರು ಎಂಬುದನ್ನು ಥಟ್ಟನೆ ಗುರುತಿಸಿದರು. ನಮ್ಮ ಹಣೆಯ ಮೇಲಿದ್ದ ಬೊಟ್ಟು ಅದನ್ನು ಪತ್ತೆಮಾಡುವ ಸಂಕೇತವಾಗಿತ್ತು.ಕಣ್ಣುಗಳು ಸಣ್ಣಗಾದವು. ಹುಬ್ಬುಗಳು ಮೇಲೇರಿದವು. ಬೈಸಿಕಲ್‌ನಲ್ಲಿ ಸಾಗುತ್ತಿದ್ದ ಯುವಕನೊಬ್ಬ ನಮ್ಮತ್ತ ನೋಡಿದ. ಅವನ ಕಣ್ಣುಗಳು ಅಗಲವಾದವು. ಟ್ರಾಫಿಕ್‌ನಲ್ಲಿ ನಿಂತಿದ್ದ ನಮ್ಮ ಬಸ್ ದಾಟಿಕೊಂಡು ಮುಂದೆ ಸಾಗಿದ ಅವನು ಮತ್ತೆ ಹಿಂದಿರುಗಿ ನಮ್ಮತ್ತ ನೋಡಿದ. ದೊಡ್ಡ ನಗೆ ನಕ್ಕು, ಕೈಗಳನ್ನು ಮೇಲೆತ್ತಿ ಆಡಿಸಿದ. ನಾವೂ ನಕ್ಕು, ಕೈಯಾಡಿಸಿದೆವು. ಆ ಮಗುವನ್ನು ಕಂಡು ಮನತುಂಬಿಬಂತು.ಹೋಟೆಲ್‌ನಲ್ಲಿ ನಾವೊಂದು ರಿಸೆಪ್ಷನ್‌ಗೆ ಹೋಗುವುದಿತ್ತು. ಹಾಗಾಗಿ ಅನಾರ್ಕಲಿಯಲ್ಲಿ ಓಡುವಷ್ಟೇ ವೇಗವಾಗಿ ನಡೆದು ಸಾಗಿದೆವು. ಹರೆಯದ ಇಬ್ಬರು ಹುಡುಗರು ನಮಗೆ ಅಭಿಮುಖವಾಗಿ ಹೋದರು. ನಾವು ಭಾರತೀಯರು ಎಂಬುದನ್ನು ಅರಿತ ಅವರು ಕೂಗಿದರು. ತಿರುಗಿ ನೋಡಿದೆ. ಅವರೂ ಕೈಯಾಡಿಸಿದರು. ನಾನು ನಗುತ್ತಾ ಕೈಗಳನ್ನು ಆಡಿಸಿ ಅವರ ಕ್ರಿಯೆಗೆ ಸೂಕ್ತ ಪ್ರತಿಕ್ರಿಯೆ ನೀಡಿದೆ. ಇನ್ನೊಬ್ಬ ಸಲಾಮು ಹೊಡೆದ. ಮತ್ತೊಬ್ಬ ಹುಡುಗ ಎರಡೂ ಕೈಗಳನ್ನು ಜೋಡಿಸಿ ಎದೆಮಟ್ಟಕ್ಕೆ ಮೇಲೆತ್ತಿ ನಮಸ್ಕರಿಸಿದ. ಅದು ನನ್ನ ಬದುಕಿನ ಅತಿ ಬೆಚ್ಚಗಿನ ನಮಸ್ಕಾರ!ಪಾಕಿಸ್ತಾನದ ಆತಿಥೇಯರು ನಮ್ಮಷ್ಟಕ್ಕೆ ನಾವೇ ನಗರದಲ್ಲಿ ಸುತ್ತುವುದು ಅಪಾಯ ಎಂದು ಎಚ್ಚರಿಸಿದ್ದರು. ಅದಕ್ಕೆ ನಾವು ಮುನಿಸಿಕೊಂಡೆವಾದರೂ ಅವರ ಮಾತಿಗೆ ಗೌರವ ಸೂಚಿಸದೆ ವಿಧಿಯಿರಲಿಲ್ಲ. ಪಾಕಿಸ್ತಾನದ ಪತ್ರಕರ್ತರೊಬ್ಬರಿಗೆ ಆ ಕುರಿತು ನಾನು ದೂರಿದೆ. ಅದಕ್ಕೆ ಅವರು `ಅಪಾಯ, ಆತಂಕ ಎಂಬುದೆಲ್ಲಾ ಊಹೆ' ಎಂದರು.`ಹಣೆ ಮೇಲಿನ ಬೊಟ್ಟನ್ನು ತೆಗೆಯಿರಿ. ನಿಮ್ಮನ್ನು ಯಾರೂ ಗುರುತುಹಚ್ಚಲಾರರು' ಎಂದು ಅವರು ಪರಿಹಾರ ಸೂಚಿಸಿದರು. ಪಾಕಿಸ್ತಾನದ ಇನ್ನೊಬ್ಬ ಪತ್ರಕರ್ತೆಗೆ ಈ ವಿಷಯ ಹೇಳಿದಾಗ, ಅವರು ನನ್ನ ಬೊಟ್ಟನ್ನು ಕೇಳಿದರು. ಆ ಬೊಟ್ಟನ್ನು ಅವರಿಟ್ಟುಕೊಂಡು ನನ್ನನ್ನು ಊರು ಸುತ್ತಿಸಲು ಕರೆದುಕೊಂಡು ಹೋಗುವುದು ಅವರ ಬಯಕೆಯಾಗಿತ್ತು.ಹೈದರಾಬಾದ್‌ನ ಇನ್ನೊಬ್ಬ ಪತ್ರಕರ್ತೆ ನನ್ನ ಜೊತೆ ಇರುತ್ತಿದ್ದರು. ಅನಾರ್ಕಲಿಯ ಅಂಗಡಿಗಳ ಓಣಿಯಲ್ಲಿ ನಾವಿಬ್ಬರೂ ಗುಂಪಿನಿಂದ ಅಕಸ್ಮಾತ್ತಾಗಿ ಬೇರೆಯಾದೆವು. ಅಂಗಡಿ ಸಾಲುಗಳ ನಡುವೆ ಸಾಗುವಾಗ ಒಬ್ಬಾತ ಸಹಜವೂ ಅನಿವಾರ್ಯವೂ ಆದ ಪ್ರಶ್ನೆಯನ್ನು ಕೇಳಿದ. `ಹೌದು, ನಾವು ಭಾರತೀಯರು' ಎಂದೇ ನಾವು ಹೇಳಿದೆವು.ಅದಕ್ಕೆ ಆತ `ಚಾಯ್ ಪೀಕರ್ ಜಾಯೇಗಾ' (ಚಹಾ ಕುಡಿದು ಹೋಗುವಿರಾ) ಎಂದು ಕೇಳಿ ಚಕಿತಗೊಳಿಸಿದ. ಆ ಚಹಾ ಆಹ್ವಾನವನ್ನು ಒಪ್ಪಿಕೊಳ್ಳುವಷ್ಟು ಸಮಯ ನಮಗೆ ಇರಲಿಲ್ಲ. ಮುಂದೊಮ್ಮೆ ಬಂದು ದೊಡ್ಡ ಬಟ್ಟಲಿನಲ್ಲಿ ಚಹಾ ಕುಡಿಯುವುದಾಗಿ ಭರವಸೆ ಕೊಟ್ಟೆವು. ಅದನ್ನು ಈಡೇರಿಸುವ ಬಯಕೆಯಂತೂ ಇದೆ. ಇಂಶಾ ಅಲ್ಲಾ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry