ಶುಕ್ರವಾರ, ಮೇ 14, 2021
29 °C

ಪಾಕ್ ಮಾಧ್ಯಮಗಳಲ್ಲಿ ಜರ್ದಾರಿ ಭಾರತ ಭೇಟಿ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಭಾರತ ಭೇಟಿಯು ಅಲ್ಲಿನ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗಿದೆ.ಈ ಭೇಟಿಯು 26/11ರ ಮುಂಬೈ ದಾಳಿ ತನಿಖೆಯೂ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ವಿವಾದಿತ ವಿಷಯಗಳನ್ನು ಪರಿಹರಿಸುವಲ್ಲಿ ಮುಖ್ಯ ವೇದಿಕೆಯಾಗಬೇಕು ಎಂದು `ದಿ ಡೈಲಿ ಟೈಮ್ಸ~ ಸಂಪಾದಕೀಯದಲ್ಲಿ ಹೇಳಲಾಗಿದೆ.ಜರ್ದಾರಿ ಅವರು ಹಸನ್ಮುಖರಾಗಿ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೈಕುಲುಕುತ್ತಿರುವ ಚಿತ್ರವು ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದೆ.ಇದೇ ವೇಳೆ ಜರ್ದಾರಿ ಪ್ರವಾಸದ ಖರ್ಚಿನ ವಿಷಯ ಕೂಡ ಚರ್ಚೆಗೆ ಗ್ರಾಸವಾಗಿದೆ. ಅಧ್ಯಕ್ಷರ ನಿಯೋಗದಲ್ಲಿದ್ದವರು ಹಾಗೂ ಪ್ರವಾಸದ ಖರ್ಚು ವೆಚ್ಚವನ್ನು ನೋಡಿದರೆ ಇದು ` ನಿಜಕ್ಕೂ ಖಾಸಗಿ~ ಭೇಟಿ ಮಾತ್ರ  ಆಗಿತ್ತೇ ಎನ್ನುವ ಪ್ರಶ್ನೆ ಕೇಳುವಂತಾಗಿದೆ ಎಂದು `ದಿ ನ್ಯೂಸ್ ಹಾಗೂ ಪಾಕಿಸ್ತಾನ್ ಟುಡೆ~ ಪತ್ರಿಕೆಗಳು ವಿಶ್ಲೇಷಿಸಿವೆ.26/11ರ ಮುಂಬೈ ದಾಳಿ ಬಳಿಕ ಹದಗೆಟ್ಟಿರುವ ಉಭಯ ದೇಶಗಳ ಸಂಬಂಧವನ್ನು ಸರಿಪಡಿಸುವಲ್ಲಿ ಪಿಪಿಪಿ ನೇತೃತ್ವದ ಸರ್ಕಾರ ಇಟ್ಟ ಹೆಜ್ಜೆಗಳನ್ನು     `ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಸಂಪಾದಕೀಯದಲ್ಲಿ ಶ್ಲಾಘಿಸಲಾಗಿದೆ.ಇಮ್ರಾನ್ ಖಾನ್ ಕಿಡಿಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಅವರ ಪುತ್ರ ಬಿಲಾವಲ್ ಭುಟ್ಟೊ ಅವರ ದಿಢೀರ್ ಭಾರತ ಭೇಟಿಯನ್ನು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದ್ದಾರೆ.ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಕುಸಿತದಿಂದ ಪಾಕ್‌ನ 139 ಯೋಧರು ಕಣ್ಮರೆಯಾದ ಸಂದರ್ಭದಲ್ಲಿ ಈ ಭೇಟಿ ಅದೆಷ್ಟು ಪ್ರಸ್ತುತವಾಗಿತ್ತು ಎಂಬುದು ಖಾನ್ ಪ್ರಶ್ನೆಯಾಗಿದೆ.ಪಿಪಿಪಿ ಯುವನಾಯಕ ಬಿಲಾವಲ್ ಭುಟ್ಟೊ ಅವರತ್ತಲೂ ವಾಗ್ಬಾಣ ಬಿಟ್ಟಿರುವ ಅವರು, `23 ವರ್ಷದ ಈ ನಾಯಕನಿಗೆ ದೇಶದ ಜನರ ನಾಡಿ ಮಿಡಿತವೇ ಗೊತ್ತಿಲ್ಲ~ ಎಂದು ಲೇವಡಿ ಮಾಡಿದ್ದಾರೆ.ವಾಷಿಂಗ್ಟನ್ ವರದಿ : ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಅಜ್ಮೇರ್ ಭೇಟಿಯು ಮುಸ್ಲಿಂ ಭಯೋತ್ಪಾದನೆಯ ವಿರುದ್ಧ ಸಂದೇಶ ಸಾರಿದೆ ಎಂದು `ದಿ ಲಾಸ್ ಏಂಜಲೀಸ್ ಟೈಮ್ಸ~ ಸೋಮವಾರ ವರದಿ ಮಾಡಿದೆ.ಜರ್ದಾರಿ ಭೇಟಿಯಿಂದ ಮಹತ್ವದ ಅಂಶಗಳು ಹೊರಬಿದ್ದಿಲ್ಲ. ಆದರೆ  ಈ ಭೇಟಿಯು ಜಗತ್ತಿನ ಅತ್ಯಂತ ಅಪಾಯಕಾರಿ ಗಡಿಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಇಂಬು ನೀಡುತ್ತದೆ ಎಂದು ಎರಡೂ ದೇಶಗಳು ಬಣ್ಣಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.ಜರ್ದಾರಿ ಅವರು ಪ್ರಧಾನಿ ಸಿಂಗ್ ಅವರಿಗೆ ಪಾಕಿಸ್ತಾನ ಭೇಟಿಗೆ ಆಹ್ವಾನ ನೀಡಿದ್ದನ್ನು `ದಿ ವಾಷಿಂಗ್ಟನ್ ಪೋಸ್ಟ್~, ` ದಿ ನ್ಯೂಯಾರ್ಕ್ ಟೈಮ್ಸ~ ಪತ್ರಿಕೆಗಳು ಪ್ರಮುಖವಾಗಿ ಪ್ರಸ್ತಾಪಿಸಿವೆ.

 

`ನಾಚಿಕೆಗೇಡು~

ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ ತಮ್ಮ ಅನುಭಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖ್ಯಸ್ಥ ಬಿಲಾವಲ್ ಭುಟ್ಟೊ, `ಗಡಿಯಲ್ಲಿ ಹಲವರು ಬಡತನದ ಬೇಗುದಿಯಲ್ಲಿ ನರಳುತ್ತಿರುವಾಗ ಉಭಯ ದೇಶಗಳು ಶಸ್ತ್ರಾಸ್ತ್ರಕ್ಕೆ ಹಣ ಸುರಿಯುತ್ತಿರುವುದು ನಾಚಿಕೆಗೇಡಿನ ಸಂಗತಿ~ ಎಂದಿದ್ದಾರೆ.ಪರಮಾಣು ಅಸ್ತ್ರಗಳಿಗೆ ಎರಡೂ ದೇಶಗಳು ಹಣ ಸುರಿಯುವ ಬದಲು ಶಿಕ್ಷಣ, ಆರೋಗ್ಯ ಕಾಳಜಿ ಹಾಗೂ ಉದ್ಯಮದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.