ಪಾಕಿಸ್ತಾನ ಕ್ರಿಕೆಟ್ ತಂಡದ ಏರಿಳಿತದ ಕಥೆ ಹೇಳುವ ಅಂಕಿ-ಅಂಶಗಳು ಚಾಂಪಿಯನ್ ಆಗುವ ಮುನ್ನ...ನಂತರ...!

7

ಪಾಕಿಸ್ತಾನ ಕ್ರಿಕೆಟ್ ತಂಡದ ಏರಿಳಿತದ ಕಥೆ ಹೇಳುವ ಅಂಕಿ-ಅಂಶಗಳು ಚಾಂಪಿಯನ್ ಆಗುವ ಮುನ್ನ...ನಂತರ...!

Published:
Updated:

ಒಮ್ಮೆ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಮೆರೆದ ಪಾಕಿಸ್ತಾನ ತಂಡವು ಆ ಪಟ್ಟಕ್ಕೆ ಏರುವ ಮುನ್ನ ಹಾಗೂ ನಂತರ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಅದ್ಬುತ ಸಾಧನೆಯೂ ಇದೆ, ನೀರಸ ಆಟವೂ ಸಾಕಷ್ಟು...!ಭಾರತದ ನೆರೆಯ ರಾಷ್ಟ್ರವು ವಿಶ್ವಕಪ್‌ನಲ್ಲಿ ಕಂಡ ಯಶಸ್ಸು-ಆಘಾತ ಎಲ್ಲವನ್ನೂ ವಿವರಿಸಿ ಹೇಳುವಂಥ ಕೆಲವು ಅಂಕಿ-ಅಂಶಗಳನ್ನು ಇಲ್ಲಿ ಕಲೆಹಾಕಿಡುವ ಪ್ರಯತ್ನ ಮಾಡಲಾಗಿದೆ.* ಪಾಕಿಸ್ತಾನವು 1991-92ರ ಕ್ರಿಕೆಟ್ ಋತುವಿನಲ್ಲಿ ನಡೆದಿದ್ದ ಬೆನ್ಸನ್ ಆ್ಯಂಡ್ ಹೆಡ್ಜಸ್ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪಾಕ್ ತಂಡದವರು 56 ವಿಶ್ವಕಪ್ ಪಂದ್ಯಗಳಲ್ಲಿ 30ರಲ್ಲಿ ಜಯ ಸಾಧಿಸಿದ್ದು, 24ರಲ್ಲಿ ಸೋಲನುಭವಿಸಿದೆ. ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಫಲಿತಾಂಶ ಹೊರಹೊಮ್ಮಿರಲಿಲ್ಲ. ಭಾರತದ ವಿರುದ್ಧ ಮಾತ್ರವಲ್ಲ ದಕ್ಷಿಣ ಆಫ್ರಿಕಾ ಎದುರು ಕೂಡ ಪಾಕ್ ಪಡೆಯವರು ಗೆಲುವಿನ ಸವಿ ಪಡೆಯುವುದು ಸಾಧ್ಯವಾಗಿಲ್ಲ.* ಶ್ರೀಲಂಕಾ ವಿರುದ್ಧ ಪಾಕ್ ತಂಡದವರು ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ ಒಂದರಲ್ಲಿಯೂ ಸೋಲಿನ ಕಹಿಯುಂಡಿಲ್ಲ. ಭಾರತದ ವಿರುದ್ಧ ಮಾತ್ರ ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಪರಾಭವಗೊಂಡಿದೆ. ವಿಂಡೀಸ್ ಎದುರು ಕೂಡ ನಿರಾಸೆಯ ದೊಡ್ಡ ಕಥೆಯನ್ನೇ ಹೊಂದಿದೆ. ಆಡಿದ ಎಂಟು ಪಂದ್ಯಗಳಲ್ಲಿ ಗೆದ್ದಿದ್ದು ಎರಡರಲ್ಲಿ ಮಾತ್ರ. ಬಾಕಿ ಪಂದ್ಯಗಳಲ್ಲಿ ನಿರಾಸೆ. ವಿಶೇಷವೆಂದರೆ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಏಳು ವಿಶ್ವಕಪ್ ಪಂದ್ಯಗಳನ್ನು ಆಡಿದ್ದು ಅವುಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದ್ದು ಗಮನ ಸೆಳೆಯುವ ಅಂಶ. ಮೂರರಲ್ಲಿ ಮಾತ್ರ ಪರಾಭವಗೊಂಡಿದೆ.* ಜಾವೇದ್ ಮಿಯಾಂದಾದ್ ಅವರು ಮಾತ್ರ ವಿಶ್ವಕಪ್‌ನಲ್ಲಿ ಪಾಕ್ ಪರ ಒಟ್ಟಾರೆಯಾಗಿ ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಐದನೂರಕ್ಕೂ ಅಧಿಕ ರನ್ ಗಳಿಸಿದವರು ಎಂಟು ಬ್ಯಾಟ್ಸ್‌ಮನ್‌ಗಳಿದ್ದಾರೆ. ಸಯೀದ್ ಅನ್ವರ್ (915), ಇಂಜಮಾಮ್ ಉಲ್ ಹಕ್ (717), ರಮೀಜ್ ರಾಜಾ (700), ಇಮ್ರಾನ್ ಖಾನ್ (666), ಅಮೀರ್ ಸೊಹೇಲ್ (598), ಜಹೀರ್ ಅಬ್ಬಾಸ್ (597), ಸಲೀಮ್ ಮಲಿಕ್ (591) ಮತ್ತು ಇಜಾಜ್ ಅಹ್ಮದ್ (516) ಅವರು ಈ ಪಟ್ಟಿಯಲ್ಲಿದ್ದಾರೆ.* ಪಾಕ್ ಪರವಾಗಿ ಹನ್ನೆರಡು ಬೌಲರ್‌ಗಳು ವಿಶ್ವಕಪ್ ಪಂದ್ಯಗಳಲ್ಲಿ ಒಟ್ಟಾರೆ ಹತ್ತು ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಅತಿ ಎತ್ತರದಲ್ಲಿ ಇರುವವರು ವಾಸೀಮ್ ಅಕ್ರಮ್. 23.83ರ ಸರಾಸರಿಯಲ್ಲಿ ಅವರು 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಅವರು ಆಡಿದ ಪಂದ್ಯಗಳ ಸಂಖ್ಯೆ 38 ಎನ್ನುವುದನ್ನೂ ಮರೆಯುವಂತಿಲ್ಲ.* ಮುನ್ನೂರಕ್ಕೂ ಹೆಚ್ಚು ರನ್‌ಗಳನ್ನು ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ ತಂಡವು ಗಳಿಸಿದ್ದು ಕೇವಲ ಮೂರು ಬಾರಿ. ಜಿಂಬಾಬ್ವೆ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ 21ನೇ ಮಾರ್ಚ್ 2007ರಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಓವರ್‌ಗೆ ಏಳು ರನ್‌ಗಳಂತೆ 49.5 ಓವರುಗಳಲ್ಲಿ 349 ರನ್‌ಗಳನ್ನು ಗಳಿಸಿ ಆಲ್‌ಔಟ್ ಆಗಿತ್ತು. ಇನ್ನೆರಡು ಬಾರಿ ಮುನ್ನೂರಕ್ಕೂ ಹೆಚ್ಚು ರನ್ ಮೊತ್ತವನ್ನು ಗಳಿಸಿದ್ದು ಶ್ರೀಲಂಕಾ ವಿರುದ್ಧ. ಸ್ವಾನ್‌ಸೀ (9ನೇ ಜೂನ್ 1983) ಹಾಗೂ ನಾಟಿಂಗ್‌ಹ್ಯಾಮ್ (14ನೇ ಜೂನ್ 1975)ನಲ್ಲಿ ಕ್ರಮವಾಗಿ 5 ವಿಕೆಟ್‌ಗೆ 338 ಹಾಗೂ 6 ವಿಕೆಟ್‌ಗೆ 330 ರನ್‌ಗಳನ್ನು ಗಳಿಸಿತ್ತು.* ನೂರಕ್ಕೂ ಕಡಿಮೆ ಮೊತ್ತಕ್ಕೆ ಕುಸಿದಿದ್ದು ಒಮ್ಮೆ ಮಾತ್ರ. 1ನೇ ಮಾರ್ಚ್ 1992ರಲ್ಲಿ ಅಡಿಲೇಡ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 40.2 ಓವರುಗಳಲ್ಲಿ 74 ರನ್‌ಗೆ ಪಾಕ್ ತಂಡದವರು ಮುಗ್ಗರಿಸಿದ್ದರು. ಈ ಪಂದ್ಯದಲ್ಲಿ ಓವರ್‌ಗೆ 1.83ರಂತೆ ಪಾಕ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದ್ದರು. ಇನ್ನೂರು ರನ್‌ಗಳ ಗಡಿಯಲ್ಲಿ ಪಾಕ್ ಕುಸಿದಿದ್ದು ಹನ್ನೆರಡು ಬಾರಿ.* ಭಾರಿ ರನ್ ಮೊತ್ತದಿಂದ ವಿಜಯ ಸಾಧಿಸಿದ್ದು ಶ್ರೀಲಂಕಾ ವಿರುದ್ಧ. 14ನೇ ಜೂನ್ 1975ರಲ್ಲಿ ನಾಟಿಂಗ್‌ಹ್ಯಾಮ್ ಪಂದ್ಯದಲ್ಲಿ ಪಾಕ್ ತಂಡದವರು ಶ್ರೀಲಂಕಾಕ್ಕೆ 331 ರನ್‌ಗಳ ಗೆಲುವಿನ ಗುರಿ ನೀಡಿದ್ದರು. ಆ ಪಂದ್ಯದಲ್ಲಿ 192 ರನ್‌ಗಳ ವಿಜಯ ಪಾಕಿಸ್ತಾನದವರಿಗೆ ಸಿಕ್ಕಿತ್ತು. ನೂರಕ್ಕೂ ಅಧಿಕ ರನ್ ಮೊತ್ತದ ಅಂತರದಿಂದ ವಿಜಯ ಸಾಧಿಸಿದ್ದು ಕೇವಲ ನಾಲ್ಕು ಬಾರಿ. ನಮೀಬಿಯಾ (171) ಜಿಂಬಾಬ್ವೆ (148) ಹಾಗೂ ಶ್ರೀಲಂಕಾ (113) ವಿರುದ್ಧ ಜಯ ಸಾಧ್ಯವಾಗಿತ್ತು. ವಿಶ್ವಕಪ್ ಪಂದ್ಯಗಳಲ್ಲಿ ಹತ್ತು ವಿಕೆಟ್‌ಗಳ ಅಂತರದ ವಿಜಯದ ಸಂಭ್ರಮವನ್ನು ಪಾಕ್‌ನವರು ಇಲ್ಲಿಯವರೆಗೆ ಪಡೆದಿಲ್ಲ. ಆದರೆ ಒಂಬತ್ತು ವಿಕೆಟ್‌ಗಳ ಅಂತರದಿಂದ ಎರಡು ಬಾರಿ ಜಯ ಸಾಧಿಸಿದ್ದಾರೆ. ಯು.ಎ.ಇ. (1996; ಗುಜ್ರನ್‌ವಾಲಾ) ಹಾಗೂ ನ್ಯೂಜಿಲೆಂಡ್ (1999; ಮ್ಯಾಂಚೆಸ್ಟರ್) ವಿರುದ್ಧ ಒಂಬತ್ತು ವಿಕೆಟ್‌ಗಳ ಗೆಲುವು ಸಾಧ್ಯವಾಗಿತ್ತು.* ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಪರ ವೈಕ್ತಿಕ ಗರಿಷ್ಠ ರನ್ ಮೊತ್ತದ ಸಾಧನೆ ಮಾಡಿದ್ದು ಇಮ್ರಾನ್ ನಜೀರ್ (160; 121 ಎ., 14 ಬೌಂಡರಿ, 8 ಸಿಕ್ಸರ್). ಅವರು ಕಿಂಗ್‌ಸ್ಟನ್‌ನಲ್ಲಿ 21ನೇ ಮಾರ್ಚ್ 2007ರಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಇಷ್ಟು ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಪಾಕ್ ಪರವಾಗಿ ಹದಿಮೂರು ಬಾರಿ ವಿಶ್ವಕಪ್‌ನಲ್ಲಿ ಶತಕ ಸಾಧನೆ ಕಾಣಿಸಿವೆ.ರಮೀಜ್ ರಾಜಾ (119*; ನ್ಯೂಜಿಲೆಂಡ್, 1992), ಅಮೀರ್ ಸೊಹೇಲ್ (114; ಜಿಂಬಾಬ್ವೆ, 1992), ಸಯೀದ್ ಅನ್ವರ್ (113*; ನ್ಯೂಜಿಲೆಂಡ್, 1999), ರಮೀಜ್ ರಾಜಾ (113; ಇಂಗ್ಲೆಂಡ್, 1987), ಅಮೀರ್ ಸೊಹೇಲ್ (111; ದಕ್ಷಿಣ ಆಫ್ರಿಕಾ, 1996), ಜಹೀರ್ ಅಬ್ಬಾಸ್ (103*; ನ್ಯೂಜಿಲೆಂಡ್, 1983), ಜಾವೇದ್ ಮಿಯಾಂದಾದ್ (103; ಶ್ರೀಲಂಕಾ, 1987), ಸಯೀದ್ ಅನ್ವರ್ (103; ಜಿಂಬಾಬ್ವೆ, 1999), ಇಮ್ರಾನ್ ಖಾನ್ (102*; ಶ್ರೀಲಂಕಾ, 1983), ರಮೀಜ್ ರಾಜಾ (102*; ವೆಸ್ಟ್ ಇಂಡೀಸ್, 1992), ಸಯೀದ್ ಅನ್ವರ್ (101; ಭಾರತ, 2003) ಹಾಗೂ ಸಲೀಮ್ ಮಲಿಕ್ (100; ಶ್ರೀಲಂಕಾ, 1987) ಅವರು ಶತಕ ಸಂಭ್ರಮ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry