ಪಾಕಿಸ್ತಾನ ಕೋರ್ಟ್‌ಗೆ ಸಾಕ್ಷ್ಯಾಧಾರ

7
26/11 ಮುಂಬೈ ದಾಳಿ ಪ್ರಕರಣ

ಪಾಕಿಸ್ತಾನ ಕೋರ್ಟ್‌ಗೆ ಸಾಕ್ಷ್ಯಾಧಾರ

Published:
Updated:

ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ದಾಳಿ ಸಂಚಿನಲ್ಲಿ ಶಾಮೀಲಾದ ಶಂಕಿತ ಏಳು ಜನ ಆರೋಪಿಗಳ ವಿರುದ್ಧ ವಿಚಾರಣೆ ನಡೆಸುತ್ತಿರುವ ಭಯೋತ್ಪಾದನೆ ವಿರೋಧಿ ನ್ಯಾಯಾಲಯಕ್ಕೆ ಸಿಂಧ್ ಪ್ರಾಂತ್ಯದಲ್ಲಿನ ಉಗ್ರರ ತರಬೇತಿ ಶಿಬಿರದ ಛಾಯಾಚಿತ್ರಗಳು ಮತ್ತು ಹತ್ತು ಜನ ಉಗ್ರರು ದಾಳಿಗೆ ಬಳಸಿದ ಮೋಟಾರ್ ದೋಣಿ ಸೇರಿದಂತೆ ಹಲವು ಸಾಕ್ಷ್ಯಾಧಾರಗಳನ್ನು ಒದಗಿಸಲಾಗಿದೆ.ರಾವಲ್ಪಿಂಡಿಯ ಅದಿಲಾ ಜೈಲಿನಲ್ಲಿ ಭಯೋತ್ಪಾದನೆ ವಿರೋಧಿ ನ್ಯಾಯಾಲಯದ ನ್ಯಾಯಮೂರ್ತಿ ಹಬೀಬ್-ಉರ್-ರೆಹಮಾನ್ ಸಮ್ಮುಖದಲ್ಲಿ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಯ ಅಧಿಕಾರಿಗಳು ಶನಿವಾರ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಿದರು.ಎಲ್‌ಇಟಿ ಭಯೋತ್ಪಾದಕರ ತರಬೇತಿ ಶಿಬಿರದ ಛಾಯಾಚಿತ್ರಗಳು ಮತ್ತು ಮೋಟಾರ್‌ದೋಣಿಯನ್ನು ನ್ಯಾಯಮೂರ್ತಿಗಳ ಎದುರು ಪ್ರಸ್ತುತಪಡಿಸಲಾಯಿತು. ಎಫ್‌ಐಎ ಅಧಿಕಾರಿಗಳು 2009ರ ಜನವರಿಯಲ್ಲಿ ಮೋಟಾರ್ ದೋಣಿ ಮತ್ತು ಇತರ ವಸ್ತುಗಳನ್ನು ತನ್ನ ಸುಪರ್ದಿಗೆ ಪಡೆದಿದ್ದರು. ಈಗಲೂ ಅವುಗಳು ಅವರ ಬಳಿ ಇವೆ ಎಂದು ಭಾನುವಾರ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.ನ್ಯಾಯಮೂರ್ತಿಗಳು ಆರಂಭಿಕ ಹಂತದ ಪರಿಶೀಲನೆ ನಡೆಸಿದರು. ಬಳಿಕ ನ್ಯಾಯಾಂಗೀಯ ದಾಖಲೆ ಪ್ರಕ್ರಿಯೆಗೆ ಅನುಗುಣವಾಗಿ ಎಫ್‌ಐಎ ಅಧಿಕಾರಿಗಳು ಸಾಕ್ಷ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾಜರುಪಡಿಸಿದರು.ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರರು ಅರಬ್ಬಿ ಸಮುದ್ರದಲ್ಲಿ ಅಲ್-ಹುಸೇನಿ, ಅಲ್-ಅತ್ತಾ ಮತ್ತು ಅಲ್-ಫೌಜ್ ಹೆಸರಿನ ಮೋಟಾರ್ ದೋಣಿಗಳಲ್ಲಿ ದಾಳಿ ತರಬೇತಿ ಪಡೆದುಕೊಂಡಿದ್ದರು ಎಫ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.ಸಿಂಧ್‌ನ ಥಟ್ಟಾ ಜಿಲ್ಲೆಯ ಮೀರ್‌ಪುರ ಸಕ್ರೋ ಪ್ರದೇಶದ ಎಲ್‌ಇಟಿ ಉಗ್ರರ ತರಬೇತಿ ಶಿಬಿರ ಮತ್ತು ಯೂಸುಫ್ ಗೋಥ್ ಮತ್ತು ಕರಾಚಿ ಲಂಧಿ ಪ್ರದೇಶದಲ್ಲಿ ತರಬೇತಿ ಪಡೆದಿದ್ದಾರೆ. ಈ ತರಬೇತಿ ಶಿಬಿರಗಳು 25ರಿಂದ 48 ಎಕರೆ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ವಿವರಿಸಿದರು.

ಸದ್ಯ ಏಳು ಜನ ಶಂಕಿತರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮುಂಬೈ ಮೇಲೆ ದಾಳಿ ನಡೆಸಲು ಕಳುಹಿಸಿಕೊಡುವ ಮುನ್ನ 10 ಮಂದಿಗೆ ಶಿಬಿರಗಳಲ್ಲಿ ತರಬೇತಿ ನೀಡಲಾಗಿತ್ತು ಎಂದು ಅಮೀನ್ ಸಾದಿಕ್ ತಪ್ಪೊಪ್ಪಿಕೊಂಡಿದ್ದಾರೆ.ಉಗ್ರರು ಸಿಂಧ್‌ನಲ್ಲಿ ತರಬೇತಿ ಪಡೆಯಲು ಸಾದಿಕ್ ವ್ಯವಸ್ಥೆ ಮಾಡಿಕೊಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಏಳು ಜನ ಆರೋಪಿಗಳಲ್ಲಿ ಎಲ್‌ಇಟಿ ಆಪರೇಷನ್ ಕಮಾಂಡರ್ ಜಕೀ-ಉರ್-ರೆಹಮಾನ್ ಸೇರಿದ್ದಾನೆ.ಎಫ್‌ಐಎ ಅಧಿಕಾರಿಗಳು ಶಂಕಿತ ಆರೋಪಿಗಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.

ಉಗ್ರರ ತರಬೇತಿ ಶಿಬಿರಗಳಿಂದ ವಶಪಡಿಸಿಕೊಂಡಿರುವ ಜೀವರಕ್ಷಕ ಜಾಕೆಟ್, ತಿಳಿ ಗುಲಾಬಿ ಬಣ್ಣದ ವಸ್ತು ಸೇರಿದಂತೆ 350 ವಸ್ತುಗಳನ್ನು ಪ್ರಸ್ತುತಪಡಿಸಿದರು ಎಂದು ವಿಶೇಷ ವಕೀಲ ಚೌಧರಿ ಜುಲ್ಫೀಕರ್ ಅಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಡಿಸೆಂಬರ್ 22ರಂದು ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry