ಪಾನಮುಕ್ತ ಗ್ರಾಮಕ್ಕೆ ನಿಡಶೇಸಿ ಗ್ರಾಮಸ್ಥರ ನಿರ್ಧಾರ

ಬುಧವಾರ, ಜೂಲೈ 17, 2019
23 °C

ಪಾನಮುಕ್ತ ಗ್ರಾಮಕ್ಕೆ ನಿಡಶೇಸಿ ಗ್ರಾಮಸ್ಥರ ನಿರ್ಧಾರ

Published:
Updated:

ಕುಷ್ಟಗಿ: ತಾಲ್ಲೂಕಿನ ನಿಡಶೇಸಿ ಗ್ರಾಮವನ್ನು ಸಂಪೂರ್ಣ ಮದ್ಯಪಾನಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಅಲ್ಲಿನ ಜನರು ಈ ಬಗ್ಗೆ ಸಭೆ ಸೇರಿ ಕಟ್ಟುನಿಟ್ಟಿನ ನಿರ್ಣಯ ತೆಗೆದುಕೊಂಡ ಅಪರೂಪದ ಪ್ರಸಂಗ ಸೋಮವಾರ ನಡೆದಿದೆ.ಗ್ರಾಮದ ದೇವಸ್ಥಾನದಲ್ಲಿ ಮಹಿಳೆಯರು ಸೇರಿದಂತೆ ಬಹಿರಂಗ ಸಭೆ ನಡೆಸಿದ ಹಿರಿಯರು, ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ಗ್ರಾಮದಲ್ಲಿ ಅಕ್ರಮ ಮದ್ಯ ಮಾರುವುದು ಮತ್ತು ಕುಡಿದು ಊರಿನ ನೆಮ್ಮದಿಗೆ ಭಂಗ ತಂದವರಿಗೆ ಊರಿನಿಂದಲೇ ಬಹಿಷ್ಕಾರದ `ಶಿಕ್ಷೆ~ ವಿಧಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಗ್ರಾಮಸ್ಥರಿಂದ ಬೆಂಬಲ ವ್ಯಕ್ತವಾಗಿರುವುದು ಗೊತ್ತಾಗಿದೆ.ಇನ್ನುಮುಂದೆ ಊರಿನಲ್ಲಿ ಯಾರೂ ಮದ್ಯ ಮಾರುವಂತಿಲ್ಲ ಮಾರಿದರೆ ರೂ 5 ಸಾವಿರ, ಕುಡಿದು ಗಲಾಟೆ ಎಬ್ಬಿಸಿದವರಿಗೆ ರೂ 1 ಸಾವಿರ ದಂಡ ವಿಧಿಸುವುದಲ್ಲದೇ ಜನರ ತೀರ್ಮಾನ ವಿರೋಧಿಸಿದವರನ್ನು ಊರಿನಿಂದ ಹೊರ ಅಟ್ಟುವ ಬಗ್ಗೆ ಜನರಿಂದ ಒಮ್ಮತದ ಅಭಿಪ್ರಾಯ ಬಂದಿದೆ. ಮದ್ಯ ಮಾರುತ್ತಿದ್ದ ಗ್ರಾಮದ ಏಳು ಅಂಗಡಿಯವರೂ ಸಭೆಯಲ್ಲಿದ್ದು ಜನರ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿದರು. ಆದರೆ ಸಹಸ್ರರಾರು ರೂ ಮದ್ಯದ ಸಂಗ್ರಹ ಇದ್ದು ಮೂರು ದಿನಗಳಲ್ಲಿ ಅದನ್ನೆಲ್ಲ ಮಾರಾಟಮಾಡಲು ಅವಕಾಶ ನೀಡುವಂತೆ ಮಾಡಿದ ಮನವಿಯನ್ನು ಗ್ರಾಮಸ್ಥರು ಪುರಸ್ಕರಿಸಿದರು ಎಂದು ತಿಳಿದಿದೆ.ಗ್ರಾಪಂ ಸದಸ್ಯರಾದ ಹನಮಂತಪ್ಪ ದಾಸರ, ಗುಂಡಪ್ಪ ಚಳಗೇರಿ, ಶಿವಪುತ್ರಪ್ಪ ಬೆಲ್ಲದ,  ಅಮರೇಶ ಹೂಗಾರ, ಬಾಳಮ್ಮ ಮುಸ್ಟೂರು, ಮಾಜಿ ಸದಸ್ಯರಾದ ಶರಣಪ್ಪ ಹಾದಿಮನಿ, ಬಂಗಾರೆಪ್ಪ ಅಗಸಿಮುಂದಿನ, ಬಸವರಾಜ ಗಾಧಾರಿ, ಚನ್ನಪ್ಪ ಮೇಟಿ, ಕನಕಪ್ಪ ಅಗಸಿಮುಂದಿನ, ಮಾಂತಪ್ಪ ಹುಣಿಸಿಹಾಳ, ರಾಮಣ್ಣ ಬಂಡಿಹಾಳ ಇದ್ದರು.ಹಿನ್ನೆಲೆ: ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರ ಇರುವ ನಿಡಶೇಸಿ ಸುಮಾರು ಮೂರು ಸಾವಿರ ಜನಸಂಖ್ಯೆ ಹೊಂದಿದ ಪುಟ್ಟ ಗ್ರಾಮವಾದರೂ ಕುಡುಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿದ್ದುದು, ಅಷ್ಟೇ ಅಲ್ಲ ಹದಿವಯಸ್ಸಿನ ಅನೇಕ ಹುಡುಗರು ಮದ್ಯದ ದಾಸರಾಗುಗುತ್ತಿದ್ದುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry