ಪಾರಂಪರಿಕ ತಾಣ ಪ್ರಸ್ತಾವ ಪರಿಶೀಲನೆ: ಯುನೆಸ್ಕೊ

7

ಪಾರಂಪರಿಕ ತಾಣ ಪ್ರಸ್ತಾವ ಪರಿಶೀಲನೆ: ಯುನೆಸ್ಕೊ

Published:
Updated:

ಮಡಿಕೇರಿ: ಪಶ್ಚಿಮಘಟ್ಟಗಳ ವ್ಯಾಪ್ತಿಯ ಕೊಡಗಿನ ತಲಕಾವೇರಿ, ಪುಷ್ಪಗಿರಿ, ಬ್ರಹ್ಮಗಿರಿ ಅಭಯಾರಣ್ಯವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಸ್ತಾವ ಕುರಿತು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸುವುದಾಗಿ ‘ಯುನೆಸ್ಕೊ’ ಭರವಸೆ ನೀಡಿದೆ.ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ವತಿಯಿಂದ 2010ರ ನವೆಂಬರ್ 7ರಂದು ‘ಯುನೆಸ್ಕೊ’ ಮಹಾ ನಿರ್ದೇಶಕರಿಗೆ ಬರೆದ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ‘ಯುನೆಸ್ಕೊ’, ಬಹ್ರೇನ್‌ನ ಮನಾಮದಲ್ಲಿ 2011ರ ಜೂನ್ 19ರಿಂದ 29ರವರೆಗೆ ನಡೆಯಲಿರುವ ವಿಶ್ವ ಪಾರಂಪರಿಕ ಸಮಿತಿಯ 35ನೇ ಅಧಿವೇಶನದಲ್ಲಿ ಪ್ರಸ್ತಾವದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಆಶ್ವಾಸನೆ ನೀಡಿದೆ.ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ‘ಯುನೆಸ್ಕೊ’ದ ವಿಶ್ವ ಪಾರಂಪರಿಕ ಸಮಿತಿಯ ನಿರ್ದೇಶಕ ಫ್ರಾನ್ಸಿಸ್ಕೋ ಬ್ಯಾಂಡರಿನ್ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಂ. ಕಾವೇರಪ್ಪ ಹಾಗೂ ಮಾಜಿ ಅಧ್ಯಕ್ಷ ಚೇರಂಡ ನಂದ ಸುಬ್ಬಯ್ಯ, ಕೊಡಗನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ಕೈಬಿಡುವ ಪ್ರಸ್ತಾವದ ಕುರಿತು ‘ಯುನೆಸ್ಕೊ’ದೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಐಯುಸಿಎನ್) ವಿಶ್ವ ಪಾರಂಪರಿಕ ತಾಣಗಳ ಘೋಷಣೆಗೆ ಸಂಬಂಧಿಸಿದಂತೆ ತಾಂತ್ರಿಕ ಮೌಲ್ಯಮಾಪನ ನಡೆಸುತ್ತಿರುವುದರ ಜತೆಗೆ, ವಿಶ್ವ ಪಾರಂಪರಿಕ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸುತ್ತಿದೆ. ಹೀಗಾಗಿ, ಸಮಿತಿಯು ಈಗಾಗಲೇ ಸಂಘವು ಕಳಿಸಿರುವ ಪತ್ರ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿಗಾಗಿ ಐಯುಸಿಎನ್‌ಗೆ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ನಂದ ಸುಬ್ಬಯ್ಯ ತಿಳಿಸಿದರು.ತಿಂಗಳಲ್ಲಿ ಬಾಣೆ ಸಮಸ್ಯೆ ಇತ್ಯರ್ಥಕ್ಕೆ ಮನವಿ: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಾಣೆ ಸಮಸ್ಯೆಯನ್ನು ಇನ್ನೊಂದು ತಿಂಗಳಲ್ಲಿ ಇತ್ಯರ್ಥಪಡಿಸಲು ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರಯತ್ನ ನಡೆಸುವಂತೆ ಅವರು ಮನವಿ ಮಾಡಿದರು.ಬಾಣೆಗೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಕರಡು ಪ್ರತಿ ಇನ್ನೂ ಸಚಿವ ಸಂಪುಟದ ಮುಂದೆ ಮಂಡನೆಯಾಗದಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಹಿರಿಯ ಮುತ್ಸದ್ಧಿಯೊಬ್ಬರು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವುದರಿಂದ ಸರ್ಕಾರ ಸಮಸ್ಯೆ ಇತ್ಯರ್ಥಪಡಿಸಲು ಹಿಂದೇಟು ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಈ ಮುಖಂಡರು ಸಮಸ್ಯೆ ಪರಿಹಾರಕ್ಕೆ ತೊಡರುಗಾಲು ಹಾಕಬಾರದು ಎಂದು ವಿನಂತಿ ಮಾಡಿಕೊಂಡರು.ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಕಾರ್ಯದರ್ಶಿ ಪಿ.ಎಸ್. ಗಣಪತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry