ಶನಿವಾರ, ಡಿಸೆಂಬರ್ 14, 2019
21 °C

ಪಾಕಿಸ್ತಾನದ ಧ್ವಜಾರೋಹಣ ಪ್ರಕರಣ: ಸಿಂದಗಿ ಬಂದ್ ಸಂಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಧ್ವಜಾರೋಹಣ ಪ್ರಕರಣ: ಸಿಂದಗಿ ಬಂದ್ ಸಂಪೂರ್ಣ

ಸಿಂದಗಿ: ಮಿನಿ ವಿಧಾನಸೌಧ ಆವರಣದಲ್ಲಿ ದುಷ್ಕರ್ಮಿಗಳು ಪಾಕ್ ಧ್ವಜ ಹಾರಿಸಿದ್ದನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಸೋಮವಾರ ನಡೆಸಿದ ಸಿಂದಗಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ಯುವಕರ ತಂಡವನ್ನು ಚದುರಿಸಲು ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದರು.ಮುಂಜಾನೆಯಿಂದಲೇ ಎಲ್ಲ ಅಂಗಡಿಗಳು ಮುಚ್ಚಿದ್ದವು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವೂ ಸ್ಥಗಿತಗೊಂಡಿತ್ತು. ಆದರೆ ಹೊರ ಊರುಗಳಿಂದ ಬರುವ ಬಸ್‌ಗಳು ಇಲ್ಲಿಂದ ಮೂರು ಕಿ.ಮೀ ದೂರದ ಚಿಕ್ಕಸಿಂದಗಿ ಬೈಪಾಸ್ ರಸ್ತೆ ಮೂಲಕ ಗುಲ್ಬರ್ಗ ಮಾರ್ಗವಾಗಿ ಸಂಚರಿಸಿದವು.ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಹಣ್ಣು ಮಾರುವ ಗಾಡಿಗಳನ್ನು ಹೊರತುಪಡಿಸಿ ಪಟ್ಟಣದಲ್ಲಿ ಎಲ್ಲ ವ್ಯವಹಾರ ಸ್ಥಗಿತಗೊಂಡಿತ್ತು. ಮೆರವಣಿಗೆಗೆ ಅವಕಾಶ ನೀಡದ ಕಾರಣ ವಿವಿಧ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ಬಂದು ಮನವಿಪತ್ರ ಸಲ್ಲಿಸಿದರು.

 

ಘಟನೆ ಖಂಡಿಸಿ 30ಕ್ಕೂ ಅಧಿಕ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಬೈಕ್ ರ‌್ಯಾಲಿ ಮೂಲಕ ಮಿನಿ ವಿಧಾನಸೌಧಕ್ಕೆ ಬಂದು ತಹಶೀಲ್ದಾರ್ ಡಾ.ಶಂಕ್ರಣ್ಣ ವಣಕ್ಯಾಳ ಅವರಿಗೆ ಪ್ರತ್ಯೇಕವಾಗಿ ಮನವಿಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಶೋಕ ಗಾಯಕವಾಡ, ಬಿ.ಜಿ.ನೆಲ್ಲಗಿ, ಬಿ.ಸಿ.ಕೊಣ್ಣೂರ, ಕೆ.ದಯಾನಂದ, ಎನ್.ಎಸ್.ಬಗಲಿ, ಶಿವಾನಂದ ಪಾಟೀಲ ಮಾತನಾಡಿ, ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಆರೋಪಿಗಳ ಪರ ಸಿಂದಗಿಯ ಯಾವ ವಕೀಲರೂ ವಕಾಲತ್ತು ವಹಿಸುವುದಿಲ್ಲ ಎಂದರು.ಡಾ.ವಣಕ್ಯಾಳ ಮಾತನಾಡಿ, ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ 153ಎ ಕಲಮಿನಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಂದ್ ಶಾಂತಿಯುತವಾಗಿತ್ತು.

ಪ್ರತಿಕ್ರಿಯಿಸಿ (+)