ಗುರುವಾರ , ಅಕ್ಟೋಬರ್ 24, 2019
21 °C

ಪಾಕ್ ಸುಪ್ರೀಂಕೋರ್ಟ್: ಇಬ್ಬರು ಸಚಿವರು ಸೇರಿ ನಾಲ್ವರಿಗೆ ನೋಟಿಸ್

Published:
Updated:

ಇಸ್ಲಾಮಾಬಾದ್ (ಪಿಟಿಐ): ಮೆಮೊ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ಟೀಕಿಸಿರುವ ಇಬ್ಬರು ಸಚಿವರು ಸೇರಿದಂತೆ ಆಡಳಿತಾರೂಢ ಪಿಪಿಪಿ ಪಕ್ಷದ ನಾಲ್ವರು ಮುಖಂಡರಿಗೆ ಪಾಕ್‌ನ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ  ನೋಟಿಸ್ ಜಾರಿ ಮಾಡಿದೆ.ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ದ್ವಿಸದಸ್ಯ ಪೀಠವು ವಾರ್ತಾ ಸಚಿವ ಫಿರ್ದೋಸ್ ಆಶಿಕ್ ಅವಾನ್, ಧಾರ್ಮಿಕ ವ್ಯವಹಾರಗಳ ಇಲಾಖೆ ಸಚಿವ ಖುರ್ಷಿದ್ ಷಾ, ಮಾಜಿ ಸಚಿವರಾದ ಖಮರ್ ಜಮಾನ್ ಕೈರಾ ಮತ್ತು ಬಾಬರ್ ಅವಾನ್ ಅವರಿಗೆ ಈ ನೋಟಿಸ್ ನೀಡಿದೆ.`ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪು ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ನಿಮ್ಮ (ನಾಲ್ವರು ಮುಖಂಡರು) ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಏಕೆ ಕೈಗೊಳ್ಳಬಾರದು~ ಎಂದು ನ್ಯಾಯ ಪೀಠ ವಿವರಣೆ ಕೇಳಿದೆ. ಜ. 13ರ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ.ಮೆಮೊ ಗೇಟ್ ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಧ್ಯಂತರ ತೀರ್ಪು ನೀಡಿತ್ತು. ಡಿ. 1ರಂದು ಪತ್ರಿಕಾಗೋಷ್ಠಿ ನಡೆಸಿದ ಈ ನಾಲ್ವರು ಮುಖಂಡರು ಈ ತೀರ್ಪನ್ನು ಪ್ರಶ್ನಿಸಿ, ಟೀಕೆ ಮಾಡಿದ್ದರು.ಸಚಿವರ ಈ ಟೀಕೆ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಲಿಖಿತವಾಗಿ ಪತ್ರಿಕ್ರಿಯೆ ನೀಡಿದ ಪ್ರಧಾನಿ ಯೂಸುಫ್ ರಜಾ ಗಿಲಾನಿ, ನ್ಯಾಯಾಲಯದ ಬಗ್ಗೆ ತಮ್ಮ ಸರ್ಕಾರ ಯಾವುದೇ ರೀತಿ ಅಗೌರವ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಈ ಸಮಜಾಯಿಷಿ ಸಮಾಧಾನಕರವಾಗಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಖರ್ ಚೌಧರಿ, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ದ್ವಿಸದಸ್ಯ ಪೀಠಕ್ಕೆ ಸೂಚಿಸಿದ್ದರು.ಒಸಾಮ ಬಿನ್ ಲಾಡೆನ್ ಹತ್ಯೆ ನಂತರ ಪಾಕ್‌ನಲ್ಲಿ ಸೇನಾ ಕ್ರಾಂತಿ ಉಂಟಾಗುವ ಸಾಧ್ಯತೆ ಇದೆ. ಇದನ್ನು ಹತ್ತಿಕ್ಕಲು ನೆರವು ನೀಡುವಂತೆ ಕೋರಿ ಅಮೆರಿಕಗೆ ಬರೆದಿದೆ ಎನ್ನಲಾದ ರಹಸ್ಯ ಪತ್ರದ ಹಗರಣವೇ ಮೆಮೊಗೇಟ್. ಈ ಹಗರಣದ ಬಗ್ಗೆ ತನಿಖೆ ನಡೆಸಲು ಪಾಕ್ ಸುಪ್ರೀಂಕೋರ್ಟ್ ಇತ್ತೀಚೆಗೆ ಆಯೋಗವೊಂದನ್ನು ರಚಿಸಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)