ಗುರುವಾರ , ಮಾರ್ಚ್ 4, 2021
18 °C

ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಅಸಡ್ಡೆ

ಶಶಿಕಾಂತ ಎಸ್.ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಅಸಡ್ಡೆ

ಹೊಸಪೇಟೆ: ನಗರದ ಸ್ಟೇಶನ್‌ ರಸ್ತೆ ಸೇರಿದಂತೆ ಇತರ ಕಡೆ ರಸ್ತೆ ವಿಸ್ತರಣೆ ಕಾರ್ಯ ಭರದಿಂದ ನಡೆದಿದೆ. ಆದರೆ ಯಾವುದೇ ರಸ್ತೆಯಲ್ಲೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಒತ್ತು ಕೊಟ್ಟಿಲ್ಲ. ಇದರಿಂದ ಜನ ಅನಿವಾರ್ಯವಾಗಿ ರಸ್ತೆಯ ಮೇಲೆ ಓಡಾಡುವಂತಾಗಿದೆ.ಇತ್ತೀಚೆಗೆ ನಗರದ ಹಂಪಿ ರಸ್ತೆ, ಸ್ಟೇಶನ್‌ ರಸ್ತೆಯಲ್ಲಿ ಮರ ಕಡಿದು ರಸ್ತೆ ವಿಸ್ತರಣೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕೆಲವು ದಿನಗಳಿಂದ ಸ್ಟೇಶನ್‌ ರಸ್ತೆಯಲ್ಲಿ ಭರದಿಂದ ರಸ್ತೆ ಡಾಂಬರೀಕರಣ ಕೆಲ ಸವೂ ನಡೆಯುತ್ತಿದೆ. ರಸ್ತೆ ವಿಭಜಕ, ಚರಂಡಿಯನ್ನು ಈಗಾಗಲೇ ನಿರ್ಮಿಸಲಾ ಗಿದೆ. ಆದರೆ ಪಾದಚಾರಿಗಳ ಓಡಾಟಕ್ಕೆ ಅಗತ್ಯವಾಗಿ ಬೇಕಾಗಿರುವ ಪಾದಚಾರಿ ಮಾರ್ಗದ ಸಣ್ಣ ಕುರುಹು ಎಲ್ಲಿಯೂ ಕಾಣುತ್ತಿಲ್ಲ. ಇದನ್ನು ಗಮನಿಸಿದರೆ ಡಾಂಬರೀಕರಣ ಕೆಲಸ ಮುಗಿದ ನಂತರ ಪಾದಚಾರಿ ಮಾರ್ಗ ನಿರ್ಮಾಣ ಆಗು ವುದು ಅನುಮಾನ ಅನಿಸುತ್ತದೆ.ಒಂದುವೇಳೆ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಉದ್ದೇಶವಾಗಿದ್ದರೆ ಸಹಜವಾಗಿಯೇ ಚರಂಡಿಗೆ ಹೊಂದಿ ಕೊಂಡಂತೆ ರಸ್ತೆಯ ಎರಡೂ ಬದಿಯಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ಸ್ಥಳ ಬಿಡಬೇಕಿತ್ತು. ಆ ಕೆಲಸ ಮಾಡಿಲ್ಲ. ರಸ್ತೆ ವಿಭಜಕದಿಂದ ಚರಂಡಿಯ ತುದಿಯ ವರೆಗೆ ರಸ್ತೆ ನಿರ್ಮಿಸಲಾಗಿದ್ದು, ಅಲ್ಲಿಯ ತನಕ ಡಾಂಬರೀಕರಣ ಮಾಡಲಾ ಗುತ್ತಿದೆ. ಚರಂಡಿ ಇರುವ ಸ್ಥಳದಲ್ಲಿ ಅಬ್ಬಬ್ಬಾ ಅಂದರೂ ಒಂದರಿಂದ ಎರಡು ಅಡಿ ಜಾಗವಿದೆ. ಪಾದಚಾರಿಗಳ ಓಡಾಟಕ್ಕೆ ಅಷ್ಟು ಜಾಗ ಸಾಲದು. ಒಂದುವೇಳೆ ಅಷ್ಟೇ ಜಾಗದಲ್ಲಿ ನಿರ್ಮಿಸಿ ದರೂ ಅದು ವೈಜ್ಞಾನಿಕವಾಗಿರುವುದಿಲ್ಲ.ನಗರದ ಕಾಲೇಜು ರಸ್ತೆ, ಬಸವನ ಕಾಲುವೆಗೆ ಹೊಂದಿಕೊಂಡಂತೆ ಇರುವ ರಸ್ತೆ ಹೊರತುಪಡಿಸಿದರೆ ನಗರದ ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ಕೆಲವೇ ತಿಂಗಳ ಹಿಂದೆ ಅಭಿವೃದ್ಧಿಪಡಿಸಿದ ಹೊರ ವರ್ತುಲ ರಸ್ತೆ ಯಲ್ಲಿಯೂ ಪಾದಚಾರಿಗಳ ಓಡಾಟಕ್ಕೆ ವ್ಯವಸ್ಥೆ ಮಾಡಿಲ್ಲ. ಬಳ್ಳಾರಿ ರಸ್ತೆ, ಮೇನ್‌ ಬಜಾರ್‌, ಹಂಪಿ ರಸ್ತೆಯಲ್ಲೂ ಸ್ಥಿತಿ ಭಿನ್ನ ವಾಗಿಲ್ಲ. ಇನ್ನು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಂತೂ ಪಾದಚಾರಿ ಮಾರ್ಗ ದೂರದ ಮಾತು.ಹೀಗೆ ಬಹುತೇಕ ಕಡೆಗಳಲ್ಲಿ ಪಾದ ಚಾರಿಗಳ ಓಡಾಟಕ್ಕೆ ಮಾರ್ಗ ಇಲ್ಲದ ಕಾರಣ ಅವರು ಅನಿವಾರ್ಯವಾಗಿ ರಸ್ತೆಯನ್ನೇ ಅವಲಂಬಿಸಿದ್ದಾರೆ. ಇದು ಸಂಚಾರ ದಟ್ಟಣೆ ಹಾಗೂ ಅಪಘಾತಕ್ಕೂ ಕಾರಣವಾಗಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.‘ನಗರದಾದ್ಯಂತ ಎಲ್ಲ ರಸ್ತೆಗಳನ್ನು ವಿಸ್ತರಣೆ ಮಾಡಿ ಅಭಿವೃದ್ಧಿ ಪಡಿಸುತ್ತಿ ರುವುದು ಸಂತಸದ ವಿಷಯ. ಆದರೆ ಎಲ್ಲೂ ಪಾದಚಾರಿ ಮಾರ್ಗಕ್ಕೆ ಆದ್ಯತೆ ಕೊಟ್ಟಿಲ್ಲ. ಇದು ಬೇಸರದ ಸಂಗತಿ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ದಾರಿಹೋಕರು ವಾಹನ ಗಳೊಂದಿಗೆ ಸ್ಪರ್ಧೆ ಮಾಡುತ್ತ ರಸ್ತೆಯಲ್ಲಿ ಓಡಾಡಬೇಕಾಗಿದೆ’ ಎಂದು ಬಸವೇಶ್ವರ ಬಡಾವಣೆಯ ನಿವೃತ್ತ ಉಪನ್ಯಾಸಕ ರಾಜಶೇಖರ್‌ ಕಂಠಿ ತಿಳಿಸಿದರು.‘ಪಾದಚಾರಿ ಮಾರ್ಗವಿಲ್ಲದ ಕಾರಣ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಓಡಾಡಲು ಕಷ್ಟವಾಗುತ್ತಿದೆ. ನಿತ್ಯ ಎಷ್ಟೋ ಅಪಘಾತಗಳು ಸಂಭವಿಸು ತ್ತಿವೆ. ಜನರ ಹಿತಾಸಕ್ತಿಯನ್ನು ಮನ ಗಂಡು ಪಾದಚಾರಿ ಮಾರ್ಗ ನಿರ್ಮಿಸಲು ಮುಂದಾಗಬೇಕು’ ಎಂದು ಸಲಹೆ ಮಾಡಿದರು.‘ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ದೊಡ್ಡವರಿಗೇ ಓಡಾ ಡಲು ಕಷ್ಟವಾಗುತ್ತಿದೆ. ಇದನ್ನು ಮನ­ಗಂಡು ನಿತ್ಯ ನನ್ನ ಮಕ್ಕಳನ್ನು ನಾನೇ ಶಾಲೆಗೆ ಕರೆದೊಯ್ದು, ಪುನಃ ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಅಮ­­ರಾವತಿ ನಿವಾಸಿ ರಾಧಾ ‘ಪ್ರಜಾವಾಣಿ’ಗೆ ತಿಳಿಸಿದರು.‘ಎಲ್ಲ ಕಡೆ ಸುಸಜ್ಜಿತವಾಗಿ ಪಾದ­ಚಾರಿ ಮಾರ್ಗ ನಿರ್ಮಿಸಿದರೆ ಮಕ್ಕಳು, ಹಿರಿಯರು ಸೇರಿದಂತೆ ಪ್ರತಿಯೊಬ್ಬರೂ ಯಾವುದೇ ಆತಂಕವಿಲ್ಲದೇ ಓಡಾಡ­ಬಹುದು. ಇದರಿಂದ ಸಾವು ನೋವು ಕೂಡ ತಡೆಯಬಹುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.