ಶನಿವಾರ, ಮೇ 8, 2021
18 °C

ಪಾಕ್ ಬಿತ್ತಿದ ಭಯೋತ್ಪಾದನೆಯ ಬೀಜ

ಡಿ.ವಿ.ರಾಜಶೇಖರ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ಇದೀಗ ಎಲ್ಲಿಲ್ಲದ ಕಟ್ಟೆಚ್ಚರ. ಹಿಂದೆಂದೂ ಕಾಣದಂತಹ ಭದ್ರತೆ. ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರ ಮತ್ತು ವಾಷಿಂಗ್ಟನ್‌ನ್ಲ್ಲಲಿರುವ ರಕ್ಷಣಾ ಇಲಾಖೆ ಕಟ್ಟಡದ ಮೇಲೆ ಮುಸ್ಲಿಂ ಭಯೋತ್ಪಾದಕರು ದಾಳಿ (9/11/2001) ನಡೆಸಿ ಇಂದಿಗೆ ಹತ್ತು ವರ್ಷಗಳು. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಒಂದೂ ಭಯೋತ್ಪಾದರ ದಾಳಿ ನಡೆಯದಂತೆ ನೋಡಿಕೊಂಡ ಹೆಗ್ಗಳಿಕೆ ಅಮೆರಿಕದ ಭದ್ರತೆ ಮತ್ತು ಗುಪ್ತ ದಳಗಳದ್ದು. ಇದಕ್ಕಾಗಿ ಅಮೆರಿಕ ಅನುಸರಿಸಿದ ದಾರಿ ಯುದ್ಧ.ಸಾಧ್ಯವಾದ ಕಡೆ ಸಂಶಯಕ್ಕೆ ಕಾರಣವಾದವರನ್ನು ಕೊಲ್ಲುತ್ತ ಬಂದಿದೆ. ತನ್ನ ನೀತಿಗಳನ್ನು ಒಪ್ಪದ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದೆ. ಮಿಲಿಟರಿ ದಾಳಿಯ ಬೆದರಿಕೆ ಒಡ್ಡಿದೆ. ಪ್ರಜಾತಂತ್ರ ಮತ್ತು ನಾಗರಿಕ ನ್ಯಾಯ ವಿಧಾನವನ್ನು ಬಲಿಕೊಟ್ಟು ಭದ್ರತೆ ಸಾಧಿಸಿದೆ. ಆದರೆ 9/11ರ ದುರಂತಕ್ಕೆ ಕಾರಣವಾದ ಅಮೆರಿಕದ ಮಧ್ಯಪ್ರಾಚ್ಯ ನೀತಿ, ಪ್ಯಾಲೆಸ್ಟೇನ್ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಹಾಗೆ ನೋಡಿದರೆ 9/11 ನಂತರ ವಿಶ್ವ ಮತ್ತಷ್ಟು ಅಭದ್ರತೆಗೆ ಒಳಗಾಗಿದೆ.  ಭದ್ರತೆಯ ದೃಷ್ಟಿಯಿಂದ ಭಾರತ ಅಮೆರಿಕದಷ್ಟು ಸುರಕ್ಷಿತವಾಗಿಲ್ಲ. ಕಳೆದ ಬುಧವಾರ ಬೆಳಿಗ್ಗೆ ದೆಹಲಿ ಹೈಕೋರ್ಟ್ ಬಳಿ ಸಂಭವಿಸಿದ ಬಾಂಬ್ ಸ್ಫೋಟ 13 ಜನರನ್ನು ಬಲಿ ತೆಗೆದುಕೊಂಡಿದೆ. ಕೆಲ ತಿಂಗಳ ಹಿಂದೆ ಇಲ್ಲೇ  ಸ್ಫೋಟ ಸಂಭವಿಸಿತ್ತು. ಈ ಬೆಳವಣಿಗೆ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿದೆ. ಮುಂಬೈನಲ್ಲೂ ಭಯೋತ್ಪಾದಕರ ದಾಳಿಗಳು ನಡೆದಿವೆ. ಭದ್ರತೆಯ ವಿಚಾರದಲ್ಲಿ ಭಾರತ ತಲೆಎತ್ತಲು ಆಗದಂತೆ ಮುಸ್ಲಿಂ ಭಯೋತ್ಪಾದಕರ ದಾಳಿಗಳು ನಡೆಯುತ್ತಿವೆ. ಪ್ರತಿ ದಾಳಿ ನಡೆದಾಗ ಸರ್ಕಾರದ ಹೊಣೆ ಹೊತ್ತವರು ವೀರಾವೇಶದಿಂದ ಮಾತನಾಡುತ್ತಾರೆ. ಆದರೆ ನಂತರದ ದಿನಗಳಲ್ಲಿ ಎಲ್ಲವೂ ತಣ್ಣಗಾಗುತ್ತದೆ. ಮತ್ತೆ ಭಯೋತ್ಪಾದನೆ ನೆನಪಾಗುವುದು ಹೊಸ ಘಟನೆ ನಡೆದಾಗಲೇ ಎಂಬುದಕ್ಕೆ ದೆಹಲಿ ಹೈಕೋರ್ಟ್ ಬಳಿಯ ಬಾಂಬ್ ಸ್ಫೋಟವೇ ಉದಾಹರಣೆ. ಹಾಗೆ ನೋಡಿದರೆ 26/11ರ ಮುಂಬೈ ದಾಳಿ ನಂತರ ಪರಿಸ್ಥಿತಿ ಬದಲಾಗಬಹುದು ಎಂದು ಜನರು ನಿರೀಕ್ಷಿಸಿದ್ದರು. ಗೃಹ ಸಚಿವ ಚಿದಂಬರಂ ಗುಪ್ತಚರ ವಿಭಾಗ, ಭದ್ರತಾ ವಿಭಾಗ, ಭಯೋತ್ಪಾದನೆ ನಿಗ್ರಹ ದಳ ನಿರ್ವಹಣಾ ವ್ಯವಸ್ಥೆಯನ್ನು ಆಮೂಲಾಗ್ರ ಪರಿಶೀಲನೆಗೆ ಒಳಪಡಿಸಿದ್ದರು. ಆಂತರಿಕವಾಗಿ ಬದಲಾವಣೆಗಳು ಆಗಿರಬಹುದು. ಆದರೆ ಆ ಬದಲಾವಣೆಗಳು ನಿರೀಕ್ಷಿತ ಪರಿಣಾಮ ತಂದುಕೊಟ್ಟಿಲ್ಲ. `ಭಯೋತ್ಪಾದನೆ ನಿಗ್ರಹಕ್ಕೆ ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಆದರೂ ದುರದೃಷ್ಟವಶಾತ್ ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆದಿದೆ~ ಎಂದು ಚಿದಂಬರಂ ಅವರು ಹತಾಶೆಯಿಂದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಎಷ್ಟೋ ವರ್ಷಗಳಿಂದ ತೋರಿದ ನಿರ್ಲಕ್ಷ್ಯದಿಂದಾದ ವ್ಯವಸ್ಥೆಯನ್ನು ಸರಿಪಡಿಸಲು ಸಮಯಬೇಕಾಗಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತ ಮಾಡಿದ್ದಾರೆ. ನಿಜ, 120 ಕೋಟಿ ಜನರಿರುವ ಮತ್ತು ಅದರಲ್ಲಿ 14 ಕೋಟಿ ಮುಸ್ಲಿಮರಿರುವ ಈ ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆ ನಡೆಯದಂತೆ ಭದ್ರತೆ ವಾತಾವರಣ ಸೃಷ್ಟಿಸುವುದು ಸುಲಭದ ಕೆಲಸ ಅಲ್ಲ. ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ. `ಕೆಲವೇ ಕೆಲವು~ ಜನ ಬಿಟ್ಟರೆ ಉಳಿದ ಮುಸ್ಲಿಮರು ಭಾರತದ ಭಾಗವಾಗಿದ್ದಾರೆ. `ಆ ಕೆಲವು~ ಜನರು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ಹಿಡಿತದಲ್ಲಿದ್ದಾರೆ. ಭಾರತ ವಿರೋಧಿ ಭಾವನೆ ಬೆಳೆಸಿಕೊಂಡು ಆ ಸಂಘಟನೆಗಳು ಹೇಳಿದಂತೆ ದುಷ್ಕೃತ್ಯಗಳನ್ನು  ನಡೆಸುತ್ತ ಬಂದಿದ್ದಾರೆ. ಇವರನ್ನು ಪತ್ತೆ ಮಾಡುವುದು ಕಷ್ಟ. ಗೊತ್ತಿಲ್ಲದ ಶತ್ರುವನ್ನು ಹಿಡಿಯಲು ಅಪಾರ ಹಣ, ಸಿಬ್ಬಂದಿ, ತಂತ್ರಜ್ಞಾನ ಬೇಕಾಗುತ್ತದೆ. ಸಾರ್ವಜನಿಕರ ಬೆಂಬಲ ಬೇಕಾಗುತ್ತದೆ. 9/11 ನಂತರ ಭಯೋತ್ಪಾದನೆ ತಡೆಯಲು ಅಮೆರಿಕ ಸಾವಿರಾರು ಕೋಟಿ ಡಾಲರ್ ಹಣ ವೆಚ್ಚಮಾಡಿದೆ.  ಕಳೆದ ಮೂರು ದಶಕಗಳಲ್ಲಿ ಭಯೋತ್ಪಾದಕರ ದಾಳಿಗಳಿಗೆ ಭಾರತದಲ್ಲಿ ರಕ್ತದ ಕೋಡಿಯೇ ಹರಿದಿದೆ. ಹಲವು ದಶಕಗಳ ಕಾಲ ಜಮ್ಮು- ಕಾಶ್ಮೀರದಲ್ಲಿ ರಕ್ತದ ಓಕುಳಿಯಾಡಿದ ಭಯೋತ್ಪಾದಕರು ಇತ್ತೀಚಿನ ದಶಕಗಳಲ್ಲಿ ದೇಶದ ಇತರ ಪ್ರಮುಖ ನಗರಗಳಲ್ಲೂ ರಾಕ್ಷಸಿ ಕೃತ್ಯ ನಡೆಸುತ್ತಿದ್ದಾರೆ. ಭಾರತ ಮೊದಲಿನಿಂದ ಉಗ್ರವಾದದ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತ ಬಂದಿದೆ. ಉಗ್ರವಾದ ಕ್ರಮೇಣ ಭಯೋತ್ಪಾದನೆಗೆ ದಾರಿಮಾಡಿಕೊಟ್ಟಿದೆ. ಭಯೋತ್ಪಾದನೆಗೆ ಮೂಲ ಕಾರಣಗಳನ್ನು ಹುಡುಕಿ ಅವುಗಳನ್ನು ಪರಿಹರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವುದು ಭಾರತ ಅನುಸರಿಸಿದ ಮಾರ್ಗ. ಜಮ್ಮು ಕಾಶ್ಮೀರ ವಿಚಾರದಲ್ಲಿ ಅನುಸರಿಸಿದ ಈ ಧೋರಣೆ ಫಲ ಕೊಡಲಿಲ್ಲ. ಪಾಕಿಸ್ತಾನದ ಆಡಳಿತಗಾರರು ಭಾರತದ ಈ ಧೋರಣೆಯನ್ನು ದೌರ್ಬಲ್ಯವೆಂದು ಪರಿಗಣಿಸಿ ಭಯೋತ್ಪಾದಕರಿಗೆ ಕೊಡುತ್ತಿದ್ದ ನೆರವನ್ನು ಹೆಚ್ಚಿಸಿದರು. ಪಾಕಿಸ್ತಾನದ ಸೇನೆ ನೇರವಾಗಿ ಭಯೋತ್ಪಾದಕರಿಗೆ ತರಬೇತಿ ನೀಡಿ ಐಎಸ್‌ಐ ನೇತೃತ್ವದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸಲು ಮುಂದಾಯಿತು. ಜಮ್ಮು ಕಾಶ್ಮೀರವನ್ನು ಕಬಳಿಸುವುದು ಪಾಕಿಸ್ತಾನದ ಮುಖ್ಯ ಉದ್ದೇಶ. ಅದಕ್ಕಾಗಿ ಹಿಂದು ಮತ್ತು ಮುಸ್ಲಿಮರ ನಡುವೆ ಸದಾ ಕಹಿಭಾವನೆ ಇರುವಂತೆ ನೋಡಿಕೊಳ್ಳುವುದು ಮತ್ತು ಅಸ್ಥಿರತೆ ಸೃಷ್ಟಿಸುವುದು ಅದರ ಉದ್ದೇಶ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಗಟ್ಟಿಗೊಳ್ಳಲು ಪಾಕಿಸ್ತಾನವೇ  ಕಾರಣ. ಕಾಶ್ಮೀರ ಸಮಸ್ಯೆ ಭಾರತದ ವಿಭಜನೆಯ ಜೊತೆಗೇ ಹುಟ್ಟಿಕೊಂಡಿತು. ಹೀಗಾಗಿ ಮುಸ್ಲಿಂ ಭಯೋತ್ಪಾದನೆ ಪಿಡುಗು ಭಾರತಕ್ಕೆ ಹೊಸದಲ್ಲ. ಆದರೆ ನೆರೆಯ ದೇಶಗಳಲ್ಲಿ ಕಂಡುಬಂದ ಕೆಲವು ಬೆಳವಣಿಗೆಗಳು ಈ ಸಮಸ್ಯೆ ಉಲ್ಬಣಗೊಳ್ಳಲು ಮತ್ತು ವ್ಯಾಪ್ತಿ ಹೆಚ್ಚಲು ಕಾರಣವಾಗಿದೆ.ಸೋವಿಯತ್ ಸೇನೆ 1979ರಲ್ಲಿ ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡದ್ದು ಅಮೆರಿಕಕ್ಕೆ ನುಂಗಲಾರದ ತುತ್ತಾಯಿತು. ಸೋವಿಯತ್ ಆಡಳಿತದ ವಿರುದ್ಧ ಹೋರಾಡಲು ಆಫ್ಘಾನಿಸ್ತಾನದಲ್ಲಿನ ಮೂಲಭೂತವಾದಿ ಮುಸ್ಲಿಮರಿಗೆ ಅಮೆರಿಕ ನೆರವು ನೀಡಿತು.ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ ಅರಬ್ ದೇಶಗಳ ಮುಸ್ಲಿಂ ಮೂಲಭೂತವಾದಿಗಳಿಗೆ ನೆರವು ನೀಡಿ ಅವರು ಆಫ್ಘಾನಿಸ್ತಾನಕ್ಕೆ ಬಂದು ಸೋವಿಯತ್ ಆಡಳಿತದ ವಿರುದ್ಧ ಹೋರಾಟಕ್ಕೆ ಇಳಿಯುವಂತೆ ಮಾಡಿತು.ಮುಜಾಹಿದ್ದೀನ್‌ಗಳನ್ನು ಸೃಷ್ಟಿ ಮಾಡಿದ್ದೇ ಅಮೆರಿಕ. ಆಂತರಿಕ ಕದನದಿಂದಾಗಿ ಸೋವಿಯತ್ ರಷ್ಯಾ ಸೇನೆ 1989ರಲ್ಲಿ ಆಫ್ಘಾನಿಸ್ತಾನವನ್ನು ತೆರವು ಮಾಡಿತು.ಆಧಿಕಾರಕ್ಕಾಗಿ ಮುಜಾಹಿದ್ದೀನ್‌ಗಳ ವಿವಿಧ ಗುಂಪುಗಳ ನಡುವೆಯೇ ಹೋರಾಟ ಆರಂಭವಾಯಿತು. ಅಂತಿಮವಾಗಿ ಆಫ್ಘಾನಿಸ್ತಾನದ ಗುಡ್ಡ ಪ್ರದೇಶಗಳ ಕೆಲವು ನಾಯಕರು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದ ಯುವಕರನ್ನು (ತಾಲಿಬಾನ್) ಸಂಘಟಿಸಿ ಮುಜಾಹಿದ್ದೀನ್‌ಗಳ ಬಲ ಅಡಗಿಸಿದರು. ಮೂಲಭೂತವಾದಿ ತಾಲಿಬಾನ್‌ಗಳು ಷರಿಯತ್ ಮಾದರಿ ಆಡಳಿತ ಜಾರಿಗೆ ಹೊರಟರು. ದೇಶ ಹಿಂದೆಂದೂ ಕಾಣದಂಥ ಕ್ರೂರ ಆಡಳಿತಕ್ಕೆ ಒಳಗಾಯಿತು. ಅಮೆರಿಕ ಬೆಳೆಸಿದ ಮೂಲಭೂತವಾದಿಗಳು ಅದರ ವಿರುದ್ಧ ತಿರುಗಿಬಿದ್ದರು. ಅಂತಿಮವಾಗಿ ಅಮೆರಿಕ ತಾಲಿಬಾನ್ ವಿರುದ್ಧವೂ ಹೋರಾಟಮಾಡಬೇಕಾಗಿ ಬಂತು. ಈ ಬೆಳವಣಿಗೆ ಪಾಕಿಸ್ತಾನದಲ್ಲಿ ನೆಲೆ ಮಾಡಿಕೊಂಡಿದ್ದ ಮೂಲಭೂತವಾದಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ವಿರೋಧಕ್ಕೆ ಕಾರಣವಾಯಿತು. ಅವುಗಳ ಹೋರಾಟದ ವ್ಯಾಪ್ತಿ ಹೆಚ್ಚಿತು. ಅಲ್ ಕೈದಾ, ಲಷ್ಕರ್ ಎ ತೊಯ್ಬೊ ಮುಂತಾದ ಸಂಘಟನೆಗಳಿಗೆ ಇಸ್ಲಾಂ ಧರ್ಮ ರಕ್ಷಣೆ ಮುಖ್ಯ ಉದ್ದೇಶವಾಯಿತು. ಇರಾಕ್, ಸೊಮಾಲಿಯಾ, ಯೆಮನ್, ನೈಜೀರಿಯಾ, ಲಿಬಿಯಾ ಮುಂತಾದ ದೇಶಗಳು ಹೋರಾಟದ ಕಣವಾಯಿತು. ಬಾಬರಿ ಮಸೀದಿ ನೆಲಸಮ ಘಟನೆಯ ನಂತರ ಭಾರತದಲ್ಲಿ ಮುಸ್ಲಿಮರ ರಕ್ಷಣೆ ಹೆಸರಿನಲ್ಲಿ ಆ ಸಂಘಟನೆಗಳು ಸಕ್ರಿಯವಾಗತೊಡಗಿದವು. ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ಅವುಗಳ ಬೆಂಬಲಕ್ಕೆ ನಿಂತವು. ಮುಂಬೈ ಸರಣಿ ಸ್ಫೋಟ, ನಂತರದ 26/11 ದಾಳಿ ಪಾಕಿಸ್ತಾನ ಪ್ರಚೋದಿತ ಕೃತ್ಯಗಳೇ ಆಗಿದ್ದವು. ಈ ವೇಳೆಗೆ ಆಫ್ಘಾನಿಸ್ತಾನದಲ್ಲಿನ ಭಯೋತ್ಪಾದಕರನ್ನು ಅಡಗಿಸಲು ಅಮೆರಿಕ ಆಡಳಿತಗಾರರು ಪಾಕಿಸ್ತಾನದ ನೆರವು ಪಡೆಯಲಾರಂಭಿಸಿದರು. ಅಪಾರ ಪ್ರಮಾಣದ ಹಣ, ಯುದ್ಧಾಸ್ತ್ರ ಪಾಕಿಸ್ತಾನಕ್ಕೆ ಹರಿಯಿತು. ಪಾಕಿಸ್ತಾನದ ಆಡಳಿಗಾರರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಭಯೋತ್ಪಾದಕ ಸಂಘಟನೆಗಳ ಜೊತೆಯೇ ರಹಸ್ಯ ಒಪ್ಪಂದ ಮಾಡಿಕೊಂಡರು. ಹೀಗಾಗಿ ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಅಥವಾ ಭಯೋತ್ಪಾದನೆ ಕೃತ್ಯಗಳಿಗೆ ನೆರವು ನೀಡುತ್ತಿದ್ದ ಆ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಾಕ್ ಮುಂದಾಗಲಿಲ್ಲ. 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡಿದರೂ ಪಾಕಿಸ್ತಾನ ಯಾರ ವಿರುದ್ಧವೂ ಕ್ರಮ ಜರುಗಿಸಲಿಲ್ಲ. ಬದಲಾಗಿ ಸಬೂಬು ಹೇಳುತ್ತ ಬಂತು. ಈ ಬಗ್ಗೆ ಅಮೆರಿಕವೂ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿಲ್ಲ. ಹೀಗಾಗಿ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ವಿರುದ್ಧ ಭಾರತ ಏಕಾಂಗಿಯಾಗಿ ಹೋರಾಡಬೇಕಾಗಿದೆ.

 ಪಾಕಿಸ್ತಾನ ಈಗ ಮೂಲಭೂತವಾದಿ ಸಂಘಟನೆಗಳ ದಾಳಿಗೆ ಸಿಕ್ಕಿ ಭಯೋತ್ಪಾದನೆ ಕೇಂದ್ರವಾಗಿ ಪರಿವರ್ತಿತವಾಗಿದೆ. ಪಾಕಿಸ್ತಾನದಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಹತ್ಯೆ ಮಾಡಿದೆ. ಈ ಘಟನೆ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. ಆದರೆ ಪಾಕಿಸ್ತಾನ ಕೃಪಾ ಪೋಷಿತ ಭಯೋತ್ಪಾದನಾ ಸಂಘಟನೆಗಳು ತಮ್ಮ ಕುಕೃತ್ಯಗಳನ್ನು ನಿಲ್ಲಿಸಿಲ್ಲ. ಇದೇನೇ ಇದ್ದರೂ ಪಾಕಿಸ್ತಾನ ದೇಶದಲ್ಲಿ ಬಿತ್ತಿದ ಭಯೋತ್ಪಾದನೆಯ ಬೀಜ ಮೊಳಕೆಯೊಡೆದಿದೆ. ಭಾರತದಲ್ಲಿ ನೆಲೆ ಮಾಡಿಕೊಂಡಿರುವ ಸಂಘಟನೆಗಳೇ ಇದೀಗ ಅಲ್ ಕೈದಾ ಮತ್ತಿತರ ಸಂಘಟನೆಗಳು ನಡೆಸುತ್ತಿದ್ದ ಚಟುವಟಿಕೆಗಳನ್ನು ನಡೆಸಲಾರಂಭಿಸಿವೆ. ದೆಹಲಿ ಹೈಕೋರ್ಟ್ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಇಂಥ ಸಂಘಟನೆಗಳು ಇರಬಹುದಾದ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ. ಮುಸ್ಲಿಂ ಭಯೋತ್ಪಾದಕ ಸಂಘಟನೆಗಳಿಗೆ ಬಹುಪಾಲು ಸ್ಥಳೀಯ ಮುಸ್ಲಿಮರ ಬೆಂಬಲ ಇಲ್ಲ. ಇಲ್ಲವೇ ಇಲ್ಲ ಖಚಿತವಾಗಿ ಹೇಳುವಂತಿಲ್ಲ.ಸ್ಥಳೀಯರ ಬೆಂಬಲ ಇಲ್ಲದೆ ಮುಂಬೈ ದಾಳಿಯಂಥ ಘಟನೆ ನಡೆಯಲು ಸಾಧ್ಯವಿಲ್ಲ. 

 ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತುರ್ತಾಗಿ ತೆಗೆದುಕೊಳ್ಳಬೇಕು. ಅದಕ್ಕೆ ಹಣದ ಕೊರತೆ ಉಂಟಾಗಬಾರದು. ಪೊಲೀಸ್ ಮತ್ತು ಗುಪ್ತಚರ ದಳಗಳನ್ನು ಬಲಪಡಿಸಬೇಕು.ಪೊಲೀಸ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ್ದೇ ದೊಡ್ದ ಸಮಸ್ಯೆ. ಕಾನೂನು ಮತ್ತು ನ್ಯಾಯದಾನ ವ್ಯವಸ್ಥೆಯದು ಇನ್ನೊಂದು ದೊಡ್ಡ ಸಮಸ್ಯೆ. ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಬೇಗ ನಡೆದು ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ವಿಳಂಬ ಧೋರಣೆ ಮತ್ತು ಉದಾಸೀನ ಮನೋಭಾವಕ್ಕೆ ಅವಕಾಶ ಇರಬಾರದು. ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದೊಕೊಳ್ಳುವ ಮೊದಲು ಈ ಬದಲಾವಣೆಗಳು ಆಗಬೇಕಿದೆ.  ಅಮೆರಿಕದ ಭಯೋತ್ಪಾದನೆ ವಿರುದ್ಧದ ಯುದ್ಧ ಭಾರತದಂಥ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಮೆರಿಕದ ತಪ್ಪು ನೀತಿಗಳಿಂದಾಗಿ ನೆರೆಯ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಮುಸ್ಲಿಂ ಭಯೋತ್ಪಾದನೆಯ ಪಿಡುಗು ಹೆಚ್ಚಬಹುದು. ಈ ಕಠಿಣ ಸವಾಲನ್ನು ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿದೆ. ಭಾರತದಲ್ಲಿ ಮುಸ್ಲಿಂ ಭಯೋತ್ಪಾದನೆಗೆ ಮೂಲ ಕಾರಣವಾದ ಜಮ್ಮು ಕಾಶ್ಮೀರ ಸಮಸ್ಯೆಗೆ ಮೊದಲು ಸ್ಥಳೀಯ ಪರಿಹಾರ ಕಂಡುಕೊಳ್ಳಬೇಕಿದೆ. ಆಡಳಿತ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಸಾಧಿಸಬಹುದು. ಇದರ ಜತೆಗೆ ಭಾರತದ ಮುಸ್ಲಿಮರ ಅಸಮಾಧಾನಕ್ಕೆ ಕಾರಣವಾಗಿರುವ ಆರ್ಥಿಕ, ಸಾಮಾಜಿಕ ಅಂಶಗಳನ್ನು ಗುರುತಿಸಿ ಪರಿಹರಿಸಬೇಕಿದೆ. ಈ ಸಮಸ್ಯೆಗಳು ಬಗೆಹರಿಯದೆ ಮುಸ್ಲಿಂ ಭಯೋತ್ಪಾದನೆಯಿಂದ ಭಾರತಕ್ಕೆ ಮುಕ್ತಿಯಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.