ಪಾಕಿಸ್ತಾನದ ವಾಯುನೆಲೆ ಮೇಲೆ ಉಗ್ರರ ದಾಳಿ

ಶನಿವಾರ, ಮೇ 25, 2019
28 °C

ಪಾಕಿಸ್ತಾನದ ವಾಯುನೆಲೆ ಮೇಲೆ ಉಗ್ರರ ದಾಳಿ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ನಂಬಲಾದ ವಾಯುಸೇನಾ ನೆಲೆಯ ಮೇಲೆ ಗುರುವಾರ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಗೆ ಒಬ್ಬ ಭದ್ರತಾ ಸಿಬ್ಬಂದಿ ಬಲಿಯಾಗಿದ್ದರೆ, 7 ಉಗ್ರರು ಹತರಾಗಿದ್ದಾರೆ.ಇಲ್ಲಿನ ಕಮ್ರಾ ವಾಯುನೆಲೆಯಲ್ಲಿನ ಒಂದು ಸೇನಾ ವಿಮಾನವನ್ನೂ ಉಗ್ರರು ಹೊಡೆದುರುಳಿಸಿದ್ದಾರೆ. ಸೇನಾನೆಲೆಯ ಒಂದು ಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.ಗುರುವಾರ ಮುಂಜಾನೆ ಸುಮಾರು 2 ಗಂಟೆ ಹೊತ್ತಿಗೆ ಮಿಲಿಟರಿ ಸಮವಸ್ತ್ರದಲ್ಲಿದ್ದ ಉಗ್ರರು ಏಕಾಏಕಿ ವಾಯುನೆಲೆಯ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದರು. ಗ್ರೆನೇಡ್‌ಗಳು, ರಾಕೆಟ್ ಲಾಂಚರ್‌ಗಳು ಹಾಗೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ವಾಯುಪಡೆಗೆ ಸೇರಿದ ಯುದ್ದ ವಿಮಾನವನ್ನೂ ಹೊಡೆದುರುಳಿಸಿದ್ದಾರೆ.ನಂತರ ಜಾಗೃತಗೊಂಡ ಸೇನಾ ಸಿಬ್ಬಂದಿ ವಾಯುನೆಲೆಯ ಕಮಾಂಡರ್ ಮೊಹಮದ್ ಆಜಂ ಅವರ ನೇತೃತ್ವದಲ್ಲಿ ಪ್ರತಿ ದಾಳಿಗೆ ಮುಂದಾಯಿತು. ತೀವ್ರ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗೆ ಸೇರಿದ ಒಬ್ಬ ಯೋಧ ಸಾವನ್ನಪ್ಪಿದರೆ, ಉಗ್ರರ ಪೈಕಿ 7 ಮಂದಿಯನ್ನು ಕೊಲ್ಲಲಾಯಿತು. ಮೊಹಮದ್ ಆಜಂ ಹಾಗೂ ಇತರ ಸಿಬ್ಬಂದಿಗಳಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.ಇನ್ನಷ್ಟು ಉಗ್ರರು ವಾಯು ನೆಲೆಯಲ್ಲಿರಬಹುದೆಂಬ ಸಂಶಯದ ಮೇಲೆ ಇಡೀ ವಾಯುನೆಲೆಯ ಶೋಧ ಕಾರ್ಯವನ್ನು ಪಾಕ್ ಸೈನಿಕರು ಕೈಗೊಂಡಿದ್ದಾರೆ.ವಾಯುನೆಲೆಯಿಂದ  ಜ್ವಾಲೆ ಹಾಗೂ ದಟ್ಟ ಹೊಗೆ ಬರುತ್ತಿರುವ ಚಿತ್ರವೊಂದು ಇಲ್ಲಿಗೆ ಸಮೀಪದ ನಿವಾಸಿಯೊಬ್ಬರ ಟ್ವಿಟ್ಟರ್‌ ಸಂದೇಶದಲ್ಲಿದೆ.ಭಯೋತ್ಪಾದನೆಯ ವಿರುದ್ಧ ದೇಶವು ಯುದ್ದ ಮಾಡಲು ಕಟಿಬದ್ದವಾಗಿದೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಕಿಯಾನಿ ಅವರು ಹೇಳಿದ ಎರಡು ದಿನಗಳಲ್ಲೆ ಉಗ್ರರು ಸೇನಾ ನೆಲೆಯನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry