ಮಂಗಳವಾರ, ಏಪ್ರಿಲ್ 13, 2021
24 °C

ಪಾಕ್ ಪಂದ್ಯ ಸ್ಫೂರ್ತಿಯಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಬಂದ ಗೆಲುವು ಆಟಗಾರರಿಗೆ ಸ್ಫೂರ್ತಿಯಾಗಬೇಕು ಎಂದು ನ್ಯೂಜಿಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ಹೇಳಿದ್ದಾರೆ. ‘ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು ಕಾರಣ ಬ್ಯಾಟಿಂಗ್. ಅದು ನಮಗೆ ಸ್ಫೂರ್ತಿಯಾಗಬೇಕು. ನಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪ್ರತಿಭಾವಂತ ಆಟಗಾರರು. ಅವರು ಉತ್ತಮ ಪ್ರದರ್ಶನ ನೀಡಿದರೆ ಯಶಸ್ಸು ನಮ್ಮದೇ. ಹಾಗಾಗಿ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಜವಾಬ್ದಾರಿ ಇದೆ’ ಎಂದಿದ್ದಾರೆ.

 

‘ನಾವು ಅತ್ಯುತ್ತಮ ಫೀಲ್ಡರ್‌ಗಳನ್ನು ಹೊಂದಿದ್ದೇವೆ. ಹಾಗೇ ಬೌಲಿಂಗ್ ವಿಭಾಗ ಕೂಡ ಚೆನ್ನಾಗಿದೆ. ಹಾಗಾಗಿ ಬ್ಯಾಟಿಂಗ್‌ನಲ್ಲಿ ಯಶಸ್ಸು ಲಭಿಸಬೇಕು. ವಿಕೆಟ್ ಇದ್ದರೆ ರಾಸ್ ಟೇಲರ್ ಹಾಗೂ ಸ್ಕಾಟ್ ಸ್ಟೈರಿಸ್ ಕೊನೆಯ ಹತ್ತು ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಆಡಲು ಅನುಕೂಲವಾಗುತ್ತದೆ. ಆಗ ನಾವೆಷ್ಟು ಅಪಾಯಕಾರಿ ಎಂಬುದನ್ನು ತೋರಿಸಬಹುದು’ ಎಂದು ವೆಟೋರಿ ವಿವರಿಸಿದರು.

 

ಕಿವೀಸ್ ಪಡೆ ಇದುವರೆಗೆ ಐದು ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಒಮ್ಮೆಯೂ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಈ ಬಾರಿ ಗೆದ್ದರೆ ಅದೊಂದು ಖಂಡಿತ ಅಚ್ಚರಿ ಫಲಿತಾಂಶ. ಏಕೆಂದರೆ ಈ ತಂಡದ ಸದ್ಯದ ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ.

 

ಅಲೆನ್ ಡೊನಾಲ್ಡ್ ಅವರ ಉಪಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಡೇನಿಯಲ್, ‘ಖಂಡಿತ ಅವರ ಉಪಸ್ಥಿತಿ ತಂಡಕ್ಕೆ ತುಂಬಾ ನೆರವು ನೀಡಿದೆ. ತಂಡದಲ್ಲಿ ವಿಶ್ವಾಸ ತುಂಬಿದ್ದಾರೆ. ಅತ್ಯುತ್ತಮ ಯೋಜನೆಗಳು ಅವರ ಬಳಿ ಇವೆ. ಡೊನಾಲ್ಡ್ ನಮ್ಮ ತಂಡದ ಬೌಲಿಂಗ್ ಕೋಚ್ ಆದ ಮೇಲೆ ವೇಗಿ ಟಿಮ್ ಸೌಥಿ ಅವರ ಪ್ರದರ್ಶನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ’ ಎಂದರು.‘ನಾನು ಮಂಡಿ ನೋವಿನಿಂದ ಚೇತರಿಸಿಕೊಂಡಿದ್ದೇನೆ. ಬ್ರೆಂಡನ್ ಮೆಕ್ಲಮ್ ಕೂಡ ವಿಕೆಟ್ ಕೀಪಿಂಗ್ ಮಾಡಲು ಸಿದ್ಧರಾಗಿದ್ದಾರೆ. ಹಾಗಾಗಿ ಸದ್ಯ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದರು.ಈ ವಿಶ್ವಕಪ್ ಟೂರ್ನಿಯ ಬಳಿಕ ವೆಟೋರಿ ಏಕದಿನ ಹಾಗೂ ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸುವ ಸೂಚನೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.