ಸೋಮವಾರ, ಮೇ 23, 2022
24 °C

ಪಾನಮತ್ತ ವ್ಯಕ್ತಿಯಿಂದ ಇಬ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾನಮತ್ತ ವ್ಯಕ್ತಿಯೊಬ್ಬ ಚಿಂದಿ ಆಯುವ ಮಹಿಳೆ ಮತ್ತು ಆಕೆಯ ಸಂಬಂಧಿಕರ ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಆರ್.ಟಿ.ನಗರ ಬಳಿಯ ಕನಕನಗರದ ಕೆಎಚ್‌ಬಿ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಕೆಎಚ್‌ಬಿ ರಸ್ತೆಯ ಮನೆಯೊಂದರ ಮೇಲೆ ಶೆಡ್‌ನಲ್ಲಿ ವಾಸವಿದ್ದ ಪವಿತ್ರಾ (30) ಮತ್ತು ಆಕೆಯ ಸಂಬಂಧಿಕರ ಮಗಳಾದ ಐಶ್ವರ್ಯ (10) ಕೊಲೆಯಾದವರು. ಆರೋಪಿ ರಾಜು ಎಂಬಾತನನ್ನು ಸಾರ್ವಜನಿಕರೇ ಹಿಡಿದು ಚೆನ್ನಾಗಿ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಕಾಗದ ಹಾಗೂ ಬಾಟಲಿಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಪವಿತ್ರಾ ಸಂಬಂಧಿಕರ ಮಕ್ಕಳಾದ ಐಶ್ವರ್ಯ ಮತ್ತು ಚರಣ್ ಎಂಬುವರನ್ನು ಜತೆಯಲ್ಲೇ ಸಾಕಿಕೊಂಡಿದ್ದಳು. ತಮಿಳುನಾಡು ಮೂಲದ ರಾಜು ಕೂಲಿ ಕೆಲಸ ಮಾಡಿಕೊಂಡು ಮಾರತ್‌ಹಳ್ಳಿಯಲ್ಲಿ ವಾಸವಿದ್ದ.ಮೂಲತಃ ತಮಿಳುನಾಡಿನವಳೇ ಆದ ಪವಿತ್ರಾಗೆ ರಾಜು ಮೊದಲಿನಿಂದಲೂ ಪರಿಚಿತನಾಗಿದ್ದ. ಆದ ಕಾರಣ ಆತ ಆಗಾಗ್ಗೆ ಆಕೆಯ ಶೆಡ್‌ಗೆ ಬಂದು ಹೋಗುತ್ತಿದ್ದ. ಅಂತೆಯೇ ರಾತ್ರಿ 10 ಗಂಟೆ ಸುಮಾರಿಗೆ ಪಾನಮತ್ತನಾಗಿ ಶೆಡ್‌ಗೆ ಬಂದ ಆತ ಆಕೆಯ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ. ಇದಕ್ಕೆ ಪವಿತ್ರಾ ಪ್ರತಿರೋಧ ತೋರಿದ್ದರಿಂದ ಕೋಪಗೊಂಡ ಆತ ಆಕೆಗೆ ಚಾಕುವಿನಿಂದ ಇರಿದ. ಈ ಹಂತದಲ್ಲಿ ಆಕೆಯ ರಕ್ಷಣೆಗೆ ಧಾವಿಸಿದ ಐಶ್ವರ್ಯಳ ಹೊಟ್ಟೆಗೂ ಆತ ಚಾಕು ಚುಚ್ಚಿದ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಇದರಿಂದ ಆತಂಕಗೊಂಡ ಚರಣ್ ಶೆಡ್‌ನಿಂದ ಹೊರಗೆ ಓಡಲು ಯತ್ನಿಸಿದ. ಆದರೆ ರಾಜು, ಆತನನ್ನೂ ಬೆನ್ನಟ್ಟಿ ಚಾಕುವಿನಿಂದ ಇರಿದ. ಈ ಸಂದರ್ಭದಲ್ಲಿ ಚರಣ್‌ನನ್ನು ರಕ್ಷಿಸಲು ಹೋದ ನಿಜಾಮ್ ಎಂಬಾತನಿಗೂ ಆತ ಚಾಕು ಚುಚ್ಚಿದ್ದಾನೆ. ಬಳಿಕ ಸಾರ್ವಜನಿಕರು ಆರೋಪಿ ರಾಜುನನ್ನು ಹಿಡಿದು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಚರಣ್ ಮತ್ತು ನಿಜಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ರಾಜುನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.