ಮಂಗಳವಾರ, ಜುಲೈ 27, 2021
27 °C

ಪಾಕಿಸ್ತಾನದ ಮೇಲೆ ಸಂಶಯ: ಲಾಡೆನ್ ಮನೆಯಿಂದ ಮಹತ್ವದ ದಾಖಲೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕ ವಿಶೇಷ ಪಡೆಗಳು ಒಸಾಮಾ ಬಿನ್ ಲಾಡೆನ್‌ನ ಅಬೋಟಾಬಾದ್ ಅಡಗುತಾಣದಿಂದ ಬಲು ರಹಸ್ಯ ಸಂಗತಿಗಳಿದ್ದ  ಹಾರ್ಡ್ ಡ್ರೈವ್‌ಗಳು, ಡಿವಿಡಿಗಳು ಹಾಗೂ ಗುಪ್ತನಿಧಿಯ ವಿವರಗಳೂ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿವೆ.

ಇವು ಅಮೆರಿಕ ಗುಪ್ತದಳಕ್ಕೆ ಅಲ್‌ಖೈದಾ ಕಾರ್ಯ ಯೋಜನೆ ಮತ್ತು ಲಾಡೆನ್ ಉತ್ತರಾಧಿಕಾರಿ ಏಮನ್ ಅಲ್ ಜವಾಹಿರಿಯನ್ನು ಪತ್ತೆಹಚ್ಚಲು ಕೆಲವು ಸುಳಿವು ನೀಡುವ ಸಾಧ್ಯತೆಗಳಿವೆ.

ಇದಲ್ಲದೆ, ತಾಲಿಬಾನ್, ಹಕ್ಕಾನಿ ಜಾಲ, ಲಷ್ಕರ್ ಎ ತೊಯ್ಬಾ (ಎಲ್‌ಇಟಿ), ಜೈಷ್ ಎ ಮೊಹಮ್ಮದ್ ಮತ್ತಿತರ ಉಗ್ರಗಾಮಿ ಸಂಘಟನೆಗಳೊಂದಿಗೆ ಅಲ್‌ಖೈದಾ ಹೊಂದಿರುವ ಸಂಪರ್ಕ ವಿವರಗಳನ್ನು ಸಹ ಒದಗಿಸುವ ನಿರೀಕ್ಷೆಯಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಪಡೆ ರಚನೆ: ಲಾಡೆನ್‌ನ ಅಡಗುತಾಣದಿಂದ ವಶಪಡಿಸಿಕೊಂಡಿರುವ ಸಾಮಗ್ರಿಗಳ ಅಧ್ಯಯನಕ್ಕೆ ಸಿಐಎ ಕಾರ್ಯಪಡೆಯೊಂದನ್ನು ರಚಿಸಿದೆ.

ಶ್ವೇತಭವನದಲ್ಲಿ ಮಂಗಳವಾರ  ಸುದ್ದಿಗಾರರ ಜೊತೆ ಮಾತನಾಡಿದ ಅಮೆರಿಕ ಭಯೋತ್ಪಾದನಾ ನಿಗ್ರಹ ಮತ್ತು ಆಂತರಿಕ ಭದ್ರತಾ ವಿಭಾಗದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬ್ರೆನ್ನನ್, ದಾಳಿಯ ಸ್ಥಳದಲ್ಲಿ ವಶಪಡಿಸಿಕೊಂಡ ಎಲ್ಲ ವಸ್ತುಗಳ ಬಗ್ಗೆ ಸಿಐಎ ಕಾರ್ಯಪಡೆ ಅಗತ್ಯ ಪರಿಶೀಲನೆ ಮತ್ತು ವಿಶ್ಲೇಷಣೆ ಮಾಡಲಿದೆ ಎಂದು ತಿಳಿಸಿದರು.

ಲಾಡೆನ್ ಪಾಕಿಸ್ತಾನದಲ್ಲಿ ಯಾವುದೇ ಬೆಂಬಲ ವ್ಯವಸ್ಥೆ ಹೊಂದಿರಲಿಲ್ಲ ಎಂಬುದನ್ನು ತಾವು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಆತನೊಂದಿಗೆ  ಸಂಪರ್ಕ ಇದ್ದವರ ಬಗ್ಗೆ ತನಿಖೆ ನಡೆಸುವ ಸುಳಿವು ನೀಡಿದೆ.

ಜಾನ್ ಬ್ರೆನ್ನನ್ , ‘ಕೆಲವು ವರ್ಷಗಳ ಕಾಲ ಲಾಡೆನ್‌ಗೆ ವಾಸಿಸಲು ಅವಕಾಶ ನೀಡಿದ ದೇಶದಲ್ಲಿ ಆತನಿಗೆ ಬೆಂಬಲ ವ್ಯವಸ್ಥೆ ಇಲ್ಲ ಎನ್ನುವುದು ಅಸಮಂಜಸವಾಗುತ್ತದೆ’ ಎಂದು ನುಡಿದರು.

‘ಪಾಕ್ ದ್ವಿಮುಖ ನೀತಿ ಅನುಸರಿಸುತ್ತಿದೆ ಮತ್ತು ಐಎಸ್‌ಐಗೆ ಆತನ ಇರುವಿಕೆ ತಿಳಿದಿತ್ತು’ ಎಂಬ ಹಲವು ಅಮೆರಿಕ ಸಂಸದರ ಆರೋಪವನ್ನು ಅವರು ಅಲ್ಲಗಳೆಯಲಿಲ್ಲ.

ಹಲವು ಹಿರಿಯ ಅಮೆರಿಕ ಅಧಿಕಾರಿಗಳು ಪಾಕ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ತನಿಖೆಯ ಪ್ರಗತಿಗೆ ಅವರ ಸಹಕಾರ ಪಡೆಯಲಾಗುತ್ತಿದೆ. ಲಾಡೆನ್‌ನ ಅಡಗುತಾಣ ಮತ್ತು ಆತನಿಗಿದ್ದ ಬೆಂಬಲ ವ್ಯವಸ್ಥೆಯ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ನುಡಿದರು.

ಅಮೆರಿಕದ ಸೆನೆಟರ್‌ಗಳಾದ ಸೂಸಾನ್ ಕಾಲಿನ್ಸ್, ಜೋ ಲೀಬರ್‌ಮನ್, ಕಾರ್ಲ್ ಲೆವಿನ್ (ಸೆನೆಟ್ ಸೇನಾ ಸೇವೆಗಳ ಸಮಿತಿಯ ಅಧ್ಯಕ್ಷ), ಫ್ರ್ಯಾಂಕ್ ಲಾಟೆನ್‌ಬರ್ಗ್ ಹಾಗೂ ಇತರರು ಲಾಡೆನ್‌ಗೆ ಪಾಕ್ ನೆರವು ನೀಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಪಾಕ್‌ಗೆ ಅಮೆರಿಕ ಆರ್ಥಿಕ ಮತ್ತಿತರ ನೆರವುಗಳನ್ನು ಸ್ಥಗಿತಗೊಳಿಸಲು ಒತ್ತಾಯಿಸಿದ್ದಾರೆ.

ಇಸ್ಲಾಮಾಬಾದ್‌ನಿಂದ ಪ್ರಕಟಗುವ ಬಹುತೇಕ ಪತ್ರಿಕೆಗಳು ‘ಅಬೋಟಾಬಾದ್ ಕಾರ್ಯಾಚರಣೆ’ ಸಂಬಂಧ ಪಾಕ್ ಸರ್ಕಾರದ ವಿರುದ್ಧ ಟೀಕಾ ಪ್ರವಾಹ ಹರಿಸಿವೆ.

ಜಂಟಿ ಕಾರ್ಯಾಚರಣೆಯಲ್ಲ: ಈ ನಡುವೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಹೇಳಿಕೆಯೊಂದನ್ನು ನೀಡಿ ‘ಲಾಡೆನ್ ಮೇಲಿನ ದಾಳಿ ಅಮೆರಿಕ ಮತ್ತು ಪಾಕಿಸ್ತಾನಗಳ ಜಂಟಿ ಕಾರ್ಯಾಚರಣೆಯಂತೂ ಅಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.

ಅಮೆರಿಕಕ್ಕೆ ತಿರುಗೇಟು: ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನ ಹಿಂದಿನಿಂದಲೂ ಅಮೆರಿಕದ ಜೊತೆ ಕೈಜೋಡಿಸುತ್ತಲೇ ಬಂದಿದೆ. ಅಂತಹ ಸಹಕಾರದ ಮಹಾಪೂರಗಳಿಂದಾಗಿಯೇ ಲಾಡೆನ್ ವಿರುದ್ಧದ ಕಾರ್ಯಾಚರಣೆಯು ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಪಾಕ್ ಸರ್ಕಾರ ಮಂಗಳವಾರ ರಾತ್ರಿ ಹೇಳಿಕೆ ನೀಡಿದೆ.

ಲಾಡೆನ್‌ಗೆ ಪಾಕಿಸ್ತಾನದ ಬೆಂಬಲ ಇರಬಹುದೆಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಸರ್ಕಾರ ‘ಅಂತಹ ಬೆಂಬಲ ಇರಬಹುದೆನ್ನುವವರು ಒಂದೇ ಒಂದು ದಾಖಲೆ ತೋರಿಸಲಿ ನೋಡೋಣ’ ಎಂದು ಅಮೆರಿಕಕ್ಕೆ ತಿರುಗೇಟು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.