ಶುಕ್ರವಾರ, ನವೆಂಬರ್ 15, 2019
21 °C

ಪಾಠೋಪಕರಣಕ್ಕೂ ಹೊರಗುತ್ತಿಗೆ!

Published:
Updated:

ಕಚೇರಿಯಿಂದ ದುಡಿದು ಬಸವಳಿದು ಬರುವ ಅಪ್ಪನಿಗೆ ಮರುದಿನದ ಕಚೇರಿ ಕೆಲಸಕ್ಕೆ ಸಿದ್ಧರಾಗುವುದೇ ಮೊದಲ ಆದ್ಯತೆ. ಅಮ್ಮನಿಗೆ ಮನೆ-ಕಚೇರಿ ನಿಭಾಯಿಸುವ ಜವಾಬ್ದಾರಿ.

ಇವರಿಬ್ಬರ ನಡುವೆ ಡೈರಿ ಹಿಡಿದು ಟೆನ್ನಿಸ್ ಕೋರ್ಟ್‌ನಲ್ಲಿನ ಚೆಂಡಿನಂತೆ ಓಡಾಡುವ ಮಗುವಿಗೆ ಪ್ರಾಜೆಕ್ಟ್ ಮುಗಿಸುವ ಒತ್ತಡ, ಧಾವಂತ, ಕುತೂಹಲ. ತನ್ನದೇ ಪ್ರಾಜೆಕ್ಟ್ ಚೆನ್ನಾಗಿರಲಿ ಎಂಬ ಕಾಳಜಿ.ಪಠ್ಯ ಆಧಾರಿತ ಪಾಠೋಪಕರಣಗಳನ್ನು ರೂಪಿಸುವುದು ಹಿಂದಿನಂತೆ ಈಗ ಸರಳವಾಗಿ ಉಳಿದಿಲ್ಲ. ಹಿಂದೆಲ್ಲ ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಷ್ಟಕ್ಕೆ ಮಾತ್ರ ಇಂಥ ಪ್ರಾಜೆಕ್ಟ್‌ಗಳ ವ್ಯಾಪ್ತಿ ಇತ್ತು. ಈಗಿನಂತೆ ಪೋಷಕರಿಗೆ ಅದೊಂದು ದೊಡ್ಡ ಪ್ರಕ್ರಿಯೆ ಆಗಿರಲಿಲ್ಲ. ದ್ವಿದಳ-ಏಕದಳ ಧಾನ್ಯಗಳ ಸಂಗ್ರಹ, ವಿವಿಧ ಎಲೆಗಳನ್ನು ಅಂಟಿಸುವುದು, ಹಕ್ಕಿಗಳ ಗರಿ ಹೆಕ್ಕಿ ಅಂಟಿಸುವುದು, ಸಾಕು ಪ್ರಾಣಿ- ಕಾಡು ಪ್ರಾಣಿಗಳ ಚಿತ್ರಗಳನ್ನು ಅಂಟಿಸುವುದೇ ಪ್ರಾಜೆಕ್ಟ್‌ಗಳಾಗಿದ್ದವು. ಇದಲ್ಲದಿದ್ದರೆ ಥರ್ಮಕೋಲ್‌ನಲ್ಲಿ ಮನೆ, ಮಣ್ಣಿನ ಮನೆ ನಿರ್ಮಾಣ, ಇಗ್ಲೂಗಳ ನಿರ್ಮಾಣ ಹೀಗೆ ಆಗಿನ ಪ್ರಾಜೆಕ್ಟ್‌ಗಳ ವ್ಯಾಪ್ತಿ ಇತ್ತಷ್ಟೆ.ಈಗ ಕಾಲ ಬದಲಾಗಿದೆ. ಅಪ್ಪ ಅಮ್ಮನಿಗೆ ಗೊತ್ತೇ ಇರದ ರೋಬೊಟಿಕ್ಸ್, ಎಲೆಕ್ಟ್ರಾನಿಕ್ಸ್, ಸೋಲಾರ್ ಸೈನ್ಸ್ ಮುಂತಾದ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿ ನೀಡಬೇಕು. ವಿಜ್ಞಾನದ ಈ ಪ್ರಮುಖ ಶಾಖೆಗಳನ್ನು ಆನ್ವಯಿಕ ವಿಜ್ಞಾನವಾಗಿಸಬೇಕು. ಪ್ರಾಯೋಗಿಕ ವಿಜ್ಞಾನವಾಗಿಸಿ, ಪ್ರಯೋಗಕ್ಕೆ ಇಳಿಸಬೇಕು. ಪ್ರಯೋಗದ ಫಲಗಳನ್ನು ಶಾಲೆಗೆ ಕೊಂಡೊಯ್ಯಬೇಕು. ಅಲ್ಲಿ ಹೇಳಿದ ಭಾಷೆಯಲ್ಲಿ, ರೂಪಿಸಿದ ಪ್ರಾಜೆಕ್ಟನ್ನು  ಪ್ರಸ್ತುತಪಡಿಸಬೇಕು... ಉಫ್..! ಇಷ್ಟಕ್ಕೆಲ್ಲ ಸಮಯವಿದೆಯೇ? ಪಾಲಕರೂ ಬ್ಯುಸಿ. ಮಕ್ಕಳಿಗೆ ಹೋಂವರ್ಕ್ ಹೊರೆ. ಅವುಗಳ ನಡುವೆಯೇ ಬಿಡುವು ಮಾಡಿಕೊಂಡೇ ಪ್ರಾಜೆಕ್ಟ್ ಮಾಡಬೇಕು.  ಶಾಲೆಯಲ್ಲಾದರೂ ಸೂಕ್ತ ಬೆಂಬಲ ಸಿಗುತ್ತದೆಯೇ? ಕೆಲವು ಶಾಲೆಗಳಲ್ಲಿ ಶಾಲಾ ಶಿಕ್ಷಕ ವೃಂದ ಪ್ರಾಜೆಕ್ಟ್ ಸಿದ್ಧ ಪಡಿಸುವಲ್ಲಿ ಸಹಾಯ ಮಾಡುತ್ತದೆಂಬುದು ನಿಜ. ಇನ್ನು ಕೆಲವು ಶಾಲೆಗಳಲ್ಲಿ ಇಂಥ ಪ್ರಾಜೆಕ್ಟ್ ಮಾಡಿಕೊಂಡು ಬರಬೇಕು ಎಂದಷ್ಟೇ ಹೇಳಲಾಗುತ್ತದೆ. ಕೊಟ್ಟ ಗಡುವಿನೊಳಗೆ ಅದನ್ನು ಸಿದ್ಧಪಡಿಸಿಕೊಂಡು ಹೋಗಬೇಕಾದದ್ದು ವಿದ್ಯಾರ್ಥಿಯ ಉಸಾಬರಿ.ನಿಗದಿತ ಸಮಯದಲ್ಲಿ ವಿಜ್ಞಾನವನ್ನು ಅರ್ಥೈಸಿಕೊಂಡು, ಅದಕ್ಕೆ ಬೇಕಿರುವ ಪರಿಕರಗಳನ್ನು ಸಂಗ್ರಹಿಸಿ, ಪ್ರಸ್ತುತಪಡಿಸುವ ಕಷ್ಟವನ್ನು ಹಗುರಗೊಳಿಸುವವರೂ ಇದ್ದಾರೆ. ನಗರದ ಎಸ್.ಪಿ ಲ್ಯಾಬ್ ಹಾಗೂ ಎಲ್‌ಗ್ರೀನ್ ವೆಂಚರ್ಸ್‌ ಅಪ್ಪಟ ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಮಾಡಲು ಸಹಾಯ ಮಾಡುತ್ತವೆ.ಇನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಜೇಡಿಮಣ್ಣಿನಲ್ಲಿ (ಅದೀಗ ಕ್ಲೇ ಎಂದೇ ಜನಜನಿತ), ವ್ಯಾಕ್ಸ್‌ಗಳಲ್ಲಿ (ಮೇಣ) ಮಾದರಿಗಳನ್ನು ಮಾಡಿಕೊಡಲು ರೂಪಾರಾಣಿ ಸಹ ಸಿದ್ಧರಾಗಿದ್ದಾರೆ.ನಗರದ ಎಲ್‌ಗ್ರೀನ್ ವೆಂಚರ್ಸ್‌ ಮೂಲ ವಿಜ್ಞಾನದ ಮಾದರಿಗಳನ್ನು ನಿರ್ಮಿಸಲು ಸಹಾಯ ಮಾಡುವ ಎಲ್ಲ ಪರಿಕರಗಳನ್ನೂ ಒದಗಿಸುತ್ತದೆ. ಜೊತೆಗೆ ಮಾಹಿತಿಯನ್ನೂ. ವಿಜ್ಞಾನಿ ಡಾ.ಸುಜಾತಾ ವಿರ್ಧೆ ಅವರ ಈ ಕಂಪೆನಿ ನಾಲ್ಕು ವರ್ಷ ವಯೋಮಾನದ ಮಕ್ಕಳಿಂದ ಆರಂಭಿಸಿ ಪಿಯುಸಿ ಮಕ್ಕಳವರೆಗೂ ವಿಜ್ಞಾನದೊಂದಿಗೆ ಆಟವಾಡುತ್ತ ಕಲಿಯುವುದನ್ನು ಹೇಳಿಕೊಡುತ್ತದೆ. ಇವರ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದಾಗಿದೆ.ಪ್ರೌಢಶಾಲಾ ಮಕ್ಕಳಿಗಾಗಿ ರೋಬೊಟಿಕ್ಸ್, ಎಲೆಕ್ಟ್ರಾನಿಕ್ಸ್, ಸೌರ ವಿಜ್ಞಾನ, ವೈಮಾನಿಕ ವಿಜ್ಞಾನ, ಖಗೋಲ ವಿಜ್ಞಾನಕ್ಕಾಗಿ ಸಹಾಯ ಮಾಡಲು ಎಸ್.ಪಿ.ಲ್ಯಾಬ್ಸ್‌ನವರು ಸಿದ್ಧರಾಗಿದ್ದಾರೆ. ನಿಮ್ಮ ಪರಿಕಲ್ಪನೆ, ಪಠ್ಯವನ್ನು ಹೇಳಿದರೆ ಅವರು ಸಹಾಯಕ್ಕಾಗಿ ಸಮಸ್ತ ಪರಿಕರಗಳೊಂದಿಗೆ ತರಬೇತಿ ನೀಡಲು ಸಿದ್ಧರಾಗುತ್ತಾರೆ. ಕೆಲವೊಂದು ಸಿದ್ಧ ಮಾದರಿಗಳನ್ನು ಮೂರು ಗಂಟೆಗಳಲ್ಲಿಯೇ ಬಳಸಲು ಮಾರ್ಗೋಪಾಯವನ್ನೂ ಸೂಚಿಸುತ್ತಾರಂತೆ.ಎಸ್.ಪಿ.ಲ್ಯಾಬ್‌ನ ಗುರು ಎಂಬುವವರು ಕಳೆದ ಒಂದು ವರ್ಷದಿಂದ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಓದಿದ್ದು ಬಿ.ಇ. ಕಂಪ್ಯೂಟರ್ಸ್‌. ಓದುವಾಗಲೇ ಇಂಥ ಪುಟ್ಟ ಮಾದರಿಗಳನ್ನು ಮಾಡುವ ಆಸಕ್ತಿ ಇತ್ತು. ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಅಪ್ಪ-ಅಮ್ಮನ ಬೆಂಬಲ ಇಂಥ ವಿಷಯಗಳಲ್ಲಿ ಸಿಗುವುದು ಕಡಿಮೆ. ಅದಕ್ಕೆ ಮೂಲ ಕಾರಣ ಸಮಯ. ಜೊತೆಗೆ ಬದಲಾಗುತ್ತಿರುವ ಪಠ್ಯಕ್ರಮ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡೇ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡರಂತೆ ಗುರು. ಅವರು ತಮ್ಮ ಬಳಿ ಬರುವವರಿಗೆ ಸೌರ ದೀಪ, ಸೌರ ಬೊಂಬೆ (ಸೌರಶಕ್ತಿಯಿಂದ ಚಲಿಸಬಲ್ಲ ಬೊಂಬೆ), ವಿದ್ಯುತ್ ಉತ್ಪಾದನೆ ಮುಂತಾದ ಮಾದರಿಗಳನ್ನೆಲ್ಲ ಮಾಡಿಕೊಡುತ್ತಾರಂತೆ.ಪ್ರಾಥಮಿಕ ಮಕ್ಕಳಿಗೆ ಹಾಗೂ ಪ್ರೌಢಶಾಲೆಯ ಮಕ್ಕಳಿಗಾಗಿ ಮೇಣದಲ್ಲಿ ಪ್ರತಿಕೃತಿಗಳನ್ನು ಮಾಡಿಕೊಡುತ್ತಾರೆ. ವೈವಿಧ್ಯಮಯ ಸಸ್ಯ, ಕಟ್ಟಡಗಳು, ಲ್ಯಾಂಡ್‌ಸ್ಕೇಪ್ ಮುಂತಾದವುಗಳನ್ನು  ರೂಪಾರಾಣಿ ರವೀಂದ್ರನ್ ಸಿದ್ಧಪಡಿಸಿಕೊಡುತ್ತಾರೆ.ಆದರೆ ಎಲ್ಲರೂ ಕೇಳುವುದು ಕಾಲಾವಕಾಶವನ್ನು. ಪ್ರಾಜೆಕ್ಟ್‌ನ ಸಂಕೀರ್ಣತೆಗೆ ತಕ್ಕಂತೆ ಸಮಯ ಹಾಗೂ ವೆಚ್ಚವನ್ನು ನಿರ್ಧರಿಸಲಾಗುತ್ತದೆ ಎನ್ನುತ್ತಾರೆ ಅವರು. ಕಲಿಕೆ ಸರಾಗಗೊಳಿಸಲು, ಹೆತ್ತವರ ಭಾರ ಇಳಿಸಲು ಇಂಥ ಮಾಸ್ಟರ್ಸ್‌ ನಗರದಲ್ಲಿ ಎಲ್ಲೆಡೆಯೂ ಇದ್ದಾರೆ. ಹುಡುಕಬೇಕಷ್ಟೆ. ನಿಮ್ಮದೂ ಪ್ರಾಜೆಕ್ಟ್ ಇದೆಯಾ?ಮಾಹಿತಿಗೆ ಸಂಪರ್ಕಿಸಿ: ಎಲ್‌ಗ್ರೀನ್ ವೆಂಚರ್ಸ್ www.lgreenventures.com,, ಅಥವಾ 94488 27438. ಎಸ್.ಪಿ.ಲ್ಯಾಬ್ಸ್ ಗುರು: 99007 05565. ಪಾರಾಣಿ ರವೀಂದ್ರನ್: 97407 10359.  

ಪ್ರತಿಕ್ರಿಯಿಸಿ (+)