ಶನಿವಾರ, ಅಕ್ಟೋಬರ್ 19, 2019
29 °C

ಪಾಕ್‌ಗೆ ಅಮೆರಿಕದ ಸೇನಾ ನೆರವು ಕಡಿತ; ಇರಾನ್‌ಗೆ ನಿರ್ಬಂಧ

Published:
Updated:

ಲಾಸ್ ಏಂಜಲೀಸ್ (ಐಎಎನ್‌ಎಸ್): ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ 1.1 ದಶಕೋಟಿ ಡಾಲರ್ ಆರ್ಥಿಕ ನೆರವನ್ನು ಕಡಿತಗೊಳಿಸುವ ಮತ್ತು ಇರಾನ್ ಜತೆಗಿನ ವ್ಯಾಪಾರ, ವಹಿವಾಟುಗಳ ಮೇಲೆ ನಿರ್ಬಂಧ ಹೇರುವ ಮಹತ್ವದ ರಕ್ಷಣಾ ಅನುದಾನ ತಿದ್ದುಪಡಿ ಮಸೂದೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಂಕಿತ ಹಾಕಿದ್ದಾರೆ.ಭಯೋತ್ಪಾದನೆ ವಿರುದ್ಧದ ಹೋರಾಟದ ಮುಂದುವರಿದ ಭಾಗವಾಗಿ ಮತ್ತು ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಅಮೆರಿಕ ಈ ಮಹತ್ವದ ನಿರ್ಣಯ ಕೈಗೊಂಡಿದೆ. ನ್ಯಾಟೊ ದಾಳಿಯ ನಂತರ ಬಿಗಡಾಯಿಸಿದ್ದ ಪಾಕಿಸ್ತಾನದ ಜತೆಗಿನ ಬಾಂಧವ್ಯ ಈ ಬೆಳವಣಿಗೆಯಿಂದಾಗಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.ಕಳೆದ ವಾರ ಕಾಂಗ್ರೆಸ್ ಅಂಗೀಕಾರ ಪಡೆದಿದ್ದ ರಕ್ಷಣಾ ಅನುದಾನ ತಿದ್ದುಪಡಿ ಮಸೂದೆಗೆ, ಹವಾಯಿ ದ್ವೀಪದಲ್ಲಿ ಕ್ರಿಸ್ಮಸ್ ರಜೆ ಕಳೆಯುತ್ತಿರುವ  ಒಬಾಮ ಶನಿವಾರ ಸಹಿ ಹಾಕಿದ್ದಾರೆ.662 ದಶಕೋಟಿ ಡಾಲರ್ ಬೃಹತ್ ಮೊತ್ತದ ರಕ್ಷಣಾ ಅನುದಾನದಲ್ಲಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಪ್ರಸಕ್ತ ವರ್ಷದ 1.1 ದಶಕೋಟಿ ಡಾಲರ್ ಸೇನಾ ನೆರವನ್ನು ಕಡಿತಗೊಳಿಸಲಿದೆ. ಸಂಸ್ಥೆಗಳ ಮೇಲೆ ನಿಷೇಧ: ಇರಾನ್‌ನ ಸೆಂಟ್ರಲ್ ಬ್ಯಾಂಕ್ ಜತೆ ವ್ಯವಹರಿಸದಂತೆ ಹಣಕಾಸು ಸಂಸ್ಥೆಗಳ ಮೇಲೆ ನಿಷೇಧ ವಿಧಿಸುವ ಅಧಿಕಾರವನ್ನು ಮಸೂದೆ ಒಳಗೊಂಡಿದೆ. ಈ ಬ್ಯಾಂಕ್ ಜತೆ ವ್ಯವಹರಿಸುವ ಯಾವುದೇ ಹಣಕಾಸು ಸಂಸ್ಥೆ ಅಮೆರಿಕದಲ್ಲಿ ವಹಿವಾಟು ನಡೆಸುವುದನ್ನು ಮತ್ತು ಶಾಖೆ ತೆರೆಯುವುದನ್ನು ನಿಷೇಧಿಸಲಾಗಿದೆ.ಇರಾನ್ ಜತೆ  ತೈಲ ಮಾರಾಟ ಅಥವಾ ಖರೀದಿ ನಡೆಸುವ ವಿದೇಶಿ ಸೆಂಟ್ರಲ್ ಬ್ಯಾಂಕುಗಳಿಗೆ ಮಾತ್ರ ಈ ನಿಷೇಧ ಅನ್ವಯಿಸುತ್ತದೆ. ವಿಶ್ವದ ತೈಲ  ಮಾರುಕಟ್ಟೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗದಂತೆ ಇರಾನ್ ವಿರುದ್ಧದ ನಿರ್ಬಂಧವನ್ನು ಜಾರಿಗೊಳಿಸಲು ತನ್ನ ಮಿತ್ರ ರಾಷ್ಟ್ರಗಳೊಂದಿಗೆ ವಾಷಿಂಗ್ಟನ್ ಮಾತುಕತೆ ನಡೆಸಿದೆ.ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಈ ನಿರ್ಧಾರದಿಂದ ಹಿನ್ನಡೆಯಾಗುವುದಾಗಿ ಹೇಳಿ ಮಸೂದೆಯನ್ನು ವಿರೋಧಿಸಿದ್ದ ಒಬಾಮ, ಈ ಮೊದಲು ವೀಟೊ ಅಧಿಕಾರ ಬಳಸಿ ಮಸೂದೆ ಜಾರಿಯನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದ್ದರು.

 

ಆದರೆ, ನಂತರ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ತಮ್ಮ ನಿರ್ಧಾರ ಬದಲಿಸಿದ್ದರು. ರಾಷ್ಟ್ರದ ಏಕತೆ ಮತ್ತು ಭದ್ರತೆ ದೃಷ್ಟಿಯಿಂದ ಮಸೂದೆಗೆ ಅಂಕಿತ ಹಾಕಿರುವುದಾಗಿ ಅವರು ಹೇಳಿದ್ದಾರೆ.

Post Comments (+)