ಪಾಪಜ್ಜಿ ಹಾಡುವ ಕಲೆ

ಭಾನುವಾರ, ಮೇ 26, 2019
33 °C

ಪಾಪಜ್ಜಿ ಹಾಡುವ ಕಲೆ

Published:
Updated:

`ಶೋಬಾನೆ ಪದ ಹಾಡುವ ಕಲೆಯನ್ನು ಕಲಿಯಲು ಮನೆಯಲ್ಲಿ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಅನೇಕರು ಕದ್ದು ಹೋಗಿ ಕಲಿತದ್ದು. ಹಾಡಲಿಕ್ಕೆಂದು ಕರೆಯಲು ಬಂದಾಗ ಮನೆಯಲ್ಲಿ ಗಂಡ ಒಪ್ಪುತ್ತಿರಲಿಲ್ಲ. ಆಕಸ್ಮಿಕ ಒಪ್ಪಿದರೆ ನಿಧಿ ಸಿಕ್ಕಂತೆ ಸಂತೋಷವಾಗುತ್ತಿತ್ತು~ ಎಂದು ಗತಕಾಲದ ನೆನಪನ್ನು ಸ್ಮರಿಸುತ್ತಾರೆ ಪಾವಗಡ ತಾಲ್ಲೂಕಿನ ಚಿಕ್ಕಜಾಲೋಡುವಿನ 75 ವರ್ಷದ ಜನಪದ ಗಾಯಕಿ ಪಾಪಜ್ಜಿ.ಜನಪದ ರಾಮಾಯಣದಲ್ಲಿ ಸೀತೆಯನ್ನು ರಾವಣ ಹೊತ್ತುಕೊಂಡು ಹೋಗುತ್ತಿರುವಾಗ ಜಟಾಯು ಯುದ್ಧ ಮಾಡಿದ ಪ್ರಸಂಗವನ್ನು ಅತ್ಯಂತ ಮನಮೋಹಕವಾಗಿ ವರ್ಣಿಸುತ್ತಾರೆ ಪಾಪಜ್ಜಿ. ಕರಿಯಣ್ಣ, ಮಾರಮ್ಮ, ಜುಂಜಪ್ಪನ ಹಾಡು, ಶೋಬಾನೆ ಪದ, ವಸಗೆ ಹಾಡು, ಮದುವೆ ಹಾಡು, ಗಂಗೆಗೌರಿ ಹಾಡು, ಅಲ್ಲದೆ ನಿಡಗಲ್ಲು ದೊರೆ ಮುಮ್ಮಡಿರಾಯನ ಕಥನದ ಬಗ್ಗೆ ಅಜ್ಜಿಗೆ ಹೆಚ್ಚು ಒಲವು. ಇವುಗಳಲ್ಲಿ ಕಥನ ಕಾವ್ಯಗಳೇ ಹೆಚ್ಚು. ನಿರರ್ಗಳವಾಗಿ ದಿನಗಟ್ಟಲೆ ಹಾಡುವ ಕಲೆ ಪಾಪಜ್ಜಿಗೆ ಸಿದ್ಧಿಯಾಗಿದೆ.ಜಾಲೋಡು ಗ್ರಾಮದ ಕುರುಬರ ಪಾಪಜ್ಜಿ ಶಾಲೆಗೆ ಹೋದವರಲ್ಲ. ಆದರೂ ಹಾಡು ಹೇಳಿ, ಅರ್ಥೈಸುವ ಕಲೆ ಸಿದ್ಧಿಸಿಕೊಂಡರು. ಕರಿಯಣ್ಣನ ಹಾಡು, ಕೆರೆಗೆ ಹಾರ ಕಥನಕಾವ್ಯವನ್ನು ನೆನಪಿಸುತ್ತದೆ. ಕೋಟೆಯೊಂದಕ್ಕೆ ಮಹಿಳೆಯೊಬ್ಬಳನ್ನು ಬಲಿಕೊಟ್ಟ ರೋಚಕ ಕಥೆಯು ನಮ್ಮ ಭಾಗದಲ್ಲೂ ಜರುಗಿತ್ತು ಎಂಬುದನ್ನು ಈಕೆಯ ಹಾಡುಗಳಿಂದ ತಿಳಿಯಬಹುದು.ರಾಜ ಯಲ್ಲಪ್ಪನಾಯಕ ನೆಲಕೋಟೆಯನ್ನು ಕಟ್ಟಿಸುತ್ತಾನೆ. (ಯಲ್ಲಪ್ಪನಾಯಕನ ಹಳ್ಳಿಯಲ್ಲಿ ಈಗಲೂ ಈ ಕೋಟೆಯ ಪಳಿಯುಳಿಕೆಗಳಿವೆ) ನಿರ್ಮಾಣದ ನಂತರ ಕೋಟೆಗೆ ಕರಿಯಣ್ಣನ ಹೆಂಡತಿಯನ್ನು ನರಬಲಿ ನೀಡಬೇಕು ಎಂದು ತೀರ್ಮಾನವಾಗುತ್ತದೆ. ಆಕೆಗೆ ಈ ವಿಚಾರ ತಿಳಿಸುವ ಪ್ರಸಂಗ. ಬಲಿಯನ್ನು ಕೊಡುವ ಮೊದಲು ಗಂಗಮ್ಮನನ್ನು ಪೂಜೆ ಮಾಡುವ ಮತ್ತು ಬಲಿ ನೀಡುವ ಘಟನೆಯನ್ನು ಸಭಿಕರಲ್ಲಿ ಕಣ್ಣೀರು ಬರುವಂತೆ ವರ್ಣಿಸುತ್ತಾರೆ.`ಚಿಕ್ಕಂದಿನಲ್ಲಿ ಅಮ್ಮ, ಅಪ್ಪನಿಗೆ ತಿಳಿಯದಂತೆ ಹಾಡುವುದನ್ನು ಕಲಿತೆ. ಹಬ್ಬ, ಮದುವೆ, ವಸಗೆ, ನಾಟಕ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಹೆಂಗಸರೆಲ್ಲ ಒಂದೆಡೆ ಸೇರಿ ಹಾಡುವ ಸಂಪ್ರದಾಯ ಇತ್ತು. ಆದರೆ ಇಂದಿನ ಮಕ್ಕಳಿಗೆ ಇಂತಹವುಗಳನ್ನು ಕಲಿಯುವ ಆಸಕ್ತಿ ಇಲ್ಲ. ನನ್ನ ಜೊತೆಯಲ್ಲಿಯೇ ಈ ಹಾಡುಗಳು ಸತ್ತು ಹೋಗುತ್ತವೆ ಎಂಬ ಕೊರಗು ಕಾಡುತ್ತಿದೆ~ ಎನ್ನುತ್ತಾರೆ ಪಾಪಜ್ಜಿ. ಜನಪದ ಸಂಗ್ರಹಕಾರ ಸಣ್ಣನಾಗಪ್ಪ, 80 ಕ್ಯಾಸೆಟ್‌ಗಳಲ್ಲಿ ಪಾಪಜ್ಜಿ ಹಾಡುಗಳನ್ನು ಸಂಗ್ರಹಿಸ್ದ್ದಿದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry