ಪಾಪ ಕಾಡುಪಾಪ!

7

ಪಾಪ ಕಾಡುಪಾಪ!

Published:
Updated:

ಅಮಾವಾಸ್ಯೆ ಸಮೀಪದ ದಿನಗಳು. ನಾವಿದ್ದ ಕಾರು ತುಮಕೂರು- ಕುಣಿಗಲ್ ರಸ್ತೆಯಲ್ಲಿ ನಾಗವಲ್ಲಿ ಗ್ರಾಮಕ್ಕೂ ಕೊಂಚ ಹಿಂದೆ ಬಲಕ್ಕೆ ಹೊರಳಿದಾಗ ರಾತ್ರಿ 11ರ ಆಸುಪಾಸು. ಕಾರಿನ ಹಿಂದಿನ ಗಾಜಿನಿಂದ ನೋಡಿದರೆ ಏನೂ ಕಾಣುತ್ತಿರಲಿಲ್ಲ. ಹಾದಿ ಮಧ್ಯೆ ಸಿಕ್ಕ ಒಂದೆರೆಡು ಊರುಗಳ ಬೀದಿ ದೀಪದಲ್ಲಿ ದೂಳು ಕೊಂಚ ದೂರ ನಮ್ಮನ್ನೇ ಹಿಂಬಾಲಿಸುವಂತೆ ಭಾಸವಾಗುತ್ತಿತ್ತು.ಸುಮಾರು 2 ಕಿಮೀ ಪ್ರಯಾಣದ ನಂತರ ಕಾರು ಓಡಿಸುತ್ತಿದ್ದ ಟಿ.ವಿ.ಎನ್.ಮೂರ್ತಿ ಕಾರಿನ ಎಂಜಿನ್ ಸ್ಥಗಿತಗೊಳಿಸಿದರು. ಕೆಳಗಿಳಿದು ನೋಡಿದರೆ ಗವ್‌ಗುಟ್ಟುವ ಕತ್ತಲು ಬಿಟ್ಟರೆ ಬೇರೇನೂ ಇಲ್ಲ.ನಿಧಾನಕ್ಕೆ ಕಣ್ಣು ಕತ್ತಲಿಗೆ ಹೊಂದಿಕೊಂಡ ನಂತರ ಬಿದಿರುಮೆಳೆ, ತೆಂಗಿನತೋಟ, ಬೇಲಿ ಗಿಡದಂಚಿನ ರಸ್ತೆ ಮಬ್ಬಾಗಿ ಗೋಚರಿಸಿತು. ನಾಗವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಜಿ.ವಿ.ಗುಂಡಪ್ಪ ಹಾಗೂ ಟಿ.ವಿ.ಎನ್.ಮೂರ್ತಿ ಫೋಕಸ್ ಬ್ಯಾಟರಿಗಳನ್ನು ಆನ್ ಮಾಡಿದರು. ಕತ್ತಲನ್ನು ಭೇದಿಸಿ ನುಗ್ಗಿದ ಬೆಳಕಿನ ಬಾಣಗಳು ವೃತ್ತಾಕಾರದಲ್ಲಿ ತಮ್ಮ ಎದುರಿಗಿದ್ದ ಸ್ಥಳವನ್ನಷ್ಟೇ ಪ್ರಕಾಶಗೊಳಿಸುತ್ತಿದ್ದವು.ಜೀವನವಿಡೀ ಬೆಂಗಳೂರಿನಲ್ಲಿಯೇ ಕಳೆದಿದ್ದ ನನಗೆ ಇಂಥ ಕತ್ತಲು ಮೊದಲ ಅನುಭವ. ಕತ್ತಲಲ್ಲಿ ನಾನು ಮತ್ತು ನನ್ನೊಂದಿಗಿದ್ದ ಐವರು ಗೆಳೆಯರು `ಕಾಡುಪಾಪ~ ಎಂಬ ನಾಲ್ಕಕ್ಷರದ ಪುಟಾಣಿ ಜೀವವನ್ನು ಹುಡುಕುತ್ತಿದ್ದೆವು. ಗೂಬೆ ಮುಖದ, ಕೋತಿ ದೇಹದ ಈ ನಿಶಾಚರಿ ಕಳೆದೊಂದು ವರ್ಷದಿಂದ ತನ್ನ ದರ್ಶನದ ಹಂಬಲವನ್ನು ನನ್ನೊಳಗೆ ಹುಟ್ಟುಹಾಕಿತ್ತು.ಕತ್ತಲಲ್ಲಿ ಬ್ಯಾಟರಿ ಮಿಣಕಿಸಿ ನಾನಿದ್ದೇನೆ ಎಂದು ಹೇಳುತ್ತಿದ್ದ ಗುಂಡಪ್ಪ ಮೇಷ್ಟ್ರು ಇದ್ದಕ್ಕಿದ್ದಂತೆ ಎತ್ತಲೋ ಮಾಯವಾಗಿ, ಇನ್ನೆತ್ತಲೋ ಪ್ರತ್ಯಕ್ಷರಾದರು. ಅವರ ಕೈಲಿ ಒಂದು ಕೊಂಬೆ, ಕೊಂಬೆಯಲ್ಲೊಂದು ಕಾಡುಪಾಪ. ಅದನ್ನು ನೋಡಿದ ತಕ್ಷಣ ನನ್ನ ಮನಸಿಗೆ `ಇಷ್ಟು ಕಷ್ಟಪಟ್ಟಿದ್ದು ಸಾರ್ಥಕವಾಯಿತು~ ಎಂಬ ಭಾವ.`ಕಾಡುಪಾಪ ತನ್ನ ರಕ್ಷಣೆಗಾಗಿ ಹೀಗೆ ಜೋರಾಗಿ ಉಸಿರು ಬಿಟ್ಟು ವೈರಿಯನ್ನು ಹೆದರಿಸುತ್ತದೆ. ಸ್ವಲ್ಪ ದೊಡ್ಡದಿದ್ದರೆ ರಕ್ತ ಬರುವಂತೆ ಕಚ್ಚುತ್ತವೆ, ವಿಷಕಾರಿಯಲ್ಲ. ಒಬ್ಬಂಟಿ, ನಿರುಪದ್ರವಿ ಪ್ರಾಣಿ. ಹುಟ್ಟಿದ ಎರಡು ತಿಂಗಳವರೆಗೆ ತಾಯಿಯ ಜೊತೆ ಇರುವ ಇವು ನಂತರ ಬೇರ್ಪಡುತ್ತವೆ~ ಎಂದು ಕತ್ತಲಲ್ಲಿ ಕ್ಲಾಸ್ ತೆಗೆದುಕೊಂಡರು ಮೂರ್ತಿ.ಲಾರೀಸ್ ಎಂಬ ಈ ಪ್ರಭೇದ ಇಡೀ ಪ್ರಪಂಚದಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಇವೆ. ರಾತ್ರಿ ವೇಳೆ ತುಂಬ ಚುರುಕಾಗಿರುವ ಈ ಪುಟ್ಟ ಪ್ರಾಣಿಗೆ ಕ್ರಿಮಿ- ಕೀಟಗಳೇ ಆಹಾರ. ಇದರ ಸರಾಸರಿ ಆಯಸ್ಸು 12ರಿಂದ 15 ವರ್ಷ. ಲಂಟಾನ ಪೊದೆ, ಬಿದಿರು ಮೆಳೆ, ಒತ್ತೊತ್ತಾಗಿ ಬೆಳೆದ ಮರಗಳು ಇವುಗಳಿಗೆ ಅಚ್ಚುಮೆಚ್ಚು.ವರ್ಷದಲ್ಲಿ ಎರಡು ಬಾರಿ ಅಂದರೆ ಏಪ್ರಿಲ್- ಮೇ ಹಾಗೂ ಅಕ್ಟೋಬರ್-ನವೆಂಬರ್ ಪ್ರಣಯದ ಮೂಡ್‌ನಲ್ಲಿರುತ್ತವೆ. ಮಿಡತೆ, ಬಸವನಹುಳು, ಜಿರಲೆ, ಪುಟ್ಟ ಹುಳು- ಹುಪ್ಪಟೆ, ಸಿಕ್ಕರೆ ಪಕ್ಷಿಗಳನ್ನೂ ಕಬಳಿಸುತ್ತವೆ. ಒಟ್ಟಾರೆ ಇದು ರೈತ ಸ್ನೇಹಿ.

ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಾಡುಪಾಪ ಕಾಣ ಸಿಗುತ್ತದೆ.

 

ತುಮಕೂರು ಜಿಲ್ಲೆಯ ಹುಲಿಯೂರುದುರ್ಗ, ಕುಣಿಗಲ್, ನಾಗವಲ್ಲಿ ಪ್ರದೇಶದಲ್ಲಿ ಕಾಡುಪಾಪಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಆದರೆ ಇಡೀ ರಾಜ್ಯದಲ್ಲಿ ಕೇವಲ 300 ಕಾಡುಪಾಪಗಳು ಇರಬಹುದು ಎಂದು ವನ್ಯಜೀವಿ ತಜ್ಞರು ಅಂದಾಜು ಮಾಡಿದ್ದಾರೆ. ಆ ಪೈಕಿ ತುಮಕೂರು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾಡುಪಾಪಗಳು ಇವೆ ಎಂದು ಹೇಳುತ್ತಾರೆ.ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಇದು ರಕ್ಷಣೆ ಪಡೆದಿರುವ ಪ್ರಾಣಿ. ಇದರ ಬೇಟೆ, ಆವಾಸಸ್ಥಾನಕ್ಕೆ ಹಾನಿ ಮಾಡುವುದು, ಮನೆಯಲ್ಲಿ ಸಾಕಲು ಹಿಡಿಯುವುದು, ಪಳಗಿಸಲು ಯತ್ನಿಸುವುದು ಶಿಕ್ಷಾರ್ಹ ಅಪರಾಧ. ಕಾನೂನಿನಲ್ಲಿ ರಕ್ಷಣೆಯಿದ್ದರೂ ಕಾಡುಪಾಪಗಳಿಗೆ ಮನುಷ್ಯರ ತೊಂದರೆ ತಪ್ಪಿಲ್ಲ.ಕೊಳ್ಳೇಗಾಲ ಭಾಗದಲ್ಲಿ ಮಂತ್ರವಾದಿಗಳು ವಾಮಾಚಾರಕ್ಕಾಗಿ ಕಾಡುಪಾಪಗಳ ಜೀವ ತೆಗೆಯುತ್ತಾರೆ. ಕೆಲವು ಕಂಪೆನಿಗಳು ತಾವು ತಯಾರಿಸುವ ಕೈ ಚೀಲಕ್ಕೆ ಕಾಡುಪಾಪಗಳ ಮೃದುವಾದ ಚರ್ಮ ಬಳಸುತ್ತಾರಂತೆ.ಇದೆಲ್ಲದರ ಜೊತೆಗೆ ಬಯಲು ಸೀಮೆಯಲ್ಲಿ ಬಿದಿರು ಮೆಳೆಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕಣ್ಮರೆಯಾಗುತ್ತಿರುವುದು ಕಾಡುಪಾಪಗಳ ಅಸ್ತಿತ್ವಕ್ಕೇ ಸಂಚಕಾರ ತಂದಿದೆ. ಅಲ್ಲದೆ ವಿದ್ಯುತ್ ಶಾಕ್‌ಗೆ ಹಾಗೂ ವಾಹನಗಳ ಚಕ್ರಕ್ಕೆ ಪ್ರತಿವರ್ಷ ಹತ್ತಾರು ಕಾಡುಪಾಪಗಳು ಬಲಿಯಾಗುತ್ತಿವೆ. ಮುದ್ದು ಮುದ್ದು ಕಾಡುಪಾಪಗಳನ್ನು ಕಾಪಾಡಲು ಬಿದಿರು ಮೆಳೆಗಳ ರಕ್ಷಣೆಗೆ ಅರಣ್ಯ ಇಲಾಖೆ, ರೈತರು ಮನಸ್ಸು ಮಾಡಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry