ಪಾತಾಳದತ್ತ ರೂಪಾಯಿ ಮೌಲ್ಯ
ಮುಂಬೈ (ಪಿಟಿಐ): ದಿನೇ ದಿನೇ ರೂಪಾಯಿ ತನ್ನ ಬೆಲೆ ಕಳೆದುಕೊಳ್ಳುತ್ತಲೇ ಇದೆ. ದೇಶದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮೌಲ್ಯ ಪಡೆಯಿತು. ಮಧ್ಯಾಹ್ನದ ವೇಳೆಗೆ ಅಮೆರಿಕದ ಡಾಲರ್ ಎದುರು ರೂ57.37ರವರೆಗೂ ಕುಸಿದ ರೂಪಾಯಿ, ಸಂಜೆ ರೂ57.15ರಲ್ಲಿ ಕೊನೆಗೊಂಡಿತು. ಒಂದೇ ದಿನದಲ್ಲಿ ಒಟ್ಟು 85 ಪೈಸೆಯಷ್ಟು ಬೆಲೆ ಕಳೆದುಕೊಂಡಿತು.
ಭಾರತೀಯ ರಿಸರ್ವ್ ಬ್ಯಾಂಕ್ನ ರೂಪಾಯಿ ಅಪಮೌಲ್ಯ ತಡೆಯುವಂತಹ ಕ್ರಮಗಳೇನೂ ಫಲ ನೀಡುತ್ತಿಲ್ಲ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್ಬಿಐ ಜಾದೂ ನಡೆಯುತ್ತಿಲ್ಲ. ಸತತ 5ನೇ ದಿನವೂ ರೂ ಕುಸಿತ ಮುಂದುವರಿದಿದೆ ಎಂದು ಹಣ ವಿನಿಮಯ ದಳ್ಳಾಳಿಗಳು ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 18 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ತೈಲ ಖರೀದಿ ಭರಾಟೆಯೂ ಹೆಚ್ಚಿದೆ. ಪರಿಣಾಮ ಭಾರತದ ತೈಲ ಕಂಪೆನಿಗಳು ಭಾರಿ ಪ್ರಮಾಣದಲ್ಲಿ ಖರೀದಿ ನಡೆಸುತ್ತಿದ್ದು, ಆರ್ಬಿಐನಿಂದ ಹೆಚ್ಚು ಹೆಚ್ಚು ಡಾಲರ್ ಬೇಡುತ್ತಿವೆ. ಇದರಿಂದಾಗಿಯೇ ಡಾಲರ್ ವಿರುದ್ಧ ರೂಪಾಯಿ ಬೆಲೆ ಕುಸಿಯುತ್ತಲೇ ಸಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಇದೇ ವೇಳೆ ರಿಸರ್ವ್ ಬ್ಯಾಂಕ್, `ಕಚ್ಚಾ ತೈಲ ಆಮದು ಮಾಡಿಕೊಳ್ಳುವುದಕ್ಕೆ ಅಗತ್ಯವಿರುವಷ್ಟೂ ಡಾಲರ್ ಪಡೆಯುವುದನ್ನು ಕೈಬಿಡಿ. ಡಾಲರ್ ಬೇಡಿಕೆಯನ್ನು ಅರ್ಧಕ್ಕೆ ಇಳಿಸಿರಿ. ಸರ್ಕಾರಿ ಸ್ವಾಮ್ಯದ ಒಂದೇ ಬ್ಯಾಂಕ್ನಿಂದ ಡಾಲರ್ ಪಡೆಯಿರಿ~ ಎಂದು ದೇಶದ ತೈಲ ಕಂಪೆನಿಗಳಿಗೆ ನಿರ್ದೇಶನ ನೀಡಿದೆ. ಆ ಮೂಲಕ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ತಗ್ಗಿಸಲು ಯತ್ನಿಸುತ್ತಿದೆ.
ಸರ್ಕಾರ ಭರವಸೆ: ಕೇಂದ್ರ ಸರ್ಕಾರದ ಹಣಕಾಸು ಕಾರ್ಯದರ್ಶಿ ಆರ್.ಎಸ್. ಗುಜ್ರಾಲ್, `ವಿದೇಶಿ ನಗದು ದೇಶದೊಳಕ್ಕೆ ಹೆಚ್ಚು ಹರಿದುಬರುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಹಾಗಿದ್ದೂ ರೂ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಸರ್ಕಾರವನ್ನೂ ಚಿಂತೆಗೀಡು ಮಾಡಿದೆ. ಅಪಮೌಲ್ಯ ತಡೆಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಲಿದೆ~ ಎಂದು ಭರವಸೆಯ ಮಾತನಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.