ಮುಂಬೈ (ಪಿಟಿಐ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡುತ್ತಿರುವ ಮಾಹಿತಿಗಳಿಂದಾಗಿಯೇ ಅಮೆರಿಕವು ಪಾಕಿಸ್ತಾನ ಪರವಾಗಿ ಮಾತನಾಡುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇಲ್ಲಿ ಶನಿವಾರ ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನವು ಭಯೋತ್ಪಾದಕರಿಗೆ ಉತ್ತೇಜನ ನೀಡುತ್ತಿದೆ, ಅವರಿಗೆ ತರಬೇತಿ ನೀಡುತ್ತಿದೆ, ಅದುವೇ ಭಯೋತ್ಪಾದಕರ ಬಹು ದೊಡ್ಡ ರಫ್ತು ಕಾರ್ಖಾನೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಪಾಕಿಸ್ತಾನದ ಬಗ್ಗೆ ಯಾರು ಅಮೆರಿಕಕ್ಕೆ ಮಾಹಿತಿ ಕೊಡುತ್ತಿದ್ದಾರೆ ಎಂಬುದು ಇದೀಗ ಬಹಿರಂಗವಾದಂತಾಗಿದೆ ಎಂದು ಅವರು ಹೇಳಿದರು.
ಪಕ್ಷದ ಮತ್ತೊಬ್ಬ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಸಹ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದು, ಅವರ ಈ ಬೇಜವಾಬ್ದಾರಿಯ ಹೇಳಿಕೆಗಳಿಂದಲೇ ಭಯೋತ್ಪಾದನೆ ವಿಚಾರದಲ್ಲಿ ಭಾರತದ ಹೋರಾಟ ದುರ್ಬಲವಾಗುತ್ತಿದೆ ಮತ್ತು ಪಾಕಿಸ್ತಾನದ ವಾದಕ್ಕೆ ಬಲ ಬರುತ್ತಿದೆ ಎಂದರು. ಅಧಿಕಾರದಲ್ಲಿ ಉಳಿಯಲಿಕ್ಕಾಗಿ ಕಾಂಗ್ರೆಸ್ ಇಂದು ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧವಿದೆ ಎಂದ ಅವರು, ರಾಹುಲ್ ಮಾತ್ರವಲ್ಲ, ಪಕ್ಷದ ಮತ್ತೊಬ್ಬ ನಾಯಕ ದಿಗ್ವಿಜಯ್ ಸಿಂಗ್ ಅವರು ಸಹ ಇದೇ ಧಾಟಿಯಲ್ಲಿ ಮಾತನಾಡುತ್ತಿರುವುದು ನೋಡಿದರೆ ಪಕ್ಷದ ನಿಲುವೇ ಇದೆಂಬುದು ಗೊತ್ತಾಗುತ್ತದೆ ಎಂದರು.
ಉಮಾ ಟೀಕೆ: ಆದರೆ ವಿರೋಧ ಪಕ್ಷಗಳು ಮಾತ್ರ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಇಷ್ಟಕ್ಕೇ ಕೈಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಬಿಜೆಪಿ ನಾಯಕಿ ಉಮಾ ಭಾರತಿ ಅವರು ರಾಹುಲ್ ಗಾಂಧಿ ಅವರ ‘ಬೇಜವಾಬ್ದಾರಿ’ ಹೇಳಿಕೆಗಳನ್ನು ಉಗ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಪಕ್ಷವು ಭಯೋತ್ಪಾದನೆಯನ್ನು ‘ಹುಟ್ಟುಹಾಕುತ್ತಿದೆ’ ಮತ್ತು ಅದರ ಹೆಸರಲ್ಲಿ ಮತ ಯಾಚಿಸುತ್ತಿದೆ ಎಂದು ಆರೋಪಿದ್ದಾರೆ.
ಪ್ರತೀಕಾರದ ಎಚ್ಚರಿಕೆ: ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರು ರಾಹುಲ್ ಗಾಂಧಿ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ್ದು, ಅನಗತ್ಯವಾಗಿ ಹಿಂದೂಗಳನ್ನು ಕೆಣಕಿದರೆ ಅದಕ್ಕೆ ಹಿಂದೂಗಳು ತೀವ್ರ ಸ್ವರೂಪದಲ್ಲಿ ಪ್ರತೀಕಾರ ತೀರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.