ಭಾನುವಾರ, ಜೂನ್ 20, 2021
23 °C

ಪಾಕ್ ಎದುರಾಳಿ ಬಾಂಗ್ಲಾದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಬಾಂಗ್ಲಾದೇಶ): ಭಾನುವಾರದಿಂದ ಹೊಸದೊಂದು ಕ್ರಿಕೆಟ್ ಸಮರ. ಇದರಲ್ಲಿ ನಾಲ್ಕು ತಂಡಗಳ ಹೋರಾಟ. ಕಳೆದ ಬಾರಿಯ ಚಾಂಪಿಯನ್ ಭಾರತಕ್ಕೆ ಈ ಸಾರಿ ನೆಚ್ಚಿನ ತಂಡದ ಸ್ಥಾನವಿಲ್ಲ. ಕಾರಣ ಶ್ರೀಲಂಕಾ ಬಲಾಢ್ಯವಾಗಿ ಬೆಳೆದಿದೆ. ಪಾಕಿಸ್ತಾನ ಕೂಡ ಎದುರಾಳಿಗಳಿಗೆ ಕಷ್ಟ ತರುವ ತಂಡ. ಆತಿಥೇಯ ಬಾಂಗ್ಲಾದೇಶದವರೂ ಸುಲಭವಾಗಿ ತಲೆಬಾಗುವುದಿಲ್ಲ ಎನ್ನುವ ಮಟ್ಟದಲ್ಲಿ ಸಜ್ಜಾಗಿದ್ದಾರೆ.ಆದ್ದರಿಂದ ಹನ್ನೊಂದನೇ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರೋಚಕ ಅನುಭವ ನೀಡುವುದೆನ್ನುವ ನಿರೀಕ್ಷೆ. ಆದರೆ ಅತಿಯಾದ ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ಜನರ ಆಸಕ್ತಿ ಕೆರಳಿಸುವುದು ಸ್ವಲ್ಪ ಕಷ್ಟ. ವಿಶ್ವಕಪ್ ನಂತರ ಏಷ್ಯಾದ ಪ್ರಮುಖ ತಂಡಗಳು ಎದುರಾಗುತ್ತಿರುವ ಟೂರ್ನಿ ಎನ್ನುವ ಕಾರಣಕ್ಕಾಗಿ ಇದಕ್ಕೆ ಮಹತ್ವವಂತೂ ಇದೆ. ಏಷ್ಯಾದ ಕ್ರಿಕೆಟ್ ಶಕ್ತಿಗಳನ್ನು ತೂಗಿ ನೋಡುವುದಕ್ಕೆ ಇದೊಂದು ಮಹತ್ವದ ವೇದಿಕೆ.ಗೆಲುವಿನೊಂದಿಗೆ ಶುಭಾರಂಭ ಮಾಡುವ ಕನಸು ಕಂಡಿರುವ ಪಾಕಿಸ್ತಾನದವರು ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದ್ದಾರೆ. ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕ್ ಸುಲಭವಾಗಿ ಯಶಸ್ಸಿನ ಹೆಜ್ಜೆ ಇಡುತ್ತದೆಂದು ನಿರೀಕ್ಷೆ ಮಾಡುವುದಂತೂ ಕಷ್ಟ. ಏಕೆಂದರೆ ಸ್ವಂತ ನೆಲದಲ್ಲಿ ಸವಾಲಾಗುವ ಛಲವನ್ನು ಹೊಂದಿರುವ ತಂಡವಾಗಿದೆ ಬಾಂಗ್ಲಾ. ಆದ್ದರಿಂದ ಮೊದಲ ಪಂದ್ಯದಿಂದಲೇ ರೋಚಕ ಕ್ಷಣಗಳು ಸಾಲುಗಟ್ಟಿದರೆ ಅಚ್ಚರಿಯಿಲ್ಲ.ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಮಂಗಳವಾರ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ಎದುರು ಆಡಲಿದೆ. ತ್ರಿಕೋನ ಸರಣಿಯಲ್ಲಿ ಭಾರತವನ್ನು ಫೈನಲ್ ತಲುಪದಂತೆ ತಡೆದ ಲಂಕಾ ಈ ಟೂರ್ನಿಯಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ. ಆದರೆ ಭಾರತಕ್ಕೆ ಹಿಂದಿನೆಲ್ಲ ನಿರಾಸೆ ಮರೆಯುವಂಥ ಆಟವಾಡಿ ಮತ್ತೆ ಚಾಂಪಿಯನ್ ಪಟ್ಟ ಗಿಟ್ಟಿಸುವ ಮಹತ್ವಾಕಾಂಕ್ಷೆ. ಲೀಗ್ ಹಂತದಲ್ಲಿ `ಮಹಿ~ ಪಡೆಯು ಪಾಕ್ ವಿರುದ್ಧ ಆಡುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಆಸಕ್ತಿಯಿಂದ ಕಾಯ್ದಿದ್ದಾರೆ. ಆದ್ದರಿಂದ ಮಾರ್ಚ್ 18ರಂದು ನಡೆಯುವ ಪಂದ್ಯಕ್ಕೆ ಸಿಗುವ ಮಹತ್ವ ಹೆಚ್ಚು.ಏಷ್ಯಾಕಪ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿರುವ ಭಾರತವು ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಹೋಗುವ ಆಶಯ ಹೊಂದಿದೆ. 1984, 1988, 1991, 1995 ಹಾಗೂ 2010ರಲ್ಲಿ ಭಾರತದವರು ಚಾಂಪಿಯನ್ ಪಟ್ಟ ಏರಿದ್ದರು. ಅತಿ ಹೆಚ್ಚು ಬಾರಿ ಈ ಪ್ರಶಸ್ತಿ ಗೆದ್ದ ತಂಡ ಎನ್ನುವ ಗೌರವವನ್ನೂ ಪಡೆದಿದೆ. ಶ್ರೀಲಂಕಾ 1986, 1997, 2004 ಹಾಗೂ 2008ರಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಪಾಕ್ ಒಮ್ಮೆ (2000) ಮಾತ್ರ ಈ ಶ್ರೇಯ ಪಡೆದುಕೊಂಡಿದೆ. ಬಾಂಗ್ಲಾದೇಶದವರು ಒಮ್ಮೆಯೂ ಫೈನಲ್ ತಲುಪಲು ಕೂಡ ಸಾಧ್ಯವಾಗಿಲ್ಲ.ಈ ಹಿಂದೆ ಏಷ್ಯಾಕಪ್‌ನಲ್ಲಿ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿದ್ದು ಇತಿಹಾಸ. ಆದರೆ ಈಗ ಸ್ಥಿತಿ ಹಾಗಿಲ್ಲ. ಬಾಂಗ್ಲಾದೇಶವೂ ಉತ್ತಮ ಆಟವಾಡುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಪ್ರಭಾವಿ ಎನಿಸಿರುವ ಕ್ರಿಕೆಟಿಗರಿಂದ ಬಲ ಪಡೆದುಕೊಂಡಿದೆ. ಆದ್ದರಿಂದ ಈ ಬಾರಿ ನಾಲ್ಕು ಬಲವುಳ್ಳ ತಂಡಗಳ ಪೈಪೋಟಿಯ ಕಣವಾಗಿ ಕಾಣಿಸಿದೆ ಏಷ್ಯಕಪ್ ಟೂರ್ನಿ. ಮೊದಲ ಪಂದ್ಯದಲ್ಲಿ ಪ್ರಬಲ ಪಾಕ್‌ಗೆ ಸವಾಲಾಗಿ ನಿಲ್ಲುವುದು ಮುಷ್ಫೀಕುರ್ ರಹೀಮ್ ನಾಯಕತ್ವದ ಬಾಂಗ್ಲಾ ಉದ್ದೇಶ.ತಂಡಗಳು: ಬಾಂಗ್ಲಾದೇಶ: ಮುಷ್ಫೀಕುರ್ ರಹೀಮ್ (ನಾಯಕ, ವಿಕೆಟ್ ಕೀಪರ್), ಅಬ್ದುರ್ ರಜಾಕ್, ಅನಾಮುಲ್ ಹಕ್, ಎಲಿಸ್ ಸನ್ನಿ, ಇಮ್ರುಲ್ ಕಯೆಸ್, ಜಹುರುಲ್ ಇಸ್ಲಾಮ್, ಮಹ್ಮುದುಲ್ಲಾ, ಮರ್ಷಫೆ ಮೊರ್ತಜಾ, ನಾಸೀರ್ ಹುಸೇನ್, ನಜೀಮುದ್ದೀನ್, ನಜ್ಮುಲ್ ಹುಸೇನ್, ಶಫಿ ಉಲ್ ಇಸ್ಲಾಮ್, ಶಹಾದತ್ ಹುಸೇನ್, ಶಕೀಬ್ ಅಲ್ ಹಸನ್ ಮತ್ತು ತಮೀಮ್ ಇಕ್ಬಾಲ್.ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಅಬ್ದುರ್ ರೆಹಮಾನ್, ಐಜಾಜ್ ಚೀಮಾ, ಅಸದ್ ಶಫೀಕ್, ಅಜರ್ ಅಲಿ, ಹಮ್ಮಾದ್ ಅಜಾಮ್, ಮೊಹಮ್ಮದ್ ಹಫೀಜ್, ನಾಸೀರ್ ಜಮ್‌ಶೇದ್, ಸಯೀದ್ ಅಜ್ಮಲ್, ಸರ್ಫರಾಜ್ ಅಹ್ಮದ್, ಶಾಹೀದ್ ಅಫ್ರಿದಿ, ಉಮರ್ ಅಕ್ಮಲ್, ಉಮರ್ ಗುಲ್, ವಹಾಬ್ ರಿಯಾಜ್ ಮತ್ತು ಯೂನಿಸ್ ಖಾನ್.

ಪಂದ್ಯ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 1.30ಕ್ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.