ಪಾಠ ಕಲಿಸಿದ ಸರಣಿ

7

ಪಾಠ ಕಲಿಸಿದ ಸರಣಿ

Published:
Updated:

ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿಯನ್ನು ಭಾರತ ಸೋತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಯ್ಕೆ ಸಮಿತಿ ಪಂಡಿತರು ಮಹೇಂದ್ರಸಿಂಗ್ ದೋನಿ ಅವರನ್ನು ನಾಯಕಪಟ್ಟದಿಂದ ಕೆಳಗಿಳಿಸುವರೇ ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಕೊನೆಗೂ ತಂಡದಿಂದ ಕೈಬಿಡುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವರೇ ಎಂಬ ಕುತೂಹಲ ಮೂಡಿದೆ.ಭಾರತ ಈ ಸರಣಿಯನ್ನು ಸೋಲುವ ನಿರೀಕ್ಷೆ ಯಾರಿಗೂ ಇರಲಿಲ್ಲ. ಇಂಗ್ಲೆಂಡ್‌ನಲ್ಲಿ ಅನುಭವಿಸಿದ್ದ ಅವಮಾನಕರ ಸೋಲಿನ ಸೇಡನ್ನು ಭಾರತ ತನ್ನ ನೆಲದ ಮೇಲೆ ಖಂಡಿತವಾಗಿಯೂ ತೀರಿಸಿಕೊಳ್ಳುವುದೆಂಬ ಆಶಾಭಾವನೆ ಆಟಗಾರರಲ್ಲಿತ್ತು. ಆದರೆ ಮೊದಲ ಟೆಸ್ಟ್‌ನ ಸೋಲಿನ ನಂತರ ಇಂಗ್ಲೆಂಡ್ ತೋರಿದ ಜಿಗುಟುತನ, ವೃತ್ತಿಪರ ಮನೋಭಾವ ಭಾರತ ತಂಡವನ್ನು ಕಂಗೆಡಿಸಿತು. ಸ್ಪಿನ್ ಶಕ್ತಿಯಿಂದ ಎದುರಾಳಿಯನ್ನು ಹಣಿಯುವ ಭಾರತ ತಂಡದ ತಂತ್ರ ಅದಕ್ಕೇ ತಿರುಮಂತ್ರವಾಯಿತು. ಭಾರತದ ಸ್ಪಿನ್ನರುಗಳಿಗೆ ಆಗದ್ದನ್ನು ಇಂಗ್ಲೆಂಡ್ ಸ್ಪಿನ್ನರುಗಳು ಸಾಧಿಸಿದರು. ಭಾರತದ ಅಗ್ರಮಾನ್ಯ ಬ್ಯಾಟ್ಸ್‌ಮನ್ನರು ಮುಗ್ಗರಿಸಿದ ಪಿಚ್ ಮೇಲೆಯೇ ಇಂಗ್ಲೆಂಡ್ ಆಟಗಾರರು ರನ್ನುಗಳ ಸೌಧ ಕಟ್ಟಿದರು. ನೆಲ ಡೊಂಕು ಎಂಬ ನೆಪಗಳೊಂದಿಗೆ ತಮಗೆ ಬೇಕಾದ ರೀತಿ ಪಿಚ್ ಸಿದ್ಧಪಡಿಸಲಿಲ್ಲ ಎಂದು ದೋನಿ ಸಿಟ್ಟಿಗೆದ್ದರು.ಆಟಗಾರರಿಗೆ ಸೊಕ್ಕು ಹೆಚ್ಚಾದರೆ ಆಟವೇ ಪಾಠ ಕಲಿಸುತ್ತದೆ ಎಂದು ಹೇಳಲಾಗುತ್ತದೆ. ಚುಟುಕು ಕ್ರಿಕೆಟ್‌ನ ಸಕಲೈಶ್ವರ್ಯದ ಮೋಹದಲ್ಲಿ ಸಿಲುಕಿರುವ ಭಾರತದ ಆಟಗಾರರಿಗೆ ಈ ಸರಣಿ ಪಾಠ ಕಲಿಸಿದೆಯೇ? ಮುಂದಿನ ದಿನಗಳೇ ಹೇಳಬೇಕು.

ಭಾರತದ ಸೋಲಿಗೆ ಕಾರಣಗಳನ್ನು ಹುಡುಕಬೇಕು. ತಪ್ಪುಗಳನ್ನು ತಿದ್ದಿಕೊಂಡಲ್ಲಿ ಮಾತ್ರ ಆಟ ಬೆಳೆಯುತ್ತದೆ. ದೋನಿ ಅವರನ್ನು ತೆಗೆಯಬೇಕೆಂದು ಹೇಳುವ ಮೊದಲು ಅವರು ವಿಶ್ವ ಕಪ್ ಗೆದ್ದುಕೊಟ್ಟದ್ದನ್ನು, ಭಾರತ ತಂಡವನ್ನು ಟೆಸ್ಟ್ ಕ್ರಮಾಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿಸಿದ್ದನ್ನು ಮರೆಯಬಾರದು.ಸರಣಿ ಸೋಲಿಗೆ ನಾಯಕ ಜವಾಬ್ದಾರನಾದರೂ ಉಳಿದ ಆಟಗಾರರ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ. ಆಯ್ಕೆಗಾರರು ಅವರೊಡನೆ ಚರ್ಚಿಸಿ ಇನ್ನೊಂದು ಅವಕಾಶ ಕೊಡಬೇಕು. ಹಾಗೆಯೇ ಸಚಿನ್ ತೆಂಡೂಲ್ಕರ್ ನಿವೃತ್ತಿಯಾಗಬೇಕು ಎಂದು ಹೇಳುತ್ತಿರುವವರು `ಆರಾಮಕುರ್ಚಿ ಟೀಕಾಕಾರರು' ಎಂದಿರುವ ಕೆಲವು ಮಾಜಿ ಆಟಗಾರರು `ಕ್ರಿಕೆಟ್‌ದೇವರ' ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಸಚಿನ್ ಇದಕ್ಕೆ ಸ್ಪಂದಿಸುತ್ತಿಲ್ಲ. ಅವರ ಬ್ಯಾಟ್ ಮತ್ತು ಪ್ಯಾಡ್ ನಡುವಿನ ಅಂತರ ಹೆಚ್ಚುತ್ತಿದೆ. 23 ವರ್ಷಗಳ ಅವರ ಸಾಧನೆ, ಜನಪ್ರಿಯತೆಗೆ ಎರಡು ಮಾತಿಲ್ಲವಾದರೂ ಎಲ್ಲರೂ ಒಂದು ರೀತಿಯ ಕುರುಡು ಮಮಕಾರವನ್ನು ವ್ಯಕ್ತಪಡಿಸುತ್ತಿರುವಂತಿದೆ.ಕ್ರಿಕೆಟ್ ಜಗತ್ತನ್ನು ರೋಮಾಂಚನಗೊಳಿಸಿರುವ ಸಚಿನ್ ತಮ್ಮ  ನಿವೃತ್ತಿಯನ್ನು ತಾವೇ ನಿರ್ಧರಿಸಲಿ ಎಂದು ಹೇಳುವುದು ಸರಿಯೆನಿಸಿದರೂ ಅವರು ಹೀಗೆ ಕುಂಟುತ್ತ ಹೆಜ್ಜೆ ಇಡುವುದು ನೋವುಂಟುಮಾಡುತ್ತದೆ. ರಾಹುಲ್ ದ್ರಾವಿಡ್, ಲಕ್ಷ್ಮಣ್, ರಿಕಿ ಪಾಂಟಿಂಗ್ ಅವರಂತೆಯೇ ಎಲ್ಲರೂ ಸೈ ಎನ್ನುವ ಹಂತದಲ್ಲೇ ಸಚಿನ್ ಕೂಡ ನಿವೃತ್ತಿಯಾಗುವುದು ಅವರ ಹಿರಿಮೆಯನ್ನು ಹೆಚ್ಚಿಸುತ್ತದೆ. ಆಟಗಾರನಿಗಿಂತ ಆಟ ದೊಡ್ಡದು ಎಂಬ ಮಾತು ಇಲ್ಲಿ ಅನ್ವಯವಾಗುತ್ತದೆ. ಕ್ರಿಕೆಟ್‌ನಲ್ಲಿ ಹೊಸ ನೀರು ಹರಿದರೇ ಚೆನ್ನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry