ಮಂಗಳವಾರ, ಜೂನ್ 22, 2021
28 °C

ಪಾರಂಪಳ್ಳಿ-ಪಡುಕರೆ ತೋಡ್ಕಟ್ಟು ನಿವಾಸಿಗಳ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ (ಬ್ರಹ್ಮಾವರ): ಪಾರಂಪಳ್ಳಿ ಪಡುಕರೆ ನಿವಾಸಿಗಳ ಹಲವಾರು ವರ್ಷಗಳ ಬೇಡಿಕೆಯಾದ ತೋಡ್ಕಟ್ಟು ಹೊಳೆ ಸೇತುವೆ ನಿರ್ಮಾಣದ ಕನಸು ಇನ್ನೂ ನನಸಾಗದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪಡುಕೆರೆಯಿಂದ ಸಾಲಿಗ್ರಾಮಕ್ಕೆ ಬರಲು ಗ್ರಾಮಸ್ಥರು ತೋಡ್ಕಟ್ಟು ಹೊಳೆಗೆ ಮರದ ಸೇತುವೆಯನ್ನೇ  ಅವಲಂಬಿಸಬೇಕಾಗಿದೆ.

 

ಈಗಿನ ಮರದ ಸೇತುವೆ ಇರುವ ಜಾಗದಲಕ್ಲಿ ಸುಸಜ್ಜಿತ ಸೇತುವೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸುವ ಭರವಸೆಯೂ ಸಿಕ್ಕಿತ್ತು. ಆದರೆ ಈಡೇರಿದ್ದು  ರಸ್ತೆ ನಿರ್ಮಾಣದ ಬೇಡಿಕೆ ಮಾತ್ರ.`ಹೊಳೆಯವರೆಗೆ ರಸ್ತೆ ನಿರ್ಮಾಣ ಮಾಡಿ ವರ್ಷಗಳೇ ಕಳೆದಿದೆ. ಸೇತುವೆ ನಿರ್ಮಾಣವಾಗದ ಕಾರಣ ರಸ್ತೆಯೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ~ ಎಂದು ದೂರುತ್ತಾರೆ ಸ್ಥಳೀಯರು.`ತೋಡ್ಕಟ್ಟು ಹೊಳೆಯ ಮರದ ಸೇತುವೆಯ ಮೇಲೆ ಜೀವವನ್ನು ಕೈಯಲ್ಲಿ ಹಿಡಿದು ದಡ ಸೇರುವ ಪರಿಸ್ಥಿತಿ ಇದೆ. ಪ್ರತಿ ಬಾರಿ ಚುನಾವಣೆಯಲ್ಲಿ ಸೇತುವೆಯನ್ನು ನಿರ್ಮಿಸುವ ಭರವಸೆಯನ್ನು ನೀಡುತ್ತಾರೆಯೆ ಹೊರತು ಸೇತುವೆಯನ್ನು ನಿರ್ಮಿಸುವುದಿಲ್ಲ.ದ್ವಿಚಕ್ರ- ತ್ರಿಚಕ್ರದಿಂದ ಒಳಗೊಂಡು ದೊಡ್ಡ ದೊಡ್ಡ ವಾಹನಗಳು ಪಡುಕೆರೆಯಿಂದ ಸಾಲಿಗ್ರಾಮಕ್ಕೆ ಬರಬೇಕಾದರೆ 5ಕಿ. ಮೀ.ಸುತ್ತು ಬಳಸಿ ತಲುಪಬೇಕಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಪ್ರಕೃತಿ ವಿಕೋಪ ನಿಧಿ, ಅಥವಾ ನಬಾರ್ಡ್‌ನಿಂದ ನಮಗೊಂದು ಸೇತುವೆ ನಿರ್ಮಿಸಿಕೊಡಿ~ ಎನ್ನುತ್ತಾರೆ ಸ್ಥಳೀಯರು.`ಮೂರು ವರ್ಷಗಳ ಹಿಂದೆ ತೋಡ್ಕಟ್ಟು ಹೊಳೆಗೆ ಸೇತುವೆ ನಿರ್ಮಿಸಲು 40ಲಕ್ಷ ಅನುದಾನವನ್ನು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಾಯ್ದಿರಿಸಿತ್ತು. ಸೇತುವೆ ನಿರ್ಮಿಸಲು ಇಷ್ಟು ಹಣ ಸಾಲದು. ಹಾಗಾಗಿ ಸ್ಥಳೀಯರು ಈಗಲೂ ಮರದ ಸೇತುವೆಯನ್ನೇ ಬಳಸಬೇಕಾಗಿದೆ~ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.`ಸೇತುವೆ ನಿರ್ಮಿಸಲು 1ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವಂತೆ  ಮುಖ್ಯಮಂತ್ರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆಯಾಗುವ ಭರವಸೆ ಇದೆ~ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.