ಗುರುವಾರ , ಮೇ 19, 2022
24 °C

ಪಾನಮತ್ತನಾಗಿ ಯುವತಿ ಮನೆಗೆ ಬಂದ ಪ್ರಿಯಕರ:ಪ್ರೇಯಸಿ ಮನೆಯ್ಲ್ಲಲೇ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವಕನೊಬ್ಬ ಪ್ರೇಯಸಿಯ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯನಗರ ಸಮೀಪದ ಎಇಸಿಎಸ್ ಲೇಔಟ್‌ನಲ್ಲಿ ಬುಧವಾರ ಸಂಜೆ ನಡೆದಿದೆ.

ಕಾಡುಗೊಂಡನಹಳ್ಳಿ ಬಳಿಯ ಶಾಂಪುರ ನಿವಾಸಿ ಬಸವರಾಜು ಎಂಬುವರ ಪುತ್ರ ಶಿವಶಂಕರ್ (24) ಆತ್ಮಹತ್ಯೆ ಮಾಡಿಕೊಂಡವರು. ಅವರು ಕೇಬಲ್ ಆಪರೇಟರ್ ಆಗಿದ್ದರು.ಶಿವಶಂಕರ್, ಎಇಸಿಎಸ್ ಲೇಔಟ್ ಒಂದನೇ ಮುಖ್ಯರಸ್ತೆಯ ಯುವತಿಯೊಬ್ಬಳನ್ನು ಹಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದ. ಆ ಯುವತಿಯೂ ಆತನನ್ನು ಪ್ರೀತಿ ಮಾಡುತ್ತಿದ್ದಳು. ಈ ವಿಷಯ ಎರಡು ಮನೆಯವರಿಗೂ ಗೊತ್ತಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಮಗಳು ಬಿ.ಕಾಂ ಓದಿ ಮುಗಿಸಿದ ನಂತರ ಮದುವೆ ಮಾಡಿಕೊಡುವುದಾಗಿ ಯುವತಿಯ ಪೋಷಕರು ಶಿವಶಂಕರ್‌ಗೆ ಹೇಳಿದ್ದರು.ಇದರಿಂದ ಅಸಮಾಧಾನಗೊಂಡಿದ್ದ ಆತ ಬೇಗನೆ ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ ಎಂದು ಸಂಜಯನಗರ ಪೊಲೀಸರು ಹೇಳಿದ್ದಾರೆ.ಆತ ಬುಧವಾರ ಸಂಜೆ ಪಾನಮತ್ತನಾಗಿ ಯುವತಿಯ ಮನೆಗೆ ಬಂದು ಆಕೆಯ ತಾಯಿಯ ಜತೆ ವಾಗ್ವಾದ ನಡೆಸಿದ. ನಂತರ ಕೊಠಡಿಯೊಂದಕ್ಕೆ ತೆರಳಿ ಅಲ್ಲಿಯೇ ನೇಣು ಹಾಕಿಕೊಂಡಿದ್ದಾನೆ. ಶಿವಶಂಕರ್ ಕೊಠಡಿಯಿಂದ ಹೊರಗೆ ಬಾರದಿದ್ದರಿಂದ ಅನುಮಾನಗೊಂಡ ಯುವತಿ ಮತ್ತು ಆಕೆಯ ತಾಯಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.ಬಳಿಕ ನೆರೆಹೊರೆಯವರ ಸಹಾಯದಿಂದ ಕೊಠಡಿಯ ಬಾಗಿಲು ಒಡೆದು ಒಳ ಹೋದಾಗ ಆತ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.`ಮಗನ ಸಾವಿನ ಬಗ್ಗೆ ಅನುಮಾನವಿದೆ. ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರೇ ಮಗನ ಸಾವಿಗೆ ಕಾರಣ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ~ ಎಂದು ಶಿವಶಂಕರ್ ಪೋಷಕರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.