ಸೋಮವಾರ, ಮೇ 25, 2020
27 °C

ಪಾಕಿಸ್ತಾನ ವಿರುದ್ಧ ಭಾರತ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಯೋತ್ಪಾದನೆಯನ್ನು ‘ರಾಷ್ಟ್ರದ ನೀತಿಯ ಸಾಧನ’ ಎಂಬಂತೆ ಪಾಕಿಸ್ತಾನ ಅನುಸರಿಸುತ್ತಿದೆ ಎಂದು ಭಾರತ ತೀವ್ರವಾಗಿ ಟೀಕಿಸಿದೆ. ಜೊತೆಗೆ ಇಂತಹ ಕಾರ್ಯತಂತ್ರಗಳು ‘ಕಳಂಕ ತರುವಂಥದ್ದು ಮತ್ತು ಸ್ವಯಂ ಸೋಲಿಗೆ ಕಾರಣವಾಗುವಂಥದ್ದು’ ಎಂದೂ ಹೇಳಿದೆ.

‘ತಮಗೆ ಯಾವುದೇ ಅಪಾಯವಿಲ್ಲದೆ ಭಯೋತ್ಪಾದನೆಯನ್ನು ರಾಷ್ಟ್ರದ ನೀತಿಯ ಸಾಧನವೆಂಬಂತೆ ಅನುಸರಿಸಬಹುದು ಎಂದು ಕೆಲವು ರಾಷ್ಟ್ರಗಳು ಅಂದುಕೊಂಡಿರುತ್ತವೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹೇಳಿದ್ದಾರೆ.

‘ಏಷ್ಯಾದ ಭದ್ರತೆಯ ಸವಾಲುಗಳು’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು ‘ಭಯೋತ್ಪಾದನೆಯ ವಿರುದ್ಧದ ಹೋರಾಟ ಒಬ್ಬರ ಆಯ್ಕೆ ವಿಷಯವಲ್ಲ. ಹಾಗಾಗಿ ಇದು ಸ್ವಯಂ ಸೋಲಿಗೆ ದಾರಿಯಾಗುತ್ತದೆ. ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಚೋದಿಸುವ ಮೂಲಕ ಬಲಪ್ರಯೋಗ ಮಾಡುವುದನ್ನು ಪಾಕಿಸ್ತಾನ ಬಿಡಬೇಕು’ ಎಂದು ತಿಳಿಸಿದ್ದಾರೆ.

‘ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ನಮ್ಮ ನೆರೆಯಲ್ಲೇ ನೆಲೆಗೊಂಡಿದೆ’ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಥಿಂಪುವಿನಲ್ಲಿ ಸಾರ್ಕ್ ಸಮಿತಿ ಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಅವರನ್ನು ನಿರುಪಮಾ ಭೇಟಿ ಮಾಡುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ತನ್ನ ರಾಷ್ಟ್ರವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬ ತನ್ನ ಬದ್ಧತೆಯನ್ನು ಪಾಕಿಸ್ತಾನ  ಪೂರೈಸಬೇಕು ಎಂದು  ನಿರುಪಮಾ  ಪಾಕಿಸ್ತಾನವನ್ನು ಒತ್ತಾಯಿಸಲಿದ್ದಾರೆ.

ಮುಂಬೈ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಷಯ ಪಾಕಿಸ್ತಾನದಲ್ಲಿ ‘ಒಂದು ಇಂಚು ಕೂಡ ಮುಂದುವರಿದಿಲ್ಲ’ ಎಂದು ಈಚೆಗೆ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರು ಮಾಡಿರುವ ಟೀಕೆ ಹಿನ್ನೆಲೆಯಲ್ಲಿ ಈ ದಾಳಿಗೆ ಕಾರಣರಾದವರೆಲ್ಲರಿಗೆ ಆದಷ್ಟು ಶೀಘ್ರ ಶಿಕ್ಷೆ ವಿಧಿಸಬೇಕೆಂಬ ಭಾರತದ ಬೇಡಿಕೆಯನ್ನು ಕೂಡ ಅವರು ಮುಂದಿಡುವ ಸಂಭವ ಇದೆ.

ಕಾಬೂಲ್‌ನಲ್ಲಿ ಭಾರತದ ರಾಜತಾಂತ್ರಿಕ ಕಚೇರಿ ಮೇಲೆ ನಡೆದ ದಾಳಿ ಮತ್ತು ಮುಂಬೈ ದಾಳಿ ಬಗ್ಗೆ ಪ್ರಸ್ತಾಪಿಸಿದ ವಿಚಾರಸಂಕಿರಣದಲ್ಲಿ ಪ್ರಸ್ತಾಪಿಸಿದ ನಿರುಪಮಾ ಅವರು, ಭಾರತವನ್ನು ಗುರಿಯಾಗಿರಿಸಿಕೊಂಡ ಉಗ್ರರ ಕೆಲವು ಸಂಘಟನೆಗಳಿಗೆ ಕೆಲ ರಾಷ್ಟ್ರಗಳ ಪೋಷಣೆಯೂ ದೊರಕಿದೆ ಎಂದಿದ್ದಾರೆ.

‘ಈ ಸಂಘಟನೆಗಳು ನೇಮಕಾತಿ, ತರಬೇತಿ, ಯೋಜನೆ ಮತ್ತು ನಿರ್ದಿಷ್ಟ ದಾಳಿಗೆ ಹಣಕಾಸು ಒದಗಿಸುವ ಮೂಲಕ ದೇಶ- ದೇಶಗಳ ನಡುವೆ ಸಂಪರ್ಕ ಸಾಧಿಸುತ್ತಿವೆ. ಅಲ್‌ಖೈದಾ, ಎಲ್‌ಇಟಿ ಮತ್ತು ತಾಲಿಬಾನ್ ಸಂಘಟನೆಗಳು ಪರಸ್ಪರ ಸಮನ್ವಯದ ಮತ್ತು ಸಂಯೋಜಿತ ಭಯೋತ್ಪಾದನಾ ದಾಳಿ ನಡೆಸುತ್ತಿವೆ ಎನ್ನಲು  ಸಾಕ್ಷ್ಯಗಳು ಸಾಕಷ್ಟಿವೆ’ ಎಂದು ನುಡಿದಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದನಾ ಮೂಲಸೌಕರ್ಯಗಳನ್ನು ನಿರ್ಮೂಲನಗೊಳಿಸಿದರೆ ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ಏಷ್ಯಾದುದ್ದಕ್ಕೂ ಮತ್ತು ಖಚಿತವಾಗಿ ವಿಶ್ವದಲ್ಲಿ ದೀರ್ಘಕಾಲದವರೆಗೆ ಸ್ಥಿರತೆ ಮತ್ತು ಭದ್ರತೆ ಸಾಧಿಸಲು ಸಾಧ್ಯ ಎಂದೂ ಹೇಳಿದ್ದಾರೆ.

ಆಫ್ಘಾನಿಸ್ತಾನದ ಆಂತರಿಕ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸುತ್ತಿರುವ ಬಗ್ಗೆಯೂ ಪಾಕಿಸ್ತಾನವನ್ನು ಹೆಸರಿಸದೆ ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.