ಪಾಕಿಸ್ತಾನ: ಮಾಜಿ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರಾದಾರ್ ಬಿಡುಗಡೆ

7

ಪಾಕಿಸ್ತಾನ: ಮಾಜಿ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರಾದಾರ್ ಬಿಡುಗಡೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಆಫ್ಘಾನಿಸ್ತಾನದ ಮಾಜಿ ತಾಲಿಬಾನ್ ಉಪ ಮುಖ್ಯಸ್ಥ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅವರನ್ನು ಪಾಕಿಸ್ತಾನ ಶನಿವಾರ ಬಿಡುಗಡೆ ಮಾಡಿತು. ಸಮರಗ್ರಸ್ಥ ರಾಷ್ಟ್ರದಲ್ಲಿ ಶಾಂತಿ ಮಾತುಕತೆ ಪ್ರಗತಿ ಸಲುವಾಗಿ ಬರಾದಾರ್ ಬಿಡುಗಡೆ ಮಾಡುವಂತೆ ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದರು.ಇತರ ಸೆರೆಯಾಳುಗಳಂತೆ ಬರಾದಾರ್ ಅವರನ್ನು ಬೇರೆ ಯಾವುದೇ ರಾಷ್ಟ್ರಕ್ಕೆ ಹಸ್ತಾಂತರ ಮಾಡಲಾಗುವುದಿಲ್ಲ. ಅವರನ್ನು ಪಾಕಿಸ್ತಾನದ ಒಳಗೆ ಮುಕ್ತ ಸಂಚಾರಕ್ಕಾಗಿ ಬಿಡುಗಡೆ ಮಾಡಲಾಗಿದೆ.ಬರಾದಾರ್ ಗೆ ಭದ್ರತೆ ಒದಗಿಸಲಾಗುವುದು ಹಾಗೂ ತಮಗೆ ಇಷ್ಟವಾದವರನ್ನು ಭೇಟಿ ಮಾಡಲು, ಮಾತುಕತೆ ನಡೆಸಲು ಸ್ವಾತಂತ್ರ್ಯ ನೀಡಲಾಗುವುದು  ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಶನಿವಾರ ಬರಾದಾರ್ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಶುಕ್ರವಾರ ಪ್ರಕಟಿಸಿತ್ತು. ಆಫ್ಘಾನಿಸ್ತಾನ ಶಾಂತಿ ಮಾತುಕತೆ ಪ್ರಕ್ರಿಯೆ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಕಚೇರಿ ಹೇಳಿತ್ತು.ಕರಾಚಿಯಲ್ಲಿ 2010ರಲ್ಲಿ ಬಂಧನಕ್ಕೆ ಒಳಗಾದ ದಿನದಿಂದಲೂ ಬರಾದಾರ್ ಪಾಕಿಸ್ತಾನಿ ಭದ್ರತಾ ಸಂಸ್ಥೆಗಳ ವಶದಲ್ಲಿ ಇದ್ದರು.ಮುಲ್ಲಾ ಮುಹಮ್ಮದ್ ಒಮರ್ ನಂತರದ ಅತ್ಯಂತ ಪ್ರಭಾವಿ ತಾಲಿಬಾನ್ ನಾಯಕ ಎಂದು ಬರಾದಾರ್ ಒಂದು ಕಾಲದಲ್ಲಿ ಪರಿಗಣಿತರಾಗಿದ್ದರು. ಸಿಐಎ ಮತ್ತು ಪಾಕಿಸ್ತಾನಿ ಜಾಗೃತಾ ಪಡೆಯ ಜಂಟಿ ತಂಡವೊಂದರಿಂದ ಬಂಧನಕ್ಕೆ ಒಳಗಾಗುವರರೆಗೂ ಅಮೆರಿಕ ಮತ್ತು ನ್ಯಾಟೋ ಪಡೆ ವಿರೋದ್ಧ ಪ್ರತಿದಿನದ ಪ್ರಚಾರ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಬರಾದಾರ್ ದಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry