ಪಾಕ್‌ನಲ್ಲಿ ಪ್ರಬಲ ಭೂಕಂಪನ: 80 ಬಲಿ

7

ಪಾಕ್‌ನಲ್ಲಿ ಪ್ರಬಲ ಭೂಕಂಪನ: 80 ಬಲಿ

Published:
Updated:

ಕರಾಚಿ (ಪಿಟಿಐ): ಪಾಕಿಸ್ತಾನದ ನೈರುತ್ಯ ಭಾಗದಲ್ಲಿ ಮಂಗಳವಾರ 7.7ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಕನಿಷ್ಠ 80 ಜನರು ಮೃತಪಟ್ಟಿದ್ದಾರೆ. 80ಕ್ಕೂ ಅಧಿಕ ಜನರು ಗಾಯ­ಗೊಂಡಿದ್ದಾರೆ.‘ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್‌ ಜಿಲ್ಲೆಯ ಅವರನ್‌ ಪ್ರದೇಶದಲ್ಲಿ 45 ಜನರು ಅಸುನೀಗಿದ್ದಾರೆ. ಹಲವು ಮನೆ­ಗಳು, ಅಂಗಡಿಗಳು ಧ್ವಂಸಗೊಂಡಿವೆ’ ಎಂದು ಭೂಕಂಪನ ಪುನರ್‌ ನಿರ್ಮಾಣ ಮತ್ತು ಪುನರ್‌ವಸತಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದುವರೆಗೆ ಆರು ಶವಗಳು ಪತ್ತೆಯಾಗಿವೆ. ಕುಸಿದಿರುವ ಮನೆಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಕ್ಕಿ ಹಾಕಿಕೊಂಡಿದ್ದಾರೆ. ಸಾವಿನ ಸಂಖ್ಯೆ­ಹೆಚ್ಚಾಗುವ ಸಾಧ್ಯತೆ ಇದೆ. ಅವರನ್‌ ಹಾಗೂ ಬಲೂಚಿ­ಸ್ತಾನದ ಕೆಲವು ಭಾಗ­ಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸ­ಲಾಗಿದೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಗಳು ಹೇಳಿದ್ದಾರೆ.ಪರಿಹಾರ ಮತ್ತು ರಕ್ಷಣಾ ಕಾರ್ಯ­ಗಳಿಗಾಗಿ 300 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅತಿ ಹೆಚ್ಚು ಹಾನಿ ಸಂಭವಿಸಿದ ಪ್ರದೇಶಗಳಲ್ಲಿ ಹೆಲಿಕಾಪ್ಟರ್‌ನ್ನೂ ನಿಯೋಜಿಸ­ಲಾಗಿದೆ.ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.7ರಷ್ಟು ದಾಖಲಾಗಿತ್ತು ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್‌ಜಿಎಸ್‌) ಮತ್ತು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿವೆ.ಪ್ರಬಲ ಭೂಕಂಪನ ಸಂಭವಿಸಿದ ನಂತರವೂ 4.7 ಮತ್ತು 5.9 ತೀವ್ರತೆಯಲ್ಲಿ ಭೂಮಿ ಕಂಪಿಸಿತು ಎಂದು ಯುಎಸ್‌ಜಿಎಸ್‌ ಹೇಳಿದೆ.

ಸ್ಥಳೀಯ ಕಾಲಮಾನ ಸಂಜೆ 4.29ಕ್ಕೆ  ಭೂಕಂಪನ ಸಂಭವಿಸಿದೆ. ಒಂದು ನಿಮಿಷದ ಕಾಲ ಭೂಮಿ ಜೋರಾಗಿ ಅದುರಿತು. ಕಂಪನದ ಕೇಂದ್ರಬಿಂದು ಅವರನ್‌ ಎಂಬಲ್ಲಿಂದ 69 ಕಿ.ಮೀ ದೂರದಲ್ಲಿ, 23 ಕಿ.ಮೀ ಆಳದಲ್ಲಿ ಇತ್ತು.ಕರಾಚಿ, ಹೈದರಾಬಾದ್‌, ಲರ್ಕಾನಾ ಮತ್ತು ಸಿಂಧ್‌ ಪ್ರಾಂತ್ಯದ ಹಲವು ನಗರ ಮತ್ತು ಪಟ್ಟಣಗಳಲ್ಲಿ ಭೂಕಂಪನದ ಅನುಭವವಾಗಿದೆ.

ಬಲೂಚಿಸ್ತಾನದಿಂದ ಸಾಕಷ್ಟು ದೂರ­ದಲ್ಲಿರುವ ಲಾಹೋರ್‌, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ ನಗರ­ಗಳಲ್ಲೂ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.ನೆರವಿಗೆ ಷರೀಫ್‌ ಸೂಚನೆ: ನ್ಯೂಯಾರ್ಕ್‌ನಲ್ಲಿರುವ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ಭೂಕಂಪನ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ನೀಡುವಂತೆ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸೇನೆಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry