ಪಾಕ್ ಜತೆ ಮತ್ತೆ ಕ್ರಿಕೆಟ್

ಶುಕ್ರವಾರ, ಜೂಲೈ 19, 2019
26 °C

ಪಾಕ್ ಜತೆ ಮತ್ತೆ ಕ್ರಿಕೆಟ್

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಡಿಸೆಂಬರ್ ಮತ್ತು ಜನವರಿಯಲ್ಲಿ ಕ್ರಿಕೆಟ್ ಸರಣಿ ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೊನೆಗೂ ಒಪ್ಪಿಗೆ ನೀಡಿದೆ.

 `ಬಿಸಿಸಿಐ~ನ ಈ ಅಚ್ಚರಿಯ ನಿರ್ಧಾರವನ್ನು  ಮಾಜಿ ನಾಯಕ ಗಾವಸ್ಕರ್ ಟೀಕಿಸಿದ್ದರೆ, ಪಾಕ್‌ನ ಮಾಜಿ ಕ್ರಿಕೆಟಿಗರು ಸ್ವಾಗತಿಸಿದ್ದಾರೆ.

ಮುಂಬೈನಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಭಾರತ ಹಾಗೂ ಪಾಕ್ ನಡುವೆ ಯಾವುದೇ ಸರಣಿ ನಡೆದಿರಲಿಲ್ಲ. 2007ರಲ್ಲಿ ಉಭಯ ತಂಡಗಳ ನಡುವೆ ನಡೆದ ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯೇ ಅಂತಿಮವಾಗಿತ್ತು. 2009ರಲ್ಲಿ ಸರಣಿ ನಡೆಸಲು ಯೋಜನೆ ರೂಪಿತವಾಗಿತ್ತು. ಆದರೆ, 2008ರಲ್ಲಿ ದಾಳಿ ನಡೆದ ಕಾರಣ ಬಿಸಿಸಿಐ  ಆ ಸರಣಿ ಯೋಜನೆಯನ್ನೇ ಕೈ ಬಿಟ್ಟಿತ್ತು. ಈಗ ಪಾಕ್‌ಗೆ ಆಹ್ವಾನ ನೀಡುವ ಮೂಲಕ ಬಿಸಿಸಿಐ ಐದು ವರ್ಷಗಳ ಬಳಿಕ ಅನಿರೀಕ್ಷಿತ ನಿರ್ಧಾರ ಪ್ರಕಟಿಸಿದೆ.

ಗಾವಸ್ಕರ್ ವಿರೋಧ: ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು ಬಿಸಿಸಿಐ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

`ಮುಂಬೈ ದಾಳಿಗೆ ಸಂಬಂಧಿಸಿದಂತೆ ಉಗ್ರರನ್ನು ಬಂಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪಾಕಿಸ್ತಾನ ಸಮರ್ಪಕ ಸಹಕಾರ ನೀಡುತ್ತಿಲ್ಲ. ಆದ್ದರಿಂದ ನಾವು ಅವರೊಡನೆ ಕ್ರಿಕೆಟ್ ಬಾಂಧವ್ಯ ಆರಂಭಿಸುವುದು ಸದ್ಯಕ್ಕಂತೂ ಸರಿಯಲ್ಲ~ ಎಂದೂ ಅವರು ನುಡಿದಿದ್ದಾರೆ.

`ಇತ್ತೀಚಿನ ವರ್ಷಗಳಲ್ಲಿ ಭಾರತ ಬಿಡುವಿಲ್ಲದೇ ಕ್ರಿಕೆಟ್ ಟೂರ್ನಿಗಳನ್ನಾಡುತ್ತಿದೆ. ಮಂಡಳಿಯ ಈ ತೀರ್ಮಾನದಿಂದ ಕ್ರಿಕೆಟಿಗರು ಮತ್ತೆ ಒತ್ತಡಕ್ಕೆ ಒಳಗಾಗುತ್ತಾರೆ. ಇದೇ ವೇಳೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸರಣಿ ನಡೆಯಲಿದೆ. ಆಟಗಾರರಿಗೆ ಮೊದಲೇ ಗಾಯದ ಸಮಸ್ಯೆ ಕಾಡುತ್ತಿದೆ. ಇಷ್ಟೊಂದು ಆತುರದ ನಿರ್ಧಾರ ಅಗತ್ಯವಿರಲಿಲ್ಲ~ ಎಂದೂ ತಿಳಿಸಿದ್ದಾರೆ.

ಸರ್ಕಾರದ ಸಮ್ಮತಿ: `ಕ್ರಿಕೆಟ್ ಸರಣಿಯನ್ನಾಡಲು ಭಾರತಕ್ಕೆ ಬರುವಂತೆ ಪಾಕ್‌ಗೆ ಆಹ್ವಾನ ನೀಡಿದ್ದೇವೆ. ಇದಕ್ಕೆ ಸರ್ಕಾರದ ಒಪ್ಪಿಗೆಯನ್ನೂ ಪಡೆದಿದ್ದೇವೆ. ನವದೆಹಲಿ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಏಕದಿನ ಪಂದ್ಯಗಳು ನಡೆಯಲಿದ್ದು, ಎರಡು ಟ್ವೆಂಟಿ-20 ಪಂದ್ಯಗಳು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ~ ಎಂದು ಸೋಮವಾರ ನಡೆದ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಬಿಸಿಸಿಐ ವಕ್ತಾರ ರಾಜೀವ್ ಶುಕ್ಲಾ ಮಾಧ್ಯಮದವರಿಗೆ ತಿಳಿಸಿದರು.

ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಗೆ ಪಾಕ್ ತಂಡಕ್ಕೆ ಆಹ್ವಾನ ನೀಡಲಾಗಿದೆ. ಕಳೆದ ವರ್ಷದ ಚಾಂಪಿಯನ್ಸ್ ಲೀಗ್‌ನಲ್ಲಿ ಪಾಕ್‌ಗೆ ಆಹ್ವಾನ ನೀಡಿರಲಿಲ್ಲ. ಮಲೇಷ್ಯಾದಲ್ಲಿ ಇತ್ತೀಚಿಗೆ ನಡೆದ ಅಂತರ   ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗಳ ಸಭೆಯಲ್ಲಿ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ (ಪಿಸಿಬಿ) ಅಧಿಕಾರಿಗಳು ಸರಣಿ ಆಯೋಜಿಸುವ ಕುರಿತು ಚರ್ಚೆ ನಡೆಸಿದ್ದರು. ಅಷ್ಟೇ ಅಲ್ಲ, ಪಿಸಿಬಿ ಮುಖ್ಯಸ್ಥ ಝಕಾ  ಅಶ್ರಫ್ ಕೂಡಾ ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದರು.

ಹತ್ತನೇ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಪಾಕ್ ಪ್ರಧಾನಿ ಎರಡೂ ದೇಶಗಳ ನಡುವೆ ಕ್ರಿಕೆಟ್ ಸರಣಿ ಆಯೋಜಿಸುವ ಬಗ್ಗೆ ಪ್ರಸ್ತಾವವನ್ನು ಮುಂದಿಟ್ಟಿದ್ದರು.  2009ರಲ್ಲಿ ಶ್ರೀಲಂಕಾದ ಆಟಗಾರರು ಪಾಕ್ ಪ್ರವಾಸ ಕೈಗೊಂಡ ವೇಳೆ ಲಾಹೋರ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. ಈ ಘಟನೆ ನಡೆದ ನಂತರ ಪಾಕಿಸ್ತಾನದಲ್ಲೂ ಯಾವ ಅಂತರರಾಷ್ಟ್ರೀಯ ಸರಣಿ ನಡೆದಿಲ್ಲ. ಆದ್ದರಿಂದ ಪಿಸಿಬಿ ಪದೇ ಪದೇ ಬಿಸಿಸಿಐ ಮೇಲೆ ಒತ್ತಡ ಹೇರುತ್ತಲೇ ಬಂದಿದೆ. ಭಾರತ ತಂಡವನ್ನು ಪಾಕ್ ಪ್ರವಾಸಕ್ಕೆ ಕಳುಹಿಸುವಂತೆಯೂ ಕೋರಿಕೊಂಡಿತ್ತು. ಆದರೆ, ಭದ್ರತೆಯ ಕಾರಣದಿಂದ ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಆಗದು ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿತ್ತು. ಆದರೆ, ಈಗ ಪಾಕ್‌ಗೆ ಆಹ್ವಾನ ನೀಡುವ ಮೂಲಕ ಬಿಸಿಸಿಐ ಅಚ್ಚರಿ ನಿರ್ಧಾರ ಪ್ರಕಟಿಸಿದೆ.

ಸಂತಸ: `ಭಾರತದ ನಿರ್ಧಾರದಿಂದ ಸಂತಸವಾಗಿದೆ. ಎರಡೂ ದೇಶಗಳ ನಡುವಣ ಸಂಬಂಧ ಗಟ್ಟಿಯಾಗಲು ಇದು ನೆರವಾಗಲಿದೆ. ಪ್ರತಿ ವರ್ಷ ಎರಡೂ ತಂಡಗಳು ಕ್ರಿಕೆಟ್ ಸರಣಿ ಆಡಬೇಕು~ ಎಂದು ಪಾಕ್‌ನ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ತಿಳಿಸಿದ್ದಾರೆ.

`ಇದರಿಂದ ಪಾಕಿಸ್ತಾನದ ಜನರಿಗೆ ಖುಷಿಯಾಗಿದೆ. ಕ್ರಿಕೆಟ್‌ನಲ್ಲಿ ಬಲಿಷ್ಠ ರಾಷ್ಟ್ರವಾದ ಭಾರತದ ಜೊತೆ ಸರಣಿ ಆಡುವುದರಿಂದ ನಮ್ಮ ದೇಶದ ಕ್ರಿಕೆಟ್‌ಗೆ ಇನ್ನಷ್ಟು ಬಲ ಬರಲಿದೆ~ ಎಂದೂ ನುಡಿದಿದ್ದಾರೆ. ಈ ಸರಣಿಯ ಬಗ್ಗೆ ಏನೇ ಇರಲಿ, ಬಿಸಿಸಿಐನ ಈ ನಿರ್ಧಾರವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳೋಣ~ ಎಂದು ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ತಿಳಿಸಿದ್ದಾರೆ.

`ಚಾಂಪಿಯನ್ಸ್ ಲೀಗ್ ಟ್ರೋಫಿಗೆ ಪಾಕ್ ತಂಡಕ್ಕೆ ಆಹ್ವಾನ ನೀಡಿದ್ದ ವಿಷಯಕ್ಕೆ ನಾನು ಹೆಚ್ಚು ಆಸಕ್ತಿ ತೋರಲಿಲ್ಲ~ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಮಾಜಿ ನಾಯಕ ಕಪಿಲ್‌ದೇವ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ನಿರ್ಧಾರವನ್ನು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಸ್ವಾಗತಿಸಿದ್ದಾರೆ. `ಚಾಂಪಿಯನ್ಸ್ ಲೀಗ್‌ನಲ್ಲಿ ಪಾಕ್ ತಂಡಕ್ಕೆ ಅವಕಾಶ ನೀಡಿದ್ದು ಮೊದಲ ಹೆಜ್ಜೆ. ಏಕದಿನ ಸರಣಿಗೆ ಅಹ್ವಾನ ನೀಡಿದ್ದು ಮತ್ತೊಂದು ಉತ್ತಮ ಹೆಜ್ಜೆ~ ಎಂದು ಅಶ್ರಫ್ ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry