ಪಾಪನಾಶ ಕೆರೆಯಲ್ಲಿ ಬೋಟಿಂಗ್ ಮಾಯ?

7

ಪಾಪನಾಶ ಕೆರೆಯಲ್ಲಿ ಬೋಟಿಂಗ್ ಮಾಯ?

Published:
Updated:

ಬೀದರ್: ಜಿಲೆಯ್ಲಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಈಗಾಗಲೇ ಜಾರಿಯಲ್ಲಿದ್ದ ನಗರದ ಪಾಪನಾಶ ಕೆರೆಯಲ್ಲಿ ಆರಂಭಿಸಲಾಗಿದ್ದ ಬೋಟಿಂಗ್ ಸ್ಥಗಿತಗೊಂಡಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.ಪ್ರವಾಸಿಗಳು ಹಾಗೂ ನಗರಕ್ಕೆ ಭೇಟಿ ನೀಡುವವರಿಗೆ ನೀರಿನಲ್ಲಿ ತೇಲುವ ಅನುಭವ ಉಂಟು ಮಾಡುವುದಕ್ಕಾಗಿ ಜಿಲ್ಲಾಡಳಿತವು ಬೋಟಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಬೋಟಿಂಗ್ ಆರಂಭವಾದ ದಿನಗಳಲ್ಲಿ ಜನಮನ್ನಣೆಯ ಜೊತೆಗೆ ವ್ಯಾಪಕವಾದ ಪ್ರಚಾರ ಕೂಡ ದೊರೆತಿತ್ತು. ಇದರಿಂದಾಗಿ ಪಾಪನಾಶ ದೇವಾಲಯಕ್ಕೆ ಬರುವ ಜನರೆಲ್ಲ ದೋಣಿ ವಿಹಾರದ ಸವಿ ಸವಿದಿದ್ದರು. ಕೇವಲ ಪ್ರವಾಸಿಗಳು ಮಾತ್ರವಲ್ಲದೆ ನಗರದ ಜನರಿಗೆ ಕೂಡ ಪಿಕ್‌ನಿಕ್ ತಾಣವಾಗಿ ಪರಿವರ್ತನೆಗೊಂಡಿತ್ತು.ಬೆಳಿಗ್ಗೆ ಮತ್ತು ಮಧ್ಯಾಹ್ನ ದೋಣಿ ವಿಹಾರ ಮಾಡುವವರ ಸಂಖ್ಯೆ ಕಡಿಮೆ ಇದ್ದರೂ ಸಂಜೆಯ ವೇಳೆಗೆ ‘ಕ್ಯೂ’ ಕೂಡ ಇರುತ್ತಿತ್ತು. ಜನರಿಗೆ ತಮ್ಮ ಬಿಡುವಿನ ವೇಳೆ ಕಳೆಯುವ ಮತ್ತು ನಿಸರ್ಗದ ಸೌಂದರ್ಯ ಅನುಭವಿಸುವ ತಾಣ ಕೂಡ ಆಗಿತ್ತು. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಬರುವವರು ಕೂಡ ಜನ ಬೋಟ್‌ನಲ್ಲಿ ಕುಳಿತು ವಿಹಾರ ಮಾಡುವುದನ್ನು ನೋಡಿ ಖುಷಿ ಪಡುತ್ತಿದ್ದರು.

ಪಾಪನಾಶ ಕೆರೆಯಲ್ಲಿ ಬೋಟಿಂಗ್ ನಡೆಸಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದಲೇ ಜಿಲ್ಲಾಡಳಿತವು ಕೆರೆಯ ಹೂಳು ತೆಗೆಸಿತ್ತು. ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ಪಕ್ಕದಲ್ಲಿ  ಇದ್ದ ತೋಟ ಮತ್ತು ಜಮೀನನ್ನು ಕೂಡ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಉತ್ಸಾಹದಿಂದಲೇ ಬೋಟಿಂಗ್ ಆರಂಭಿಸಲಾಗಿತ್ತು. ಜನರ ಪ್ರತಿಕ್ರಿಯೆ ಕೂಡ ಆಶಾದಾಯಕ ಆಗಿತ್ತು. ಬೆಳಿಗ್ಗೆ ಮತ್ತು ಸಂಜೆ ಜನ ಓಡಾಡಿದರೂ ಪಕ್ಕದಲಿಯ್ಲೆ ಮರಗಿಡಗಳು ಬೆಳೆದು ಕಾಡಿನಂತಹ ವಾತಾವರಣ ಇದ್ದರೂ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿರಲಿಲ್ಲ. ಅಷ್ಟು ಮಾತ್ರವಲ್ಲದೆ, ಕೆರೆಯಲ್ಲಿ ಬೋಟಿಂಗ್ ನಡೆಸುವಾಗ ಕೂಡ ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿಕೊಳ್ಳುವಂತೆ ಸೂಚಿಸಲಾಗುತ್ತಿತ್ತು. ಇದರಿಂದಾಗಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸುವುದಿರಲಿ ಸಣ್ಣಪುಟ್ಟ ಅಪಘಾತ ಕೂಡ ನಡೆದಿರಲಿಲ್ಲ.ಪಾಪನಾಶ ಕೆರೆಯಲ್ಲಿ ಬೋಟಿಂಗ್ ಆರಂಭಿಸುವಾಗ ಜಿಲ್ಲಾಧಿಕಾರಿ ಆಗಿದ್ದ ಹರ್ಷ ಗುಪ್ತಾ ಅವರು ಕೆರೆಯ ಪಕ್ಕದಲ್ಲೇ ಇರುವ ಜಮೀನಿನಲ್ಲಿ ಉದ್ಯಾನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಇರುವ ಬಗ್ಗೆ ವಿವರಿಸಿದ್ದರು. ಮಕ್ಕಳ ಆಟದ ತಾಣ, ಉದ್ಯಾನವನ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲ್ದಾಣ, ಕೆಫೆಟೇರಿಯಾ, ಶೌಚಾಲಯ ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಏನಕೇನ ಕಾರಣ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗದಿದ್ದರೂ ಕೆರೆಯಲ್ಲಿನ ದೋಣಿ ವಿಹಾರ ಮಾತ್ರ ಅವ್ಯಾಹತವಾಗಿ ನಡೆದಿತ್ತು. ‘ನೋಪಾಸನಾ’ ಸಂಸ್ಥೆಯ ಸಿಬ್ಬಂದಿ ಇಡೀ ದೋಣಿ ವಿಹಾರದ ವ್ಯವಸ್ಥೆ ನೋಡಿಕೊಳ್ಳುತ್ತಿತ್ತು. ಕಾರವಾರ, ಗುಲ್ಬರ್ಗ, ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ  ಬೋಟಿಂಗ್ ಸೌಲಭ್ಯ ಕಲ್ಪಿಸಿರುವ ನೋಪಾಸನಾ ಸಂಸ್ಥೆಯು ಬೀದರ್‌ನಲ್ಲೂ ಬೋಟಿಂಗ್ ವ್ಯವಸ್ಥೆ ಮುಂದುವರಿಸಬಯಸುತ್ತಿತ್ತು. ಅದಕ್ಕೆ ಕೆರೆಯ ಸುತ್ತಲಿನ ಆಹ್ಲಾದಕರ ವಾತಾವರಣ ಪ್ರಮುಖ ಕಾರಣ ಆಗಿತ್ತು. ಗುಡ್ಡಬೆಟ್ಟಗಳ ನಡುವಿನ ಕೆರೆಯು ಪ್ರವಾಸಿಗರಿಗೆ ಮಿನಿ ಊಟಿಯ ಅನುಭವ ಉಂಟು ಮಾಡುವಂತೆ ಇದ್ದದ್ದು ಸಂಸ್ಥೆಗೆ ಸಹಜವಾಗಿ ಖುಷಿ ನೀಡಿತ್ತು.ಇದ್ದಕ್ಕಿದ್ದಂತೆ ದೋಣಿ ವಿಹಾರ ನಿಂತದ್ದು ಯಾವಾಗ? ಮತ್ತು ಯಾಕೆ? ಎಂಬ ಪ್ರಶ್ನೆ ಮೂಡುವುದು ಸಹಜ. ಕಳೆದ ವರ್ಷ ಫೆಬ್ರುವರಿ 13ರಂದು ಉದ್ಘಾಟನೆ ಆಗಿದ್ದ ದೋಣಿ ವಿಹಾರ ಒಂದು ವರ್ಷ ಪೂರೈಸುವ ಮುನ್ನವೇ ಅಂದರೆ ಜನವರಿ 26ರಿಂದಲೇ ಬೋಟಿಂಗ್ ಸ್ಥಗಿತಗೊಂಡಿದೆ. ಉದ್ಯಾನ ನಿರ್ಮಿಸದೇ ಇರುವುದು ಸೇರಿದಂತೆ ಸುತ್ತಲಿನ ಪ್ರದೇಶದ ಅಭಿವೃದ್ಧಿಯತ್ತ ಜಿಲ್ಲಾಡಳಿತ ಗಮನ ಹರಿಸದೇ ಇದ್ದದ್ದರಿಂದ ಸಹಜವಾಗಿಯೇ ಜನರ ಆಸಕ್ತಿ ಕಡಿಮೆ ಆಗತೊಡಗಿತು. ಸಹಜವಾಗಿಯೇ ಆದಾಯ ಕಡಿಮೆ ಆಯಿತು. ಜೊತೆಗೆ ಯಾವುದೇ ರೀತಿಯ ರಕ್ಷಣಾ ವ್ಯವಸ್ಥೆ ಇಲ್ಲದ್ದರಿಂದ ಬೋಟ್‌ನಲ್ಲಿಯ ಎಂಜಿನ್ ಸೇರಿದಂತೆ ವಸ್ತುಗಳ ಕಳ್ಳತನ ಆಗತೊಡಗಿತು. ಬೋಟಿಂಗ್ ಸಿಬ್ಬಂದಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸುವುದಿರಲಿ ಬೋಟಿಂಗ್ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಕೂಡ ವ್ಯವಸ್ಥೆ ಕಲ್ಪಿಸಲು ಆಡಳಿತ ಹಿಂದೇಟು ಹಾಕಿತು. ವಾಟರ್ ಸ್ಕೂಟರ್ ಮತ್ತು ಮೋಟಾರ್ ಬೋಟ್ ತಂದು ಅಭಿವೃದ್ಧಿ ಪಡಿಸಲು ಸಂಸ್ಥೆ ಬಯಸುತ್ತಿತ್ತು. ಆದರೆ, ಜಿಲ್ಲಾಡಳಿತದ ನಿರಾಸಕ್ತಿಯು ಹಿಂದೆ ಸರಿಯುವುದಕ್ಕೆ ಕಾರಣವಾಯಿತು.ಉತ್ಸವದಲಿಯ್ಲೂ ಬೋಟಿಂಗ್ ಇಲ್ಲ:

ಈ ಸಲದ ಬೀದರ್ ಉತ್ಸವದಲ್ಲಿ ಪಾಪನಾಶ ಕೆರೆಯಲ್ಲಿ ಮಾತ್ರಲ್ಲದೆ ಉತ್ಸವದ ಸಂದರ್ಭದಲ್ಲಿ  ಕೋಟೆಯ ಆವರಣದಲ್ಲಿ ಇರುವ ಬೊಮ್ಮಗೊಂಡೇಶ್ವರ ಕೆರೆಯಲ್ಲಿಯೂ ಈ ಬಾರಿ ಬೋಟಿಂಗ್ ಸೌಲಭ್ಯ ಇರುವುದಿಲ್ಲ. ಉತ್ಸವದ ಸಂದರ್ಭದಲ್ಲಿ  ವಿಶೇಷ ಬೋಟಿಂಗ್ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ಆಡಿದಾಗ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಆದರೆ, ನಂತರ ಯಾವುದೇ ರೀತಿಯ ಸೂಚನೆ ನೀಡಲಿಲ್ಲ. ಆದ್ದರಿಂದ ನಾಲ್ಕಾರು ದಿನಗಳ ನಂತರ ಪಾಪನಾಶ ದೇವಸ್ಥಾನದ ಆವರಣದಲ್ಲಿ  ಇರುವ ಎಲ್ಲ ಬೋಟ್‌ಗಳನ್ನು ಬೇರೆ ಕಡೆಗೆ ಸಾಗಿಸಲಾಗುತ್ತದೆ ಎಂದು ‘ನೋಪಾಸನಾ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಕೀಬ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.ಉತ್ಸವದ ಸಂದರ್ಭದಲ್ಲಿ ಹೊಸ ಹೊಸ ಆಕರ್ಷಣೆಗಳು ಸೇರ್ಪಡೆ ಆಗುವುದು ಮಾಮೂಲು. ಆದರೆ, ಇರುವ ವ್ಯವಸ್ಥೆಯಲ್ಲಿಯೇ ಕಡಿತ ಆಗುತ್ತಿರುವುದು ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry