ಪಾಠವಾದೀತೇ ತೀರ್ಪು?

7
ದೇಶದ ಅಂತಃಸಾಕ್ಷಿ ಕಲಕಿದ್ದ ದೆಹಲಿ ಅತ್ಯಾಚಾರ

ಪಾಠವಾದೀತೇ ತೀರ್ಪು?

Published:
Updated:

ನವದೆಹಲಿ (ಪಿಟಿಐ, ಐಎಎನ್‌ಎಸ್‌)::  ದೇಶದಾ­ದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ದೆಹಲಿಯ ಡಿಸೆಂಬರ್‌ 16ರ  ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ತ್ವರಿತ ಗತಿ ನ್ಯಾಯಾಲ­ಯವು  ಶುಕ್ರವಾರ ಮರಣದಂಡನೆ ವಿಧಿಸುವ ಮೂಲಕ ಮಹಿಳೆಯರ ವಿರುದ್ಧ ಅಪರಾಧ ಎಸಗುವವರಿಗೆ ಸ್ಪಷ್ಟ ಸಂದೇಶ ನೀಡಿದೆ.‘ಇಂತಹ ಮೃಗೀಯ, ಪೈಶಾಚಿಕ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಸಾಮೂಹಿಕ ಅಂತಃಸಾಕ್ಷಿ­ಯನ್ನು ಕಲಕಿದ್ದ ಈ ಪ್ರಕರಣದ ಎಲ್ಲಾ ನಾಲ್ಕು ಮಂದಿ ಅಪರಾಧಿಗಳಿಗೂ ಮರಣದಂಡನೆ ವಿಧಿಸಲಾಗಿದೆ’ ಎಂದು ಹೆಚ್ಚುವರಿ ಸೆಷನ್‌್ಸ ನ್ಯಾಯಾಧೀಶ ಯೋಗೇಶ್‌ ಖನ್ನಾ ಅವರು ತೀರ್ಪು ನೀಡಿದರು.‘ಅಪರಾಧಿಗಳ ಇತರ ಅಪರಾಧಗಳ ಬಗ್ಗೆ ಹೇಳುವ ಮೊದಲು ಅಮಾನುಷ ಕೊಲೆ ಕೃತ್ಯಕ್ಕೆ ಐಪಿಸಿ ಕಲಂ 302ರ ಪ್ರಕಾರ ಎಲ್ಲರಿಗೂ ಮರಣದಂಡನೆ ವಿಧಿಸಿರು­ವು­ದನ್ನು ಪ್ರಕಟಿಸುತ್ತೇನೆ’ ಎಂದು ನ್ಯಾಯಾಧೀಶರು ತಿಳಿಸಿದರು. ಮುಖೇಶ್‌ (26), ಅಕ್ಷಯ್‌ ಠಾಕೂರ್‌ (28), ಪವನ್‌ ಗುಪ್ತಾ (19) ಮತ್ತು ವಿನಯ್‌ ಶರ್ಮಾ (20) ಎಸಗಿರುವ ‘ಬರ್ಬರ ಕೃತ್ಯಗಳು’ ಅಪರೂಪ­ದಲ್ಲೇ ಅಪರೂಪ ಪ್ರಕರಣವಾಗಿರುವುದರಿಂದ ಮರಣ ದಂಡನೆಯೇ ಸರಿಯಾದ ಶಿಕ್ಷೆ ಎಂದು ಖನ್ನಾ ಹೇಳಿದರು.ಕಣ್ಣೀರಿಟ್ಟ ವಿನಯ್‌: ನ್ಯಾಯಾಧೀಶರು ತೀರ್ಪನ್ನು ಓದುತ್ತಿದ್ದಂತೆ ನಾಲ್ವರು ಅಪರಾಧಿಗಳು ಆಘಾತಕ್ಕೆ ಒಳಗಾದರು. ವಿನಯ್‌ ಬಿಕ್ಕಿಬಿಕ್ಕಿ ಅಳತೊಡಗಿದರೆ ಉಳಿದ ಮೂವರು ದಯೆ ತೋರಿಸುವಂತೆ ನ್ಯಾಯಾ­ಧೀಶ­ರಲ್ಲಿ ಅಂಗಲಾಚಿದರು.23 ವರ್ಷದ ಪ್ಯಾರಾ ಮೆಡಿಕಲ್‌  ವಿದ್ಯಾರ್ಥಿನಿ ಮೇಲೆ ಕಳೆದ ಡಿಸೆಂಬರ್‌ 16ರಂದು ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಈ ನಾಲ್ವರನ್ನು ಮಂಗಳವಾರವಷ್ಟೇ ನ್ಯಾಯಾ­ಧೀಶರು ಅಪರಾಧಿಗಳು ಎಂದು ತೀರ್ಪು ನೀಡಿದ್ದರು. ಘಟನೆ ನಡೆದ 9 ತಿಂಗಳಲ್ಲಿ ಅಪರಾಧಿಗಳಿಗೆ ತ್ವರಿತ ನ್ಯಾಯಾಲಯವು ಶಿಕ್ಷೆ ನೀಡಿದೆ.

‘ಇಂತಹ ಘೋರ ಅಪರಾಧಗಳನ್ನು ನೋಡಿ ನ್ಯಾಯಾಲಯ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಕಾನೂನಿನಲ್ಲಿ ಇರುವ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸುತ್ತಿದ್ದೇನೆ’ ಎಂದು ಖನ್ನಾ ಹೇಳಿದರು. ‘ಮಹಿಳೆಯ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ದೇಶದ ಮಹಿಳೆಯ­ರಲ್ಲಿ ವಿಶ್ವಾಸ ತುಂಬುವುದು ನ್ಯಾಯಾಂಗದ ಹೊಣೆಗಾರಿಕೆ’ ಎಂದೂ ಅವರು  ಪ್ರತಿಪಾದಿಸಿದರು.‘ಯುವತಿ ಜತೆ ಅಮಾನವೀಯವಾಗಿ ವರ್ತಿಸಿ ಚಿತ್ರಹಿಂಸೆ ನೀಡಿದ ಪರಿ  ಸಮಾಜವನ್ನು ದಿಗ್ಭ್ರಾಂತಿಗೊಳಿಸಿದೆ. ಅಷ್ಟೇ ಅಲ್ಲದೆ, ಇಂತಹ ಅಪರಾಧ ಎಸಗುವವರಿಗೆ ಯಾವುದೇ ರೀತಿಯ ರಕ್ಷಣೆಯೂ ಇರಬಾರದು ಎಂಬುದನ್ನು ಸಾರಿದೆ’ ಎಂದರು. ಈ ರೀತಿಯ ಘಟನೆಗಳು ಮರುಕಳಿಸ­ಬಾರದು ಎಂಬ ಕಾರಣಕ್ಕೆ  ಗರಿಷ್ಠ ಪ್ರಮಾಣದ ಶಿಕ್ಷೆ ನೀಡಲಾಗಿದೆ ಎಂದು ನ್ಯಾಯಾಧೀಶರು ತಮ್ಮ 20 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.ಬರ್ಬರ ಕೃತ್ಯ: ‘ಚಲಿಸುತ್ತಿದ್ದ ಬಸ್‌ನಲ್ಲಿ ಪಶುಗಳಂತೆ ಯುವತಿ ಮೇಲೆರಗಿ  ಅತ್ಯಾಚಾರ ಎಸಗ­ಲಾ­ಗಿದ್ದರಿಂದ  ಮಹಿಳೆಯ ಮರ್ಮಾಂಗ ಸಂಪೂರ್ಣ ಛಿದ್ರ­ಗೊಂಡಿತ್ತು ಎಂದು ವೈದ್ಯಕೀಯ ಸಾಕ್ಷಿಗಳಿಂದ ಗೊತ್ತಾಗಿದೆ’.‘ಇಂತಹ ಹೀನ ಕೃತ್ಯವೆಸಗಿದ ನಂತರ ಅಪರಾಧಿಗಳು ನಗ್ನವಾಗಿದ್ದ ಮಹಿಳೆಯನ್ನು  ನಡು ರಾತ್ರಿ  ಚಳಿಯಲ್ಲಿ ರಸ್ತೆಯ ಮೇಲೆ ಎಸೆದು ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ಪಟ್ಟ ಯಾತನೆಯನ್ನು ವರ್ಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ಮರ್ಮಾಂಗಕ್ಕೆ ಪದೇ ಪದೇ ಕಬ್ಬಿಣದ ಸರಳು ಮತ್ತು ಕೈಗಳನ್ನು ತೂರಿಸಿದ್ದರಿಂದ ಯುವತಿಯ ಇಡೀ ಕರುಳಿನ ಭಾಗ ಹರಿದು ಹೋಗಿದೆ ಎಂಬ ವಾಸ್ತವಾಂಶಗಳು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪವಾಗಿಸಿದೆ’.‘ಈ ಬರ್ಬರ ಕೃತ್ಯದಿಂದ ಆಕೆಗೆ ತೀವ್ರ ಘಾಸಿಗೊಳಿಸಿ ಅಪರಾಧಿಗಳು ವಿಕೃತಿ­ಯನ್ನು ಮೆರೆದಿದ್ದಾರೆ. ಇದು ಕ್ಷಮೆಗೆ ಅರ್ಹವಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ಮೃಗೀಯ ವರ್ತನೆ: ‘ಸಾಮೂಹಿಕ ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ನಂತರ ಯುವತಿಯ ಒಳ ಅಂಗಾಂಗಳನ್ನು ಹೊರಗೆ ಎಳೆಯಲೆ­ತ್ನಿಸಿದಷ್ಟಕ್ಕೆ ನಿಲ್ಲದ ಅಪರಾಧಿಗಳು ಆಕೆಯನ್ನು ಬಸ್ಸಿನ ಹಿಂದಿನ ಬಾಗಿಲಿಗೆ ಎಳೆದು ತಂದು ಅದು  ತೆರೆಯಲಾಗದ ನಂತರ ಆಕೆಯ ಕೂದಲು ಹಿಡಿದೆಳೆದು ಮುಂದಿನ ಬಾಗಿಲಿಗೆ ತಂದು ಚಲಿಸುವ ಬಸ್‌ನಿಂದ ಹೊರಕ್ಕೆ ಎಸೆದಿದ್ದಾರೆ. ಇದು ಮೃಗೀಯ ವರ್ತನೆ ಅಲ್ಲದೆ ಮತ್ತೇನಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಹಾಗೂ ಮಹಿಳೆ ಆಸ್ಪತ್ರೆಯಲ್ಲಿ  ಸತ್ತ ನಂತರ ಇಡೀ ದೇಶದ ಜನತೆ ವ್ಯಕ್ತಪಡಿಸಿದ ಆಕ್ರೋಶವನ್ನು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಪ್ರಸ್ತಾಪಿಸಿದ್ದಾರೆ.ಹೈಕೋರ್ಟ್‌ಗೆ ತೀರ್ಪಿನ ಪ್ರತಿ: ಮರಣದಂಡನೆಯನ್ನು ನಿಯಮದ ಪ್ರಕಾರ ಹೈಕೋರ್ಟ್‌ ಕಾಯಂಗೊಳಿಸ­ಬೇಕಾಗಿರುವುದರಿಂದ ತೀರ್ಪಿನ ಪ್ರತಿಯನ್ನು ಹೈಕೋರ್ಟ್‌ಗೆ ಕಳುಹಿಸಲಾಗಿದೆ.  ಸಾಮೂಹಿಕ ಅತ್ಯಾಚಾರ ಘಟನೆ ಬಳಿಕ ಯುವತಿ ಸಿಂಗಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.ಆರು ಮಂದಿ ಅತ್ಯಾಚಾರಿಗಳ ಪೈಕಿ ಬಾಲ ಅಪರಾಧಿಗೆ ಬಾಲ ನ್ಯಾಯ ಮಂಡಳಿಯು ಮೂರು ವರ್ಷಗಳ   ಸೆರೆ ವಾಸ ವಿಧಿಸಿ ಬಾಲಮಂದಿರಕ್ಕೆ ಒಪ್ಪಿಸಿದೆ. ಮತ್ತೊಬ್ಬ ಆರೋಪಿ ರಾಮ್‌ಸಿಂಗ್‌ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.  ಪ್ರಕರಣ ನಡೆದ ನಂತರ ದೇಶದಾದ್ಯಂತ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ದೇಶದ ಯುವ ಜನಾಂಗ ಮತ್ತು ಮಹಿಳೆಯರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು, ಅತ್ಯಾಚಾರಿಗಳಿಗೆ ಮತ್ತು ಮಹಿಳೆಯರ ವಿರುದ್ಧ ಅಪರಾಧವೆಸಗುವವರಿಗೆ  ಕಠಿಣ  ಶಿಕ್ಷೆ ನೀಡಲು ಅವಕಾಶ ನೀಡುವ ಹೊಸ ಕಾನೂನನ್ನು ರಚಿಸಿತು.

***********************

ಅಸಹಾಯಕ ಯುವತಿ ಮೇಲಿನ ಈ ರೀತಿಯ ಅಪರಾಧಕ್ಕೆ ಎಚ್ಚರಿಕೆ ರೂಪದ ಶಿಕ್ಷೆ ಅವಶ್ಯಕ. ಈ ಶಿಕ್ಷೆಯು ಇತರರಿಗೂ ಪಾಠವಾಗಲಿ ಎಂಬುದೇ ನ್ಯಾಯಾ­ಲಯದ ಆಶಯ

–ಯೋಗೇಶ್‌ ಖನ್ನಾ

ಹೆಚ್ಚುವರಿ ಸೆಷನ್‌ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry