ಶುಕ್ರವಾರ, ಮೇ 14, 2021
31 °C

ಪಾಯಲ್ ಕೊಲೆ ಪ್ರಕರಣ: ಪತಿಯ ಸ್ನೇಹಿತನ ವಿರುದ್ಧ ಪುರಾವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರವನ್ನೇ ತಲ್ಲಣಗೊಳಿಸಿದ್ದ `ಡೆಲ್~ ಬಿಪಿಓ ಕಂಪೆನಿಯ ಉದ್ಯೋಗಿ ಪಾಯಲ್ ಸುರೇಖಾ (29) ಅವರ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ವಸ್ತುಗಳು ಅವರ ಪತಿಯ ಸ್ನೇಹಿತ ಜೇಮ್ಸ ಕುಮಾರನದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.2010ರ ಡಿಸೆಂಬರ್ ತಿಂಗಳಿನಲ್ಲಿ ಜೆ.ಪಿ.ನಗರ ಏಳನೇ ಹಂತದ ಲಕ್ಷ್ಮಿ ಲೇಔಟ್‌ನಲ್ಲಿ ಹಾಡಹಗಲೇ ಪಾಯಲ್ ಅವರ ಕೊಲೆ ನಡೆದಿತ್ತು.ಬೆಂಗಳೂರು ಹಾಗೂ ಒಡಿಶಾದಲ್ಲಿ ಪಾಯಲ್ ಅವರ ಪತಿ ಅನಂತ ನಾರಾಯಣ್ ಮಿಶ್ರಾ `ಜಿಮ್~ ಕೇಂದ್ರ ನಡೆಸುತ್ತಿದ್ದರು. ಜೇಮ್ಸ ಕೂಡ  ಅಲ್ಲಿಯೇ ಕೆಲಸದಲ್ಲಿದ್ದ. ಆದರೆ ಆತ ಅವ್ಯವಹಾರದಲ್ಲಿ ತೊಡಗಿದ ಕಾರಣ ಆತನನ್ನು ಅನಂತ್ ಕೆಲಸದಿಂದ ತೆಗೆದಿದ್ದರು. ಈ ಸಿಟ್ಟಿನಿಂದ ಕೊಲೆ ನಡೆದಿದೆ ಎನ್ನುವುದು ಪೊಲೀಸರ ಹೇಳಿಕೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿರುವ ಆತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ನಡೆಸುತ್ತಿದ್ದಾರೆ.ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದ ಮೇರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಒಪ್ಪಿಸಿದರು. ವರದಿಯಲ್ಲಿರುವ ಅಂಶಗಳ ಕುರಿತು ಸರ್ಕಾರದ ಪರ ವಕೀಲ ಸತೀಶ್ ಗಿರ್ಜಗಿ ನ್ಯಾಯಮೂರ್ತಿಗಳಿಗೆ ವಿವರಿಸಿದರು.`ಘಟನೆ ನಡೆದ ದಿನ ಸ್ಥಳದಲ್ಲಿ ಜಾಕೆಟ್ ಸಿಕ್ಕಿತ್ತು. ಈ ಜಾಕೆಟ್ ಜೇಮ್ಸನದ್ದೇ ಎಂದು ಸಾಬೀತು ಆಗಿದೆ. ಆ ಜಾಕೇಟ್ ಮೇಲೆ ಇರುವ ರಕ್ತದ ಕಲೆಗಳು ಪಾಯಲ್ ಅವರದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ. ಅಷ್ಟೇ ಅಲ್ಲದೇ ಮೃತ ದೇಹದ ಸಮೀಪ ಕೂದಲು ದೊರಕಿದ್ದು ಅದು ಕೂಡ ಜೇಮ್ಸನದ್ದು ಎಂದು ವರದಿಯಲ್ಲಿ ತಿಳಿಸಲಾಗಿದೆ~ ಎಂದು ಹೇಳಿದರು.

 

ಪ್ರಯೋಗಾಲಯದ ವರದಿಯನ್ನು ಓದಲು ತಮಗೆ ಕಾಲಾವಕಾಶ ಬೇಕಾಗಿದೆ ಎಂದು ಜೇಮ್ಸ ಪರ ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.ಪ್ರಕರಣದ ವಿವರ: ಪಾಯಲ್ ಹಾಗೂ ಅನಂತ್ ಅವರ ವಿವಾಹವಾಗಿ ಐದು ವರ್ಷಗಳಾಗಿದ್ದವು. ಅವರಿಗೆ ಮಕ್ಕಳಿರಲಿಲ್ಲ.ಘಟನೆ ನಡೆದ ದಿನ ಅನಂತ್ ಅವರು ಒಡಿಶಾದಲ್ಲಿದ್ದರು. ಅಂದು ಅವರು ಪಾಯಲ್ ಅವರ ಮೊಬೈಲ್ ದೂರವಾಣಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಅವರು ಅಪಾರ್ಟ್‌ಮೆಂಟ್‌ನ ಮಾಲೀಕರಿಗೆ ಕರೆ ಮಾಡಿ ಮನೆಯ ಬಳಿ ಹೋಗಿ ನೋಡುವಂತೆ ಸೂಚಿಸಿದರು.ಮಾಲೀಕರು ಫ್ಲಾಟ್‌ನ ಬಳಿ ಹೋದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ಪೊಲೀಸರಿಗೆ ಮಾಲೀಕರು ವಿಷಯ ತಿಳಿಸಿದರು.ಮನೆಯ ಬಾಗಿಲು ಮುರಿದು ನೋಡಿದಾಗ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಮಲಗುವ ಕೋಣೆಯಲ್ಲಿ ಬಿದ್ದಿದ್ದ ಸುರೇಖಾ ಅವರ ದೇಹದಲ್ಲಿ 15ಕ್ಕೂ ಹೆಚ್ಚು ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟು ಭಾರಿ ಸುದ್ದಿ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.