ಗುರುವಾರ , ಅಕ್ಟೋಬರ್ 17, 2019
21 °C

ಪಾಠದ ಜತೆ ಕೃಷಿ ಜ್ಞಾನ!

Published:
Updated:

ನಾಪೋಕ್ಲು: ಈ ಶಾಲೆಯ ಚಟುವಟಿಕೆಗಳು ಬರೀ ಪಾಠಕ್ಕಷ್ಟೇ ಸೀಮಿತವಲ್ಲ. ಪಾಠದೊಂದಿಗೆ ಕ್ರೀಡೆ. ಕೃಷಿ, ಸಾಮಾನ್ಯ ಜ್ಞಾನಕ್ಕೂ ಅಷ್ಟೇ ಮಹತ್ವ ನೀಡಲಾಗುತ್ತಿದೆ. ಅಂತೆಯೇ ಈ ಶಾಲೆಯ ಮಕ್ಕಳು ಕ್ರೀಡಾಚಟುವಟಿಕೆಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ನಾಪೋಕ್ಲುವಿನಿಂದ 6ಕಿ.ಮೀ ದೂರದಲ್ಲಿದೆ ಈ ಸರ್ಕಾರಿ ಶಾಲೆ. ಕೊಳಕೇರಿ ಗ್ರಾಮದ ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ರವರೆಗೆ 155 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆಗೆ ಪೂರಕವಾದ ವಾತಾವರಣ ಈ ಶಾಲೆಯಲ್ಲಿದೆ.ಕಟ್ಟಡದ ಬಳಿ ಇರುವ ಸ್ಥಳದಲ್ಲಿ ಪುಟ್ಟದಾದ ಕೈತೋಟ ನಿರ್ಮಿಸಿ ವಿದ್ಯಾರ್ಥಿಗಳು ತರಕಾರಿ ಬೆಳೆಯುತ್ತಿದ್ದಾರೆ. ಬಿಸಿಯೂಟಕ್ಕೆ ಬೇಕಾದ ನೂಕೋಲು, ಮೂಲಂಗಿ ಮೊದಲಾದ ತರಕಾರಿಗಳನ್ನು ಈ ಪುಟ್ಟ ಕೈತೋಟದಲ್ಲಿ ಬೆಳೆಯಲಾಗಿದೆ. ವಿದ್ಯಾರ್ಥಿಗಳಲ್ಲಿ ಶೇ.92ರಷ್ಟು ಅಲ್ಪಸಂಖ್ಯಾತರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾಧ್ಯಮಿಕ ಶಿಕ್ಷಣ ಯೋಜನೆಯಡಿಯಲ್ಲಿ 8ನೇ ತರಗತಿ ಪ್ರಾರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ  ಈ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎನ್ನುತ್ತಾರೆ ಶಾಲಾ ಎಸ್.ಡಿ. ಎಂ. ಸಿ. ಅಧ್ಯಕ್ಷ ಕೆ.ಎಚ್ ಉಮ್ಮರ್.1965ರಲ್ಲಿ ಫೀಡರ್ ಶಾಲೆ ಎಂಬ ಹೆಸರಿನಲ್ಲಿ ಸಮೀಪದ ಕಬ್ಬಿನಗದ್ದೆಯಿಂದ ಚಪ್ಪೆಂಡಡಿಗೆ ಸ್ಥಳಾಂತರಗೊಂಡ ಈ ಸರ್ಕಾರಿ ಶಾಲೆ ಪ್ರಗತಿಯತ್ತ ಹೆಜ್ಜೆ ಹಾಕಿದೆ. ಅರಂಭದಲ್ಲಿ ಕಟ್ಟಡ ಇರಲಿಲ್ಲ. ಸ್ಥಳೀಯ ಮಸೀದಿಯ ಪಕ್ಕದ ಕೊಠಡಿಯಲ್ಲಿ 1ನೇ ಮತ್ತು 2ನೇ ತರಗತಿ ಆರಂಭಿಸಲಾಯಿತು.ಎಸ್.ಡಿ. ಕೃಷ್ಣರಾಜು ಮೊದಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಶಾಲಾಭಿವೃದ್ಧಿ ಮಂಡಳಿ ಸಹಾಯದಿಂದ ಸ್ಥಳೀಯ ಕಣ್ಣಪಣೆ ಕುಟುಂಬಸ್ಥರು ಉದಾರವಾಗಿ ನೀಡಿದ ಒಂದು ಏಕರೆ ಸ್ಥಳದಲ್ಲಿ ಈ ಸರ್ಕಾರಿ ಶಾಲೆ ಕಾರ್ಯನಿರ್ವಹಿಸತೊಡಗಿತು. ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಕೊರತೆ ಇದೆ.ಹಾಗಿದ್ದೂ ಕ್ರೀಡಾ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಇತರ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಪ್ರಶಸ್ತಿ ಗಳಿಸಿದ್ದಾರೆ. ಅಕ್ಷರ ದಾಸೋಹಕ್ಕೆ ಬೇಕಾದ ಕಾಯಿಪಲ್ಲೆಗಳನ್ನು ಈ ಶಾಲೆಯಲ್ಲಿ ಬೆಳೆಸುತ್ತಿರುವುದು ವಿಶೇಷ.ನಾಪೋಕ್ಲು ಕ್ಲಸ್ಟರಿನಲ್ಲಿ ಉತ್ತಮ ಶಾಲೆ ಪ್ರಶಸ್ತಿ ಗಳಿಸಿಕೊಂಡಿದೆ. ಶೈಕ್ಷಣಿಕ ಗುಣಮಟ್ಟ ಉಳಿಸಿಕೊಳ್ಳಲು ಎಸ್.ಡಿ.ಎಂ.ಸಿ ಗ್ರಾಮಸ್ಥರು, ಹಾಗೂ ಪೋಷಕರು ಸಹಕಾರ ನೀಡುತ್ತಿದ್ದಾರೆ.

 

 

Post Comments (+)