ಪಾದಚಾರಿಗಳ ಪಾಲಿಗೆ ‘ಸಂಚಾರ’ ದುಸ್ತರ

7

ಪಾದಚಾರಿಗಳ ಪಾಲಿಗೆ ‘ಸಂಚಾರ’ ದುಸ್ತರ

Published:
Updated:
ಪಾದಚಾರಿಗಳ ಪಾಲಿಗೆ ‘ಸಂಚಾರ’ ದುಸ್ತರ

ತುಮಕೂರು: ಕಳೆದ ‘ಆಗಸ್ಟ್‌ 30’ ಪಾದಚಾರಿ ಹನುಮಂತರಾಯಪ್ಪ ಅವರ ಪಾಲಿಗೆ ಕೆಟ್ಟ ದಿನವಾಗಿತ್ತು. ಅಂತರಸನಹಳ್ಳಿ ಕೈಗಾರಿಕೆ ಪ್ರದೇಶ­ದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ಅವರ ಮೇಲೆ ಟೆಂಪೊ ಹರಿಸಿದ ಚಾಲಕ ಪರಾರಿಯಾಗಿದ್ದ.–ಇದು ನಗರ ಹೊರವಲಯದ ಪರಿಸ್ಥಿತಿ.ಇನ್ನು ನಗರದಲ್ಲಿ ಸಂಚಾರ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಇದಕ್ಕೊಂದು ನಿದರ್ಶನ ಸ್ವತಂತ್ರ (ಚರ್ಚ್) ವೃತ್ತ.  ಸಂಚಾರಿ ಇಲಾಖೆ ಮೂಲಗಳ ಪ್ರಕಾರ, ಅಲ್ಲಿ ಅಷ್ಟಾಗಿ ಜನ ಸಂಚಾರ ಇಲ್ಲ­-ದಿರು­ವುದರಿಂದ ಅಗತ್ಯವಿಲ್ಲ. ಆದರೆ ಈ ಪ್ರದೇಶದಲ್ಲಿ ಸದ್ಯದ ಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ.ಎಸ್‌ಬಿಎಂ ಬ್ಯಾಂಕ್‌, ಕೋತಿತೋಪು, ಎಂಜಿ ರಸ್ತೆ, ಕೋಡಿ ವೃತ್ತ, ಬಸ್‌ ನಿಲ್ದಾಣಗಳಿಗೆ ಸಂಪರ್ಕ ಮಾರ್ಗವಾಗಿರುವುದರಿಂದ ನಿತ್ಯ ಅಪಾರ ಸಂಖ್ಯೆ ಪಾದಚಾರಿಗಳು ಇಲ್ಲಿ ಸಂಚರಿಸುತ್ತಾರೆ. ಇದೇ ಸ್ಥಿತಿ ಕ್ಯಾತ್ಸಂದ್ರ, ಕಾಲ್ಟೆಕ್ಸ್‌, ಎಸ್‌ಐಟಿ ಹಾಗೂ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕಂಡುಬರುತ್ತದೆ. ಇಲ್ಲಿ ಇಡೀ ದಿನ ವಾಹನ ಸವಾರರದ್ದೇ ‘ಪ್ರಾಬಲ್ಯ’ ಇರುತ್ತದೆ.ನಗರಕ್ಕೆ ‘ಟ್ರಾಫಿಕ್‌ ಸಿಗ್ನಲ್‌’ ಎನ್ನುವ ಕಲ್ಪನೆಯೇ ತಡವಾಗಿ ಬಂದಿದೆ. ಇನ್ನು ಪಾದಚಾರಿಗಳ ಸಂಚಾರಕ್ಕೆ ಆದ್ಯತೆ ನೀಡುತ್ತಾರೆಯೇ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.  ‘ಪ್ರಜಾವಾಣಿ’ ಜತೆ ಮಾತನಾಡಿದ ಅಭಿವೃದ್ಧಿ ಪೋರಂನ ಕುಂದರನಹಳ್ಳಿ ರಮೇಶ್‌ ‘ಜಿಲ್ಲಾ­ಡಳಿತ, ನಗರಸಭೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಸಂಚಾರಿ ಪೊಲೀಸರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಯೋಜನೆ ರೂಪಿಸಬೇಕಾದ ಅಗತ್ಯವಿದೆ.ಈ ಹಿಂದೆ ಫ್ಲೈ ಓವರ್ ನಿರ್ಮಾಣದ ಯೋಜನೆಯು ಕೆಲವರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಯಿತು. ನಾವೆಲ್ಲರೂ ‘ವಾಹನ ಸಂಸ್ಕೃತಿ’ಗೆ ಆದ್ಯತೆ ನೀಡುತ್ತಿದ್ದೇವೆ.ಪಾದಚಾರಿ­ಗಳು ರಸ್ತೆ ಮೇಲೆ ಕಾಲಿಡಲು ಹಕ್ಕಿಲ್ಲ ಎಂಬ ವರ್ತನೆ ಶ್ರೀಮಂತ ಹಾಗೂ ಎಲ್ಲ ಅಧಿಕಾರಿ­ಗಳಲ್ಲಿ ಇರುವುದು ವಿಷಾದಕರ’ ಎಂದು ಹೇಳಿದರು.ತುರ್ತಾಗಿ ನಗರದಲ್ಲಿ ಪಾದಚಾರಿಗಳ ದೀಪ ಅಳವಡಿಸುವ ಕುರಿತು ಸಮೀಕ್ಷೆ ನಡೆಯಬೇಕು. ಎಲ್ಲಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ತುರ್ತಾಗಿ ಅಳವಡಿಸಬೇಕು ಎನ್ನುತ್ತಾರೆ.  ಪ್ರಮುಖವಾಗಿ  ಡಾ.ಶಿವಕುಮಾರ ಸ್ವಾಮೀಜಿ ವೃತ್ತ, ಕೋಡಿ ವೃತ್ತ ಹಾಗೂ ಭದ್ರಮ್ಮ ಛತ್ರ­ದಲ್ಲಿನ ಸಂಚಾರ ದೀಪಗಳಲ್ಲಿ ಪಾದಚಾರಿ­ಗಳಿ­ಗಾಗಿ ದೀಪಗಳಿವೆ. ಆದರೆ ಸರಿಯಾಗಿ ಪಾಲನೆ ಆಗುತ್ತಿಲ್ಲ ಎನ್ನುತ್ತಾರೆ ನಿತ್ಯ ಓಡಾಡುವ ಜನರು.  ಇಲ್ಲಿ ಪಾದಚಾರಿಗಳಿಗಾಗಿ ದೀಪ ಹೊತ್ತಿದ್ದರೂ ಸವಾರರು ಹಾಗೇ ನುಗ್ಗುತ್ತಲೇ ಇರುತ್ತಾರೆ.ಟೌನ್‌ಹಾಲ್‌ನಲ್ಲಿ ನಿತ್ಯ ಓಡಾಡುವ ನಿವೃತ್ತ ನೌಕರ ಗಂಗಾಧರಯ್ಯ ಪ್ರಕಾರ, ‘ವೃತ್ತದಲ್ಲಿ ಪಶ್ಚಿಮ, ಪೂರ್ವ ದಿಕ್ಕಿಗೆ ಹೊರಡುವ ವಾಹನ ಸವಾರರು 30 ಸೆಕೆಂಡ್‌ ತನಕ ಕಾಯಬೇಕು. ಉತ್ತರ, ದಕ್ಷಿಣ ದಿಕ್ಕಿಗೆ ಹೊರಡುವ ಸವಾರರು 101 ಸೆಕೆಂಡ್‌ ತನಕ ಕಾಯಬೇಕು.

ಇದಾದ ಮೇಲೆ ಪಾದಚಾರಿಗಳ ಸರದಿ. ವೃದ್ಧರು, ಮಕ್ಕಳು, ಮಹಿಳೆಯರು ಇಲ್ಲಿ ರಸ್ತೆ ದಾಟ­ಬೇಕಾದರೆ ಇನ್ನೊಬ್ಬರ ಸಹಾಯ ಬೇಕೇ­ಬೇಕು.

ಮನೆಯಲ್ಲಿ ಇರುವವಳು ನನ್ನ ವೃದ್ಧ ಪತ್ನಿ ಮಾತ್ರ. ಸಹಾಯಕ್ಕೆ ಯಾರನ್ನು ಕರೆತರಲಿ’ ಎಂಬ ಅವರ ಮಾತೇ ಹಲವು ಪ್ರಶ್ನೆಗಳನ್ನು ಮೂಡಿಸುತ್ತವೆ.ಪಾದಚಾರಿಗಳಿಗಾಗಿ ಸೇತುವೆ !

ಪಾದಚಾರಿ ಸೇತುವೆ ನಿರ್ಮಾಣಕ್ಕೆ ಈಗಾ­ಗಲೇ ಅನುದಾನ ಬಿಡುಗಡೆ­ಯಾಗಿದೆ. ಸಿದ್ದಗಂಗಾ ಡಿ.ಇಡಿ ಕಾಲೇಜು, ಇನ್ನೊಂದು ಸರ್ಕಾರಿ ಪಿಯು ಕಾಲೇಜು ಹತ್ತಿರ ಸೇತುವೆ ನಿರ್ಮಾಣವಾಗಲಿವೆ. ಈ ಹಿಂದೆ ನಗರಾಭಿವೃದ್ಧಿ ಇಲಾಖೆ ಅಧೀನ ನಗರ ಸಾರಿಗೆ ನಿರ್ದೇಶನಾಲಯ ತುಮಕೂರಿನಲ್ಲಿನ ಸಂಚಾರ ಅಭಿವೃದ್ಧಿಗೆ ಕೆಲವು ಸಮೀಕ್ಷೆಗಳನ್ನು ನಡೆಸಿ, ಸಲಹೆ­ಗಳನ್ನು ನೀಡಿತ್ತು. ಆದರೆ ಹಲವು ಸಲಹೆ­ಗಳು ಕಡತಗಳಲ್ಲೇ ಉಳಿದಿವೆ.ಏನ್ಮಾಡಬಹುದು ?

ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಪಾದಚಾರಿಗಳ ಹಕ್ಕು ಕುರಿತು ಜಾಗೃತಿ ಸಭೆ ನಡೆಸುವುದು. ವೇಗದ ಮಿತಿಗೆ ಡಿಜಿಟಲ್‌ ಸೂಚನಾ ಫಲಕಗಳನ್ನು ಹಾಕುವುದು, ಸಂಚಾರ ಪಾಲನೆಗೆ ವಿಶೇಷ ಪೊಲೀಸರ ನಿಯೋಜನೆ, ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸಬೇಕು. ಶೇ 90ರಷ್ಟು ಅಪಘಾತಗಳು ಸಂಭವಿಸುವುದು ಅತಿಯಾದ ವೇಗದಿಂದಲೇ ಎನ್ನುತ್ತಾರೆ ಸಂಚಾರಿ ಪೊಲೀಸರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry