ಬುಧವಾರ, ಡಿಸೆಂಬರ್ 11, 2019
24 °C

ಪಾದಚಾರಿಗಳ ಸಂಕಟ

Published:
Updated:
ಪಾದಚಾರಿಗಳ ಸಂಕಟ

ಅವರ ವಯಸ್ಸು ಎಪ್ಪತ್ತಂತೂ ದಾಟಿದೆ. ಹಿಮಪದರ ಮೂಡಿದಂತಿದ್ದ ದಪ್ಪಗಾಜಿನ ಕನ್ನಡಕ ಮೂಗಿನಿಂದ ಇನ್ನೇನು ಜಾರಿಬೀಳುವಂತಿತ್ತು. ತಲೆಮೇಲೆತ್ತಿದವರೇ ಅವರು ಕೇಳಿದ್ದು, `ಇಲ್ಲಿ ಫುಟ್‌ಪಾತ್ ಎಲ್ಲಿ~. ದೂರದೂರಿಂದ ನೆಂಟರ ಮನೆ ತಲುಪಲು ಬಸ್ಸಿನಿಂದ ಇಳಿದ ಅವರು ರಸ್ತೆ ದಾಟುವುದು ಹಾಗಿರಲಿ, ಪಾದಚಾರಿ ಮಾರ್ಗ ಎಲ್ಲಿ ಹೋಯಿತೋ ಎಂದು ಕಂಗಾಲಾಗಿದ್ದರು. ಕೊನೆಗೆ ಯಾರೋ ಪುಣ್ಯಾತ್ಮರು ಮೊಬೈಲ್‌ನಿಂದ ಅವರ ನೆಂಟರ ಮನೆಗೆ ಫೋನಾಯಿಸಿ, ಅವರೇ ಅಲ್ಲಿಗೆ ಬಂದು ಆ ವಯೋವೃದ್ಧರನ್ನು ಮನೆಗೆ ಕರೆದೊಯ್ಯುವಂತೆ ಮಾಡಿದರು.ನಗರದ ಅಭಿವೃದ್ಧಿಯ ಸಂಕೇತಗಳಂತೆ ಕಾಣುವ ರಸ್ತೆ ಪಕ್ಕ ಅಸ್ತವ್ಯಸ್ತವಾದ ಫುಟ್‌ಪಾತ್‌ಗಳ ಹಿಂದೆ ಇಂಥ ಅಸಂಖ್ಯ ಕತೆಗಳು ಹುದುಗಿವೆ.ಪಾದಚಾರಿಗಳ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಪಾದಚಾರಿ ಮಾರ್ಗವನ್ನೇನೋ ನಿರ್ಮಿಸಲಾಗುತ್ತದೆ. ಆದರೆ ಅದು ನಡೆವವರ ಬಳಕೆಗೆ ಸಿಗುವುದೇ ಇಲ್ಲ. ಕೆಲವೇ ದಿನಗಳಲ್ಲಿ ವ್ಯಾಪಾರಿಗಳ ಹಾಗೂ ಲಘು ವಾಹನಗಳ ಸ್ವತ್ತಾಗಿ ಬಿಡುತ್ತದೆ.ಕೆಲವು ಕಡೆ ವರ್ಷಗಳಿಂದಲೂ ಮುಗಿಯದ ಕಾಮಗಾರಿಗಳು, ಕೆಲವೆಡೆ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವ ಬೀದಿಬದಿ ವ್ಯಾಪಾರಿಗಳು, ಮತ್ತೊಂದೆಡೆ ಪಾದಚಾರಿ ಮಾರ್ಗವನ್ನು ಬಳಸಿಕೊಂಡು ಮುನ್ನುಗ್ಗುವ ವಾಹನಗಳು (ಮುಖ್ಯವಾಗಿ ದ್ವಿಚಕ್ರ). ಈ ಕಾರಣಗಳಿಂದ ಪಾದಚಾರಿಗಳಿಗೆ ಸಂಕಟ ಬಂದೊದಗಿದೆ.ಶಿವಾಜಿನಗರ, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಮಲ್ಲೇಶ್ವರ, ಗಾಂಧಿಬಜಾರ್, ಡಿವಿಜಿ ರಸ್ತೆ, ಜಯನಗರದ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರಿಗಳ ಆಕ್ರಮಣವಾದರೆ, ಕ್ವೀನ್ಸ್ ರಸ್ತೆ, ಕೆ.ಆರ್. ವೃತ್ತ ಒಳಗೊಂಡಂತೆ ಅನೇಕ ಕಡೆ ವಾಹನಗಳ ಅತಿಕ್ರಮಣ ಸಮಸ್ಯೆ ಇದೆ. ಅಲ್ಲದೆ ವಾಹನ ನಿಲುಗಡೆಗೆ ಉತ್ತಮ ವ್ಯವಸ್ಥೆ ಇಲ್ಲದಿರುವುದು ಕೂಡ ಈ ಸಮಸ್ಯೆಗೆ ಒಂದು ಮುಖ್ಯ ಕಾರಣ.ಬೇರೆಯದಕ್ಕೇ ಬಳಕೆ

ಪಾದಚಾರಿ ಮಾರ್ಗಗಳು ಇಂದು ವ್ಯಾಪಾರ-ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಆದರೆ ಪಾದಚಾರಿಗಳಿಗಾಗಿಯೇ ಪಾದಚಾರಿ ಮಾರ್ಗವನ್ನು ನಿರ್ಮಿಸಿ ಈ ಉದ್ದೇಶವನ್ನು ಸಫಲಗೊಳಿಸುವಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ.`ಬೆಳಗಿನ ಜಾವ ನಾನು ಹಾಗೂ ನನ್ನ ಪತ್ನಿ ವಾಕಿಂಗ್‌ಗೆ ಹೋಗುತ್ತೇವೆ. ನಮ್ಮ  ಫುಟ್‌ಪಾತ್‌ಗಳು ಇಷ್ಟು ವಿಶಾಲವಾಗಿವೆಯೇ ಎಂದು ಆಶ್ಚರ್ಯ ಪಡುವಂತೆ ಕಂಡು ಬರುತ್ತವೆ. ಆದರೆ ಅದೇ ದಿನ ಸಂಜೆ ದೇವಸ್ಥಾನದವರೆಗೂ ಹೋಗಿ ಬರೋಣ ಎಂದು ಹೊರಟರೆ ಫುಟ್‌ಪಾತೇ ಮಾಯ! ರಸ್ತೆಯ ಮೇಲೆ ವಾಹನಗಳ ಭರಾಟೆ, ಪಾದಚಾರಿ ಮಾರ್ಗಗಳ ಮೇಲೆ ಭರ್ಜರಿ ವ್ಯಾಪಾರ. ಅಲ್ಲಿಯೇ ನಿಂತ ಪೋಲಿಸರಿಗೆ ಇದ್ಯಾವುದರ ಪರಿವೆಯೂ ಇಲ್ಲ. ನಾವು ನಮ್ಮ ಅತ್ಯಂತ ಪ್ರೀತಿಯ `ಸಂಜೆ ವಾಕ್~ ಅನ್ನು ಬಹುತೇಕ ನಿಲ್ಲಿಸಿದ್ದೇವೆ~ ಎನ್ನುತ್ತಾರೆ ಮಲ್ಲೇಶ್ವರದ ನಿವಾಸಿ ವಿಶ್ವನಾಥ್.ಇಂದಿರಾನಗರದ ನಿವಾಸಿ ಆಶಾಲತಾ ಹಾಗೂ ನಂಜುಂಡಸ್ವಾಮಿ ವರ್ಷಗಳ ಹಿಂದೆ ಇಂದಿರಾನಗರದ ಪಾದಚಾರಿ ಮಾರ್ಗದಲ್ಲಿ ನಡೆಯುವ ಸಂತಸವನ್ನು ಹಂಚಿಕೊಂಡರು. `ಗಿಡಮರಗಳಿಂದ ಕೂಡಿದ ಈ ಮಾರ್ಗದಲ್ಲಿ ಆಗ ನಡೆಯುವುದೇ ಒಂದು ಭಾಗ್ಯವಾಗಿತ್ತು.ಆದರೆ, ಈಗ ಮೆಟ್ರೊ ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿ ನಡೆಯುವುದೆ ನರಕಸದೃಶ ಅನುಭವವಾಗಿದೆ. ಕೆಲವೆಡೆಯಂತೂ ರಸ್ತೆ, ಪಾದಚಾರಿ ಮಾರ್ಗಗಳ ನಡುವಿನ ವ್ಯತ್ಯಾಸ ಗುರುತಿಸುವುದೇ ಅಸಾಧ್ಯ. ಮೆಟ್ರೊ ಕಾಮಗಾರಿಯ ಪರಿಕರ ಪಾದಚಾರಿ ಮಾರ್ಗವನ್ನು ನುಂಗಿವೆ~ ಎನ್ನುವುದು ಅವರ ದೂರು.`ವಿಜಯನಗರದಿಂದ ಎಂ.ಸಿ.ಬಡಾವಣೆ ಹಾಗೂ ಗೋವಿಂದರಾಜನಗರದ ಕಡೆ ಹೊರಡುವಾಗ ಫುಟ್‌ಪಾತ್ ಮೇಲೆ ನಡೆಯುವುದು ಸಾವಿನ ಹಲಗೆಯ ಮೇಲೆ ನಡೆದಂತೆಯೇ ಸರಿ~ ಎನ್ನುತ್ತಾರೆ ವಿಜಯನಗರದ ವಸಂತಗೀತಾ.`ಹೆಜ್ಜೆ ಇಟ್ಟರೆ ಅಲುಗಾಡುವ ಸಡಿಲವಾದ ಸ್ಲ್ಯಾಬ್‌ಗಳು ಯಾವಾಗ ನಮ್ಮನ್ನು ನುಂಗಿ ಹಾಕುತ್ತವೋ ಎಂಬ ಭೀತಿಯಿಂದಾಗಿ ತಲೆ ಬಗ್ಗಿಸಿ ಆ ಅಲುಗಾಡುವ ಸ್ಲ್ಯಾಬ್‌ಗಳ ಮೇಲೆ ಒಂದೊಂದೇ ಹೆಜ್ಜೆ ಇಟ್ಟು ನಡೆಯಬೇಕು~ ಎನ್ನುತ್ತಾರೆ ಅವರು.ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಪೊಲೀಸರಿಂದ ಬಾಡಿಗೆ ಪಡೆದಂತೆ ವರ್ತಿಸುತ್ತಾರೆ. ಅಂಗಡಿಯ ವ್ಯಾಪ್ತಿಯನ್ನು ದಾಟಿ ಪಾದಚಾರಿ ಮಾರ್ಗಗಳ ಮೇಲೆ ವಸ್ತುಗಳನ್ನು ತಂದಿಡುವುದು ಇಲ್ಲಿ ಸಾಮಾನ್ಯ. `ಇಷ್ಟು ಪುಟ್ಟ ಅಂಗಡಿಯಲ್ಲಿ ಇಷ್ಟು ದೊಡ್ಡ ದೊಡ್ಡ ವಸ್ತುಗಳನ್ನು ಎಷ್ಟೂಂತ ಇಡೋಕಾಗುತ್ತೆ? ತಪ್ಪೇನು? ಅಷ್ಟಕ್ಕೂ ನಾವು ಪುಕ್ಕಟೆ ಇಡುತ್ತೇವಾ? ಪೊಲೀಸರಿಗೆ ದುಡ್ಡು ಕೊಡಲ್ವಾ?~ ಎಂದು ಮರು ಪ್ರಶ್ನಿಸುತ್ತಾರೆ ವ್ಯಾಪಾರಿಗಳು.ಬೀದಿ ವ್ಯಾಪಾರಿಗಳ ಗೋಳು

ಶಿವಾಜಿನಗರದ ಚರ್ಚ್ ಹತ್ತಿರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಒಳಗೊಂಡಂತೆ ಅನೇಕ ಕಡೆ ಫುಟ್‌ಪಾತ್ ಮೇಲೆ ಬೀದಿ ವ್ಯಾಪಾರಿಗಳೇ ತುಂಬಿರುವುದನ್ನು ಕಾಣುತ್ತೇವೆ. ಇದು ಕಾನೂನುಬಾಹಿರ. ಆದರೆ ಅವರಿಗೆ ಉಪಜೀವನದ ಮಾರ್ಗ. ಇದೇ ವಸ್ತುಗಳನ್ನು ಮಾಲ್‌ಗಳಲ್ಲಿ ಮೂರು ಪಟ್ಟು ದುಡ್ಡು ಕೊಟ್ಟು ಕೊಳ್ಳುವ ಜನರು ಬೀದಿ ಬದಿ ನಿಂತ ನಮ್ಮಲ್ಲಿ ಮಾತ್ರ ಅರ್ಧ ಬೆಲೆಗೆ ಕೇಳುತ್ತಾರೆ. ಪ್ರತಿ ಉತ್ಪನ್ನಕ್ಕೆ ಕೇವಲ ಐದೊ, ಹತ್ತೊ ರೂಪಾಯಿ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತೇವೆ. ಇದೆಲ್ಲದರ ಜೊತೆ ಸಂಜೆಯ ವೇಳೆಗೆ ಪೊಲೀಸರಿಗೆ ಮಾಮೂಲಿ ಬೇರೆ ಕೊಡಲೇಬೇಕು. `ವ್ಯಾಪಾರ ಆಗಿಲ್ಲ ಸ್ವಾಮಿ~ ಅಂದರೂ ಕೇಳೊಲ್ಲ... ಇದು ಬೀದಿ ಬದಿ ವ್ಯಾಪಾರಿಗಳ ಗೋಳು. ಒಟ್ಟಿನಲ್ಲಿ ರಸ್ತೆ, ಫುಟ್‌ಪಾತ್ ಎರಡೂ ಒಂದೇ ಆಗಿದೆ ಎಂದೇ ಬದುಕುವ ಅನಿವಾರ್ಯ ಅನೇಕ ಬಡಾವಣೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಸೃಷ್ಟಿಯಾಗಿದೆ.

 

ಪ್ರತಿಕ್ರಿಯಿಸಿ (+)