ಪಾಕ್ ಸಚಿವೆಗೆ ಮೊಬೈಲ್ ಕರೆ ಪ್ರಕರಣ: ಕಂಗೆಟ್ಟ ಯುವಕ

7

ಪಾಕ್ ಸಚಿವೆಗೆ ಮೊಬೈಲ್ ಕರೆ ಪ್ರಕರಣ: ಕಂಗೆಟ್ಟ ಯುವಕ

Published:
Updated:

ಸಿಂಧನೂರು: ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಅವರ ಮೊಬೈಲ್‌ಗೆ ಸಿಂಧನೂರಿನ ಅಮರೇಶ ಎನ್ನುವ ಯುವಕನ ಮೊಬೈಲ್‌ನಿಂದ ಕರೆ ಹೋದ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿರುವ ಹಿನ್ನೆಲೆಯಲ್ಲಿ ಆ ಯುವಕ ಅತ್ಯಂತ ದಿಗಿಲುಗೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳ ಮತ್ತು ಮಾಧ್ಯಮಗಳ ಕಿರಿಕಿರಿಗೆ  ಬೇಸತ್ತು ತನ್ನ ಹಳ್ಳಿಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.ಮಾಧ್ಯಮಗಳು ದಿನಕ್ಕೊಂದು ಬಗೆಯಲ್ಲಿ ಕಥೆಗಳನ್ನು ಸೃಷ್ಟಿಮಾಡುತ್ತಿರುವುದರಿಂದ ಅಮರೇಶನ ಹೆತ್ತವರು ಮತ್ತು ಬಂಧುಗಳು ಸಹ ಗಾಬರಿಗೊಂಡು ಆತನು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಬಿಡಿಸಿಕೊಂಡು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ.ಆಕಸ್ಮಿಕವಾಗಿ ಕರೆ ಹೋಗಿದ್ದು, ತನಗೆ ಆ ಕುರಿತು ಗೊತ್ತಿಲ್ಲವೆಂದೇ ಆತ ಹೇಳುತ್ತಿದ್ದಾನೆ. ಪೊಲೀಸ್ ಅಧಿಕಾರಿಗಳಿಗೂ ಅಮರೇಶನು ಉದ್ದೇಶಪೂರ್ವಕವಾಗಿ ಕರೆ ಮಾಡದಿರುವುದು ಮತ್ತು ಆತನ ಮುಗ್ಧತೆಯ ಬಗ್ಗೆ ಖಚಿತವಾಗಿರುವುದರಿಂದ ಅವನು ನಿರ್ದೋಷಿಯೆಂದೇ ಹೇಳಿದ್ದಾರೆ.ಆದಾಗ್ಯೂ ಹಿರಿಯ ಅಧಿಕಾರಿಗಳು ಮೇಲಿಂದ ಮೇಲೆ ಸ್ಥಳೀಯ ಅಧಿಕಾರಿಗಳನ್ನು ವಿಚಾರಣೆ ಮಾಡುತ್ತಿರುವುದರಿಂದ ಪುನಃ ಪುನಃ ಅಮರೇಶನನ್ನು ಪೊಲೀಸ್ ಠಾಣೆಗೆ ಕರೆ ತರುತ್ತಿದ್ದಾರೆ. ಅಮರೇಶನ ಪ್ರಕರಣ ಆತನಿಗಲ್ಲದೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಹ ನಿದ್ದೆಗೆಡಿಸಿದೆ.`ನಿನಗೆ ಯಾವುದೇ ತೊಂದರೆ ಕೊಡುವುದಿಲ್ಲ. ಹೆದರಬೇಡ~ ಎಂದು ಪೊಲೀಸ್ ಅಧಿಕಾರಿಗಳು ಧೈರ್ಯ ಹೇಳಿದ್ದರೂ ಅಮರೇಶನನ್ನು ಆವರಿಸಿದ ಭಯ ಮಾತ್ರ ದೂರವಾಗಿಲ್ಲ. ಕೆಲವರು ಆತನನ್ನು ನೋಡಲೆಂದೇ ಚಾಲೆಂಜ್ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿರುವುದು, ಅಲ್ಲಿಯ ಮುಖ್ಯಸ್ಥರನ್ನು ಆತನ ಬಗ್ಗೆ ಕೇಳುತ್ತಿರುವ ಸಂಗತಿ ಅವರಿಗೂ ಅತ್ಯಂತ ಕಿರಿಕಿರಿ ಉಂಟುಮಾಡಿದೆ.ಆದಷ್ಟು ಶೀಘ್ರ ಈ ಪ್ರಕರಣವನ್ನು ಸಮಾಪ್ತಿಗೊಳಿಸಬೇಕೆಂದು ಕೋಚಿಂಗ್ ಸೆಂಟರ್ ಮುಖ್ಯಸ್ಥರಾದ ಬಸವರಾಜ ಜೆ.ವಳಕಲದಿನ್ನಿ, ಮಲ್ಲಿಕಾರ್ಜುನ ಸಿದರೆಡ್ಡಿ ಮತ್ತು ಸಿಬ್ಬಂದಿ ವರ್ಗದವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry